ಸಾಗರ: ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೇ ತ್ಯಾಗ ಮಾಡಿದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿಯ ಹಕ್ಕು ನೀಡಲು ಇರುವ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಇರುವ ಕಂಟಕಗಳು ದೂರವಾಗುತ್ತಲೆ ಇಲ್ಲ.
ನೊಂದವರ ಬದುಕಿಗೆ ನೆಮ್ಮದಿ ನೀಡಬೇಕಾದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ವಿಷಯದಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಿರುವುದು ರಾಜಕೀಯ ಸಂಘರ್ಷಕ್ಕೆ ವೇದಿಕೆ ಒದಗಿಸಿದೆ.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಅರಣ್ಯಭೂಮಿ ಹಂಚಿಕೆ ಮಾಡಿ ಹೊರಡಿಸಿದ್ದ 56 ಅಧಿಸೂಚನೆಗಳನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಈಚೆಗೆ ಆದೇಶ ಹೊರಡಿಸಿದೆ. ಇದು ಮಲೆನಾಡಿನ ಎರಡು ಸಾವಿರಕ್ಕೂ ಹೆಚ್ಚು ಮುಳುಗಡೆ ಸಂತ್ರಸ್ತರ ಕುಟುಂಬಕ್ಕೆ ‘ಶಾಕ್’ ನೀಡಿದೆ.
ಕೇಂದ್ರ ಸರ್ಕಾರದ ಅನುಮತಿ ಪಡೆಯದೇ ಅರಣ್ಯಭೂಮಿಯನ್ನು ಕಂದಾಯ ಭೂಮಿಯಾಗಿ ಡಿನೋಟಿಫಿಕೇಷನ್ ಮಾಡಿರುವ ಕಾರಣ ಹೈಕೋರ್ಟ್ ನೀಡಿರುವ ಆದೇಶ ಭೂಮಿಯ ಹಕ್ಕು ಪಡೆಯುವ ನಿರೀಕ್ಷೆಯಲ್ಲಿದ್ದ ಸಂತ್ರಸ್ತರ ಕನಸಿಗೆ ಅಡ್ಡಿಯಾಗಿದೆ. ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ 6,458 ಎಕರೆ ಪ್ರದೇಶದ ಭೂಮಿಯ ಪಹಣಿಯಲ್ಲಿ ಅರಣ್ಯ ಇಲಾಖೆಯ ಹೆಸರು ನಮೂದು ಆಗಲಿದೆ.
ಮಲೆನಾಡಿನಲ್ಲಿ 50ರ ದಶಕದ ಮಧ್ಯ ಭಾಗದಲ್ಲಿ ಹಾಗೂ 60ರ ದಶಕದ ಆರಂಭದಲ್ಲಿ ಮಡೆನೂರು, ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣಕ್ಕಾಗಿ ಈ ಭಾಗದ ಜನರನ್ನು ನಿರ್ವಸತಿಗರನ್ನಾಗಿ ಮಾಡಲಾಗಿತ್ತು. ‘ನಿಮ್ಮ ಮನೆ ಇರುವ ಗ್ರಾಮಕ್ಕೆ ರಸ್ತೆ ಇದ್ದರೆ ಸಾಮಾನು ಸಾಗಿಸಲು ಲಾರಿ ಕಳುಹಿಸುತ್ತೇವೆ. ಇಲ್ಲದಿದ್ದರೆ ನೀವೇ ಸಾಗಿಸಿ ಕೂಡಲೆ ಗ್ರಾಮಗಳನ್ನು ಬಿಡಬೇಕು. ಶೀಘ್ರದಲ್ಲೆ ಜಲಾಶಯದ ನೀರು ನಿಮ್ಮ ಗ್ರಾಮಗಳನ್ನು ಮುಳುಗಿಸಲಿದೆ’ ಎಂದು 1959-60ರಲ್ಲಿ ಕೆಪಿಸಿಯಿಂದ ಗ್ರಾಮಸ್ಥರಿಗೆ ನೋಟಿಸ್ ನೀಡಲಾಗಿತ್ತು.
