ADVERTISEMENT

ಸೊರಬ: ಬಿಳಾಗಿ ಕೆರೆಯಲ್ಲಿ ಈಗ ಹಕ್ಕಿಗಳ ನಿನಾದ

ನೋಡುಗರ ಗಮನ ಸೆಳೆಯುವ ಪಕ್ಷಿಗಳು: ಕೆರೆ ಅಭಿವೃದ್ಧಿಗೆ ಒತ್ತಾಯ

ರಾಘವೇಂದ್ರ ಟಿ.
Published 31 ಆಗಸ್ಟ್ 2024, 7:35 IST
Last Updated 31 ಆಗಸ್ಟ್ 2024, 7:35 IST
ಸೊರಬ ತಾಲ್ಲೂಕಿನ ಬಿಳಾಗಿ ಕೆರೆಯಲ್ಲಿ ವಾಸವಿರುವ ಪಕ್ಷಿಸಂಕುಲ
ಸೊರಬ ತಾಲ್ಲೂಕಿನ ಬಿಳಾಗಿ ಕೆರೆಯಲ್ಲಿ ವಾಸವಿರುವ ಪಕ್ಷಿಸಂಕುಲ   

ಸೊರಬ: ತಾಲ್ಲೂಕಿನ ಬಿಳಾಗಿ ಗ್ರಾಮದ ಕೆರೆಯಲ್ಲಿ ಈಗ ವಲಸೆ ಪಕ್ಷಿಗಳ ಕಲರವ. ಭಿನ್ನ, ಭಿನ್ನ ಪ್ರಬೇಧದ ಪಕ್ಷಿಗಳು ನೋಡುಗರ ಮನ ತಣಿಸುತ್ತಿವೆ. ಸಂತಾನಾಭಿವೃದ್ಧಿಗಾಗಿ ಹಲವು ವರ್ಷಗಳಿಂದ ವಲಸೆ ಬರುತ್ತಿರುವ ಪಕ್ಷಿ ಸಂಕುಲ ಜೂನ್ ತಿಂಗಳಿಂದ ನವೆಂಬರ್‌ವರೆಗೂ ವಾಸವಾಗಿರುತ್ತವೆ.

ಪ್ರಸಿದ್ಧ ಗುಡವಿ ಪಕ್ಷಿಧಾಮ ವೀಕ್ಷಣೆಗೆ ಬರುವ ಪಕ್ಷಿ ಪ್ರಿಯರು ಇಲ್ಲಿಗೂ ಭೇಟಿ ನೀಡುವಷ್ಟು ಪಕ್ಷಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ತಾಲ್ಲೂಕು ಕೇಂದ್ರದಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಬಿಳಾಗಿ ಕೆರೆ ಪಕ್ಷಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

ಕೆರೆಯ ಸುತ್ತಲೂ ದಟ್ಟ ಅರಣ್ಯ. ಸಮೀಪದಲ್ಲಿರುವ ಸಾಲು ಮರದ ತಿಮ್ಮಕ್ಕ ಉದ್ಯಾನ, ಕೆರೆಯ ಕೆಳಭಾಗದಲ್ಲಿ ರೈತರ ಜಮೀನಿನಲ್ಲಿ ಸಿಗುವ ಆಹಾರದಿಂದಾಗಿ ಪಕ್ಷಿಗಳಿಗೆ ಕೆರೆ ಸ್ವರ್ಗವಾಗಿ‌ ಪರಿಣಮಿಸಿದೆ.

ADVERTISEMENT

ಪಕ್ಷಿಗಳ ಸ್ವರ– ನಿನಾದ ಕೆರೆ ಅಂಗಳದಿಂದ ಕೇಳಿ ಬರುತ್ತಿದ್ದಂತೆ ರಸ್ತೆಯಲ್ಲಿ ಹಾದು ಹೋಗುವ ಪಕ್ಷಿ ಪ್ರಿಯರು ದಡದಲ್ಲಿ ನಿಂತು ಅವುಗಳ ಕಲರವ, ಬಾನಂಗಳದಲ್ಲಿನ ಹಾರಾಟ ನೋಡಿ ಖುಷಿಪಡುತ್ತಾರೆ.

ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಗುಡವಿ ಪಕ್ಷಿಧಾಮ ಇಲ್ಲಿಂದ ಕೆಲವೇ ಕಿ.ಮೀ ಅಂತರದಲ್ಲಿದೆ. ಗುಡವಿ ಪಕ್ಷಿಧಾಮದಲ್ಲಿ ಕಂಡು ಬರುವ ವಲಸೆ ಹಕ್ಕಿಗಳು ಇಲ್ಲಿನ ಕೆರೆಯ ತನ್ಮಯತೆ ಮತ್ತು ಮೋಹಕತೆಗೆ ಮನಸೋತು ಬರುತ್ತಿವೆ ಎಂಬುದು ಕೆಲ ಪಕ್ಷಿಪ್ರೇಮಿಗಳ ಅಭಿಮತ.

‘ಮುಂದಿನ ದಿನಗಳಲ್ಲಿ ಕೆರೆ ಅಭಿವೃದ್ಧಿಗೆ ಒತ್ತು ನೀಡಿದರೆ ಮಲೆನಾಡ ಸೆರಗಿನ ಊರಲ್ಲಿ ಹಕ್ಕಿಗಳ ಕಲರವ ಕಂಡು ಬರುವುದು ನಿಶ್ಚಿತ. ಆ ಮೂಲಕ ತಾಲ್ಲೂಕಿನಲ್ಲಿ ಗುಡವಿ ಪಕ್ಷಿಧಾಮದಂತೆ ಬಿಳಾಗಿ ಪಕ್ಷಿಧಾಮವಾಗಿ ರಾಜ್ಯದಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ’ ಎಂದು ಸ್ಥಳೀಯರು ಹೇಳುತ್ತಾರೆ.

ಅಂದಾಜು 20 ಎಕರೆ ವಿಶಾಲ ಪ್ರದೇಶದಲ್ಲಿರುವ ಕೆರೆಯಲ್ಲಿ ನೀರು ಹಕ್ಕಿಗಳ ಕಲರವ ಕಣ್ಮನ ತಣಿಸುತ್ತಿದೆ. ಕೆಲ ಸಮಯವಷ್ಟೇ ದಡದಲ್ಲಿ ಕುಳಿತುಕೊಳ್ಳುವ ಪಕ್ಷಿಗಳು ಬಹುತೇಕ ಸಮಯವನ್ನು ಕೆರೆ ಮಧ್ಯ ಭಾಗದಲ್ಲಿ ಕಳೆಯುತ್ತಿವೆ. ವರ್ಷದುದ್ದಕ್ಕೂ ನೀರಿನಿಂದ ತುಂಬಿರುವ ಈ ಕೆರೆಯಲ್ಲಿ ಪಕ್ಷಿಗಳಿಗೆ ಸಂತಾನೋತ್ಪತ್ತಿಗೆ ಬೇಕಾಗಿರುವ ಪೂರಕ ವಾತಾವರಣ ಹಾಗೂ ಗೂಡು ಕಟ್ಟಲು ಪೊದೆಗಳು ಹೆಚ್ಚಾಗಿರುವುದರಿಂದ ನಿಧಾನವಾಗಿ ಇದು ಪಕ್ಷಿಗಳ ತವರಾಗಿ ಮಾರ್ಪಾಡಾಗುತ್ತಿದೆ.

ಪಟ್ಟೆ ತಲೆ ಹೆಬ್ಬಾತು (ಬಾರ್ ಹೆಡೆಡ್ ಗೀಸ್‌), ನೀರುಕಾಗೆ (ಕಾರ್ಮೊರಾಂಟ್), ಬೂದಬಕ (ಗ್ರೇ ಹೆರಾನ್), ಕೊಳದ ಬಕ (ಪಾಂಡ್ ಹೆರಾನ್), ಕೊಕ್ಕರೆ (ಓಪನ್ ಬಿಲ್), ಚುಕ್ಕೆ ಬಾತು (ಸ್ಪಾಟ್ ಬಿಲ್ ಡಕ್), ಸೂಜಿಬಾಲ ಬಾತು (ಪಿನ್‌ಟೆಲ್‌) ಇಲ್ಲಿ ಹೆಚ್ಚು ಕಾಣಸಿಗುತ್ತಿವೆ.

