ಭದ್ರಾವತಿ: ಇಲ್ಲಿನ ಬಿ.ಎಚ್. ರಸ್ತೆಯ ಚಾಮೇಗೌಡ ಏರಿಯಾದ ಗೌಳಿಗರ ಬೀದಿಯಲ್ಲಿರುವ ಮೀನು ಮಾರುಕಟ್ಟೆಯ ಪ್ರದೇಶ ಅತ್ಯಂತ ಕಿರಿದಾಗಿದ್ದು, ವ್ಯಾಪಾರಸ್ಥರಿಗೂ ಗ್ರಾಹಕರಿಗೂ ತೊಂದರೆಯಾಗುತ್ತಿದೆ.
ಈ ಮಾರುಕಟ್ಟೆಯಲ್ಲಿ 9 ಜನ ವ್ಯಾಪಾರಿಗಳಿಗೆ ಮಾತ್ರ ಸ್ಥಳಾವಕಾಶವಿದೆ. ಆದರೆ, ಮಾರಾಟಗಾರರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಬಹುತೇಕರು ಪಕ್ಕದಲ್ಲಿ ರಸ್ತೆ ಬದಿಯಲ್ಲಿಯೇ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲವರು ಪುಟ್ಟಿಯಲ್ಲಿ ಮೀನು ಹೊತ್ತುಕೊಂಡು ಮನೆ ಬಾಗಿಲಿಗೆ ಹೋದರೆ, ಕೆಲವರು ಬೈಕ್, ತಳ್ಳುವ ಗಾಡಿಗಳಲ್ಲಿ ಮಾರಾಟ ಮಾಡಿಕೊಂಡು ಅಲೆಯುತ್ತಿದ್ದಾರೆ.
ಬಿ.ಎಚ್. ರಸ್ತೆ, ಮೀನ್ ಕಾರ ಬೀದಿ, ನ್ಯೂಟೌನ್ ರಸ್ತೆ, ಪೇಪರ್ ಟೌನ್, ಸಿದ್ದಾಪುರ, ತರೀಕೆರೆ ರಸ್ತೆ, ಹೊಸಮನೆ ರಸ್ತೆ, ಭೋವಿ ಕಾಲೊನಿ, ಜನ್ನಾಪುರ, ಅನ್ವರ್ ಕಾಲೊನಿ, ವಿದ್ಯಾಮಂದಿರ, ಸುರಗಿತೋಪು, ಬೈಪಾಸ್ ರಸ್ತೆ, ಮೂಲೆ ಕಟ್ಟೆ, ಹಿರಿಯೂರು, ಮೂಲೆ ಕಟ್ಟೆ, ಕಾರೆಹಳ್ಳಿ, ಬಾರಂದೂರು ಭಾಗದ ರಸ್ತೆಗಳ ಬದಿಯಲ್ಲಿ ವ್ಯಾಪಾರಸ್ಥರು ಮೀನು ಮಾರುತ್ತಾರೆ.
ಇದರಿಂದ ನಗರದ ಸ್ವಚ್ಛತೆಗೆ ಧಕ್ಕೆ ಆಗುತ್ತಿದೆ. ರಸ್ತೆ ಬದಿಯಲ್ಲೇ ಮೀನು ಮಾರಾಟ ಮಾಡುತ್ತಿರುವುದರಿಂದ ಮೀನು ಬೀರುವ ದುರ್ವಾಸನೆಯಿಂದ ಅನೇಕರಿಗೆ ಕಿರಿಕಿರಿಯಾಗಿದೆ. ಗ್ರಾಹಕರು ರಸ್ತೆ ನಡುವೇ ವಾಹನ ನಿಲ್ಲಿಸಿ ಮೀನು ಖರೀದಿಸಲು ಹೋಗುವುದರಿಂದ ಸಂಚಾರ ದಟ್ಟಣೆಯೂ ಆಗುತ್ತಿದೆ.
ನಗರದಲ್ಲಿ ಮೀನಿನ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು ಎಂಬುದು ಮೀನುಗಾರರು ಮತ್ತು ಮಾರಾಟಗಾರರ ಹಲವು ವರ್ಷಗಳ ಬೇಡಿಕೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸ್ಪಂದಿಸಬೇಕು ಎಂಬುದು ಗ್ರಾಹಕರ ಕೋರಿಕೆಯಾಗಿದೆ.
ದಿನಕ್ಕೆ 80ರಿಂದ 100 ಕೆ.ಜಿ ಮೀನು ಮಾರುತ್ತೇವೆ. ಮಾರುಕಟ್ಟೆಯಲ್ಲಿ ಸ್ಥಳದ ಅಭಾವದಿಂದಾಗಿ ಒಬ್ಬರ ನಂತರ ಒಬ್ಬರು ಕೂರುತ್ತೇವೆ. ಇದರಿಂದ ಕಾಯಂ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇವೆ.ಕಾವೇರಮ್ಮ ಮೀನು ವ್ಯಾಪಾರಿ
ಚಿಕ್ಕ ಸ್ಥಳವಾದ್ದರಿಂದ ಮೀನಿನ ವಾಸನೆ ಹೆಚ್ಚುತ್ತದೆ. ಮಾರುಕಟ್ಟೆಯಲ್ಲಿ ಮೀನು ಕತ್ತರಿಸುವ ಕಟ್ಟೆ ಕೆಳಭಾಗದಲ್ಲಿ ಇರುವುದರಿಂದ ವೇಗವಾಗಿ ಕತ್ತರಿಸಿ ವಿತರಿಸಲು ತೊಂದರೆ ಆಗುತ್ತಿದೆ.ಸೆಲ್ವರಾಜ್ ಮೀನು ವ್ಯಾಪಾರಿ
ಕಾವಲಗುಂದಿಯಲ್ಲಿ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಒಂದು ಎಕರೆ ಸ್ಥಳ ಕಾಯ್ದಿರಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಶಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.ಪ್ರಕಾಶ್ ಚೆನ್ನಪ್ಪನವರ್ ನಗರಸಭೆ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.