ಶಿವಮೊಗ್ಗ: ಕೊರೊನಾ ನಿರ್ಬಂಧಗಳು ಸಾಮಾನ್ಯ ಜನರಲ್ಲಿ ತಲ್ಲಣ ಮೂಡಿಸಿದೆ. ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು, ವಲಸೆ ಬಂದವರು.ನಿತ್ಯದುಡಿದು ಜೀವನ ಮಾಡುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಪರಿಸ್ಥಿತಿಯಲ್ಲಿ ಜನರ ಜೀವಕ್ಕೆ ಮೊದಲ ಆದ್ಯತೆನೀಡಲಾಗಿದೆ. ಜನರ ಜೀವನವೂ ಅಷ್ಟೆ ಮುಖ್ಯ. ಅದಕ್ಕಾಗಿ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ. ಎಲ್ಲರೂ ತಾಳ್ಮೆಯಿಂದ ಸಹಕರಿಸಿ, ಜನರ ಜೀವಹಾಗೂ ಅವರ ಜೀವನ ಸಂರಕ್ಷಿಸಲು ನಮ್ಮೊಂದಿಗೆ ಕೈಜೋಡಿಸಿ.
ಇದು ಸಂಸದ ಬಿ.ವೈ.ರಾಘವೇಂದ್ರ ಅವರು ‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಜನರಿಗೆ ಹೇಳಿದ ಮಾತುಗಳು.
ಹಿರಿಯರು ರೂಢಿಸಿಕೊಂಡು ಬಂದ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡು, ಪ್ರಕೃತಿ ಸಂರಕ್ಷಿಸುತ್ತಾ, ಅದರೊಟ್ಟಿಗೆ ಹೆಜ್ಜೆ ಹಾಕಿದರೆ ಮಾನವಜನಾಂಗಕ್ಕೆ ಉಳಿಗಾಲ. ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ₨ 2 ಕೋಟಿ ಸಂಗ್ರಹಿಸಿ ಕೊಟ್ಟಿದ್ದಾರೆ. ಪ್ರತಿಯೊಬ್ಬರೂ ₨ 10ರಿಂದ ಲಕ್ಷದವರೆಗೂ ನೆರವು ನೀಡಿದ್ದಾರೆ. ತಾವೂ ವೈಯಕ್ತಿಕವಾಗಿ 75 ಸಾವಿರ ಅಕ್ಕಿಯ ಕಿಟ್,2 ಲಕ್ಷ ಮಾಸ್ಕ್ ವಿತರಿಸಿದ್ದೇನೆ.ಇಂತಹ ಸಂಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ನೆರವಾಗಬೇಕುಎಂದು ಕೋರಿದರು.
ತಾಂತ್ರಿಕವಾಗಿ ಮುಂದುವರಿದ ಎಷ್ಟೋ ದೇಶಗಳು ಕೊರೊನಾ ಸೋಂಕು ನಿಯಂತ್ರಿಸಲು ವಿಫಲವಾಗಿವೆ. ಭಾರತದ ಜನಸಂಖ್ಯೆಹೆಚ್ಚಿದ್ದರೂ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮ ವಿಶ್ವಕ್ಕೆ ಮಾದರಿಯಾಗಿದೆ. ಇದಕ್ಕೆ ಪ್ರಮುಖ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ಇಚ್ಚಾಶಕ್ತಿ. ರಾಜ್ಯದಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾಗೂ ಅವರ ಸಂಪುಟದ ಸಹೋದ್ಯೋಗಿಗಳ ಸಮಯೋಚಿತ ನಿರ್ಧಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸರ ಪರಿಶ್ರಮದ ಪರಿಣಾಮ ಸೋಂಕಿನ ಹರಡುವಿಕೆ ನಿಯಂತ್ರಣದಲ್ಲಿದೆ ಎಂದು ಶ್ಲಾಘಿಸಿದರು.
