ಭದ್ರಾವತಿ: ಲಕ್ಕವಳ್ಳಿಯ ಭದ್ರಾ ಜಲಾಶಯ ತುಂಬಿದಾಗಲೆಲ್ಲ ನದಿಗೆ ಹೆಚ್ಚು ನೀರು ಹರಿಬಿಡಲಾಗುತ್ತದೆ. ಇದರಿಂದ ನಗರದ ಹೊಸ ಸೇತುವೆ ಮುಳುಗುವ ಜೊತೆಗೆ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ.
ಈ ಬಾರಿ ಹೆಚ್ಚು ಮಳೆಯಾದ್ದರಿಂದ ಜಲಾಶಯದಿಂದ ಬಿಡಲಾಗಿದ್ದ ನೀರಿನ ರಭಸಕ್ಕೆ ಸೇತುವೆಯ ತಡೆಗೋಡೆಗೆ ಅಳವಡಿಸಿದ್ದ ಕಬ್ಬಿಣದ ಸರಳುಗಳು ಮುರಿದಿದ್ದು, ಅವುಗಳ ದುರಸ್ತಿ ಕಾರ್ಯ ನಡೆದಿಲ್ಲ. ಸೇತುವೆಯ ತಡೆಗೋಡೆ ಸಮರ್ಪಕವಾಗಿ ಇಲ್ಲದ್ದರಿಂದ ರಾತ್ರಿ ವೇಳೆ ವಾಹನಗಳು ಸಂಚರಿಸುವುದು ದುಸ್ತರವಾಗಿದೆ. ಅಪಘಾತ ಸಂಭವಿಸುವ ಸಾಧ್ಯತೆಯೂ ಹೆಚ್ಚಾಗಿದೆ. 15 ದಿನಗಳ ಹಿಂದೆ ಆ ಜಾಗದಲ್ಲಿ ಕಾರೊಂದು ಅಪಘಾತಕ್ಕೀಡಾದ ಘಟನೆ ನಡೆದಿದೆ.
ಸೇತುವೆಗೆ ತಡೆಗೋಡೆಯಾಗಿ ತಾತ್ಕಾಲಿಕವಾಗಿ ಅಡಿಕೆ ಮರದ ದೆಬ್ಬೆಗಳನ್ನು ಕಟ್ಟಲಾಗಿದೆ. ಹೊಸ ಸೇತುವೆಯನ್ನು ಕೆಳಮಟ್ಟದಲ್ಲಿ ನಿರ್ಮಿಸಿದ್ದರಿಂದ ನದಿಯಲ್ಲಿ ನೀರು ಹೆಚ್ಚಿದಂತೆ ಸೇತುವೆಯ ಮೇಲೆ ಹರಿಯಲು ಪ್ರಾರಂಭವಾಗುತ್ತದೆ.
‘ಸೇತುವೆ ಮೇಲೆ ಪ್ರತಿ ಬಾರಿ ನೀರು ಹರಿದಾಗಲೆಲ್ಲ ತಡೆಗೋಡೆ ಮುರಿದು ಬೀಳುತ್ತದೆ. ಅದನ್ನು ಪುನಃ ಅಳವಡಿಸಲಾಗುತ್ತದೆ. ಅದಕ್ಕೆಂದು ಪ್ರತಿ ಬಾರಿಯೂ ಹೆಚ್ಚು ಹಣ ವಿನಿಯೋಗಿಸಲಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಆಟೋ ಚಾಲಕ ಪ್ರವೀಣ್ ಒತ್ತಾಯಿಸುತ್ತಾರೆ.
ಭಾರಿ ವಾಹನಗಳ ಸಂಚಾರ ನಿರ್ಬಂಧ:
ಹೊಸ ಸೇತುವೆ ಶಿಥಿಲಾವಸ್ಥೆ ತಲುಪಿದೆ. ದುರಸ್ತಿ ಕಾರ್ಯ ಕೈಗೊಳ್ಳದ್ದರಿಂದ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಶಿವಮೊಗ್ಗದಿಂದ ಬರುವ ಕೆಎಸ್ಆರ್‌ಟಿಸಿ ಬಸ್‌ಗಳು ಕೊನೆಯ ನಿಲ್ದಾಣವಾದ ರಂಗಪ್ಪ ವೃತ್ತಕ್ಕೆ ಬರುತ್ತಿಲ್ಲ. ಮುಖ್ಯ ನಿಲ್ದಾಣವನ್ನು ಕೊನೆಯ ನಿಲ್ದಾಣವನ್ನಾಗಿ ಪರಿವರ್ತಿಸಿಕೊಳ್ಳಲಾಗಿದೆ. ಅನೇಕ ಪ್ರಯಾಣಿಕರು ಮುಂದಕ್ಕೆ ತೆರಳಲು ಅಲ್ಲಿಂದ ಬೇರೆ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ
‘ರಾತ್ರಿ ವೇಳೆ ಹೊಸ ಸೇತುವೆ ಮೇಲೆ ವಾಹನ ಚಲಾಯಿಸುವುದು ಕಷ್ಟಕರವಾಗಿದೆ. ಎದುರಿನಿಂದ ಬರುವ ವಾಹನದ ಬೆಳಕಿನ ಪ್ರಖರತೆ ಕಣ್ಣು ಕುಕ್ಕುವುದರಿಂದ, ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇದೆ’ ಎಂದು ಆಟೊ ಚಾಲಕ ದಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.