ಶಿವಮೊಗ್ಗ: ಗ್ಯಾರಂಟಿ ಯೋಜನೆ, ಬಡವರಿಗೆ ಉಚಿತ ಅಕ್ಕಿ ವಿತರಣೆ ಸೇರಿ ಬೇರೆ ಬೇರೆ ಸಾಮಾಜಿಕ, ಆರ್ಥಿಕ ನೆರವಿನ ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ಬಡತನ ನಿರ್ಮೂಲನೆಗೆ ಒಂದೆಡೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಿವೆ. ಆದರೆ, ಆ ಯೋಜನೆಗಳ ಆಶಯವನ್ನೇ ಅಣಕಿಸುವಂತೆ ಪಡಿತರ ವ್ಯವಸ್ಥೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರ (ಬಿಪಿಎಲ್) ಅನರ್ಹರ ಸಂಖ್ಯೆ ಹೆಚ್ಚುತ್ತಲೇ ಇದೆ.
ಇದಕ್ಕೆ ಪೂರಕವಾಗಿ ಎಂಬಂತೆ ಬಿಪಿಎಲ್ ಕಾರ್ಡ್ ಹಾಗೂ ಕಡು ಬಡವರಿಗೆ ಕೊಡುವ ಅಂತ್ಯೋದಯ ಅನ್ನ ಯೋಜನೆಯ ಕಾರ್ಡ್‌ಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಈ ಚಮತ್ಕಾರ ಬಡತನ ನಿರ್ಮೂಲನೆಯ ಹೆಜ್ಜೆಯಲ್ಲಿ ಸರ್ಕಾರದ ಹೆಜ್ಜೆಗೆ ಹಿನ್ನಡೆಯುಂಟು ಮಾಡಿದೆ ಎಂಬ ಕೂಗು ಕೇಳಿ ಬರುತ್ತಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ನೈಜ ಫಲಾನುಭವಿಗಳಿಗೆ ಮಾತ್ರ ಪಡಿತರ ವ್ಯವಸ್ಥೆಯ ಉಪಯೋಗ ದೊರೆಯುವಂತೆ ಮಾಡಲು, ಸೋರಿಕೆ ತಡೆಗಟ್ಟಲು ಅನರ್ಹರ ಪಡಿತರ ಚೀಟಿ ಪತ್ತೆ ಕಾರ್ಯ ಚುರುಕುಗೊಳಿಸಿದೆ.
50,000ಕ್ಕೂ ಹೆಚ್ಚು ಅನರ್ಹರು: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಮಾಹಿತಿಯಂತೆ ಶಿವಮೊಗ್ಗ ಜಿಲ್ಲೆಯಲ್ಲಿ 53,324 ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಕಳೆದ 6 ತಿಂಗಳಲ್ಲಿ ಪತ್ತೆ ಮಾಡಲಾಗಿದೆ. ‘ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರ ಪಟ್ಟಿ ಮಾಡಲಾಗಿದೆ. ಜಿಲ್ಲೆಯ ಪ್ರತೀ ತಾಲ್ಲೂಕಿನಲ್ಲಿ 7,000ದಿಂದ 8,000 ಅನರ್ಹರನ್ನು ಗುರುತಿಸಲಾಗಿದೆ. ಆ ಕಾರ್ಡ್‌ಗಳನ್ನು ಪರಿಶೀಲಿಸಿ ರದ್ದುಗೊಳಿಸುವ ಕಾರ್ಯ ನಡೆದಿದೆ’ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಆರ್.ಅವಿನ್ ಹೇಳುತ್ತಾರೆ.
ಅನರ್ಹತೆಗೆ ಮಾನದಂಡ ಏನು?
ಕುಟುಂಬದ ಆದಾಯ ವಾರ್ಷಿಕ ₹ 1.20 ಲಕ್ಷಕ್ಕಿಂತ ಹೆಚ್ಚು ಇದ್ದರೆ, ಆ ಕುಟುಂಬದ ಸದಸ್ಯರಲ್ಲಿ ಯಾರಾದರೂ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಹಾಗೂ ಸರ್ಕಾರಿ ನೌಕರಿಯಲ್ಲಿದ್ದರೆ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ. ಅವರು ಎಪಿಎಲ್ ಪಟ್ಟಿಗೆ ಸೇರ್ಪಡೆಯಾಗುತ್ತಾರೆ.
