ADVERTISEMENT

ಶಿರಾಳಕೊಪ್ಪ | ಬಿಜೆಪಿ ನಡೆ ನಿಗೂಢ; ಕಾಂಗ್ರೆಸ್‌ನಲ್ಲಿ ಗರಿಗೆದರಿದ ಉತ್ಸಾಹ

ಶಿರಾಳಕೊಪ್ಪ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಆ.21ಕ್ಕೆ

ಎಂ.ನವೀನ್ ಕುಮಾರ್
Published 19 ಆಗಸ್ಟ್ 2024, 6:50 IST
Last Updated 19 ಆಗಸ್ಟ್ 2024, 6:50 IST
ಶಿರಾಳಕೊಪ್ಪ ಪುರಸಭೆ ಕಚೇರಿ
ಶಿರಾಳಕೊಪ್ಪ ಪುರಸಭೆ ಕಚೇರಿ   

ಶಿರಾಳಕೊಪ್ಪ: ಇಲ್ಲಿನ ‌ಪಟ್ಟಣ ಪಂಚಾಯಿತಿ ಪುರಸಭೆ ಆಗಿ ಮೇಲ್ದರ್ಜೆಗೇರಿದ ನಂತರ ಮೊದಲ ಬಾರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಅ. 21ರಂದು ಚುನಾವಣೆ ನಡೆಯಲಿದೆ.

ಇದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಚುನಾವಣೆ ಕಾಂಗ್ರೆಸ್‌ ಪಾಲಿಗೆ ಅಗ್ನಿ ಪರೀಕ್ಷೆಯಾಗಿ ಮಾರ್ಪಟ್ಟಿದೆ. 17 ಸದಸ್ಯ ಬಲದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌, 10 ಸ್ಥಾನಗಳನ್ನು ಗೆದ್ದಿದ್ದವು. ಐವರು ಪಕ್ಷೇತರರು ವಿಜಯಿಯಾಗಿದ್ದರು. ಬಿಜೆಪಿ 2 ಸ್ಥಾನ ಗಳಿಸಲಷ್ಟೇ ಶಕ್ತವಾಗಿತ್ತು. 

ಎರಡು ಸ್ಥಾನ ಗೆದ್ದಿದ್ದರೂ ಸಂಸದ ಬಿ.ವೈ.ರಾಘವೇಂದ್ರ ಅವರ ತಂತ್ರಗಾರಿಕೆಯಿಂದ ಬಿಜೆಪಿ ಕಳೆದ ಬಾರಿ ಅಧಿಕಾರದ ಗದ್ದುಗೆ ಹಿಡಿದಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇಬ್ಬರು ಪಕ್ಷೇತರ ಸದಸ್ಯರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದಾರೆ. ಕಾಂಗ್ರೆಸ್‌ ಮೈತ್ರಿಕೂಟದ ಬಲ 12ಕ್ಕೆ ಏರಿಕೆ ಆಗಿದೆ. ಒಬ್ಬ ಸದಸ್ಯ ಮೃತಪಟ್ಟಿದ್ದಾರೆ.

ADVERTISEMENT

ಸಂಸದ ಹಾಗೂ ಶಾಸಕರು ಸೇರಿ ಒಟ್ಟು 19 ಜನ ಈ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ನಿಕಟಪೂರ್ವ ಅಧ್ಯಕ್ಷೆ ಮಂಜುಳಾ ಹಾಗೂ ಟಿ.ರಾಜು ದಂಪತಿ ಬಿಜೆಪಿ ತೊರೆದಿದ್ದಾರೆ. ಅವರು ಯಾವುದೇ ಪಕ್ಷದ ಜೊತೆಗೆ ಅಧಿಕೃತವಾಗಿ ಗುರುತಿಸಿಕೊಂಡಿಲ್ಲ. ಹಾಗಾಗಿ, ಅವರ ನಡೆಯ ಬಗ್ಗೆ ಕುತೂಹಲ ಮೂಡಿದೆ.

ಈ ಬಾರಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಎ’ಗೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಮಮತಾ ನಿಂಗಪ್ಪ ಹಾಗೂ ಹಿಂದೆ ಬಿಜೆಪಿ ಬೆಂಬಲದೊಂದಿಗೆ ಅಧ್ಯಕ್ಷೆಯಾಗಿದ್ದ ಪಕ್ಷೇತರ ಅಭ್ಯರ್ಥಿ ಮಂಜುಳಾ ರಾಜು ನಡುವೆ ನೇರ ಸ್ಪರ್ಧೆ ಇದೆ. ಉಪಾಧ್ಯಕ್ಷ ಸ್ಥಾನಕ್ಕೆ 10 ಸದಸ್ಯರು ಅರ್ಹರಾಗಿದ್ದಾರೆ.

ಮೊದಲ 30 ತಿಂಗಳು ಮಂಜುಳಾ ರಾಜು ಅಧ್ಯಕ್ಷರಾಗಿದ್ದರು. ಉಪಾಧ್ಯಕ್ಷರಾಗಿ ರಾಜೇಶ್ವರಿ ವಸಂತ ಹಾಗೂ ವಿಜಯಲಕ್ಷ್ಮಿ ರಟ್ಟಿಹಳ್ಳಿ ಲೋಕೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಕ್ಬೂಲ್‌ ಸಾಬ್‌, ಈಚೆಗೆ ನಿಧನರಾಗಿದ್ದ ಅನಿಲ್‌ ಸುರಹೊನ್ನೆ ಅಧಿಕಾರ ನಡೆಸಿದ್ದರು.

25 ವರ್ಷಗಳಿಂದ ಬಿಜೆಪಿ ಭದ್ರಕೋಟೆ..

ಕಳೆದ 25 ವರ್ಷಗಳ ಪುರಸಭೆಯ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್‌ ಪಕ್ಷ ಒಮ್ಮೆ ಮಾತ್ರ 10 ತಿಂಗಳು ಅಧಿಕಾರ ನಡೆಸಿದೆ. ಉಳಿದ ಎಲ್ಲಾ ಅವಧಿಯಲ್ಲೂ ಬಿಜೆಪಿ ಸದಸ್ಯರೇ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಬಿಜೆಪಿ ಈ ಬಾರಿ ಅಧಿಕಾರ ಹಿಡಿಯುವ ಬಗ್ಗೆ ಆಸಕ್ತಿ ತೋರದೆ ತಟಸ್ಥವಾಗಿ ಉಳಿದಿದೆ. ಹಾಗಾಗಿ ಕಾಂಗ್ರೆಸ್‌  ಪಾಳಯದಲ್ಲಿ ಉತ್ಸಾಹ ಹೆಚ್ಚಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.