ಬಿಳಾಗಿ ಕೆರೆಯು ಪಕ್ಷಿಗಳಿಗೆ ಸ್ವರ್ಗವಾಗಿದೆ. ಕೆರೆ ಗಡಿ ಗುರುತಿಸಿ ಸುತ್ತಲೂ ಪಕ್ಷಿ ವೀಕ್ಷಣೆಗೆ ಗೋಪುರ ನಿರ್ಮಿಸಿ ಪಕ್ಷಿಧಾಮವಾಗಿ ಅಭಿವೃದ್ಧಿಪಡಿಸಲು ಆದ್ಯತೆ ನೀಡಬೇಕು.
ವಾಸಪ್ಪ ಸ್ಥಳೀಯ ನಿವಾಸಿ
ಬಿಳಾಗಿ ಕೆರೆ ಸ್ವದೇಶಿ– ವಿದೇಶಿ ಹಕ್ಕಿಗಳಿಗೆ ಆಶ್ರಯ ತಾಣವಾಗುತ್ತಿದೆ. ಸರ್ಕಾರ ಜೀವವೈವಿಧ್ಯ ತಾಣವನ್ನಾಗಿ ಘೋಷಿಸಿ ಇಲ್ಲಿನ ಪಕ್ಷಿ ಪ್ರಬೇಧಗಳ ಕುರಿತು ಬೆಳಕು ಚೆಲ್ಲುವ ಕಾರ್ಯ ನಡೆಯಬೇಕಿದೆ
ಎಂ.ಆರ್.ಪಾಟೀಲ್ ಪರಿಸರ ಟ್ರಸ್ಟ್ ಅಧ್ಯಕ್ಷ
ಕೆರೆಯ ಸುತ್ತಲೂ ಫುಟ್‌ಪಾತ್ ನಿರ್ಮಿಸಿ
ಅನತಿ ದೂರದಲ್ಲಿ ಹರಿದು ಹೋಗಿರುವ ದಂಡಾವತಿ ನದಿಗೆ ಅಡ್ಡಲಾಗಿ ಏತ ನೀರಾವರಿ ಯೋಜನೆ ರೂಪಿಸಿ ಕೆರೆಗೆ ನೀರು ತುಂಬಿಸುವ ಮಹತ್ವದ ಕಾರ್ಯ ಕೈಗೊಂಡರೆ ಬಿಳಾಗಿ ಕೆರೆಯಲ್ಲಿ ಪಕ್ಷಿಗಳು ಶಾಶ್ವತವಾಗಿ ನೆಲೆಸುವಂತೆ ನೋಡಿಕೊಳ್ಳಬಹುದಾಗಿದೆ. ಸರ್ವಋತು ಪಕ್ಷಿಧಾಮವಾಗಿ ಅಭಿವೃದ್ಧಿಪಡಿಸಲು ಸಾಧ್ಯವಿದೆ. ‘ಪಕ್ಷಿಗಳಿಗೆ ಆಹಾರ ಕೊರತೆ ಎದುರಾಗದಂತೆ‌ ಕೆರೆಯಲ್ಲಿ ಮೀನು‌ ಮರಿಗಳನ್ನು ಬಿಡಬೇಕು. ಕೆರೆಯ ಸುತ್ತಲೂ ಪಕ್ಷಿಗಳ ವೀಕ್ಷಣೆಗೆ ಫುಟ್‌ಪಾತ್ ನಿರ್ಮಿಸಿ ಬಿದಿರು ಮತ್ತಿತರ ಎತ್ತರದ ಸಸ್ಯ ಪ್ರಬೇಧವನ್ನು ಬೆಳೆಸಿದರೆ ನೂರಾರು ಬಗೆಯ ಪಕ್ಷಿಗಳು ಗೂಡು ಕಟ್ಟಿಕೊಂಡು ಪಕ್ಷಿಪ್ರಿಯರ ಕೌತುಕವನ್ನು ತಣಿಸಬಲ್ಲವು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು’ ಎಂದು ಪಕ್ಷಿ ಪ್ರೇಮಿಗಳು ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.