ಹೀಗಾಗಿ ಗ್ರಾಮಸ್ಥರು ಅನಿವಾರ್ಯವಾಗಿ ತಾವು ಹುಟ್ಟಿ ಬೆಳೆದ ಊರು ತ್ಯಜಿಸಬೇಕಾಯಿತು. ಹೀಗೆ ಸಂತ್ರಸ್ತರಾದವರಿಗೆ ಸಾಗರ, ಸೊರಬ, ಹೊಸನಗರ, ಶಿವಮೊಗ್ಗ, ಭದ್ರಾವತಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಮಿ ನೀಡಿ ಪುನರ್ವಸತಿ ಕಲ್ಪಿಸಲಾಗಿದೆ.
ಸಂತ್ರಸ್ತರಿಗೆ ಭೂಮಿಯ ಹಕ್ಕು ನೀಡಲು 1961ರಿಂದ 1967ರವರೆಗೆ 13,800 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ತನ್ನ ಸುಪರ್ದಿಯಿಂದ ಬಿಡುಗಡೆ ಮಾಡಿ ಈ ಪ್ರದೇಶ ಮುಳುಗಡೆ ಸಂತ್ರಸ್ತರಿಗಾಗಿ ಕಾಯ್ದಿರಿಸಿದ ಜಾಗ ಎಂದು ಘೋಷಿಸಿದೆ. ಆದರೆ ಈವರೆಗೂ ಸಂತ್ರಸ್ತರಿಗೆ ಭೂಮಿಯ ಹಕ್ಕು ದೊರೆತಿಲ್ಲ.
2016ನೇ ಸಾಲಿನಲ್ಲಿ ಅಂದಿನ ರಾಜ್ಯ ಸರ್ಕಾರ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಪರಿಹಾರ ಒದಗಿಸಲು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಮದನ್ ಗೋಪಾಲ್ ಹಾಗೂ ಇತರ ಅಧಿಕಾರಿಗಳ ತಂಡ ಮುಂದಾಗಿತ್ತು. ಒಂದು ವರ್ಷ ಕಾಲ ವಿಸ್ತೃತ ಅಧ್ಯಯನ ನಡೆಸಿದ ಈ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಈ ವರದಿಯ ಶಿಫಾರಸಿನಂತೆ 2017ನೇ ಸಾಲಿನ ಫೆ. 23ರಂದು ರಾಜ್ಯ ಸರ್ಕಾರ ಮುಳುಗಡೆ ಸಂತ್ರಸ್ತರಿಗೆ ಭೂಮಿಯ ಹಕ್ಕು ನೀಡುವ ಉದ್ದೇಶದಿಂದ 13,600 ಎಕರೆ ಪ್ರದೇಶವನ್ನು ಡಿನೋಟಿಫಿಕೇಷನ್ ಮಾಡುವ ಆದೇಶ ಹೊರಡಿಸಿತ್ತು.
ರಾಜ್ಯದಲ್ಲಿ ಅರಣ್ಯ ಕಾಯ್ದೆ ಜಾರಿಗೆ ಬಂದದ್ದು 1969ರಲ್ಲಿ. ಅರಣ್ಯ ಸಂರಕ್ಷಣಾ ಕಾಯ್ದೆ 1980ರಲ್ಲಿ ಜಾರಿಯಾಗಿದೆ. ಅಲ್ಲಿಯವರೆಗೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇತ್ತು. ಕರ್ನಾಟಕದಲ್ಲಿ ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಇಲಾಖೆ ಭೂಮಿಯನ್ನು 1959ರಿಂದ 64ರ ಅವಧಿಯಲ್ಲಿ ಬಿಡುಗಡೆ ಮಾಡಿದ್ದರಿಂದ ಡಿನೋಟಿಫಿಕೇಷನ್‌ಗೆ ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ ಎಂಬುದು ಹಿಂದಿನ ಸರ್ಕಾರದ ನಿಲುವು.
ಕೇಂದ್ರ ಸರ್ಕಾರದ ಅನುಮತಿ ಪಡೆಯದೇ ಡಿನೋಟಿಫಿಕೇಷನ್ ಮಾಡಿರುವ ಕ್ರಮ ಸರಿಯಲ್ಲ ಎಂದು ಹೊಸನಗರ ತಾಲ್ಲೂಕಿನ ಬ್ರಹ್ಮೇಶ್ವರದ ಗಿರೀಶ್ ಆಚಾರ್ ರಾಜ್ಯದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 2021ರ ಮಾರ್ಚ್ 4ರಂದು ಹೈಕೋರ್ಟ್ ಈ ಅರ್ಜಿ ಮಾನ್ಯ ಮಾಡಿ ಡಿನೋಟಿಫಿಕೇಷನ್ ರದ್ದುಗೊಳಿಸಿದೆ.
