ADVERTISEMENT

ಭದ್ರಾವತಿ | ಹದಗೆಟ್ಟಿವೆ ಉದ್ಯಾನಗಳು; ಮಕ್ಕಳ ಆಟಕ್ಕೆ ಕುತ್ತು

ನಿರ್ವಹಣೆಗೆ ಆದ್ಯತೆ ನೀಡಲು ಸಾರ್ವಜನಿಕರ ಆಗ್ರಹ

ಪ್ರಜಾವಾಣಿ ವಿಶೇಷ
Published 2 ಏಪ್ರಿಲ್ 2024, 5:20 IST
Last Updated 2 ಏಪ್ರಿಲ್ 2024, 5:20 IST
ಭದ್ರಾವತಿಯ ನ್ಯೂ ಟೌನ್ ಉದ್ಯಾನದಲ್ಲಿ ಮುರಿದಿರುವ ಮಕ್ಕಳ ಜಾರುವ ಬಂಡೆ
ಭದ್ರಾವತಿಯ ನ್ಯೂ ಟೌನ್ ಉದ್ಯಾನದಲ್ಲಿ ಮುರಿದಿರುವ ಮಕ್ಕಳ ಜಾರುವ ಬಂಡೆ   

ಭದ್ರಾವತಿ: ಹಚ್ಚ ಹರಿಸಿನಿಂದ ಕಂಗೊಳಿಸಬೇಕಿದ್ದ ನಗರದಲ್ಲಿನ ಉದ್ಯಾನಗಳು ಮಳೆ ಕೊರತೆಯಿಂದಾಗಿ ಸೊರಗಿವೆ.

ಮಕ್ಕಳಿಗೆ ಬೇಸಿಗೆ ರಜೆ ಪ್ರಾರಂಭವಾಗಿದ್ದು, ಉದ್ಯಾನಗಳತ್ತ ಮುಖ ಮಾಡಿದ್ದಾರೆ. ಆದರೆ, ಬಹುತೇಕ ಉದ್ಯಾನಗಳು ಹಸಿರಿಲ್ಲದೆ ಅಂದ ಕಳೆದುಕೊಂಡಿವೆ. ಮಕ್ಕಳ ಆಟಿಕೆ ವಸ್ತುಗಳು, ವ್ಯಾಯಾಮದ ಉಪಕರಣಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ. ಎಲ್ಲೆಂದರಲ್ಲಿ ಕಸ–ಕಡ್ಡಿ ತುಂಬಿದ್ದು, ದುರ್ವಾಸನೆ ಬೀರುತ್ತಿದೆ.

ವಿಐಎಸ್‌ಎಲ್‌ ಉದ್ಯಾನ, ಗಾಂಧಿನಗರ, ಭೂತನ ಗುಡಿ, ಜನ್ನಾಪುರ, ಕಾಗದನಗರ, ಸಿದ್ದಾಪುರ, ಸಿದ್ಧಾರೂಢ ನಗರ, ಸೀಗೆಬಾಗಿ, ಭದ್ರಾ ಕಾಲೊನಿ, ಬಸವನಗುಡಿ, ಹೊಸ ಮನೆ, ಸುರಗಿತೋಪು, ಉಜ್ಜನಿಪುರ, ಬೊಮ್ಮನಕಟ್ಟೆ, ಹಿರಿಯೂರು, ಮೂಲೆ ಕಟ್ಟೆ ಸೇರಿ ಹಲವು ಉದ್ಯಾನಗಳು ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದಾಗಿ ಹದಗೆಟ್ಟಿವೆ.

