ತೀರ್ಥಹಳ್ಳಿ: ‘ಓಯ್.. ಅಲ್ಲಿ ನೋಡಿ ಬೆಳ್ಳಕ್ಕಿ.. ಇಲ್ಲಿ ಕಾಣ್ತಿವೆ ಅಲ್ವಾ ಅವೇ ನೀರುಕಾಗೆ.. ಆ ಕಡೆ ಹಾರುತ್ತಿವೆ ನೋಡಿ ಬಾವುಲಿ.. ಈಗ.. ಬಂತು ನೋಡಿ ಕೊಕ್ಕರೆ ಹಿಂಡು.. ಪ್ರಕೃತಿ ಸೌಂದರ್ಯ ಕಾಣುವುದಕ್ಕೂ ಯೋಗ ಬೇಕು ಕಣ್ರಿ..
ಇಲ್ಲಿನ ಬಾಳೇಬೈಲಿನಲ್ಲಿ ನೂತನವಾಗಿ ನಿರ್ಮಿಸಿರುವ ಸೇತುವೆ ಮೇಲೆ ಬಾನಾಡಿಗಳನ್ನು ವೀಕ್ಷಿಸಲು ಆಗಮಿಸುವ ಪಕ್ಷಿ ಪ್ರಿಯರು ಹೀಗೆ ಸಂತಸದ ಮಾತುಗಳನ್ನು ಆಡುತ್ತಿರುವುದು ಸಾಮಾನ್ಯವಾಗಿದೆ.
ಮುಂಜಾನೆ, ಸಂಜೆ ವಾಯುವಿಹಾರ ಮಾಡುವವರು ಇದೀಗ ಹೊಸ ಸೇತುವೆ ನಿರ್ಮಾಣದ ಬಳಿಕ ತಮ್ಮ ಓಡಾಟದ ದಿಕ್ಕು ಬದಲಿಸಿದ್ದಾರೆ. ಗ್ರಾಮೀಣ ಭಾಗಗಳಿಂದ ಆಗಮಿಸುವ ಅನೇಕರು ತಮ್ಮ ಸಾಯಂಕಾಲದ ಬಿಡುವಿನ ಸಮಯವನ್ನು ಪಕ್ಷಿಗಳ ಹಾರಾಟ ಕಣ್ತುಂಬಿಕೊಳ್ಳಲು ವಿನಿಯೋಗಿಸುತ್ತಿದ್ದಾರೆ. ಪಕ್ಷಿ ಪ್ರೇಮಿಗಳಿಗೆ ಇದೊಂದು ಅಪರೂಪದ ರಸದೌತಣ.
ತುಂಗಾ ನದಿಯ ಇಕ್ಕೆಲಗಳಲ್ಲಿ ಇರುವ ಬಿದಿರು ಮೆಳೆಗಳು ಪಕ್ಷಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿವೆ. ಉದಯಿಸುವ ಸೂರ್ಯನಿಗೆ ಮುಖವೊಡ್ಡಿ ಆಹಾರ ಅರಸಿ ಪುರ್ರನೆ ಹಾರುವ ಹಕ್ಕಿಗಳು ನಿತ್ಯ ಹತ್ತಾರು ಕಿಲೋ ಮೀಟರ್ ಕ್ರಮಿಸಿ, ಬೈಗು ಹತ್ತಿದಂತೆ ಇಲ್ಲಿ ತಮ್ಮ ರಾತ್ರಿ ಕಳೆಯಲು ಒಟ್ಟಿಗೆ ಸೇರುತ್ತಿವೆ.
ಬೆಳ್ಳಕ್ಕಿಗಳೊಂದಿಗೆ ನೀರುಕಾಗೆಗಳು ಬೆರಳೆಣಿಕೆ ಸಂಖ್ಯೆಯಲ್ಲಿ ಗೂಡು ಕಟ್ಟಿವೆ. ಇವುಗಳಿಗೆ ಸೂಕ್ತ ಜಾಗ ದೊರೆಯದ ಕಾರಣದಿಂದ ಸ್ಥಳಾಂತರ ಮಾಡುತ್ತಿವೆ. ನೀರಿನ ಮೂಲಗಳನ್ನು ಆಶ್ರಯಿಸುವ ಇವುಗಳು ಹಿರೇಸರ, ಮಂಡಗದ್ದೆ, ಚಿಬ್ಬಲಗುಡ್ಡೆ, ಆರಗ ಸೇರಿದಂತೆ ಅನೇಕ ಕಡೆಗಳಲ್ಲಿ ಗುಂಪು ಗುಂಪಾಗಿ ಜೀವಿಸುತ್ತಿವೆ. ಆದರೆ, ಮರಗಳ ಕಡಿತಲೆ, ರಸ್ತೆ ವಿಸ್ತರಣೆ, ಮಾನವ ಸಂಘರ್ಷದಿಂದಾಗಿ ಈ ಪಕ್ಷಿಗಳಿಗೆ ನಿರ್ದಿಷ್ಟ ಜಾಗ ಸಿಗದಂತಾಗಿದೆ.
