ADVERTISEMENT

ಭದ್ರಾವತಿ | ಹದಗೆಟ್ಟ ಬಡಾವಣೆ ರಸ್ತೆ: ಸವಾರರಿಗೆ ಸಂಕಷ್ಟ

ದುರಸ್ತಿ ಕಾರ್ಯಕ್ಕೆ ಲೋಯರ್ ಹುತ್ತಾ ನಿವಾಸಿಗಳ ಆಗ್ರಹ

ಪ್ರಜಾವಾಣಿ ವಿಶೇಷ
Published 24 ಜೂನ್ 2024, 5:46 IST
Last Updated 24 ಜೂನ್ 2024, 5:46 IST
ಭದ್ರಾವತಿಯ ಲೋಯರ್ ಹುತ್ತಾದಲ್ಲಿನ ರಸ್ತೆಯ ಸ್ಥಿತಿ 
ಭದ್ರಾವತಿಯ ಲೋಯರ್ ಹುತ್ತಾದಲ್ಲಿನ ರಸ್ತೆಯ ಸ್ಥಿತಿ    

ಭದ್ರಾವತಿ: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.2ರ ಲೋಯರ್ ಹುತ್ತಾ ನಿವಾಸಿಗಳು ತಮ್ಮ ಬಡಾವಣೆಯ ರಸ್ತೆಗಳಲ್ಲಿ ಸಂಚರಿಸುವುದೇ ಸವಾಲೆನಿಸಿದೆ. ಹದಗೆಟ್ಟ ರಸ್ತೆಗಳಿಂದಾಗಿ ವಾಹನ ಸವಾರರು ಪ್ರತಿನಿತ್ಯ ಪರದಾಡುವಂತಾಗಿದೆ.  

ಇದೇ ರಸ್ತೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಅನೇಕ ಅಂಗಡಿಗಳು, ದೇವಸ್ಥಾನ ಮತ್ತು ಮನೆಗಳು ಇವೆ. ಒಳಚರಂಡಿ ಕಾಮಗಾರಿಯಿಂದಾಗಿ ರಸ್ತೆಗಳು ಹಾಳಾಗಿದ್ದು, ನಿವಾಸಿಗಳು ದಿನನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ.

ಶಾಲೆಯ ಹಿಂಭಾಗದ ರಸ್ತೆ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ 10 ವರ್ಷಗಳ ಹಿಂದೆ ಒಳಚರಂಡಿ ಕಾಮಗಾರಿ ನಡೆಸಲಾಗಿತ್ತು. ಆಗ ಕಾಮಗಾರಿ ನಿಮಿತ್ತ ಅಗೆದಿದ್ದ ರಸ್ತೆಗಳ ದುರಸ್ತಿ ಕಾರ್ಯ ಈವರೆಗೂ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದಾಗಿ  ಅಪಘಾತಗಳು ಹೆಚ್ಚಿವೆ. ಈ ಕುರಿತು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.  

ADVERTISEMENT

‘ಒಳಚರಂಡಿ, ನೀರಿನ ಪೈಪ್‌ಲೈನ್, ನೆಲದಡಿ ವಿದ್ಯುತ್‌ ಸಂಪರ್ಕ ಇತ್ಯಾದಿ ದುರಸ್ತಿ ಕಾರ್ಯ ಕೈಗೊಳ್ಳಲು ರಸ್ತೆಗಳನ್ನು ಅಗೆಯಲಾಗುತ್ತದೆ. ಕಾಮಗಾರಿ ನಂತರ ರಸ್ತೆಯನ್ನು ಸರಿಪಡಿಸುವ ಜವಾಬ್ದಾರಿ ಆಯಾ ಇಲಾಖೆಗಳದ್ದೇ ಆಗಿರುತ್ತದೆ. ಬಡಾವಣೆಗಳಲ್ಲಿ ಒಳಚರಂಡಿ ದುರಸ್ತಿ ಕಾರ್ಯಕ್ಕೆ ರಸ್ತೆ ಅಗೆಯುವಾಗ ಅವುಗಳನ್ನು ಸರಿಪಡಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ದಶಕ ಕಳೆದರೂ ದುರಸ್ತಿ ಮಾಡಿಲ್ಲ’ ಎಂದು ಸ್ಥಳೀಯರಾದ ಶೈಲೇಶ್ ಕೋಟಿ ತಿಳಿಸಿದರು.