ಪಡಿತರ ಚೀಟಿ ವಿತರಣೆ: ಜಿಲ್ಲೆಯ ಪಕ್ಷಿನೋಟ ಜಿಲ್ಲೆಯಲ್ಲಿ ಪಡಿತರ ಚೀಟಿ ಹೊಂದಿದ ಕುಟುಂಬಗಳು–4.87,099 ಅಂತ್ಯೋದಯ ಅನ್ನ ಯೋಜನೆ ಫಲಾನುಭವಿಗಳು– 37,609 ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬ – 3.45,982 ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬ– 1.3,418
ಸ್ವಯಂ ಪ್ರೇರಿತವಾಗಿ ವಾಪಸ್ ಕೊಡಿ
‘ಜಿಲ್ಲೆಯಲ್ಲಿ 6 ತಿಂಗಳ ಅವಧಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದ 72 ಜನ ಸರ್ಕಾರಿ ನೌಕರರನ್ನು ಗುರುತಿಸಲಾಗಿದೆ. ನೌಕರಿ ಸಿಕ್ಕ ನಂತರ ಇಲ್ಲಿಯವರೆಗೆ ಅವರು ಖರೀದಿಸಿರುವ ಅಕ್ಕಿ ಪ್ರತಿ ಕೆ.ಜಿಗೆ ₹ 35ರಂತೆ ದರ ನಿಗದಿಪಡಿಸಿ ದಂಡ ಕಟ್ಟಿಸಿಕೊಂಡು ಆ ಕಾರ್ಡ್‌ಗಳನ್ನು ಎಪಿಎಲ್‌ಗೆ ಬದಲಾಯಿಸಿಕೊಟ್ಟಿದ್ದೇವೆ. ಸರ್ಕಾರಿ ನೌಕರರು ಈಗಲೂ ಸ್ವಯಂ ಪ್ರೇರಿತವಾಗಿ ತಮ್ಮ ಬಿಪಿಎಲ್ ಕಾರ್ಡ್ ವಾಪಸ್ ನೀಡಲಿ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಆವಿನ್ ಮನವಿ ಮಾಡುತ್ತಾರೆ.
ಹೊಸ ಬಿಪಿಎಲ್ ಕಾರ್ಡ್; ಅರ್ಜಿ ಸ್ವೀಕಾರ ಆರಂಭ
ಹೊಸ ಬಿಪಿಎಲ್ ಕಾರ್ಡ್ ಕೊಡಲು ಆಗಸ್ಟ್ ತಿಂಗಳಿಂದ ಮತ್ತೆ ಪ್ರಕ್ರಿಯೆ ಆರಂಭವಾಗಿದೆ. ಹೊಸದಾಗಿ ಕಾರ್ಡ್ ಕೋರಿ ಜಿಲ್ಲೆಯಲ್ಲಿ ಒಟ್ಟು 22013 ಅರ್ಜಿಗಳು ಬಂದಿವೆ. ಅದರಲ್ಲಿ 19007 ಅರ್ಜಿಗಳನ್ನು ವಿಲೇವಾರಿ ಮಾಡಿ 11175 ಜನರಿಗೆ ಹೊಸ ಕಾರ್ಡ್ ಕೊಡಲಾಗಿದೆ. 7800 ಅರ್ಜಿಗಳು ತಿರಸ್ಕೃತಗೊಂಡಿವೆ. ಇನ್ನೂ 3006 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ತಿಂಗಳಲ್ಲಿ 10 ದಿನ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತದೆ. ಅಕ್ಟೋಬರ್‌ಗೆ ಮತ್ತೆ ಅರ್ಜಿ ಪಡೆಯುವ ಪ್ರಕ್ರಿಯೆ ಆರಂಭಿಸಲಾಗುವುದು.