ಕೊರೊನಾ ಪಾಸಿಟಿವ್ ಕಂಡುಬರದ ಪ್ರದೇಶಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೆಲವು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಜನರು ಸ್ವಲ್ಪ ಎಚ್ಚರ ತಪ್ಪಿದರೂ ಭಾರಿ ಅನಾಹುತ ಎದುರಿಸಬೇಕಾಗುತ್ತದೆ. ಸೋಂಕು ತಡೆಗೆ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯ. ಒಬ್ಬರು ಮತ್ತೊಬ್ಬರ ಮಧ್ಯೆ ಅಂತರ ಕಾಪಾಡಿಕೊಳ್ಳುವುದು. ಅಗತ್ಯವಿಲ್ಲದೇ ಮನೆಯಿಂದ ಹೊರ ಬಾರದಂತೆ ಸಂಯಮ ವಹಿಸುವುದು ಅಗತ್ಯ. ಕೊರೊನಾ ಪರಿಣಾಮ ಪ್ರಪಂಚದ ಆರ್ಥಿಕತೆಗೆ ಭಾರಿ ಪೆಟ್ಟು ಬಿದ್ದಿದೆ. ಭಾರತದಲ್ಲಿ ₨ 8 ಲಕ್ಷ ಕೋಟಿ ನಷ್ಟವಾಗಿದೆ ಎಂದು ವಿವರ ನೀಡಿದರು.
ಪ್ರಶ್ನೋತ್ತರಗಳು
* ಮೆಕ್ಕೆಜೋಳದ ದರ ಕುಸಿದಿದೆ. ಸರ್ಕಾರದ ನೆರವು ಬೇಕಿದೆ.
–ಕುಮಾರ್, ಶಿಕಾರಿಪುರ.
ಮೆಕ್ಕೆಜೋಳದ ಧಾರಣೆ ಮತ್ತೆ ಏರಿಕೆ ಕಂಡಿದೆ. ಈಗ ₨ 1,700 ತಲುಪಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ.
* ನಗರ ನೀರು ಸರಬರಾಜು ಮಂಡಳಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಹಾಗಾಗಿ, ಇರುವ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ.ಸಮಸ್ಯೆ ನಿವಾರಣೆಗೆ ಸಹಕರಿಸಿ.
–ಇಂದೂಧರ್, ಶಿವಮೊಗ್ಗ.
ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು.
* ನಿಗದಿಗಿಂತ ಹೆಚ್ಚಿನ ದರಕ್ಕೆ ಸಿಮೆಂಟ್ ಮತ್ತಿತರ ಸಾಮಗ್ರಿ ಮಾರಾಟ ಮಾಡುತ್ತಿದ್ದಾರೆ. ಕ್ರಮ ಕೈಗೊಳ್ಳಬೇಕು.
–ರಾಮ್‌ರಾವ್ ಹಾರನಹಳ್ಳಿ.
ಜಿಲ್ಲಾಧಿಕಾರಿ ಅವರ ಬಳಿ ಚರ್ಚಿಸಲಾಗುವುದು. ಅಂಥವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು.
* ಗೊಬ್ಬರಕ್ಕೆ ಸಹಾಯಧನ ನೀಡಿದರೆ ಈ ಸಂಕಷ್ಟದ ಸಮಯದಲ್ಲಿ ರೈತರಿಗೆ ಅನುಕೂಲವಾಗುತ್ತದೆ. ಹೊಳೆಹೊನ್ನೂರು ಹೆದ್ದಾರಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕಿದೆ.
–ರೇಣುಕೇಶ್ ಸಾಗರ್, ಹೊಳೆಹೊನ್ನೂರು.
ಗೊಬ್ಬರಕ್ಕೆ ಸಹಾಯಧನ ನೀಡುವ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು. ಹೆದ್ದಾರಿ ಕಾಮಗಾರಿ ಶೀಘ್ರ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು.
* ಕಣ್ಣಿನ ಸಮಸ್ಯೆ ಇದೆ. ಆಸ್ಪತ್ರೆಗಳು ಬಾಗಿಲುತೆರದಿಲ್ಲ. ಸಮಸ್ಯೆಯಾಗಿದೆ.
