ADVERTISEMENT

ಬ್ರಾಹ್ಮಣರು ಯಹೂದಿಗಳಂತೆ ಎದ್ದು ನಿಲ್ಲಬೇಕಿದೆ: ರೋಹಿತ್ ಚಕ್ರತೀರ್ಥ

ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

​ಪ್ರಜಾವಾಣಿ ವಾರ್ತೆ
Published 16 ಜೂನ್ 2023, 2:29 IST
Last Updated 16 ಜೂನ್ 2023, 2:29 IST
ರೋಹಿತ್‌ ಚಕ್ರತೀರ್ಥ
ರೋಹಿತ್‌ ಚಕ್ರತೀರ್ಥ   

ಶಿವಮೊಗ್ಗ: ಬ್ರಾಹ್ಮಣರು ಜಾಗತಿಕವಾಗಿ ಯಹೂದಿಗಳಂತೆ ಎದ್ದುನಿಲ್ಲಬೇಕಿದೆ ಎಂದು ಅಂಕಣಕಾರ ರೋಹಿತ್ ಚಕ್ರತೀರ್ಥ ಅಭಿಪ್ರಾಯಪಟ್ಟರು.

ಇಲ್ಲಿನ ವಿಪ್ರ ಬಾಂಧವರ ಸ್ನೇಹ ಬಳಗದಿಂದ ನಗರದಲ್ಲಿ ಗುರುವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಯಹೂದಿಗಳಿಗೆ 2,500 ವರ್ಷಗಳವರೆಗೆ ಜಗತ್ತಿನಲ್ಲಿ ನೆಲೆಯೇ ಇರಲಿಲ್ಲ. ಆದರೂ ಜ್ಞಾನಾರ್ಥಿಗಳಾಗಿ ವಿಶ್ವಕ್ಕೆ ಮಾರ್ಗದರ್ಶನ ಮಾಡುತ್ತಾ ಬದುಕಿದರು‌. ಅವರು ವಿಶ್ವದಾದ್ಯಂತ ಶೇ 5 ರಷ್ಟು ಇದ್ದಾರೆ. ಆದರೆ ಎಲ್ಲರೂ ಅವರನ್ನ ಒಪ್ಪಿಕೊಂಡು ಬದುಕುವಂತೆ ಸಾಧಿಸಿ ತೋರಿಸಿಕೊಟ್ಟಿದ್ದಾರೆ. ಕಸಗುಡಿಸುವ ಕೆಲಸವನ್ನೂ ಅವರು ಶ್ರದ್ಧೆಯಿಂದ ಮಾಡುತ್ತಾರೆ.

ADVERTISEMENT

ಜಗತ್ತಿನಲ್ಲಿ ಬೌದ್ಧಿಕ ಶಕ್ತಿಯಾಗಿ ಬದುಕುವುದು ಅವರ ಗುರಿಯಾಗಿತ್ತು. ಇಂದು ಯಾವುದೇ ರಂಗದಲ್ಲೂ ಯಹೂದಿಗಳಿದ್ದಾರೆ. ಬ್ರಾಹ್ಮಣರು ಅವರನ್ನು ಅನುಸರಿಸುವ ಅನಿವಾರ್ಯತೆ ಎದುರಾಗಿದೆ. ಆರ್ಥಿಕವಾಗಿ ನಾವೂ ಪ್ರಬಲರಾಗಬೇಕು. ಆಗ ಯಾರ ಮುಂದೆಯೂ ತಲೆತಗ್ಗಿಸಬೇಕಿಲ್ಲ ಎಂದು ಹೇಳಿದರು.

