ADVERTISEMENT

ಡಿಸಿಸಿ ಬ್ಯಾಂಕ್ ಚುಕ್ಕಾಣಿ | ಕಾಂಗ್ರೆಸ್ ಬೆಂಬಲಿತರ ಕೈಗೆ; ಬಿಜೆಪಿಗೆ ಮುಖಭಂಗ

11 ಮಂದಿ ಕಾಂಗ್ರೆಸ್ ಬೆಂಬಲಿತರ ಗೆಲುವು

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 16:26 IST
Last Updated 28 ಜೂನ್ 2024, 16:26 IST
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಶುಕ್ರವಾರ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯದ ಚಿಹ್ನೆ ಪ್ರದರ್ಶಿಸಿದರು
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಶುಕ್ರವಾರ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯದ ಚಿಹ್ನೆ ಪ್ರದರ್ಶಿಸಿದರು   

ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ (ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್) ಬ್ಯಾಂಕಿನ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದಾರೆ. ಬ್ಯಾಂಕಿನ 13 ನಿರ್ದೇಶಕರ ಸ್ಥಾನಗಳ ಪೈಕಿ ಹೊಸನಗರದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಎಂ.ಎಂ.ಪರಮೇಶ್‌ ಅವಿರೋಧ ಆಯ್ಕೆಯಾಗಿದ್ದರು. ಹೀಗಾಗಿ 12 ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು.

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಬ್ಯಾಂಕಿನ ಹಾಲಿ ಅಧ್ಯಕ್ಷ ಮಂಜುನಾಥಗೌಡ, ಮಾಜಿ ಮೇಯರ್ ಮರಿಯಪ್ಪ ಸೇರಿದಂತೆ 10 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಬೀಗಿದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿಕಾರಿಪುರದ ಡಿ.ಎಲ್‌.ಬಸವರಾಜ್‌ ಹಾಗೂ ರಾಷ್ಟ್ರಭಕ್ತರ ಪಡೆ ಬೆಂಬಲಿತ ಅಭ್ಯರ್ಥಿ ಮಹಾಲಿಂಗಶಾಸ್ತ್ರಿ ಜಯಗಳಿಸಿದರು.

ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ ಶಿವಮೊಗ್ಗ ಕ್ಷೇತ್ರದಿಂದ ಕೆ.ಪಿ.ದುಗ್ಗಪ್ಪಗೌಡ ಹಾಗೂ ಜೆ.ಶಿವನಂಜಪ್ಪ ನಡುವೆ ಹಣಾಹಣಿ ನಡೆದು ದುಗ್ಗಪ್ಪಗೌಡ ಗೆಲುವಿನ ನಗೆ ಬೀರಿದರು. ಭದ್ರಾವತಿ ಕ್ಷೇತ್ರದಿಂದ ಎಚ್.ಎಲ್.ಷಡಾಕ್ಷರಿ ವಿರುದ್ಧ ಭದ್ರಾವತಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಸಿ.ಹನುಮಂತಪ್ಪ ಗೆಲುವು ಸಾಧಿಸಿದರು.

ADVERTISEMENT

ತೀರ್ಥಹಳ್ಳಿ ಕ್ಷೇತ್ರದಿಂದ ಬಸವಾನಿಯ ವಿಜಯದೇವ್ ಅವರು ಕೆ.ಎಸ್.ಶಿವಕುಮಾರ್ ವಿರುದ್ಧ ಜಯಗಳಿಸಿದರೆ ಸಾಗರ ಕ್ಷೇತ್ರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಬಿಜೆಪಿ ಬೆಂಬಲಿತ ಹೊನಗೋಡು ರತ್ನಾಕರ ಅವರನ್ನು ಸೋಲಿಸಿದರು. ಶಿಕಾರಿಪುರ ಕ್ಷೇತ್ರದಲ್ಲಿ ನಡೆದ ಹಣಾಹಣಿಯಲ್ಲಿ ಅಗಡಿ ಅಶೋಕ್ ವಿರುದ್ಧ ಚಂದ್ರಶೇಖರ ಗೌಡ ಗೆಲುವು ಸಾಧಿಸಿದರು. ಸೊರಬ ಕ್ಷೇತ್ರದಿಂದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಆಪ್ತ ಕೆ.ಪಿ.ರುದ್ರಗೌಡ ಅವರು ಬಿಜೆಪಿ ಬೆಂಬಲಿತ ಶಿವಮೂರ್ತಿ ಗೌಡ ಅವರನ್ನು ಸೋಲಿಸಿದರು.

ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಗೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳ ಕ್ಷೇತ್ರದ ಶಿವಮೊಗ್ಗ ಉಪವಿಭಾಗದಿಂದ ಹಾಲಿ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಅವರು ಬಿಜೆಪಿ ಬೆಂಬಲಿತ ಜಿ.ವಿರೂಪಾಕ್ಷಪ್ಪ ವಿರುದ್ಧ ಗೆಲುವು ಸಾಧಿಸಿದರು. ಶಿಕಾರಿಪುರ ಉಪವಿಭಾಗದಿಂದ ಮಂಜುನಾಥಗೌಡರ ಆಪ್ತ ಜಿ.ಎಸ್.ಸುಧೀರ್, ಬಿಜೆಪಿ ಬೆಂಬಲಿತ ಬಿ.ಡಿ.ಭೂಕಾಂತ್ ವಿರುದ್ಧ ಗೆಲುವು ಸಾಧಿಸಿದರು.

ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ಶಿವಮೊಗ್ಗ ಉಪವಿಭಾಗದಿಂದ ಎಸ್‌.ಪಿ.ದಿನೇಶ್ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಮೇಯರ್ ಎಸ್‌.ಕೆ.ಮರಿಯಪ್ಪ ಗೆಲುವಿನ ನಗೆ ಬೀರಿದರು. ಸಾಗರ ಉಪವಿಭಾಗದಿಂದ ಎಸ್‌.ಕೆ.ಬಸವರಾಜ್ ಮತ್ತು ಡಿ.ಎಲ್.ರವೀಂದ್ರ ನಡುವಿನ ಹಣಾಹಣಿಯಲ್ಲಿ ಬಸವರಾಜ್ ಗೆಲುವಿನ ದಡ ಸೇರಿದರು.

ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿ ಬರುವ ಇನ್ನಿತರ ಸಹಕಾರ ಸಂಘಗಳ ಕ್ಷೇತ್ರದ ಶಿವಮೊಗ್ಗ ಉಪವಿಭಾಗದಿಂದ ಡಿ.ಆನಂದ್, ಕೆ.ಎಲ್.ಜಗದೀಶ್ವರ್, ಎಚ್‌.ಬಿ.ದಿನೇಶ್, ಜಿ.ಪಿ.ಯೋಗೀಶ್, ಟಿ.ಶಿವಶಂಕರಪ್ಪ ಹಾಗೂ ರಾಷ್ಟ್ರಭಕ್ತ ಬಳಗದ ಬೆಂಬಲಿತ ಮಹಾಲಿಂಗ ಶಾಸ್ತ್ರಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಮಹಾಲಿಂಗ ಶಾಸ್ತ್ರಿ ಗೆದ್ದು ಬೀಗಿದರು.

ಒಟ್ಟು 606 ಮತದಾರರ ಪೈಕಿ ಚುನಾವಣೆಯಲ್ಲಿ 596 ಮಂದಿ ಮತ ಚಲಾಯಿಸಿದರು. ಐದು ಮತಗಳು ತಿರಸ್ಕೃತಗೊಂಡರೆ ಐವರು ಮತ ಚಲಾಯಿಸಲಿಲ್ಲ. ಮುಂಜಾನೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಘಟಾನುಘಟಿಗಳು ಮತ ಚಲಾವಣೆ ಮಾಡಿದರು.