ADVERTISEMENT

ತೂಗುಯ್ಯಾಲೆ, ಜಾರುವ ಬಂಡೆ, ಏಕಮುಖಿ, ಗಿರಿಗಿಟ್ಲೆ, ಹಾವು-ಏಣಿ ಆಟಿಕೆ ಉಪಕರಣಗಳು ಮುರಿದು, ತುಕ್ಕು ಹಿಡಿದಿವೆ. ನಿರ್ವಹಣೆ ಕೊರತೆಯಿಂದಾಗಿ ಹುಲ್ಲಿನ ಪೊದೆಗಳು ನಿರ್ಮಾಣವಾಗಿದ್ದು, ಮಕ್ಕಳನ್ನು ಆಟಕ್ಕೆ ಬಿಡಲು ಭಯಪಡುವಂತಾಗಿದೆ. ಕೆಲವರು ಕಸಕಡ್ಡಿಯನ್ನು ಇಲ್ಲಿಯೇ ಎಸೆದು ಹೋಗುತ್ತಿರುವ ಪರಿಣಾಮ ಉದ್ಯಾನಗಳು ಇದ್ದೂ ಇಲ್ಲದಂತಾಗಿವೆ.

ಉದ್ಯಾನಗಳನ್ನು ಸ್ವಚ್ಛವಾಗಿ ಇಡುವುದು ನಗರಸಭೆ ಜವಾಬ್ದಾರಿ. ಉತ್ತಮ ಪರಿಸರ, ಸ್ವಚ್ಛಂದ ಗಾಳಿಗಾಗಿ ಉದ್ಯಾನ ನಿರ್ಮಿಸಲಾಗುತ್ತದೆ. ಆದರೆ, ಇಡೀ ಉದ್ದೇಶವೇ ಸಂಪೂರ್ಣ ಬುಡಮೇಲು ಆಗಿರುವುದು ವಿಷಾದನೀಯ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ರಜಾ ದಿನಗಳಲ್ಲಿ ಕುಟುಂಬ ಸಮೇತ ಕಾಲ ಕಳೆಯಲು ಪರದಾಡುವಂತಾಗಿದೆ. ಮರವಿಲ್ಲದೆ ಎಲ್ಲೆಡೆ ಒಣಗಿದ ಪ್ರದೇಶ, ನೆರಳು ಕಾಣದ ಮನೆ ಬಿಟ್ಟು ಹೊರಗಡೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯಾನಗಳಲ್ಲಿ ಆರಾಮವಾಗಿ ಕಾಲ ಕಳೆಯುವ ಆಸೆಗೆ ತಣ್ಣೀರೆರಚಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಉತ್ತಮ ಪರಿಸರಕ್ಕಾಗಿ ಉದ್ಯಾನಗಳು ಅವಶ್ಯ. ಆದರೆ, ಸಂಬಂಧಪಟ್ಟವರು ಉದ್ಯಾನಗಳ ಸ್ವಚ್ಛತೆಗೆ ಮುಂದಾಗದಿರುವುದು ದುರದೃಷ್ಟಕರ ಸಂಗತಿ ಎಂದು ಸ್ಥಳೀಯ ಶಿಕ್ಷಕ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

‘ಉದ್ಯಾನದಲ್ಲಿ ಮಕ್ಕಳ ಆಟಿಕೆಗಳು ಬಹುತೇಕ ಮುರಿದುಹೋಗಿವೆ. ಮಕ್ಕಳನ್ನು ಮಾತ್ರವೇ ಆಟವಾಡಲು ಬಿಡಲು ಭಯವಾಗುತ್ತದೆ. ಕೊಂಚ ಆಯ ತಪ್ಪಿದರೂ ಮುರಿದಿರುವ ಆಟಿಕೆಗಳಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ’ ಎಂದು ಸ್ಥಳೀಯ ಪಾಲಕರಾದ ಸುಶೀಲಮ್ಮ ತಿಳಿಸಿದರು.