ಬ್ರಾಹ್ಮಣರು ಸಿದ್ಧಾಂತಗಳನ್ನು ಒಪ್ಪಿಕೊಂಡವರು. ಕಮ್ಯುನಿಸ್ಟ್ ಪಾರ್ಟಿಯಲ್ಲೂ ಬ್ರಾಹ್ಮಣರು ಹೆಚ್ಚಿದ್ದಾರೆ. ಬ್ರಾಹ್ಮಣರಿಗೆ ಬ್ರಾಹ್ಮಣರೇ ಶತ್ರುಗಳು. ಹಾಗಾಗಿ ಬ್ರಾಹ್ಮಣರು ಬ್ರಹ್ಮಕ್ಷತ್ರಿಯರಾಗಿ ಬದುಕಬೇಕಿದೆ. ಎಲ್ಲಾ ರಂಗದಲ್ಲೂ ಇದ್ದು ಬದುಕುವಂತಾಗಬೇಕಿದೆ. ಬ್ರಾಹ್ಮಣರನ್ನ ದೇಶದ ವ್ಯವಸ್ಥೆಯಲ್ಲಿ ತುಚ್ಛವಾಗಿ ಕಾಣಲಾಗುತ್ತಿದೆ. ಮೊದಲೆಲ್ಲ ಹೀಗೆ ಇರಲಿಲ್ಲ. ಈಗ 100 ವರ್ಷಗಳ ಹಿಂದಿನಿಂದ ಬ್ರಿಟಿಷರ ಷಡ್ಯಂತ್ರ್ಯದಿಂದಾಗಿ ಬ್ರಾಹ್ಮಣರನ್ನು ತುಚ್ಛವಾಗಿ ನೋಡಲಾರಂಭಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಮುಂದಾಗಿರುವ ಈ ಸರ್ಕಾರ, ಕೆಲವರ ಪಾಠ ಕೈಬಿಡಲಿದೆ ಎಂಬ ಮಾತು ಕೇಳಿಬರುತ್ತಿದೆ ಎಂದು ಪ್ರಸ್ತಾಪಿಸಿದ ಚಕ್ರತೀರ್ಥ ಗೆಲಿಲಿಯೋನ ಕಥೆ ಹೇಳಿದರು.

'ಗೆಲಿಲಿಯೋ ಭೂಮಿ ದುಂಡಾಗಿದೆ. ಸೂರ್ಯನ ಸುತ್ತ ಭೂಮಿ ತಿರುಗುತ್ತೆ ಎಂದು ಹೇಳಿದಾಗ. ಆಗಿನ ಜಗತ್ತು‌ ಒಪ್ಪಲಿಲ್ಲ. ಜನರ ನಂಬಿಕೆಯನ್ನ ಮುರಿದಾಗ ಆತ ಸಂಕಷ್ಟಗಳ ಎದುರಿಸಿ ಜರ್ಝರಿತವಾಗಿದ್ದ. ಹೀಗಾಗಿ ಇಲ್ಲ ಭೂಮಿಯೇ ತಟಸ್ಥ. ಸೂರ್ಯನೇ ಅದರ ಸುತ್ತ ತಿರುಗೋದು ಎಂದು ರಾಜನ ಮುಂದೆ ತನ್ನ ಹೇಳಿಕೆ ಬದಲಿಸಿದ್ದ. ಅರಮನೆಯ ದ್ವಾರದ ಬಳಿ ನಿಂತವನೊಬ್ಬ ಗೆಲಿಲಿಯೋಗೆ 'ಕೊನೆಗೂ ಅವರು (ರಾಜ) ಹೇಳಿದ್ದನ್ನೇ ಒಪ್ಪಿಕೊಂಡ್ಯಲ್ಲಾ' ಎಂದು ಕೇಳ್ತಾನೆ. ಅದಕ್ಕೆ ಗೆಲೆಲಿಯೋ ನಾನು ಒಪ್ಪಿಕೊಂಡ ಕೂಡಲೇ ಜಗದ ನಿಯಮ ಬದಲಾಗೊಲ್ಲ. ಅದು ಹಾಗೆ ಇರುತ್ತದೆ. ಇವರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಅವರ ವಾದ ಒಪ್ಪಬೇಕಾಯಿತು ಎಂದು ಉತ್ತರಿಸುತ್ತಾನೆ. ಹಾಗೆಯೇ ಪಠ್ಯ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಾಠ ತೆಗೆಯುವುದರಿಂದ ಸತ್ಯ ಬದಲಿಸಲು ಆಗೊಲ್ಲ ಎಂದು ರೋಹಿತ್ ಚಕ್ರತೀರ್ಥ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.