‘ಹಾಳಾಗಿರುವ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದ ಕಾರಣ, ರಸ್ತೆಗೆ ಹೊಂದಿಕೊಂಡಂತಿರುವ ಸರ್ಕಾರಿ ಶಾಲೆಯ ಆವರಣವೇ ಜಾನುವಾರು ಮತ್ತು ಸಾರ್ವಜನಿಕರ ಪಾಲಿಗೆ ಕಾಲುದಾರಿಯಾಗಿ ಮಾರ್ಪಟ್ಟಿದೆ. ಇದೇ ರಸ್ತೆಗೆ ಹೊಂದಿಕೊಂಡಂತೆ ತಿರುಮಲ ವೆಂಕಟೇಶ್ವರ ದೇವಸ್ಥಾನವಿದೆ. ಈ ಪ್ರದೇಶದಲ್ಲಿ ಆಗಾಗ ಧಾರ್ಮಿಕ, ಸಾಮಾಜಿಕ, ರಾಜಕೀಯ ಕಾರ್ಯಕ್ರಮಗಳು ಮತ್ತು ಶೋಭಾ ಯಾತ್ರೆಗಳೂ ನಡೆಯುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ರಸ್ತೆ ದುರಸ್ತಿ ಕಾರ್ಯ ಕೈಗೊಂಡು ನಿವಾಸಿಗಳ ಸಂಕಷ್ಟ ಪರಿಹರಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಲೋಯರ್ ಹುತ್ತಾ ರಸ್ತೆಯು 150 ಮೀಟರ್ ಉದ್ದವಿದೆ. ಚುನಾವಣಾ ನೀತಿ ಸಂಹಿತೆಯ ಕಾರಣ ದುರಸ್ತಿ ಕಾರ್ಯವನ್ನು ನಿಲ್ಲಿಸಲಾಗಿತ್ತು. ಮುಂದಿನ ತಿಂಗಳಿನಿಂದ ದುರಸ್ಥಿ ಕಾರ್ಯ ಕೈಗೊಳ್ಳಲಾಗುವುದು’ ಎಂದು ವಾರ್ಡ್‌ ಕೌನ್ಸಿಲರ್ ಗೀತಾ ರಾಜಕುಮಾರ್ ತಿಳಿಸಿದರು.

‘ಹಳೇ ಕವಲಗುಂದಿ ಪ್ರದೇಶದ ದುರಸ್ತಿ ಕಾರ್ಯಕ್ಕೆ ₹ 24 ಲಕ್ಷ, ಮೀನುಗಾರರ ಬೀದಿ ದುರಸ್ತಿಗೆ ₹ 17 ಲಕ್ಷ, ಲೋಯರ್ ಹುತ್ತಾ ರಸ್ತೆಗೆ ₹ 12 ಲಕ್ಷ, ರೈಲ್ವೆ ಟ್ರ್ಯಾಕ್ ಕೆಳಭಾಗದಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲು ₹ 55 ಲಕ್ಷ ಅನುದಾನ ಬಿಡುಗಡೆಗೊಳಿಸಲು ನಗರಸಭೆ ಅನುಮೋದನೆ ನೀಡಿದೆ. ನಗರದ ಎಲ್ಲಾ ವಾರ್ಡ್‌ಗಳ ರಸ್ತೆ ದುರಸ್ತಿ ಕಾರ್ಯಕ್ಕಾಗಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಅನುದಾನ ಬಿಡುಗಡೆಗೊಳಿಸುವುದಾಗಿ ಹೇಳಿದ್ದಾರೆ. ಮುಂದಿನ ತಿಂಗಳು ಈ ಎಲ್ಲಾ ಕಾಮಗಾರಿಗಳಿಗೂ ಚಾಲನೆ ದೊರೆಯಲಿದೆ’ ಎಂದು ವಿವರಿಸಿದರು.

ಒಳ ಚರಂಡಿ ಕಾಮಗಾರಿಯಿಂದ ಹಾಳಾಗಿರುವ ರಸ್ತೆ

15ನೇ ಹಣಕಾಸು ಯೋಜನೆ ಅಡಿ ದುರಸ್ತಿ ಕೈಗೊಳ್ಳಲು ಅನುಮೋದನೆ ದೊರೆತರೆ ತಕ್ಷಣ ಟೆಂಡರ್ ಕರೆದು ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು

- ಪ್ರಸಾದ್ ನಗರಸಭೆ ಎಂಜಿನಿಯರ್ 

ನಗರದ ವಾರ್ಡ್‌ಗಳ ಸದಸ್ಯರ ಸಭೆ ಕರೆದು ಸಮಸ್ಯೆಗಳ ಕುರಿತು ವಿವರಣೆ ಪಡೆದುಕೊಳ್ಳಲಾಗಿದೆ. ಶೀಘ್ರದಲ್ಲೇ ಯೋಜನೆ ರೂಪಿಸಿ ದುರಸ್ತಿ ಕಾರ್ಯ ನಡೆಸಲಾಗುವುದು.

-ಪ್ರಕಾಶ್ ಎಂ.ಚನ್ನಪ್ಪನವರ್ ನಗರಸಭೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.