ಅನುಮತಿಗೆ ವಿಳಂಬ ಏಕೆ?
ಹೈಕೋರ್ಟ್‌ನ ಆದೇಶದ ಕಾರಣ 2021ರ ಸೆ. 23ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಭೆ ಕರೆದು ಡಿನೋಟಿಫಿಕೇಷನ್‌ಗೆ ಕೇಂದ್ರದ ಅನುಮತಿ ಪಡೆಯಲು ಪ್ರಸ್ತಾವ ಕಳುಹಿಸಲು ತೀರ್ಮಾನವಾಗಿತ್ತು. ಆದರೆ ಈವರೆಗೂ ಅದು ಆಗದಿರುವುದರಿಂದ ಅರಣ್ಯ ಇಲಾಖೆ ಈಗ ಭೂ ಹಂಚಿಕೆಯ 56 ಅಧಿಸೂಚನೆ ರದ್ದುಗೊಳಿಸಿದೆ ಎನ್ನುತ್ತಾರೆ ತೀ.ನ. ಶ್ರೀನಿವಾಸ್. ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಮುಳುಗಡೆ ಸಂತ್ರಸ್ತರ ಪರವಾಗಿ ಸಮರ್ಪಕವಾಗಿ ವಾದ ಮಂಡಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಡಿನೋಟಿಫಿಕೇಷನ್ ಆದೇಶ 2017ರಲ್ಲಿ ಆಗಿದೆ. ಹೈಕೋರ್ಟ್ ಆದೇಶ ಆಗಿರುವುದು 2021ರ ಮಾರ್ಚ್‌ನಲ್ಲಿ. ಕೇಂದ್ರದಿಂದ ಅನುಮತಿ ಪಡೆಯಲು ನ್ಯಾಯಾಲಯದ ತೀರ್ಪು ಅಡ್ಡ ಬರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದರೂ ಅನುಮತಿ ಪಡೆಯುವಲ್ಲಿ ವಿಳಂಬ ಏಕೆ ಎಂಬುದು ಕಾಂಗ್ರೆಸ್ ಮುಖಂಡರ ಪ್ರಶ್ನೆ.
ಮುಳುಗಡೆಯಿಂದತತ್ತರಿಸಿದ ಹೊಸನಗರ
–ರವಿ ನಾಗರಕೂಡಿಗೆ
ಹೊಸನಗರ: ತಾಲ್ಲೂಕಿನ ನಗರ ಹೋಬಳಿಯಲ್ಲಿ ಮಾಣಿ, ವರಾಹಿ, ಚಕ್ರಾ, ಸಾವೇಹಕ್ಕಲು ಜಲಾಶಯಗಳ ನಿರ್ಮಾಣದಿಂದ ಇಲ್ಲಿನ ಪ್ರಾಕೃತಿಕ ಸೌಂದರ್ಯ ನಾಶವಾಗಿದ್ದಲ್ಲದೆ ಭೌಗೋಳಿಕವಾಗಿ ತಾಲ್ಲೂಕು ಅಸ್ತಿತ್ವ ಕಳೆದುಕೊಂಡಿತು.
ನಾಲ್ಕು ಜಲಾಶಯಗಳಿಂದ ಒಟ್ಟು 1,525 ಖಾತೆದಾರ ಕುಟುಂಬಗಳು ಸಂತ್ರಸ್ತವಾದವು. ಅವರನ್ನು ನಂಬಿಕೊಂಡಿದ್ದ 3,800ಕ್ಕೂ ಹೆಚ್ಚು ಕುಟುಂಬಗಳು ಸಂತ್ರಸ್ತರಾದರು. ಇನ್ನೂ ಲಿಂಗನಮಕ್ಕಿ ಜಲಾಶಯದಿಂದಕಸಬಾ ಹೋಬಳಿಯಲ್ಲಿನ ಸಾವಿರಾರು ಕುಟುಂಬಗಳು ನಿರಾಶ್ರಿತವಾಗಿವೆ.