‘ವಿಐಎಸ್‌ಎಲ್‌ ವ್ಯಾಪ್ತಿಯ ನ್ಯೂ ಟೌನ್ ಭಾಗದಲ್ಲಿ ಗಾಂಧಿ ಪಾರ್ಕ್ ಮತ್ತು ಆನೆ ಪಾರ್ಕ್ ಇವೆ. ಅದರ ನಿರ್ವಹಣೆಯನ್ನು ವಿಐಎಸ್‌ಎಲ್‌ ನೋಡಿಕೊಳ್ಳುತ್ತಿದೆ. ಆನೆ ಪಾರ್ಕಿನಲ್ಲಿ ಮಕ್ಕಳಿಗಾಗಿ ಸಿಮೆಂಟ್‌ನಲ್ಲಿ  ಪ್ರಾಣಿಗಳ ಪ್ರತಿಮೆಗಳು, ಜಾರುವಬಂಡೆ, ಕುಳಿತುಕೊಳ್ಳಲು ಆಸನ ನಿರ್ಮಿಸಿದ್ದು,  ಈಗ ಅವುಗಳೆಲ್ಲವೂ ಮುರಿದಿವೆ. ಬಜೆಟ್‌ನಲ್ಲಿ ಅನುದಾನ ಬಿಡುಗಡೆಯಾದೊಡನೆ ಇವುಗಳ ದುರಸ್ತಿ ಕಾರ್ಯಗಳನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು’ ಎಂದು ವಿಐಎಸ್‌ಎಲ್‌ನ ಸಾರ್ವಜನಿಕ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿ ಪ್ರವೀಣ್ ಕುಮಾರ್ ಎಲ್. ತಿಳಿಸಿದರು.

ಭದ್ರಾವತಿಯ ಆರ್‌ಎಂಸಿ ಬಡಾವಣೆಯ ಉದ್ಯಾನದಲ್ಲಿ ಮುರಿದು ತುಕ್ಕು ಹಿಡಿದಿರುವ ವ್ಯಾಯಾಮ ಉಪಕರಣಗಳು
ಭದ್ರಾವತಿಯ ಬೊಮ್ಮನಕಟ್ಟೆ ಪಾರ್ಕಿನಲ್ಲಿ ಕಸದರಾಶಿ
ಭದ್ರಾವತಿಯ ಹಿರಿಯೂರು ಭಾಗದ ಉದ್ಯಾನದಲ್ಲಿ ಜೋಕಾಲಿ ಮುರಿದಿರುವುದು

‘ನಗರದದಲ್ಲಿ ಸುಮಾರು 80 ಉದ್ಯಾನಗಳಿವೆ. ಬಡಾವಣೆಗಳಲ್ಲಿ ಲೇಔಟ್ ಮಾಡುವವರು ಕಡ್ಡಾಯವಾಗಿ ಉದ್ಯಾನಕ್ಕೆ ಜಾಗ ಬಿಡಬೇಕು. ಆಯಾ ಬಡಾವಣೆಯ ಸಂಘ-ಸಂಸ್ಥೆಗಳು ಸಮಾಜ ಸೇವಕರು ಉದ್ಯಾನ ನಿರ್ವಹಣೆಗೆ ಮುಂದಾಗಬೇಕು. ನಿರ್ವಹಣೆಯ ಖರ್ಚು ವೆಚ್ಚವನ್ನು ನಗರ ಸಭೆ ಭರಿಸುತ್ತದೆ. ಸದ್ಯದ ಮಟ್ಟಿಗೆ ಪೌರಕಾರ್ಮಿಕರೇ ಉದ್ಯಾನ ಸ್ವಚ್ಛಗೊಳಿಸುತ್ತಿದ್ದಾರೆ. ಸಾರ್ವಜನಿಕರು ಸರ್ಕಾರದ ಆಸ್ತಿಯನ್ನು ತಮ್ಮ ಆಸ್ತಿ ಎಂದು ಪರಿಗಣಿಸಬೇಕು. ಕಸ–ಕಡ್ಡಿ ಹಾಕಬಾರದು. ಉಪಕರಣಗಳನ್ನು ಹಾಳು ಮಾಡಬಾರದು ಎಂದು ನಗರಸಭೆ ಕಾರ್ಯನಿರ್ವಾಹಕ (ಪರಿಸರ) ಅಧಿಕಾರಿ ಪ್ರಭಾಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.