ADVERTISEMENT

ಭದ್ರಾ ಅಭಯಾರಣ್ಯ | ಶೀಘ್ರವೇ ಮತ್ತೊಂದು ಆನೆ ಶಿಬಿರ: ಈಶ್ವರ ಖಂಡ್ರೆ

ಕುಮ್ಕಿ ಆನೆಗಳಿಗೆ ತರಬೇತಿ: ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 15:22 IST
Last Updated 4 ಅಕ್ಟೋಬರ್ 2024, 15:22 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಶಿವಮೊಗ್ಗ: ಮಲೆನಾಡು ಭಾಗದಲ್ಲಿ (ಹಾಸನ, ಚಿಕ್ಕಮಗಳೂರು, ಶಿವಮೊಗ್ಗ) ಕಾಡಾನೆ ಹಾವಳಿ ನಿಯಂತ್ರಿಸಲು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ರಾಜ್ಯದ ಮತ್ತೊಂದು ಆನೆ ಸಂರಕ್ಷಣೆ, ಆರೈಕೆ ಮತ್ತು ಪುನರ್ವಸತಿ ಶಿಬಿರ ಆರಂಭಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹೊಸದಾಗಿ ಆರಂಭಿಸಲಾಗುವ ಶಿಬಿರದಲ್ಲಿ ಕುಮ್ಕಿ ಆನೆಗಳಿಗೆ ತರಬೇತಿ ನೀಡಲಾಗುವುದು. ಕಾಡಾನೆ ಸೆರೆಗೆ ಇಲ್ಲಿಯವರೆಗೂ ಕುಮ್ಕಿ ಆನೆಗಳನ್ನು ಕೊಡಗು ಇಲ್ಲವೇ ಮೈಸೂರು ಜಿಲ್ಲೆಗಳಿಂದ ತರಿಸಿಕೊಳ್ಳಬೇಕಿತ್ತು ಎಂದರು.

ಆನೆಗಳ ವಿಹಾರ ಧಾಮ: 

ADVERTISEMENT

ರಾಜ್ಯದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಆನೆಗಳಿಂದ ಜೀವಹಾನಿ ಮತ್ತು ಬೆಳೆ ಹಾನಿ ಸಂಭವಿಸುತ್ತಿದೆ. ಅದನ್ನು ನಿಯಂತ್ರಿಸಲು ಅಭಯಾರಣ್ಯ ವ್ಯಾಪ್ತಿಯ 2,000 ಹೆಕ್ಟೇರ್ ಪ್ರದೇಶದಲ್ಲಿ ಆನೆಗಳ ವಿಹಾರ ಧಾಮ ಸ್ಥಾಪಿಸಲಾಗುತ್ತಿದೆ. ಅದಕ್ಕೆ ಪ್ರಸ್ತಾವ ಸಲ್ಲಿಸುವಂತೆ ವನ್ಯಜೀವಿ ಪರಿಪಾಲಕರಿಗೆ (ವೈಲ್ಡ್‌ ಲೈಫ್‌ ವಾರ್ಡನ್‌) ಸೂಚಿಸಲಾಗಿದೆ ಎಂದರು.

ವಿಹಾರ ಧಾಮದ ವ್ಯಾಪ್ತಿಯ 5,000 ಎಕರೆ ಪ್ರದೇಶದಲ್ಲಿ ಆನೆಗಳಿಗೆ ಇಷ್ಟವಾದ ಬಿದಿರು, ಹಲಸು, ಹುಲ್ಲು ಬೆಳೆಸಲಾಗುವುದು. ಸುತ್ತಲೂ ರೈಲ್ವೆ ಕಂಬಿಯ ಬ್ಯಾರಿಕೇಡ್ ಅಳವಡಿಸಿ, ಸೆರೆ ಹಿಡಿದ ಆನೆಗಳನ್ನು ಅಲ್ಲಿ ತಂದು ಬಿಡಲಾಗುವುದು. ಇದರಿಂದ ಕಾಡಿನಿಂದ ಹೊರಗೆ ಬರುವ ಆನೆಗಳಿಂದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸಾಧ್ಯವಾಗಲಿದೆ ಎಂದು ವಿವರಿಸಿದರು.

ಈಶ್ವರ ಖಂಡ್ರೆ ಅವರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಭದ್ರಾ ಅಭಯಾರಣ್ಯ ರಜತ ಮಹೋತ್ಸವ ಸ್ಮರಣಾರ್ಥ ಅಂಚೆ ಚೀಟಿ, ಮತ್ತು ಕಿರು ಹೊತ್ತಿಗೆ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.