ADVERTISEMENT

ಭದ್ರಾ ಜಲಾಶಯ: ವಾರದಲ್ಲಿ 8.2 ಅಡಿ ನೀರು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 15:21 IST
Last Updated 15 ಜುಲೈ 2024, 15:21 IST
ಹೊಳೆಹೊನ್ನೂರು ಸಮೀಪ ಕೂಡಲಿಯಲ್ಲಿ ಸೋಮವಾರ ಭದ್ರಾ ಹಾಗೂ ತುಂಗಾ ನದಿಗಳ ಸಂಗಮ ಸ್ಥಳ ಮಳೆಯಿಂದಾಗಿ ಮೈದುಂಬಿದೆ
ಹೊಳೆಹೊನ್ನೂರು ಸಮೀಪ ಕೂಡಲಿಯಲ್ಲಿ ಸೋಮವಾರ ಭದ್ರಾ ಹಾಗೂ ತುಂಗಾ ನದಿಗಳ ಸಂಗಮ ಸ್ಥಳ ಮಳೆಯಿಂದಾಗಿ ಮೈದುಂಬಿದೆ   

ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿ ಕಳೆದೊಂದು ವಾರದಿಂದ ನೀರು ಸಂಗ್ರಹ 8.2 ಅಡಿಯಷ್ಟು ಹೆಚ್ಚಾಗಿದೆ.

ಜುಲೈ 8ರಂದು 133.1 ಅಡಿ ನೀರಿನ ಸಂಗ್ರಹ ಇತ್ತು. ಸೋಮವಾರ ಅದು 141.3 ಅಡಿಗೆ ಹೆಚ್ಚಳಗೊಂಡಿದೆ. ಜಲಾಶಯದಲ್ಲಿ 16,041 ಕ್ಯುಸೆಕ್ ಇದೆ. ಭಾನುವಾರ ಜಲಾಶಯಕ್ಕೆ 14,150 ಕ್ಯುಸೆಕ್ ನೀರು ಹರಿದು ಬಂದಿತ್ತು. ಈ ಬಾರಿ ಮಳೆ ಕೊರತೆಯಿಂದ ದಾಖಲೆಯ ಮಟ್ಟದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಈಗ ಜಲಾಶಯ ಭರ್ತಿ ಆಗುತ್ತಿರುವುದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಜಲಾಶಯ ಭರ್ತಿ ಆಗುವ ಆಶಾಭಾವನೆ‌ ಮೂಡಿಸಿದೆ.

186 ಅಡಿ ನೀರಿನ ಸಂಗ್ರಹ ಸಾಮರ್ಥ್ಯದ ಭದ್ರಾ ಜಲಾಶಯ ಜಲಾಶಯ ಭರ್ತಿ ಆಗಲು ಇನ್ನೂ 45 ಅಡಿ ನೀರಿನ ಸಂಗ್ರಹ ಆಗಬೇಕಿದೆ. ವಿಶೇಷವೆಂದರೆ ಕಳೆದ ವರ್ಷವೂ ಇದೇ ಅವಧಿಯಲ್ಲಿ ಜಲಾಶಯದಲ್ಲಿ ಇಷ್ಟೇ ನೀರಿನ ಸಂಗ್ರಹ (141.3 ಅಡಿ) ಇತ್ತು.

ADVERTISEMENT

ಭರ್ತಿ ಹಂತಕ್ಕೆ ತಲುಪಿತ್ತು:

ಎರಡು ವರ್ಷಗಳ ಹಿಂದೆ ಭಾರಿ ಮಳೆಯಾಗಿದ್ದರಿಂದ ಜಲಾಶಯ ಈ ವೇಳೆಗೆ ಭರ್ತಿಯ ಹಂತಕ್ಕೆ ತಲುಪಿತ್ತು. 2022ರ ಜುಲೈ 15ರಂದು ಜಲಾಶಯದಲ್ಲಿ 184.6 ಅಡಿ ನೀರಿನ ಸಂಗ್ರಹ ಇತ್ತು. ಆ ದಿನ ಜಲಾಶಯಕ್ಕೆ ಒಳಹರಿವು 61,831 ಕ್ಯುಸೆಕ್ ಇತ್ತು. 2022ರ ಜುಲೈ 14ರಂದು ಜಲಾಶಯದಲ್ಲಿ 183.2 ಅಡಿ ನೀರಿನ ಸಂಗ್ರಹ ಇತ್ತು.

ಕಳೆದ ವರ್ಷ ಮಳೆಯ ಕೊರತೆಯಿಂದ ಜಲಾಶಯಕ್ಕೆ ನೀರಿನ ಕೊರತೆ ಆಗಿತ್ತು. ಆದರೆ ಈ ಬಾರಿಯೂ ಅದು ಪುನರಾವರ್ತನೆ ಆಗಲಿದೆಯೇ ಎಂಬ ಆತಂಕ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಮನೆ ಮಾಡಿದೆ.

‘ಜಲಾಶಯದ ಇತಿಹಾಸ ಗಮನಿಸಿದರೆ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿಯೇ ಭದ್ರೆಯ ಒಡಲು ತುಂಬಿದೆ. ಜಲಾನಯನ ಪ್ರದೇಶದಲ್ಲಿ ನವೆಂಬರ್‌ವರೆಗೂ ಮಳೆ ಬೀಳುತ್ತದೆ. ಹೀಗಾಗಿ ಈ ಬಾರಿ ಭದ್ರೆ ಭರ್ತಿಯಾಗಲಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.