–ವಿಶ್ವನಾಥ್ ನಾಯರ್, ಶಿವಮೊಗ್ಗ.
ಬಹುತೇಕ ಆಸ್ಪತ್ರೆಗಳು ತೆರೆದಿವೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತದೆ. ಭೇಟಿ ನೀಡಿ.
* ಶಿವಮೊಗ್ಗದಲ್ಲಿ ಆಕಾಶವಾಣಿ ಕೇಂದ್ರದ ಅಗತ್ಯವಿದೆ. ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಯಿಂದ ಜನರಿಗೆ ಹೆಚ್ಚಿನ ತೊಂದರೆಯಾಗಿದೆ.
–ವಿನುತಾ ಮುರಳೀಧರ್, ತೀರ್ಥಹಳ್ಳಿ.
ಹೌದು. ಶಿವಮೊಗ್ಗದಲ್ಲಿ ಆಕಾಶವಾಣಿ ಕೇಂದ್ರದ ಅಗತ್ಯವಿದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿರುವೆ. ಬಿಎಸ್ಎನ್‌ಎಲ್ ಸಮಸ್ಯೆ ಗಮನದಲ್ಲಿದೆ. ಪರಿಹಾರ ದೊರಕಿಸಲು ಪ್ರಯತ್ನಿಸುವೆ.
* ಕೆರೆಹಳ್ಳಿಯ ದೊಡ್ಡಕೆರೆ ಸಂರಕ್ಷಣೆಗೆ ಸುರಕ್ಷಾ ತಡೆಗೋಡೆ ಅಗತ್ಯವಿದೆ.
–ಸುನಿಲ್, ಕೆರೆಹಳ್ಳಿ, ಸೊರಬ ತಾ.
ಖಂಡಿತ. ಅಧಿಕಾರಿಗಳ ಜತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
* ಇರುವ ಒಂದು ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹಲವು ತಿಂಗಳಾಗಿದೆ. ದುರಸ್ತಿಗೆ ಸೂಚಿಸಿ.
–ಭರತ್ ಸಿದ್ಲೀಪುರ, ಭದ್ರಾವತಿ ತಾ.
ಇದು ರಾಜ್ಯವ್ಯಾಪಿ ಸಮಸ್ಯೆ. ಬೆಂಗಳೂರಿನಲ್ಲಿ ಈ ಕುರಿತು ಈಗಾಗಲೇ ಸಭೆ ನಡೆಸಲಾಗಿದೆ. ಶೀಘ್ರ ದುರಸ್ತಿ ಕಾರ್ಯ ಆರಂಭಿಸಲಾಗುವುದು.
* ಶಿವಮೊಗ್ಗ ಗ್ರೀನ್ ಜೋನ್‌ನಲ್ಲಿದೆ. ಅಂಗಡಿಗಳನ್ನು ಎಲ್ಲೆಡೆ ಅರ್ಧ ದಿನ ತೆರೆಯಲು ಅವಕಾಶವಿದೆ. ಎಂಪಿಎಂ, ವಿಐಎಸ್ಎಲ್ ಮಾತ್ರ ಬಾಗಿಲು ಮುಚ್ಚಿವೆ.
–ಶಿವಪ್ರಸಾದ್, ಭದ್ರಾವತಿ.
ಇಡೀ ದೇಶ ಸಂಕಷ್ಟದಲ್ಲಿದೆ. ಸ್ವಲ್ಪ ದಿನ ಕಾಯುವುದು ಒಳ್ಳೆಯದು.
* ರಸ್ತೆ ಅರ್ಧ ಆಗಿದೆ. ಪೂರ್ಣಗೊಳಿಸಲು ಸಹಾಯ ಮಾಡಿ.
–ಚಂದ್ರಪ್ಪ, ರಿಪ್ಪನ್‌ಪೇಟೆ.
