ADVERTISEMENT

ಶಿರಾಳಕೊಪ್ಪ: ರಾಜಧಾನಿಯಾಗಿ ಮೆರೆದ ಊರಲ್ಲೀಗ ಜನರೇ ಇಲ್ಲ!

ನಾಗರಖಂಡ– 70ರ ಗತವೈಭವಕ್ಕೆ ಮೂಕ ಸಾಕ್ಷಿಯಾದ ಬಂದಳಿಕೆ

ಎಂ.ನವೀನ್ ಕುಮಾರ್
Published 5 ಆಗಸ್ಟ್ 2023, 5:18 IST
Last Updated 5 ಆಗಸ್ಟ್ 2023, 5:18 IST
ಶಿರಾಳಕೊಪ್ಪ ಸಮೀಪದ ಬಂದಳಿಕೆಯಲ್ಲಿರುವ ಮಹಾನವಮಿ ದಿಬ್ಬ
ಶಿರಾಳಕೊಪ್ಪ ಸಮೀಪದ ಬಂದಳಿಕೆಯಲ್ಲಿರುವ ಮಹಾನವಮಿ ದಿಬ್ಬ   

ಶಿರಾಳಕೊಪ್ಪ: ಹಸಿರುಟ್ಟ ಭೂದೇವಿಯ ಮಡಿಲಲ್ಲಿ ಶಾಂತಚಿತ್ತದಿಂದ ನಿದ್ರಿಸುತ್ತಿರುವ ಬೇಚಾರಖ ಗ್ರಾಮ ಬಂದಳಿಕೆ. ಇದು ನಾಗರಖಂಡ– 70ರ ರಾಜಧಾನಿ. ಸಾವಿರಾರು ವರ್ಷಗಳ ಕಾಲ ರಾಜಧಾನಿಯಾಗಿ ಗರ್ವದಿಂದ ಮೆರೆದ ಗ್ರಾಮದಲ್ಲಿ ಇಂದು ಜನರೇ ಇಲ್ಲ. ಈ ನಿರ್ಜನ ಪ್ರದೇಶದ ಸುಮಾರು 25 ಎಕರೆಗೂ ಹೆಚ್ಚು ಜಾಗದಲ್ಲಿ ನೆಲೆ ನಿಂತಿರುವ ಹಾಳು ಬಿದ್ದ ದೇವಾಲಯದ ಸಮುಚ್ಚಯ ಗತವೈಭವದ ಚರಿತ್ರೆಗೆ ಮೂಕ ಸಾಕ್ಷಿಯಾಗಿದೆ.

ಇದು ಬಯಲು ಸೀಮೆಗೆ ಹೊಂದಿಕೊಂಡಿರುವ ಶಿಕಾರಿಪುರ ತಾಲ್ಲೂಕಿನ ಬೇಚಾರಖ ಗ್ರಾಮ. ಇದನ್ನು ವೈದಿಕ, ಜೈನ ಹಾಗೂ ಕಾಳಮುಖ ಪಂಥದ ಪ್ರಮುಖ ಧಾರ್ಮಿಕ ಕೇಂದ್ರವಾಗಿಯೂ ಗುರುತಿಸಲಾಗಿದೆ.

ನಾಗರಖಂಡ 70 ಎನ್ನುವುದು ಕುಂತಳದೇಶದ ಬನವಾಸಿ– 12,000 ಮಂಡಲದ 70 ಹಳ್ಳಿಗಳನ್ನೊಳಗೊಂಡ ಒಂದು ಕಂಪಣ. ನಾಗರ ಎಂಬುದು ಒಂದು ಜನಾಂಗ. ಈ ಸಮುದಾಯವು ಭಾರತದಲ್ಲಿ ಆರ್ಯರು ಹಾಗೂ ದ್ರಾವಿಡರಿಗಿಂತ ಪೂರ್ವದಲ್ಲಿ ವಾಸವಾಗಿತ್ತು. ಅವರು ತಮ್ಮದೇ ಆದ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದರು. ಸಿಲೋನ್‌ ಹಾಗೂ ಭಾರತದ ಬಹುತೇಕ ಪ್ರದೇಶದಲ್ಲಿ ಪ್ರಭಾವ ಬೀರಿದ್ದರು ಎಂಬುದಕ್ಕೆ ನಾಗ, ಉರಗ, ಅಹಿ, ನಂಜ, ನಾಮಾಂಕಿತ ಗ್ರಾಮ, ನಗರ, ನದಿ, ಸರೋವರ, ಗುಡ್ಡ, ಬೆಟ್ಟ, ಕಾಡು, ಝರಿ ಹೆಸರಿನ ಮನೆತನಗಳು ಇಂದಿಗೂ ದೇಶದಲ್ಲಿ ಲಭಿಸುವುದು ಸಾಕ್ಷಿಯಾಗಿದೆ.

