ADVERTISEMENT

ಗಾಂಜಾ, ಮಟ್ಕಾ ದಂಧೆಯಲ್ಲಿ ಹರತಾಳು ಹಾಲಪ್ಪ ಕೈವಾಡ: ಗೋಪಾಲಕೃಷ್ಣ ಬೇಳೂರು ಅನುಮಾನ

ಶಾಸಕ ಹಾಲಪ್ಪ ಹರತಾಳು ವಿರುದ್ಧ ಬೇಳೂರು ಆರೋಪ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 6:19 IST
Last Updated 24 ಆಗಸ್ಟ್ 2021, 6:19 IST
ಗೋಪಾಲಕೃಷ್ಣ ಬೇಳೂರು
ಗೋಪಾಲಕೃಷ್ಣ ಬೇಳೂರು   

ಸಾಗರ: ಎಂಎಸ್‌ಐಎಲ್ ಅಧ್ಯಕ್ಷರೂ ಆಗಿರುವ ಶಾಸಕ ಹಾಲಪ್ಪ ಹರತಾಳು ಅವರು ಸಾಗರ ಕ್ಷೇತ್ರದ ಎಲ್ಲೆಡೆ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಅನುಮತಿ ದೊರಕಿಸಿಕೊಡುತ್ತಿದ್ದಾರೆ. ಇದರಿಂದ ಈ ಕ್ಷೇತ್ರ ಕುಡುಕರ ಸಾಮ್ರಾಜ್ಯವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಾಂಜಾ, ಮಟ್ಕಾ ಹಾವಳಿ ವಿಪರೀತವಾಗಿರುವುದನ್ನು ನೋಡಿದರೆ ಈ ದಂಧೆಯಲ್ಲಿ ಕ್ಷೇತ್ರದ ಶಾಸಕರ ಕೈವಾಡವಿದೆ ಎಂಬ ಅನುಮಾನ ಬರುತ್ತಿದೆ. ಅಭಿವೃದ್ಧಿ ಎಂದರೆ ಬಾರ್ ಅಂಡ್ ರೆಸ್ಟೋರೆಂಟ್ ಎನ್ನುವಂತಾಗಿದೆ. ಆಡಳಿತ ಎನ್ನುವುದು ಸಂಪೂರ್ಣ ಕುಸಿತಗೊಂಡಿದೆ’ ಎಂದು ದೂರಿದರು.

‘ಗುತ್ತಿಗೆ ದಾರರು ಕಮಿಷನ್ ನೀಡಿದರೆ ಮಾತ್ರ ಶಾಸಕ ಹಾಲಪ್ಪ ಅವರು ಕಾಮಗಾರಿಗಳಿಗೆ ಅವಕಾಶ ನೀಡುತ್ತಿದ್ದಾರೆ. ಕಾಮಗಾರಿಗಳ ಪರಿಶೀಲನೆ ನೆಪದಲ್ಲಿ ಕಮಿಷನ್‌ನ ಶೇಕಡವಾರು ಪ್ರಮಾಣ ಇಷ್ಟು ಎಂದು ನಿಗದಿ ಮಾಡುತ್ತಿದ್ದಾರೆ. ಮೀನು ಮಾರುಕಟ್ಟೆ ನೂತನ ಕಟ್ಟಡ
ಕಾಮಗಾರಿ ಮೂರು ವರ್ಷಗಳ ಹಿಂದೆಯೇ ಆರಂಭವಾಗಿದ್ದು,
ಶಾಸಕರು ಈಗ ಅದರ ಪರಿಶೀಲನೆಗೆ ಹೋಗಿರುವ ಮರ್ಮವೇನು’ ಎಂದು ಪ್ರಶ್ನಿಸಿದರು.

ADVERTISEMENT

‘ಕ್ಷೇತ್ರದಲ್ಲಿ ಅಕ್ರಮ ಮರಳು ಸಾಗಾಣಿಕೆ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಸಂಸದರ ಹೆಸರು ಹೇಳಿ ಮರಳು ಸಾಗಾಣಿಕೆದಾರರಿಗೆ ಇಂತಿಷ್ಟು ಮಾಮೂಲಿ ಕೊಡಬೇಕು ಎಂದು ಸತಾಯಿಸುತ್ತಿದ್ದಾರೆ. ಮರಳು ದಂಧೆಯಲ್ಲಿ ತಮ್ಮ ವರಮಾನಕ್ಕೆ ತೊಂದರೆಯಾಗಿದೆ ಎಂದು ಶಾಸಕ ಹಾಲಪ್ಪ ಅವರು ಪೊಲೀಸ್ ಅಧಿಕಾರಿಗಳ ವಿರುದ್ಧ ಗೃಹ ಸಚಿವರಿಗೆ ದೂರು ನೀಡಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

ಆ. 24ರಂದು ಬೆಳಿಗ್ಗೆ 11ಕ್ಕೆ ರಾಘವೇಶ್ವರ ಸಭಾಭವನದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಈಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಮಾಜಿ ಶಾಸಕ ಮಧು ಬಂಗಾರಪ್ಪ, ಆರ್.ಎಂ.ಮಂಜುನಾಥ ಗೌಡ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬಿ.ಆರ್.ಜಯಂತ್, ‘ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ರೈತರು ವ್ಯಾಪಕ ಪ್ರಮಾಣದಲ್ಲಿ ಬೆಳೆ ನಷ್ಟ ಅನುಭವಿಸಿದ್ದರೂ ಅವರಿಗೆ ಪರಿಹಾರ ದೊರೆತಿಲ್ಲ. ಮನೆ ಕಳೆದುಕೊಂಡವರಿಗೂ ನೆರವು ಲಭ್ಯವಾಗಿಲ್ಲ. ಅಧಿಕಾರಿಗಳು ಕಾನೂನು ಪಾಲಿಸುವುದನ್ನು ಬಿಟ್ಟು ಕೇವಲ ಶಾಸಕರ ಆದೇಶಗಳನ್ನು ಪಾಲಿಸುವುದರಲ್ಲಿ ನಿರತರಾಗಿದ್ದಾರೆ’ ಎಂದು ದೂರಿದರು.

ಕಾಂಗ್ರೆಸ್ ಪ್ರಮುಖರಾದ ಅನಿತಾಕುಮಾರಿ, ಐ.ಎನ್.ಸುರೇಶ್ ಬಾಬು, ಮಲ್ಲಿಕಾರ್ಜುನ ಹಕ್ರೆ, ತಶ್ರೀಫ್ ಇಬ್ರಾಹಿಂ, ಮಧು ಮಾಲತಿ,
ಗಣಪತಿ ಮಂಡಗಳಲೆ, ಅಶೋಕ್ ಬೇಳೂರು, ಮಹಾಬಲ ಕೌತಿ, ರವಿ ಲಿಂಗನಮಕ್ಕಿ, ಸಂತೋಷ್ ಸದ್ಗುರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.