ADVERTISEMENT

ಶಿವಮೊಗ್ಗಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಶೀಘ್ರ: ಬಿ.ವೈ. ರಾಘವೇಂದ್ರ

₹2,138 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 14:50 IST
Last Updated 17 ಡಿಸೆಂಬರ್ 2023, 14:50 IST
ಶಿವಮೊಗ್ಗದಲ್ಲಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೂತನ ಸೇತುವೆಯನ್ನು ಭಾನುವಾರ ಸಂಸದ ಬಿ.ವೈ. ರಾಘವೇಂದ್ರ ಪರಿಶೀಲಿಸಿದರು
ಶಿವಮೊಗ್ಗದಲ್ಲಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೂತನ ಸೇತುವೆಯನ್ನು ಭಾನುವಾರ ಸಂಸದ ಬಿ.ವೈ. ರಾಘವೇಂದ್ರ ಪರಿಶೀಲಿಸಿದರು   

ಶಿವಮೊಗ್ಗ: ಕೇಂದ್ರ ಸಚಿವ ನಿತಿನ್ ಗಡ್ಕರಿ ಶೀಘ್ರ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಜಿಲ್ಲೆಯಲ್ಲಿ ₹2,138 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಸಚಿವರು ಇದೇ ವೇಳೆ ₹ 139 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಕಳಸವಳ್ಳಿ-ಸಿಗಂದೂರು ಸೇತುವೆಗೆ ಸಂಪರ್ಕ ರಸ್ತೆಗೆ ಡಿಪಿಆರ್ ಸಿದ್ಧಪಡಿಸಲು ಸೂಚಿಸಲಾಗಿದೆ. ಹಿನ್ನೀರು ಹೆಚ್ಚಿದ್ದರೂ, ಕಡಿಮೆ ಇದ್ದರೂ ಕಾಮಗಾರಿ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಗಡ್ಕರಿ ಅವರನ್ನೇ ಸ್ಥಳಕ್ಕೆ ಕರೆದೊಯ್ದು ಪರಿಶೀಲಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ನೆಲ್ಲಿಸರ ಕ್ಯಾಂಪ್‌ನಿಂದ ತೀರ್ಥಹಳ್ಳಿವರೆಗೆ ಹಾಗೂ ತ್ಯಾವರೆಕೊಪ್ಪದ ಹುಲಿ–ಸಿಂಹಧಾಮದಿಂದ ತಾಳಗುಪ್ಪದವರೆಗೆ ದ್ವಿಪಥ ರಸ್ತೆಗಳನ್ನು ಚತುಷ್ಪಥ ರಸ್ತೆಗಳನ್ನಾಗಿ ವಿಸ್ತರಿಸುವ ಕಾಮಗಾರಿಗೆ ಇದೇ ವೇಳೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಬೈಂದೂರು-ರಾಣೆಬೆನ್ನೂರು ವಿಭಾಗದಲ್ಲಿ ₹ 19.77 ಕೋಟಿ ವೆಚ್ಚದಲ್ಲಿ ಸೇತುವೆಗಳು, ಶಿವಮೊಗ್ಗ-ಮಂಗಳೂರು ರಸ್ತೆಯಲ್ಲಿ ತುಂಗಾ ನದಿ ಸೇತುವೆ, ಶಿವಮೊಗ್ಗ-ಚಿತ್ರದುರ್ಗ ನಡುವಿನ ರೈಲ್ವೆ ಮೇಲ್ಸೇತುವೆ (ಡಿಸೆಂಬರ್ ಅಂತ್ಯದೊಳಗೆ ಪೂರ್ಣ), ಶಿವಮೊಗ್ಗ ಬೈಪಾಸ್‌ನಲ್ಲಿ ತುಂಗಾನದಿಗೆ ಸೇತುವೆ ಕಾಮಗಾರಿ ಮುಕ್ತಾಯಗೊಂಡು ಉದ್ಘಾಟನೆಗೆ ಸಿದ್ಧವಾಗಿವೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 265 ಬಿಎಸ್‌ಎನ್‌ಎಲ್ ಟವರ್‌ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದರಲ್ಲಿ 100 ಟವರ್‌ಗಳನ್ನು 2024ರ ಏಪ್ರಿಲ್‌ನೊಳಗೆ ಅಳವಡಿಸುವಂತೆ ದೂರ ಸಂಪರ್ಕ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

‘ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಜನವರಿಗೆ 15ರೊಳಗೆ ರಾತ್ರಿಯಲ್ಲೂ ವಿಮಾನ ಇಳಿಸಲು ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗುವುದು. ವಿಮಾನ ನಿಲ್ದಾಣದಲ್ಲಿ ಮಂಜು ಮುಸುಕಿದ ವಾತಾವರಣದ ಹಿನ್ನೆಲೆಯಲ್ಲಿ ವಿಮಾನ ಹಾರಾಟ ವಿಳಂಬವಾಗುತ್ತಿದೆ. ಈ ಸಮಸ್ಯೆನು ಬಗೆಹರಿಸಲು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.