ADVERTISEMENT

ಹಕ್ಕುಪತ್ರಕ್ಕೆ ಒತ್ತಾಯ: ಸಿಇಒಗೆ ಪ್ರತಿಭಟನಕಾರರ ದಿಗ್ಬಂಧನ

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ, ಮಠಾಧೀಶರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:55 IST
Last Updated 22 ಅಕ್ಟೋಬರ್ 2024, 15:55 IST
ಸಾಗರದಲ್ಲಿ ಭೂಮಿಯ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಂಗಳವಾರವೂ ಮುಂದುವರಿಯಿತು
ಸಾಗರದಲ್ಲಿ ಭೂಮಿಯ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಂಗಳವಾರವೂ ಮುಂದುವರಿಯಿತು   

ಸಾಗರ: ಮುಳುಗಡೆ ಸಂತ್ರಸ್ತರು, ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿಯ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಸೋಮವಾರ ಆರಂಭಗೊಂಡ ಅನಿರ್ದಿಷ್ಟಾವಧಿಯ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಂಗಳವಾರವೂ ಮುಂದುವರಿದಿದೆ.

ಎಚ್.ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘ, ಮಲೆನಾಡು ರೈತರ ಹೋರಾಟ ಸಮಿತಿ, ಮುಳುಗಡೆ ಸಂತ್ರಸ್ತರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ಆಶ್ರಯದಲ್ಲಿ ಆರಂಭಗೊಂಡಿರುವ ಈ ಹೋರಾಟದ ಅಂಗವಾಗಿ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ರೈತರ ಪ್ರತಿಭಟನೆ ಮುಂದುವರಿದಿದೆ.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ರಜೆಯಲ್ಲಿರುವುದರಿಂದ ಜಿಲ್ಲಾ ಪಂಚಾಯಿತಿ ಸಿಇಒ ಹೇಮಂತ್‌ಕುಮಾರ್ ಮಂಗಳವಾರ ಬೆಳಿಗ್ಗೆ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದರು.

ADVERTISEMENT

ಮುಳುಗಡೆ ಸಂತ್ರಸ್ತರ, ಅರಣ್ಯಭೂಮಿ ಸಾಗುವಳಿದಾರರ ಸಮಸ್ಯೆ ಬಗೆಹರಿಸುವ ಸಂಬಂಧ ಟಾಸ್ಕ್‌ಫೋರ್ಸ್‌ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರಾಜ್ಯದ ಕಂದಾಯ ಇಲಾಖೆ ಕಾರ್ಯದರ್ಶಿ ಶೀಘ್ರವಾಗಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರತಿಭಟನೆ ಕೈಬಿಡಬೇಕು ಎಂದು ಹೇಮಂತ್ ಕುಮಾರ್ ಮನವಿ ಮಾಡಿದರು.

‘ಈ ರೀತಿ ಆಶ್ವಾಸನೆಯ ಮಾತುಗಳನ್ನು ಏಳೆಂಟು ವರ್ಷಗಳಿಂದ ಕೇಳಿ ಸಂತ್ರಸ್ತರು ಸುಸ್ತಾಗಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಮುನ್ನ ನೀಡಿದ್ದ ಭರವಸೆಯಂತೆ ಮಲೆನಾಡು ರೈತರ ಸಮಸ್ಯೆಗಳನ್ನು ಆಲಿಸುವ ಸಂಬಂಧ ಬೆಂಗಳೂರಿನಲ್ಲಿ ಪ್ರಮುಖ ಸಚಿವರ, ಉನ್ನತ ಅಧಿಕಾರಿಗಳ ಸಭೆಯನ್ನು ಕೂಡಲೇ ಕರೆಯಬೇಕು. ಅಲ್ಲಿಯವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ’ ಎಂದು ಪ್ರತಿಭಟನಕಾರರು ಪಟ್ಟುಹಿಡಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿದ್ದ ಪ್ರತಿಭಟನಕಾರರು ಕಚೇರಿಯೊಳಗೆ ಪ್ರವೇಶ ನೀಡುವಂತೆ ಒತ್ತಾಯಿಸಿ ಕಚೇರಿಗೆ ಬೀಗ ಹಾಕಲು ಮುಂದಾದಾಗ ಕೆಲಕಾಲ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಘರ್ಷಣೆ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಒಂದು ಗಂಟೆಗೂ ಹೆಚ್ಚು ಕಾಲ ಉಪವಿಭಾಗಾಧಿಕಾರಿ ಕಚೇರಿಯೊಳಗಿದ್ದ ಸಿಇಒ ಹೇಮಂತ್ ಕುಮಾರ್ ಅವರನ್ನು ಪ್ರತಿಭಟನಕಾರರು ಹೊರಕ್ಕೆ ಬಿಡದೆ ದಿಗ್ಬಂಧನ ವಿಧಿಸಿದ್ದರು. ನಂತರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡರ ಕೋರಿಕೆಯ ಮೇರೆಗೆ ಅವರನ್ನು ಅಲ್ಲಿಂದ ತೆರಳಲು ಅವಕಾಶ ನೀಡಲಾಯಿತು.

