ADVERTISEMENT

ದೇಶದ ಜನರಿಂದ ಬಿಜೆಪಿಗೆ ತಕ್ಕಪಾಠ: ಎನ್‌.ರಮೇಶ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 15:43 IST
Last Updated 5 ಜೂನ್ 2024, 15:43 IST
ಎನ್‌. ರಮೇಶ
ಎನ್‌. ರಮೇಶ   

ಶಿವಮೊಗ್ಗ: ‘ದೇಶದಲ್ಲಿ ಸಂವಿಧಾನ ಬದಲಾವಣೆ ಮಾತು ಮತ್ತು ಧರ್ಮ ಹಾಗೂ ಜನವಿರೋಧಿ ನೀತಿ ಅನುಸರಿಸುತ್ತಿದ್ದ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಿದ್ದಾರೆ’ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರಮೇಶ ಹೇಳಿದರು. 

‘ಸಂವಿಧಾನ ಬದಲಾವಣೆಗಾಗಿ 400 ಸೀಟುಗಳನ್ನು ಗೆಲ್ಲಿಸುವಂತೆ ಹೇಳುತ್ತಿದ್ದರು. ಜನರ ಭಾವನೆಗಳನ್ನು ಕೆರಳಿಸುವುದಕ್ಕಾಗಿ ಜಾತಿ, ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕಾರ್ಯ ಮಾಡುವ ಮೂಲಕ ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದ್ದರು. ಆದರೆ ಮತದಾರರು ಇವರ ದುರಾಡಳಿತಕ್ಕೆ ತಕ್ಕಪಾಠ ಕಲಿಸಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

‘ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರು ಗೆಲ್ಲುವ ವಿಶ್ವಾಸವಿತ್ತು. ಯಾವ ಕಾರಣಕ್ಕಾಗಿ ಸೋಲಾಗಿದೆ ಎಂಬುದು ಆತ್ಮಾವಲೋಕನ ಮಾಡಿಕೊಳ್ಳಲಾಗುವುದು. ಮತದಾರರು ನೀಡಿರುವ ತೀರ್ಪು ಗೌರವಯುತವಾಗಿ ಸ್ವಾಗತಿಸುತ್ತೇವೆ’ ಎಂದರು.  

ADVERTISEMENT

‘ಶಿಕಾರಿಪುರ ವಿಧಾನಸಭೆ ಕ್ಷೇತ್ರದ ಮತದಾರರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ನಿರೀಕ್ಷೆಗೂ ಮೀರಿ ಮತ ನೀಡಿದ್ದಾರೆ’ ಎಂದು ಶಿಕಾರಿಪುರದ ಕಾಂಗ್ರೆಸ್‌ ಮುಖಂಡ ನಾಗರಾಜಗೌಡ ಹೇಳಿದರು. 

‘ಬಿಜೆಪಿ ಹಿಂದುತ್ವ ಮತ್ತು ಜಾತಿ ರಾಜಕಾರಣದ ಹೆಸರಿನಲ್ಲಿ ಚುನಾವಣೆ ಮಾಡಿದೆ. ಮತದಾರರು ಇನ್ನೂ ಹಿಂದುತ್ವ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ. 2014ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದ ಗೀತಾ ಅವರಿಗೆ ಪಕ್ಷ ಮತ್ತೆ ಅವಕಾಶ ನೀಡಿತ್ತು. ಕಾರಣ ಅವರಿಗೆ ಅನುಕಂಪ ಬರಬಹುದು ಅಂತಾ ನಿರೀಕ್ಷೆ ಇತ್ತು. ಎಲ್ಲವು ಹುಸಿಯಾಗಿದೆ’ ಎಂದು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮುಖಂಡ ಚಂದ್ರಭೂಪಾಲ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.