ರಸ್ತೆ ಪೂರ್ಣಗೊಳಿಸಲು ಸ್ಥಳದಲ್ಲೇ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
* ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯದ ಕಾರಣ ಆತಂಕಕ್ಕೆ ಒಳಗಾಗಿದ್ದಾರೆ.
–ಕವಿತಾ ಭದ್ರಾವತಿ.
ಪರೀಕ್ಷೆಗೂ ಮೊದಲು ಮಕ್ಕಳ ಆರೋಗ್ಯ ಮುಖ್ಯ. ಪರೀಕ್ಷೆ ನಡೆಸುವ ಕುರಿತು ಈಗಾಗಲೇ ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ. ತಡವಾದರೂ ಚಿಂತೆ ಇಲ್ಲ. ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿ.
* ತಂದೆಗೆ ಆರೋಗ್ಯ ಸರಿ ಇಲ್ಲ ಆಸ್ಪತ್ರೆಯಲ್ಲಿದ್ದಾರೆ. ಸಹಾಯದ ಅಗತ್ಯವಿದೆ. ಎಎಸ್‌ಐ ಸೌಲಭ್ಯ ಕಲ್ಪಿಸಿರಿ.
–ರಘು, ಶಿವಮೊಗ್ಗ.
ಆಯಷ್ಮಾನ್ ಕಾರ್ಡ್ ಪಡೆಯಿರಿ. ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಕಾಶ್ ಅವರನ್ನು ತಕ್ಷಣ ಸಂಪರ್ಕಿಸಿ ಎಂದು ಮೊಬೈಲ್ ಸಂಖ್ಯೆ ನೀಡಿದರು.
* ಬ್ಯಾಂಕ್‌ಗಳು 10.30ಕ್ಕೆ ತೆರೆಯುತ್ತವೆ. ಪೊಲೀಸರು 11ರ ನಂತರ ಸಂಚರಿಸಲು ಬಿಡುವುದಿಲ್ಲ.
–ದರ್ಶನ್, ಶಿಕಾರಿಪುರ.
ಜಿಲ್ಲಾಧಿಕಾರಿ ಜತೆ ಮಾತನಾಡುವೆ. ಮಧ್ಯಾಹ್ನ 1ರವರೆಗೂ ಬ್ಯಾಂಕ್ ಕೆಲಸಕ್ಕೆ ಹೋಗುವವರಿಗೆ ಅವಕಾಶ ಕೊಡಿಸುವೆ.
ಸಮಸ್ಯೆ ತೋಡಿಕೊಂಡ ಇತರರು
ಭದ್ರಾವತಿಯ ಹುಸೇನ್ ಗುತ್ತಿಗೆ ವೇತನ ಹೆಚ್ಚಳಕ್ಕೆ, ವಿಠಗೊಂಡನಕೊಪ್ಪದ ಶಿವಾನಂದಪ್ಪ ಕೆರೆ ಸಂರಕ್ಷಣೆಗೆ, ಶಿವಮೊಗ್ಗ ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಶಿವಣ್ಣ ಭವನದ ಕಾಮಗಾರಿ ಆರಂಭಕ್ಕೆ, ಸಾಗರದ ಉಮೇಶ್ ಬಿಎಸ್‌ಎನ್‌ಎಲ್ ಬಾಕಿ ವೇತನ ಪಾವತಿಸಲು, ಗಾಂಧಿ ಬಜಾರ್ನ ಸುನಿಲ್ ಅಂಗಡಿ ಮಳಿಗೆ ತೆರೆಯಲು ಅವಕಾಶಕ್ಕೆ, ಶಿವಮೊಗ್ಗದ ಚಂದ್ರಪ್ಪ ಕೃಷಿ ಸನ್ಮಾನ್ ಹಣಕ್ಕೆ, ಭದ್ರಾವತಿಯ ವಿಠಲ ಅವರು ಟ್ಯಾಕ್ಷಿ ಡ್ರೈವರ್‌ಗಳ ಸಹಾಯಕ್ಕೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.