ADVERTISEMENT

ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಪರಿಹರಿಸಿ: ಬಿವೈಆರ್ ಸೂಚನೆ

ದಿಶಾ ಸಮಿತಿ ಸಭೆಯಲ್ಲಿ ಮಲೆನಾಡಿನಲ್ಲಿ ನೆಟ್‌ವರ್ಕ್ ಸಮಸ್ಯೆಯದ್ದೇ ಸದ್ದು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 14:58 IST
Last Updated 15 ನವೆಂಬರ್ 2024, 14:58 IST
ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು
ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು   

ಶಿವಮೊಗ್ಗ: ಜಿಲ್ಲೆಯಲ್ಲಿ ತಲೆದೋರಿರುವ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಕ್ರಮವಹಿಸಬೇಕು. ನೆಟ್‌ವರ್ಕ್ ಸಮಸ್ಯೆಗೆ ಒಂದು ತಿಂಗಳಲ್ಲಿ ಪರಿಹಾರ ಕಲ್ಪಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಸೂಚಿಸಿದರು.

ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣೆ (ದಿಶಾ) ಸಮಿತಿಯಿಂದ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಮೊಬೈಲ್‌ ಫೋನ್‌ ನೆಟ್‌ವರ್ಕ್‌ ಸಮಸ್ಯೆ ಹೆಚ್ಚಾಗಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ನೆಟ್‌ವರ್ಕ್‌ ಸಮಸ್ಯೆ ಪರಿಹರಿಸಲು ಈ ಹಿಂದೆ ಅನೇಕ ಬಾರಿ ಸಭೆಗಳನ್ನು ನಡೆಸಿ, ಯೋಜನೆ  ರೂಪುರೇಷಗಳನ್ನು ಚರ್ಚಿಸಲಾಗಿದೆ. ಆದರೂ ಅದು ಸರಿಯಾಗಿ ಅನುಷ್ಠಾನಗೊಂಡಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಎಲ್ಲಾ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದ ಅವರು, ‘ಜನರು ಯಾವುದೇ ಸಮಸ್ಯೆ ಇಟ್ಟುಕೊಂಡು ಅಧಿಕಾರಿಗಳಿಗೆ ಕರೆ ಮಾಡಿದರೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಜಿಲ್ಲೆಯ ಗ್ರಾಮಾಂತರ ಭಾಗ ಸೇರಿದಂತೆ ಸುಮಾರು 141 ಕಡೆ ಟವರ್‌ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 138 ಟವರ್‌ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಅರಣ್ಯ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ 63 ಟವರ್‌ ಅಳವಡಿಕೆಯಲ್ಲಿ 15 ಟವರ್ ನಿರ್ಮಾಣ ಪೂರ್ಣಗೊಂಡಿದೆ. ಕಂದಾಯ ಭೂಮಿಗೆ ಸಂಬಂಧಿಸಿದ 55ರಲ್ಲಿ 47 ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ’ ಎಂದು ಬಿಎಸ್‌ಎನ್‌ಎಲ್ ಅಧಿಕಾರಿ ವೆಂಕಟೇಶ್ ಸಭೆಗೆ ಮಾಹಿತಿ ನೀಡಿದರು. 

ಕಳಪೆ ಕಾಮಗಾರಿ ಸರಿಪಡಿಸಿ:

ಸಾಗರ ನಗರ ವ್ಯಾಪ್ತಿಯಲ್ಲಿ ಹೆದ್ದಾರಿ ಕಾಮಗಾರಿ ಅತ್ಯಂತ ಕಳಪೆಯಾಗಿದೆ. ಈ ಬಗ್ಗೆ ದೂರುಗಳು ಬಂದಿವೆ. ಈ ತೊಡಕುಗಳನ್ನು ಅಧಿಕಾರಿಗಳು ಸರಿಪಡಿಸಿಕೊಳ್ಳಿ ಎಂದು ಬಿ.ವೈ. ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