ಕೃಷಿ ಚಟುವಟಿಕೆಯಲ್ಲಿನ ಬದಲಾವಣೆ, ರಾಸಾಯನಿಕ ಬಳಕೆ ಹೆಚ್ಚುತ್ತಿರುವುದರಿಂದ ಪಕ್ಷಿಗಳಿಗೆ ಸುಲಭವಾಗಿ ಆಹಾರ ಲಭಿಸುತ್ತಿಲ್ಲ. ಮರಗಳ ಸಂಖ್ಯೆ ಕ್ಷೀಣಿಸುತ್ತಿದ್ದು ವಾಸಿಸುವ ಯೋಗ್ಯ ಪ್ರದೇಶಗಳಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚುತ್ತಿದೆ. ಹಕ್ಕಿಗಳು ಕೂರುವ ಮರಗಳನ್ನು ಕಟಾವು ಮಾಡುವ ದುಷ್ಟ ಕೆಲಸ ನಡೆಯುತ್ತಿರುವುದು ದುರಂತದ ಸಂಗತಿಯಾಗಿದೆ.
‘ಪಕ್ಷಿಯ ಹಿಕ್ಕೆಗಳಲ್ಲಿ ಸಿಟ್ರಿಕ್ ಅಂಶ ಹೆಚ್ಚಿರುವ ಕಾರಣ ಅವುಗಳು ವಾಸಿಸುವ ಮರಗಳ ಬೆಳವಣಿಗೆ ಕುಂಟಿತವಾಗುತ್ತಿವೆ. ಅಲ್ಲದೇ ಸಂತಾನೋತ್ಪತ್ತಿ ಸಂದರ್ಭ ಗೂಡಿಗೆ ಅಗತ್ಯವಾದ ಕಡ್ಡಿಗಳನ್ನು ಆಯ್ದುಕೊಳ್ಳುವಾಗ ಮರಗಳ ಚಿಗುರುಗಳನ್ನು ಬಳಸಿಕೊಳ್ಳುತ್ತವೆ. ಸುತ್ತಮುತ್ತಲು ಅವುಗಳಿಗೆ ಅಗತ್ಯವಾಗಿ ಬೇಕಾದ ಕಡ್ಡಿ, ಆಹಾರ ಲಭಿಸದೇ ಇರುವುದರಿಂದ ದಿಕ್ಕು ಬದಲಿಸುತ್ತಿವೆ’ ಎಂದು ಪಕ್ಷಿ ಛಾಯಾಚಿತ್ರಗಾರ ವಿನಾಯಕ ಗುಜ್ಜರ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆಗಾಗ ಪಕ್ಷಿಗಳು ಕುಳಿತುಕೊಳ್ಳುವ ಜಾಗ ಬದಲಿಸುತ್ತಿವೆ. ಆವಾಸ ಸ್ಥಾನದಲ್ಲಿ ಅಡಚಣೆಗಳು ಉಂಟಾಗುತ್ತಿದ್ದು ನಿರ್ಭಯವಾಗಿ ಜೀವಿಸಲು ಅವಕಾಶ ಕಲ್ಪಿಸಿಕೊಡಬೇಕು–ಟಿ.ಕೆ. ರಮೇಶ್ ಶೆಟ್ಟಿ, ತೀರ್ಥಹಳ್ಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ
ಸಾವಿರಕ್ಕೂ ಹೆಚ್ಚು ಪಕ್ಷಿಗಳು ತುಂಗಾ ನದಿ ಇಕ್ಕೆಲಗಳಲ್ಲಿ ವಾಸಿಸುತ್ತಿವೆ. ಅವುಗಳನ್ನು ವೀಕ್ಷಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಹೆಚ್ಚು ಜನರು ಹಕ್ಕಿಗಳ ಬರುವಿಕೆಗೆ ಕಾಯುತ್ತಾರೆ-ಸಂತೋಷ್ ಎನ್. ಪೂಜಾರಿ ಪ್ರವಾಸಿ ವಾಹನ ಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.