ADVERTISEMENT

ಮಲೆನಾಡ ಆವರಿಸುತ್ತಿದೆ ಬಯಲುಸೀಮೆ ಜಾಲಿ

ಎಂ.ನವೀನ್ ಕುಮಾರ್
Published 9 ಜೂನ್ 2024, 7:03 IST
Last Updated 9 ಜೂನ್ 2024, 7:03 IST
   

ಶಿರಾಳಕೊಪ್ಪ: ಶ್ರೀಗಂಧ ಬೆಳೆಯುತ್ತಿದ್ದ ಮಲೆನಾಡಿನ ಭೂ ಪ್ರದೇಶದಲ್ಲಿ ಈಗ ಜಾಲಿ ಗಿಡ ವ್ಯಾಪಕವಾಗಿ ಬೆಳೆಯುತ್ತಿದೆ.

ಉತ್ತರ ಕರ್ನಾಟಕದ ಜಿಲ್ಲೆಗಳ ಬಯಲು ಪ್ರದೇಶದಲ್ಲಿ ನದಿದಡ, ಹಳ್ಳಕೊಳ್ಳ, ಕೋಟೆ, ಕಂದಕ ಸೇರಿದಂತೆ ಖಾಲಿ ಪ್ರದೇಶದಲ್ಲಿ ನೀರಿಲ್ಲದೆ, ಸಂರಕ್ಷಣೆಯಿಲ್ಲದೆ ಬರಡು ಭೂಮಿಯಲ್ಲಿ ಜಾಲಿಗಿಡ ಬೆಳೆಯುತ್ತಿತ್ತು. ಇದು ಭೂಮಿಯ ಆಳಕ್ಕೆ ತನ್ನ ಬೇರನ್ನು ಚಾಚುವ ಮೂಲಕ ನೀರು, ಪೋಷಕಾಂಶ ಹಾಗೂ ಲವಣಗಳನ್ನು ಇತರೆ ಸಸ್ಯಗಳಿಗೆ ಸಿಗದಂತೆ ಕಬಳಿಸುವ ಗುಣಲಕ್ಷಣ ಹೊಂದಿದೆ. 

ಶಿವಮೊಗ್ಗ ಜಿಲ್ಲೆಯ ಗಡಿಯನ್ನು ದಾಟಿ ಹಾವೇರಿ ಜಿಲ್ಲೆ ಪ್ರವೇಶಿಸುತ್ತಿದಂತೆ ಜಾಲಿ ಗಿಡಗಳು ಕಾಣಸಿಗುತ್ತಿದ್ದವು. ಆದರೀಗ ಒಂದು ಕಾಲದಲ್ಲಿ ಭತ್ತದ ಕಣಜವಾಗಿದ್ದ, ನೈಸರ್ಗಿಕವಾಗಿ ಶ್ರೀಗಂಧ ಬೆಳೆಯುತ್ತಿದ್ದ ಶಿಕಾರಿಪುರ ತಾಲ್ಲೂಕಿನ ವಿವಿಧೆಡೆ ಜಾಲಿ ಮರಗಳು ಬೆಳೆದು ನಿಂತಿವೆ. ಐತಿಹಾಸಿಕ ಬಳ್ಳಿಗಾವಿ ರಸ್ತೆಯ ಕೆರೆ ಏರಿಯಿಂದ ಹಿಡಿದು ಶಿರಾಳಕೊಪ್ಪ, ಉಡುಗಣಿ, ಶಿಕಾರಿಪುರದ ಹೆದ್ದಾರಿಯ ಇಕ್ಕೆಲಗಳಲ್ಲಿ ಜಾಲಿ ಮರಗಳನ್ನು ಕಾಣಬಹುದಾಗಿದೆ.

ADVERTISEMENT

ಕಳೆದ ಏಪ್ರಿಲ್‌, ಮೇ ತಿಂಗಳ ಬೇಸುಗೆ ಅವಧಿಯಲ್ಲಿ ಮಲೆನಾಡಿನ ತಾಪಮಾನ ಈಗ 40 ಡ್ರಿಗ್ರಿ ದಾಟಿತ್ತು. ಅರಣ್ಯದಲ್ಲಿ ಈಗ ಕಾಡು ಜಾತಿಯ ಮರಗಳಾದ ನೇರಲು, ಹೆಬ್ಬಲಸು, ಮತ್ತಿ, ನಂದಿ, ಹುನಾಲು, ಬೀಟೆ, ದೇವದಾರು ಮಾಯವಾಗಿವೆ. ಹಸಿರು ಹೊದಿಕೆಯ ಹಾಸಿ ಭೂಮಿಯ ತಾಪಮಾನ ಹೆಚ್ಚಾಗದಂತೆ ಕಾಪಾಡುತ್ತಿದ್ದ ಹುಲ್ಲುಗಾವಲು ಈಗ ಕಾಣೆಯಾಗಿದೆ. ಭೂಮಿಯಲ್ಲಿ ಧಗೆ ಹೆಚ್ಚಾಗಿದೆ. ನವಿಲು, ಚಿರತೆ, ಮಂಗಗಳು ಆಹಾರ ಸಿಗದೇ ಕಾಡು ಬಿಟ್ಟು ನಾಡಿನತ್ತ ನುಗ್ಗುತ್ತಿವೆ. ಪರಿಸರದ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಲೆನಾಡು ಬರಡಾಗುತ್ತಿದೆಯೇ ಎಂಬ ಆತಂಕ ಮೂಡುತ್ತಿದೆ. ಆದಕಾರಣ ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳಲು ನೈಸರ್ಗಿಕ ಅರಣ್ಯ ಸಂರಕ್ಷಣೆ ಅಗತ್ಯ ಎಂದು ಪರಿಸರ ಕಾರ್ಯಕರ್ತ ಶ್ರೀಪಾದ ಬಿಚ್ಚುಗತ್ತಿ ತಿಳಿಸಿದ್ದಾರೆ.

ಜಾಲಿ ಗಿಡದ ಬಗ್ಗೆ..

ಜಾಲಿಯು ಅನೇಕ ಪ್ರಭೇದಗಳನ್ನು ಒಳಗೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿಗಳು ಭಾರತಕ್ಕೆ ಬರುವಾಗ ತಮ್ಮ ಹಡಗುಗಳಿಗೆ ಇಂಧನ ಪೂರೈಸಲು ಈ ಜಾಲಿಯ ಮರವನ್ನು ಆಶ್ರಯಿಸುತ್ತಿದ್ದರು. ಮೂಲತಃ ಇದು ದಕ್ಷಿಣ ಅಮೆರಿಕದ ಅಮೆಜಾನ್ ಕಾಡುಗಳಲ್ಲಿ ಕಂಡು ಬರುವ ಕ್ಯಾಕ್ಟಸ್ ಮುಳ್ಳು ಜಾತಿಯ ಸಸ್ಯ ಸಂಕುಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.