‘ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಬಳಿಯ ರಸ್ತೆ ವಿಸ್ತರಣೆಗೆ ಮರಗಳನ್ನು ತೆರವುಗೊಳಿಸಬಾರದು ಎಂದು ಪರಿಸರವಾದಿಗಳು ಒತ್ತಾಯಿಸಿದ್ದ ಕಾರಣ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಕ್ಲಿಯರೆನ್ಸ್‌ ಪಡೆದು ಕಾಮಗಾರಿ ಆರಂಭಿಸಬೇಕು ಎಂದು ಸೂಚಿಸಲಾಗಿದೆ. ಇದರಿಂದ ಶಿವಮೊಗ್ಗದ ಡಿಎಫ್‌ಒ ಭಯಗೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಇಲ್ಲಿ ಒಂದು ಗಿಡ ತೆಗೆದರೆ, ಇನ್ನೊಂದು ಗಿಡ ನೆಡಬೇಕು ಎನ್ನುವ ಕಾನೂನಿದೆ. ಪರಿಸರ ಉಳಿವಿನ ಜೊತೆ ಕಾಮಗಾರಿ ಕೂಡ ಪೂರ್ಣಗೊಳಿಸಬೇಕು ಎಂದರು.

ಶಾಸಕಿ ಶಾರದಾ ಪೂರ್ಯಾನಾಯ್ಕ, ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ.ಧನಂಜಯ ಸರ್ಜಿ, ಬಲ್ಕೀಶ್ ಬಾನು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್‌ ಕುಮಾರ್‌, ಜಿಲ್ಲಾ ಪಂಚಾಯಿತಿ ಸಿಇಒ ಎನ್.‌ ಹೇಮಂತ್‌, ಉಪ ಕಾರ್ಯದರ್ಶಿ ಸುಜಾತಾ ಸೇರಿದಂತೆ ಇಲಾಖೆಯ ಅಧಿಕಾರಿಗಳು ಇದ್ದರು.

ಮನೆಯಿಂದ ಹೊರಗೆ ಬಂದು ಮಾತಾಡಬೇಕು! ‘ಶಿವಮೊಗ್ಗ ನಗರದಲ್ಲಿ ಬಿಎಸ್ಎನ್ಎಲ್ ನೆಟ್‌ವರ್ಕ್ ಸಮಸ್ಯೆ ತುಂಬಾ ಇದೆ. ನಮ್ಮ ಮನೆ ಕಚೇರಿಯಲ್ಲಿಯೇ ಈ ಸಮಸ್ಯೆ ಇದೆ. ತುರ್ತು ಸಂದರ್ಭದಲ್ಲಿ ಕಚೇರಿಯಿಂದ ಹೊರ ಬಂದು ಮಾತನಾಡಬೇಕಿದೆ. ಈ ವಿಚಾರ ಸಣ್ಣದು ಎನಿಸಬಹುದು. ಆದರೆ ಕೆಲವೊಮ್ಮೆ ತುಂಬಾ ಸಮಸ್ಯೆ ಎದುರಾಗುತ್ತಿದೆ’ ಎಂದು ಶಾಸಕ ಎಸ್.ಎನ್. ಚೆನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್‌ಗೆ ಸಂಬಂಧಿಸಿದ ಅಧಿಕಾರಿ ವರ್ಗ ಸಂಬಳಕ್ಕೆ ಮಾತ್ರ ಕಾರ್ಯ ನಿರ್ವಹಿಸುವಂತೆ ಕಾಣುತ್ತಿದೆ. ಸಂಬಳಕ್ಕೆ ಇರುವ ಬದ್ಧತೆ ಕೆಲಸದ ಮೇಲಿಲ್ಲ. ಇಲ್ಲಿ ಜನಸಾಮಾನ್ಯರ ಅಳಲು ಕೇಳುವವರಿಲ್ಲದಂತೆ ಆಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು. ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿಯೇ ನೆಟ್‌ವರ್ಕ್‌ ಸಮಸ್ಯೆ ಕಾಡುತ್ತಿದೆ. ಇತರೆ ಟೆಲಿಕಾಂ ಕಂಪನಿಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದಾಗ ಬಿಎಸ್‌ಎನ್‌ಎಲ್ ಜನರ ಕೈಹಿಡಿಯಬೇಕು. ಆದರೆ ಈ ಕಾರ್ಯ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈಲುಗಳ ವೇಗ ಹೆಚ್ಚಿಸಿ: ಆರಗ ಜಿಲ್ಲೆಯಲ್ಲಿ ಸಂಚರಿಸುವ ರೈಲುಗಳ ವೇಗ ಹೆಚ್ಚಿಸಬೇಕು. ಎರಡು ವರ್ಷದಿಂದ ಈ ಬೇಡಿಕೆ ಇಡಲಾಗುತ್ತಿದೆ. ಆದರೆ ಕ್ರಮಕೈಗೊಂಡಿಲ್ಲ. ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಸಾಗರ ನಗರ ತಲುಪಲು ಒಂದೂವರೆ ಗಂಟೆ ತಗುಲುತ್ತದೆ. ಇಲ್ಲಿ ಸಂಚರಿಸುವ ರೈಲುಗಳ ವೇಗದಿಂದ ಜನರು ಒಳ್ಳೆಯ ನಿದ್ರೆ ಮಾಡಬಹುದು ಎಂದು ಶಾಸಕ ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದರು. ಇದಕ್ಕೆ ಪ್ರತಿಕ್ರಿಸಿದ ರೈಲ್ವೆ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹರಿರಾಮ್ ‘ಶಿವಮೊಗ್ಗ ಪರಿಸರ ಸೂಕ್ಷ್ಮ ಪ್ರದೇಶ ಆಗಿರುವುದರಿಂದ ರೈಲುಗಳು ನಿಧಾನವಾಗಿ ಸಂಚರಿಸುತ್ತಿವೆ. ವೇಗ ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು. ಅರಸಾಳು ರೈಲು ನಿಲ್ದಾಣದಲ್ಲಿ ಕೇವಲ 1 ನಿಮಿಷ ಮಾತ್ರ ರೈಲುಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ನಿಲ್ದಾಣದಲ್ಲಿ ಇಳಿಯುವ ಮಹಿಳೆಯರು ವೃದ್ಧರು ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ತರಾತುರಿಯಲ್ಲಿ ಕೆಳಗೆ ಹಾರಲು ಆಗುವುದಿಲ್ಲ. ಇಲ್ಲಿ 2 ನಿಮಿಷವಾದರೂ ರೈಲುಗಳು ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆರಗ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಬಿ.ವೈ.ರಾಘವೇಂದ್ರ ‘ಮುಂದಿನ ದಿನಗಳಲ್ಲಿ ರೈಲು ನಿಲುಗಡೆಗೊಳ್ಳುವ ನಿಲ್ದಾಣದಲ್ಲಿ ಹೆಚ್ಚಿನ ಸಮಯ ರೈಲು ನಿಲ್ಲಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಮೇ ನಲ್ಲಿ ಸಿಗಂದೂರು ಸೇತುವೆ ಕಾಮಗಾರಿ ಪೂರ್ಣ’

ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ 2025ರ ಮೇ ತಿಂಗಳಲ್ಲಿ ಸಾರ್ವಜನಿಕ ಮುಕ್ತಗೊಳಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ‌ ಸೇತುವೆ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದೆ. ಇಲ್ಲಿ ಡಿಸೆಂಬರ್‌ ಅಂತ್ಯದೊಳಗೆ ಸೇತುವೆ ಮೇಲೆ ವಾಹನಗಳು‌ ಪ್ರಾಯೋಗಿಕವಾಗಿ ಸಂಚರಿಸಲಿವೆ. ಆದರೆ ಕೆಲವೊಂದು ಚಿಕ್ಕಪುಟ್ಟ ಕಾಮಗಾರಿಗಳಿಗೆ ಒತ್ತು ನೀಡಿ ಸಂಚಾರ ಮುಕ್ತಗೊಳಿಸಲಾಗುವುದು ಎಂದರು. ಭೂಸ್ವಾಧೀನ ಪೂರ್ಣಗೊಳಿಸಿ: ಶಿವಮೊಗ್ಗ- ರಾಣೆಬೆನ್ನೂರು ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಶೇ 90ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರಬೇಕು. ಇದರಿಂದ ಕೇಂದ್ರ ಸರ್ಕಾರದಿಂದ ಹಣ ತರಲು ಅನುಕೂಲವಾಗುತ್ತದೆ ಎಂದು ಹೇಳಿದರು. ಭೂಸ್ವಾಧೀನ ಪಡಿಸಿಕೊಳ್ಳುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ಅದೇ ರೀತಿ ಇಲ್ಲಿ ಯಾವುದೇ ರೈತರಿಗೆ ಅನ್ಯಾಯವಾಗಕೂಡದು. ಭೂಮಿ ವಶಪಡಿಸಿಕೊಂಡ ರೈತರಿಗೂ ಸಹ ಶೇ 90ರಷ್ಟು ಹಣ ಸಂದಾಯವಾಗಿರಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.