ADVERTISEMENT

ಮಠದ ಅಭಿವೃದ್ಧಿಗೆ ಸಹಕಾರ ನೀಡುವ ಮನೋಭಾವ ಬೆಳೆಸಿಕೊಳ್ಳಿ

‘ನೂರು ದಿನ ಸಾವಿರ ಹಳ್ಳಿ’ ಕಾರ್ಯಕ್ರಮದಲ್ಲಿ ಹೊಸದುರ್ಗ ಈಶ್ವರಾನಂದಪುರಿ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:54 IST
Last Updated 22 ಅಕ್ಟೋಬರ್ 2024, 15:54 IST
ಶಿಕಾರಿಪುರ ತಾಲ್ಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಮಂಗಳವಾರ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಭಕ್ತರು ಸನ್ಮಾನಿಸಿದರು
ಶಿಕಾರಿಪುರ ತಾಲ್ಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಮಂಗಳವಾರ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಭಕ್ತರು ಸನ್ಮಾನಿಸಿದರು   

ಶಿಕಾರಿಪುರ: ಮಠದ ಅಭಿವೃದ್ಧಿಗೆ ಭಕ್ತರು ಸಹಕಾರ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.

ತಾಲ್ಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಮಂಗಳವಾರ ಮಠದಿಂದ ಆಯೋಜಿಸಿದ್ದ ‘ನೂರು ದಿನ ಸಾವಿರ ಹಳ್ಳಿ’ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಕುರುಬ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಿದ್ದೇವೆ. ಭಕ್ತರು ಹಾಗೂ ಮಠದ ಮಧ್ಯೆ ಸಂಪರ್ಕವನ್ನು ಸಾಧಿಸಲು ಕಾರ್ಯಕ್ರಮ ಸಹಕಾರಿಯಾಗಿದೆ. ಈಗಾಗಲೇ 536 ಗ್ರಾಮಗಳನ್ನು ಭೇಟಿ ಮಾಡಿದ್ದೇವೆ. ಮಠಗಳಿಗೆ ಸಮುದಾಯದವರು ಭೇಟಿ ನೀಡುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಮಠದ ಅಭಿವೃದ್ಧಿಗೆ ಭಕ್ತರ ಸಹಕಾರ ಮುಖ್ಯ. ಭಕ್ತರ ಸಹಕಾರವಿದ್ದರೆ ಮಠದ ಅಭಿವೃದ್ಧಿಗೆ ಸರ್ಕಾರದ ಅನುದಾನಕ್ಕಾಗಿ ಕಾಯುವ ಅವಶ್ಯಕತೆ ಇರುವುದಿಲ್ಲ’ ಎಂದು ಹೇಳಿದರು.

ADVERTISEMENT

‘ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕನಕದಾಸರ ಜೀವನವನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹೊಸದುರ್ಗದ ಕನಕ ಗುರುಪೀಠದಲ್ಲಿ 57 ಅಡಿ ಎತ್ತರದ ಕನಕದಾಸರ ಏಕಶಿಲೆ ಮೂರ್ತಿ ನಿರ್ಮಾಣ ಮಾಡುತ್ತಿದ್ದೇವೆ. ಏಕಶಿಲೆ ನಿರ್ಮಾಣಕ್ಕಾಗಿ ಸಾವಿರ ಹಳ್ಳಿ ಭೇಟಿ ಮಾಡಿ ಭಕ್ತರ ಮನೆಗಳಿಂದ ಕಾಣಿಕೆ ಸಂಗ್ರಹಿಸುತ್ತಿದ್ದೇವೆ’ ಎಂದರು.

‘ಸಮುದಾಯದವರು ಸಂಘಟಿತರಾಗಬೇಕು. ಪ್ರಬುದ್ಧ ಸಮಾಜ ನಿರ್ಮಾಣ ಮಾಡಬೇಕು. ಕನಕದಾಸ ಜಯಂತಿ ಆಚರಣೆಯಲ್ಲಿ ಡಿ.ಜೆಗೆ ಕುಣಿಯದೆ, ಮಾದರಿಯಾಗಬೇಕು’ ಎಂದು ಕಿವಿಮಾತು ಹೇಳಿದರು.

ತಾಲ್ಲೂಕಿನ ತಿಮ್ಲಾಪುರ, ಡಬ್ಬಣ ಬೈರನಹಳ್ಳಿ, ವಿಠಲನಗರ, ಕೆಂಚಿಗೊಂಡನಕೊಪ್ಪ, ಗೊಗ್ಗ, ಕಿಟ್ಟದಹಳ್ಳಿ , ಸಿ ಎನ್. ಕೊಪ್ಪ, ದಿಂಡದಹಳ್ಳಿ ಕಿಟ್ಟದಹಳ್ಳಿ, ಮತ್ತಿಕೋಟೆ ಗ್ರಾಮಗಳಿಗೆ ಸ್ವಾಮೀಜಿ ಭೇಟಿ ನೀಡಿದರು.

ಡೊಳ್ಳು ಕುಣಿತ, ಭಜನಾ ಮೇಳಗಳೊಂದಿಗೆ ಸ್ವಾಮೀಜಿ ಅವರನ್ನು ಸ್ವಾಗತಿಸಲಾಯಿತು. ದಿಂಡದಹಳ್ಳಿ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವರ ಉತ್ಸವಮೂರ್ತಿಯೊಂದಿಗೆ ಸ್ವಾಮೀಜಿಯ ಮೆರವಣಿಗೆ ನಡೆಯಿತು.

ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕಬಾಡಿ ರಾಜಪ್ಪ, ಕಾರ್ಯದರ್ಶಿ ಕರಿಬಸಪ್ಪ, ಮುಖಂಡರಾದ ನಗರದ ಮಹಾದೇವಪ್ಪ, ಷಣ್ಮುಖಪ್ಪ, ಡಾ.ಪ್ರಶಾಂತ್, ತುಕ್ಕಪ್ಪ, ಅಣ್ಣಪ್ಪಗೌಡ್ರು, ಉಡುಗಣಿ ಷಣ್ಮುಖಪ್ಪ, ಬಿ.ಎಲ್. ರಾಜು, ಸುದರ್ಶನ್, ರಘು, ದೊಡ್ಡಪ್ಪ, ಬೆಣ್ಣೆ ಪ್ರವೀಣ್, ನಟರಾಜ್, ದುರ್ಗಾವ್ವರ ಹಾಲೇಶ್, ಹರಪನಳ್ಳಿ ಮಾಲತೇಶ್, ಕಿರಣ್, ವಿವಿಧ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.