ನಂತರ ಸ್ಥಳಕ್ಕೆ ಬಂದ ಸಂಸದ ಬಿ.ವೈ.ರಾಘವೇಂದ್ರ, ‘ಅರಣ್ಯಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆಯಲು 75 ವರ್ಷಗಳ ದಾಖಲೆ ನೀಡಬೇಕು ಎಂಬ ನಿಬಂಧನೆಯನ್ನು 25 ವರ್ಷಕ್ಕೆ ಇಳಿಸಬೇಕು ಎಂದು ಲೋಕಸಭೆಯ ಅಧಿವೇಶನದಲ್ಲಿ ಒತ್ತಾಯಿಸಿದ್ದೇನೆ. ಇತರ ರಾಜ್ಯಗಳ ಸಂಸದರ ಬೆಂಬಲ ದೊರಕದೆ ಇರುವುದರಿಂದ ಅದು ಕಾರ್ಯಗತಗೊಂಡಿಲ್ಲ’ ಎಂದರು.

‘ಮಲೆನಾಡಿನ ಎಲ್ಲಾ ಸಂಸದರ ನಿಯೋಗದೊಂದಿಗೆ ಶೀಘ್ರದಲ್ಲೇ ದೆಹಲಿಗೆ ತೆರಳಿ ಮುಳುಗಡೆ ಸಂತ್ರಸ್ತರ, ಅರಣ್ಯಭೂಮಿ ಸಾಗುವಳಿದಾರರ ಸಮಸ್ಯೆ ಬಗೆಹರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ’ ಎಂದು ತಿಳಿಸಿದರು.

‘1996ರ ಡಿಸೆಂಬರ್ 12ಕ್ಕಿಂತ ಮೊದಲು ಯಾವುದೇ ಅರಣ್ಯಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿದ್ದಲ್ಲಿ ಅಥವಾ ಇತರ ಉದ್ದೇಶಗಳಿಗಾಗಿ ರಾಜ್ಯ ಸರ್ಕಾರ ಬಿಟ್ಟುಕೊಟ್ಟಿದ್ದಲ್ಲಿ ಅಥವಾ ಅರಣ್ಯದ ಸ್ವರೂಪವನ್ನು ಕಳೆದುಕೊಂಡಿದ್ದಲ್ಲಿ ಅಂತಹ ಪ್ರದೇಶ ಅರಣ್ಯವೇ ಅಲ್ಲ ಎಂದು ಅರಣ್ಯ ಸಂರಕ್ಷಣಾ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಇದರ ಜಾರಿಗೆ ಅಧಿಕಾರಿಗಳು ಆಸ್ಪದ ನೀಡುತ್ತಿಲ್ಲ’ ಎಂದು ಹಿರಿಯ ಮುಖಂಡ ಬಿ.ಆರ್. ಜಯಂತ್ ದೂರಿದರು.

‘ಹೊಸ ಹೊಸ ಕಾಯ್ದೆಗಳಿಂದಾಗಿ ಮಲೆನಾಡು ಪ್ರದೇಶದ ರೈತರ ಬದುಕು ಆತಂಕಕ್ಕೆ ಸಿಲುಕಿದೆ. ಇಂತಹ ಕಾಯ್ದೆಗಳನ್ನು ಸರ್ಕಾರ ತಿದ್ದುಪಡಿ ಮಾಡದೇ ಇದ್ದಲ್ಲಿ ರೈತರಿಗೆ ದಯಾ ಮರಣಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕ ದಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.

ಎರಡು ದಿನಗಳಿಂದ ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಬಂದು ರೈತರ ಅಹವಾಲು ಕೇಳುವ ಸೌಜನ್ಯ ತೋರದೆ ಇರುವುದು ಖಂಡನೀಯ ಎಂದು ಮುಖಂಡ ತೀ.ನ. ಶ್ರೀನಿವಾಸ್ ದೂರಿದರು.

ಗರ್ತಿಕೆರೆ ಮಠದ ರೇಣುಕಾನಂದ ಸ್ವಾಮೀಜಿ ಸ್ಥಳಕ್ಕೆ ಬಂದು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಹಾಲಪ್ಪ ಹರತಾಳು, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ, ಪ್ರಮುಖರಾದ ಟಿ.ಡಿ. ಮೇಘರಾಜ್, ಡಾ.ರಾಜನಂದಿನಿ ಕಾಗೋಡು, ಮಲ್ಲಿಕಾರ್ಜುನ ಹಕ್ರೆ, ರತ್ನಾಕರ ಹೊನಗೋಡು, ರವಿ ಕುಗ್ವೆ, ಶಿವಾನಂದ ಕುಗ್ವೆ, ರಾಮಚಂದ್ರಪ್ಪ ಮನೆಘಟ್ಟ, ರಮೇಶ್ ಕೆಳದಿ, ಹೊಯ್ಸಳ ಗಣಪತಿಯಪ್ಪ, ಗಣೇಶ್ ಬೆಳ್ಳಿ, ರೇವಪ್ಪ ಹೊಸಕೊಪ್ಪ, ರವಿಕುಮಾರ್ ಸಿಗಂದೂರು, ಮಧುರಾ ಶಿವಾನಂದ್, ಮೈತ್ರಿ ಪಾಟೀಲ್, ದೇವೇಂದ್ರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.