ADVERTISEMENT

ಅವರ ರಾಜಕೀಯ ಚರಿತ್ರೆ ನಂದರ ಕಾಲದಿಂದಲೇ ಆರಂಭವಾಗಿದೆ. ಮೌರ್ಯರು, ಗುಪ್ತರು ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ್ದರ ಬಗ್ಗೆ ಬಂದಳಿಕೆ ಶಾಸನದಲ್ಲಿ ದಾಖಲೆಯಾಗಿದೆ. ಸೇಂದ್ರಕರು, ಕದಂಬರು, ಬಾದಾಮಿ ಚಾಲುಕ್ಯರು ಮತ್ತು ರಾಷ್ಟ್ರಕೂಟರ ಕಾಲದ ಸಾಮಂತ ಮನೆತನಗಳಾದ ಸೇನಾವಾರರು, ಚೆಲ್ಲಕೇತನರು, ಚುಟುಗಳು ಇಲ್ಲಿನ ಶಾಸನಗಳಲ್ಲಿ ಕಂಡುಬರುತ್ತಾರೆ.

ನಾಗರಖಂಡಕ್ಕೆ ಇಂದಿನ ಮೀರಜ್ ಹಾಗೂ ಗಂಗಾ, ಯಮುನಾ ನದಿಗಳ ಸಮಿಪದ ಪಟ್ಟಣಗಳಿಂದ ವ್ಯಾಪಾರಿಗಳು ವಾಣಿಜ್ಯೋದ್ದೇಶಕ್ಕೆ ಬರುತ್ತಿದ್ದರು.

ದೇವಸ್ಥಾನ ಸಮುಚ್ಛಯದ ಈಗಿನ ಪ್ರವೇಶದ್ವಾರದ ಬಳಿ ಸಿಗುವ ತ್ರಿಮೂರ್ತಿ ನಾರಾಯಣ ದೇವಾಲಯ ವಿಶೇಷ ಆಕರ್ಷಣೆ. ಕ್ರಿ.ಶ. 1160ರಲ್ಲಿ ಕಲ್ಯಾಣದ ಚಾಲುಕ್ಯರು ನಿರ್ಮಾಣ ಮಾಡಿದ್ದು, ತ್ರಿಕೂಟಾಚಲ ಮಾದರಿಯಲ್ಲಿದೆ. 3 ಶಿಖರಕ್ಕೂ ಶುಕನಾಸಿ ಇದ್ದು, ಪಶ್ಚಿಮ ಶಿಖರದ ಶುಕನಾಸಿಯ ಸಿಂಹಲಲಾಟವು ಭವ್ಯವಾಗಿದೆ. ನಂತರ ಮಹಾನವಮಿ ದಿಬ್ಬ ಕಾಣುತ್ತದೆ. ಮುಂದೆ ಸಾಗಿದಂತೆಲ್ಲ ಭಗ್ನವಾಗಿರುವ ದೇವಾಲಯಗಳು, ಹಲವಾರು ಗೋಸಾಸುಗಳು ಕಾಣಸಿಗುತ್ತವೆ.

ಇಲ್ಲಿನ ಆನೇಕಲ್ ಸೋಮೇಶ್ವರ ದೇವಾಲಯದಲ್ಲಿ ವಿಶೇಷವಾದ ಕಥಾಶಿಲ್ಪಗಳನ್ನು ಜಾಲಾಂದ್ರಗಳಲ್ಲಿ ಕೆತ್ತನೆ ಮಾಡಲಾಗಿದ್ದು, ಒಂದು ಭಾಗದಲ್ಲಿ ರಾಮಾಯಣ ಮತ್ತೊಂದು ಭಾಗದಲ್ಲಿ ಮಹಾಭಾರತದ ಕಥೆಗಳನ್ನು ರಚಿಸಲಾಗಿದೆ. ಇದನ್ನು ಕದಂಬ ದೊರೆ ಸೋಯಿದೇವನ ಸುಂಕದ ಅಧಿಕಾರಿ ‘ತಳವಾರ’ ಮಾಚೆಯನಾಯಕ ಕ್ರಿ.ಶ. 1163ರಲ್ಲಿ ನಿರ್ಮಿಸಿದ್ದಾನೆ. ಸಮಿಪದಲ್ಲಿಯೇ ಶಕ್ತಿ ದೇವತೆ ಬನಶಂಕರಿ ದೇವಸ್ಥಾನವಿದೆ. ಜೈನ ಪರಂಪರೆ ಬಗ್ಗೆ ಬೆಳಕು ಚೆಲ್ಲುವ ಶಾಂತಿನಾಥ ಬಸದಿಯನ್ನೂ ನಾವು ಇಲ್ಲಿ ಕಾಣಬಹುದು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಬಂದಳಿಕೆ ದೇವಸ್ಥಾನಗಳನ್ನು ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಣೆ ಮಾಡುತ್ತಿದೆ. ನಯನ ಮನೋಹರವಾದ ಹುಲ್ಲು ಹಾಸು ಉದ್ಯಾನದಲ್ಲಿ ಕಾಣಬಹುದು. ಮಕ್ಕಳು, ಕುಟುಂಬದ ಜೊತೆಗೆ ಬಂದು ಒಂದು ದಿನ ಕಾಲಕಳೆಯಲು ಬಯಸುವವರಿಗೆ ರಮಣೀಯ ತಾಣವಾಗಿದೆ.