ನೇಮಕಾತಿ ಸೇರಿದಂತೆ ಡಿಸಿಸಿ ಬ್ಯಾಂಕ್‌ನಲ್ಲಿ ಈ ಹಿಂದೆ ಬಿಜೆಪಿ ಬೆಂಬಲಿತರ ಅವಧಿಯಲ್ಲಿ ನಡೆದಿರುವ ಎಲ್ಲಾ ಹಗರಣಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಾಗುವುದು.
– ಬೇಳೂರು, ಗೋಪಾಲಕೃಷ್ಣ ಶಾಸಕ

ಬೇಳೂರು ದುಗ್ಗಪ್ಪಗೌಡಗೆ 1 ಮತದಿಂದ ಗೆಲುವು

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ಭಾರಿ ಪೈಪೋಟಿ ಎದುರಿಸಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಕೆ.ಪಿ.ದುಗ್ಗಪ್ಪಗೌಡ ತಲಾ ಒಂದು ಮತಗಳ ಅಂತರದಿಂದ ಗೆಲುವು ಸಾಧಿಸಿದರೆ ಸಿ.ಹನುಮಂತಪ್ಪ ಮಹಾಲಿಂಗಶಾಸ್ತ್ರಿ ಜಿ.ಎನ್.ಸುಧೀರ ತಲಾ ಎರಡು ಮತಗಳ ಅಂತರದ ಗೆಲುವು ತಮ್ಮದಾಗಿಸಿಕೊಂಡರು. ಶಿಕಾರಿಪುರದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಶಾಂತವೀರಪ್ಪ ಗೌಡ ಪುತ್ರ ಎಚ್.ಎಸ್.ರವೀಂದ್ರ ಸೋಲು ಅನುಭವಿಸಿದರು. ಎಸ್.ಕೆ.ಮರಿಯಪ್ಪ 23 ಮತಗಳ ಅಂತರದಲ್ಲಿ ಜಯ ದಾಖಲಿಸಿದರು.

ಸಚಿವರ ನೇತೃತ್ವದಲ್ಲಿ ಕಾರ್ಯತಂತ್ರ

ಡಿಸಿಸಿ ಬ್ಯಾಂಕಿನ ಆಡಳಿತ ಚುಕ್ಕಾಣಿಯನ್ನು ಶತಾಯಗತಾಯ ಪಕ್ಷದ ಬೆಂಬಲಿತರ ಹಿಡಿತದಲ್ಲಿಯೇ ಇಟ್ಟುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಭರ್ಜರಿ ಕಾರ್ಯತಂತ್ರ ರೂಪಿಸಿತ್ತು. ಮತದಾರರ ತಲುಪಲು ಬಿಜೆಪಿ ಬೆಂಬಲಿತರ ಅಧಿಕಾರಾವಧಿಯಲ್ಲಿ ನಡೆದ ನೇಮಕಾತಿ ಹಗರಣವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿತು.

ಯಶಸ್ವಿ ಸಂಧಾನ: ದುಗ್ಗಪ್ಪಗೌಡ ಎದುರು ಕಾಂಗ್ರೆಸ್‌ ಮುಖಂಡ ಎಂ.ಶ್ರೀಕಾಂತ್ ಹಾಗೂ ಆರ್.ಎಂ. ಮಂಜುನಾಥಗೌಡ ವಿರುದ್ಧ ಸಂತೆ ಕಡೂರು ವಿಜಯಕುಮಾರ್ ಸ್ಪರ್ಧಿಸಲು ಮುಂದಾಗಿದ್ದರು. ಅವರೊಂದಿಗೆ ಸಂಧಾನ ನಡೆಸಿದ್ದ ಮಧು ಬಂಗಾರ‌ಪ್ಪ ಕಣದಿಂದ ಹಿಂದಕ್ಕೆ ತೆಗೆದುಕೊಳ್ಳಲು ಮನವೊಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.