ಶಿವಮೊಗ್ಗ:ಶಿವಮೊಗ್ಗ, ಚಿಕ್ಕಮಗಳೂರು ಅವಳಿ ಜಿಲ್ಲೆಗಳ ಗಡಿ ಪ್ರದೇಶದಲ್ಲಿರುವ ಭದ್ರಾ ಜಲಾಶಯದ ಸುತ್ತಮುತ್ತಲ ಪ್ರದೇಶವನ್ನು ಬಹು ಆಕರ್ಷಿತಪ್ರವಾಸಿ ತಾಣವಾಗಿ ಮಾರ್ಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ತಿಳಿಸಿದರು.
ಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ನಂತರ ಅವರು ಮಾಹಿತಿ ನೀಡಿದರು.
ಇಲ್ಲಿರುವ 182 ಎಕರೆ ಪ್ರದೇಶದಲ್ಲಿ 105ಎಕರೆ ಭೂಮಿ ಅಭಿವೃದ್ದಿಪಡಿಸಲು ಕಾಯ್ದಿರಿಸಲಾಗಿದೆ.ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ₹ 100ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈಗಾಗಲೆ ಬಿಡುಗಡೆಯಾಗಿರುವ ಅನುದಾನ ಬಳಸಿಕೊಂಡು ಅತ್ಯಲ್ಪ ಅವಧಿ ಅಂದರೆ 8-10ತಿಂಗಳ ಒಳಗೆಕೈಗೊಂಡ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಜಂಗಲ್ ರೆಸಾರ್ಟ್‌ಗೆ 23ಎಕರೆ ನಿಗದಿಪಡಿಸಲಾಗಿದೆಎಂದು ಮಾಹಿತಿ ನೀಡಿದರು.
ಕೊಡಗಿಗೆ ₹ 4 ಸಾವಿರ ಕೋಟಿ ನಷ್ಟ:
ರಾಜ್ಯದ ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ₹ 4ಸಾವಿರ ಕೋಟಿ ಆರ್ಥಿಕ ನಷ್ಟ ಸಂಭವಿಸಿದೆ. ಈ ಪ್ರದೇಶದ ಸಂತ್ರಸ್ಥರ ನೆರವಿಗೆ ಅಗತ್ಯವಿರುವ ಎಲ್ಲಾ ರೀತಿಯ ಪರಿಹಾರ ಕಾರ್ಯ ಕೈಗೊಂಡಿದ್ದೇವೆ. ರಾಷ್ಟ್ರೀಯ ವಿಪತ್ತು ನೀತಿ-ನಿಯಮ ಸಡಿಲಿಸಿ, ವಿಶೇಷ ಪ್ರಕರಣವಾಗಿ ಪರಿಗಣಿಸಿ ಹೆಚ್ಚಿನ ಪರಿಹಾರ ನೀಡಿ, ಕೊಡಗಿನ ಪುನರ್ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಪ್ರಸ್ತುತ ರಾಜ್ಯದ ಕೊಡಗು ಜಿಲ್ಲೆಯ ಸಂತ್ರಸ್ಥರಿಗೆ ರಾಜ್ಯದ ದಾನಿಗಳು ಸುಮಾರು ₹ 65 ಕೋಟಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಮಾ ಮಾಡಿದ್ದಾರೆ. ಅಲ್ಲಿ ನೆಲೆ ಕಳೆದುಕೊಂಡು ನಿರಾಶ್ರಿತರಾಗಿರುವ ಪ್ರತಿ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ₹ 6 ಲಕ್ಷ ನೀಡಲಾಗುತ್ತಿದೆ. ಪ್ರತಿ ಕುಟುಂಬಕ್ಕೆ ₹ 1.09ಲಕ್ಷ ದಿನಬಳಕೆಯ ಸಾಮಗ್ರಿ ನೀಡಲಾಗಿದೆ ಎಂದು ವಿವರ ನೀಡಿದರು.
ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ್, ಮಂಜುನಾಥಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೆಶಕ ಹನುಮನಾಯ್ಕ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.