ಪ್ರಚಾರದ ಕೊರತೆಯಿಂದ ಈ ಪ್ರದೇಶ ಹೊರ ಜಗತ್ತಿಗೆ ತೆರೆದುಕೊಳ್ಳಲು ಸಾಧ್ಯವಾಗಿಲ್ಲ. ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಈ ಕುರಿತು ಗಮನಹರಿಸಬೇಕು ಎಂಬುದು ಸುತ್ತಮುತ್ತಲ ಗ್ರಾಮಗಳ ಜನರ ಒತ್ತಾಯ.

ದೊರೆಗಾಗಿ ತಲೆ ಕೊಟ್ಟ ಸೇವಕ
ನಾಗರಖಂಡ– 70ರ ದೊರೆ ಬೊಪ್ಪರಸ ಹಾಗೂ ರಾಣಿ ಶ್ರೀಯಾದೇವಿಗೆ ಗಂಡು ಮಗು ಜನನವಾದರೆ ಗೋವರ ಮಾರಣನ ಮಗ ದೇಕೆಯ ನಾಯಕ ಈಗಿನ ಹಂಸಭಾವಿಯ (ಹಾವೇರಿ ಜಿಲ್ಲೆ) ಬ್ರಹ್ಮದೇವನಿಗೆ ತನ್ನ ತಲೆ ಅರ್ಪಿಸುವುದಾಗಿ ಹರಕೆ ಹೊರುತ್ತಾನೆ. ನಂತರ ದೊರೆಗೆ ಗಂಡು ಮಗು ಜನನವಾಗುತ್ತದೆ. ದೇಕೆಯ ನಾಯಕ ದೇವರಿಗೆ ತನ್ನ ತಲೆ ಅರ್ಪಿಸುವ ಮೂಲಕ ಹರಕೆ ತಿರಿಸುತ್ತಾನೆ. ಇಂತಹ ಸ್ವಾಮಿ ನಿಷ್ಠೆ ಇಲ್ಲಿನ ಇತಿಹಾಸದಲ್ಲಿ ದಾಖಲಾಗಿದೆ.
 ಬಂದಳಿಕೆಯಲ್ಲಿರುವ ಪ್ರಾಚೀನ ತ್ರಿಪುರ ನಾರಾಯಣ ದೇವಾಲಯ
ಬಂದಳಿಕೆಯಲ್ಲಿರುವ ಪ್ರಾಚೀನ ತ್ರಿಪುರ ನಾರಾಯಣ ದೇವಸ್ಥಾನದ ಆವರಣ ಒಂದು ನೋಟ
ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಈ ಪ್ರಾಚೀನ ಸ್ಥಳದ ಮಾಹಿತಿಯು ಹೊರ ಜಗತ್ತಿನ ಜನರಿಗೆ ಹೆಚ್ಚು ತಲುಪಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು.
ಈರಪ್ಪ ಪ್ಯಾಟಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಗೌರವಾಧ್ಯಕ್ಷ
ಪ್ರಾಚೀನ ದೇವಾಲಯಗಳ ರಕ್ಷಣೆ ಹಾಗೂ ಸಂರಕ್ಷಣೆಯನ್ನು ನಾವು ಮಾಡುತ್ತಿದ್ದೇವೆ. ಇದರ ಬಗ್ಗೆ ಪ್ರಚಾರ ಮಾಡುವುದು ನಮ್ಮ ಇಲಾಖೆಯ ಕೆಲಸವಲ್ಲ. ಅದನ್ನು ಪ್ರವಾಸೋದ್ಯಮ ಇಲಾಖೆ ಮಾಡಬೇಕಾಗುತ್ತದೆ.
-ಗೌತಮ ಭಾರತೀಯ ಪುರಾತತ್ವ ಇಲಾಖೆಯ ಶಿವಮೊಗ್ಗ ವಿಭಾಗದ ಸಹಾಯ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.