ವೈಟ್ ಬೋರ್ಡ್ ಕಾರು ಇದ್ದರೂ ಬಿಪಿಎಲ್‌ಗೆ ಅರ್ಹ!
ಕೃಷಿ ಉದ್ದೇಶಕ್ಕೆ ಟ್ರ್ಯಾಕ್ಟರ್ ಹೊಂದಿದವರು ಹಳದಿ ಬೋರ್ಡ್‌ನ ಕಾರು ಇದ್ದವರು ಇಲ್ಲಿಯವರೆಗೆ ಬಿಪಿಎಲ್ ಪಡಿತರ ಚೀಟಿ ಹೊಂದಲು ಅರ್ಹರಾಗಿದ್ದರು. ಈಗ ಸ್ವಂತ ಬಳಕೆಗೆ (ವೈಟ್ ಬೋರ್ಡ್) ಕಾರು ಹೊಂದಿರುವವರು ಬಿಪಿಎಲ್ ಕಾರ್ಡ್‌ಗೆ ಅರ್ಹರಿದ್ದಾರೆ. ಸ್ವಂತ ಬಳಕೆಗೆ ಕಾರು ಹೊಂದಿದವರ ಬಳಿ ಕಾರ್ಡ್ ಇದ್ದರೆ ಅದನ್ನು ರದ್ದು ಪಡಿಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ಕಾರು ಹೊಂದಿರುವವರ ವಾರ್ಷಿಕ ₹ 1.20 ಲಕ್ಷ ಆದಾಯ ಮಿತಿ ಹೊಂದಿರಬೇಕು.
ಬಿಪಿಎಲ್ ಪಟ್ಟಿಯಲ್ಲಿ 2395 ಐಟಿ ಪಾವತಿದಾರರು!
ಶಿವಮೊಗ್ಗ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ 2395 ಆದಾಯ ತೆರಿಗೆ (ಐಟಿ) ಪಾವತಿದಾರರನ್ನು ಗುರುತಿಸಿ ಅವರ ಕಾರ್ಡ್ ಎಪಿಎಲ್‌ಗೆ ಬದಲಾಯಿಸಲಾಗಿದೆ. ಸತತ 6 ತಿಂಗಳ ಕಾಲ ಪಡಿತರ ಸಾಮಗ್ರಿ ಪಡೆಯದ 8000 ಬಿಪಿಎಲ್ ಕಾರ್ಡ್ ಹಾಗೂ ಮರಣ ಹೊಂದಿದವರ ಹೆಸರಲ್ಲಿದ್ದ 5000 ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ.
ಬಿಪಿಎಲ್ ಅನರ್ಹರ ಕಾರ್ಡ್‌ಗಳನ್ನು ಪತ್ತೆ ಮಾಡುವುದು ನಮ್ಮ ದೈನಂದಿನ ಕೆಲಸದ ಭಾಗವಾಗಿ ಮಾರ್ಪಟ್ಟಿದೆ. ಇಲಾಖೆಯ ಶಿರಸ್ತೆದಾರರು ಇನ್‌ಸ್ಪೆಕ್ಟರ್‌ಗಳು ಆ ಕೆಲಸಕ್ಕೆ ನಿಯೋಜನೆಗೊಂಡಿದ್ದಾರೆ.–ಆರ್.ಅವಿನ್, ಉಪನಿರ್ದೇಶಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಶಿವಮೊಗ್ಗ
ಸ್ವಂತಕ್ಕೆ ಕಾರು ಹೊಂದುವುದು ಇವತ್ತು ಐಷಾರಾಮಿ ಅಲ್ಲ. ಅವಶ್ಯಕತೆ. ಆದಾಯ ಮಿತಿಯೊಳಗೆ ಇದ್ದು ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದುಪಡಿಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹ–ಎಚ್.ಆರ್.ಬಸವರಾಜಪ್ಪ, ಅಧ್ಯಕ್ಷ ರಾಜ್ಯ ರೈತ ಸಂಘ ಹಸಿರುಸೇನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.