ಇವರಲ್ಲಿ 3,800 ಕುಟುಂಬಗಳಿಗೆ ಅಷ್ಟೋ ಇಷ್ಟೋ ಪರಿಹಾರಸಿಕ್ಕಿ ಕೆಲವರು ಊರು ಬಿಟ್ಟು ಬದುಕು ಕಟ್ಟಿಕೊಂಡರು. ಮತ್ತೆ ಕೆಲವರು ಇಲ್ಲೇ ಹೇಗೋ ಬದುಕುತ್ತಿದ್ದಾರೆ. ಆದರೆ ಖಾತೆದಾರ ಸಂತ್ರಸ್ತರಿಗೆ ಸೂಕ್ತ ಪರಿಹಾರ ಲಭ್ಯವಾಗಿಲ್ಲ.
ಕನಸಿನ ಸೂರಿಗೆ ನೂರೆಂಟು ವಿಘ್ನ
–ವಿ. ನಿರಂಜನ್
ತೀರ್ಥಹಳ್ಳಿ: ರಾತ್ರೋ ರಾತ್ರಿ ವಾಸವಿದ್ದ ಮನೆಗಳಿಂದ ಗ್ರಾಮದ ಜನರನ್ನು ಎತ್ತಂಗಡಿ ಮಾಡಿ ಕಾಡಿಗೆ ಬಿಟ್ಟ ಗೋಳು ಆರೇಳು ದಶಕ ಕಳೆದರೂ ಇನ್ನು ಮುಂದುವರಿದಿದೆ. ಕೆಪಿಸಿ ಸಿಬ್ಬಂದಿಯೇ ‘ಇಲ್ಲಿ ಮನೆ ಮಾಡಿಕೊಳ್ಳಿ’ ಎಂದು ತಾಕೀತು ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದರು. ಇಷ್ಟೆಲ್ಲ ಆಗಿದ್ದರೂ ಶರಾವತಿ ಸಂತ್ರಸ್ತರ ಪಾಡು ಇಂದಿಗೂ ಶೋಚನೀಯ.
ಹೈಕೋರ್ಟ್ ಆದೇಶ ಪಾಲನೆ ಭಾಗವಾಗಿ 2022ರ ಸೆ. 28ರಂದು 2017ರ ಡಿನೋಟಿಫಿಕೇಷನ್ ಆದೇಶದಂತೆ ಮಂಜೂರಾಗಿದ್ದ 9,932 ಎಕರೆ ಪ್ರದೇಶ ರದ್ದುಪಡಿಸಲಾಗಿದೆ. ಆದೇಶದ ನಿಮಿತ್ತ ಹೊರಡಿಸಲಾಗಿರುವ 56 ಅಧಿಸೂಚನೆಗಳು ರದ್ದಾಗಿವೆ. ಬಹುತೇಕ 1954ರಿಂದ ಸಂತ್ರಸ್ತರಿಗೆ ಮಂಜೂರಾದ ಎಲ್ಲಾ ಭೂಮಿ ಅರಣ್ಯದ ಪಾಲಾಗಲಿದೆ.
ಈ ನಡುವೆ ತೀರ್ಥಹಳ್ಳಿ, ಹೊಸನಗರ ಗಡಿ ಭಾಗದಲ್ಲಿ ವರಾಹಿಹಿನ್ನೀರು ಜಲ ವಿದ್ಯುತ್ ಯೋಜನೆಗೆ ಭೂಮಿ ಬಿಟ್ಟ ಸಂತ್ರಸ್ತರ ಗೋಳು ಬಗೆಹರಿದಿಲ್ಲ. ಯೋಜನೆಗಾಗಿ 55 ವರ್ಷಗಳ ಹಿಂದೆ ಗುರುತಿಸಿದಭೂ ಪ್ರದೇಶ ವಿವಾದಕ್ಕೀಡಾಗಿದೆ.
ರೈತರ ಖಾತೆ ಜಮೀನಿನ ಪಕ್ಕದಲ್ಲಿರುವ ಮುಳುಗಡೆ ಪ್ರದೇಶಎಂದು ಗುರುತಿಸಿದ ಮುಳುಗದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದು ಅದನ್ನು ಸಂತ್ರಸ್ತ ಕುಟುಂಬಕ್ಕೆ ವಾಪಸ್ ನೀಡಬೇಕು. 1970ರಸಂದರ್ಭ ಬೃಹತ್ ಬೆಲೆಬಾಳುವ ಮರಗಳ ಮೇಲೆ ಕಣ್ಣಿಟ್ಟು ಹೆಚ್ಚಿನ ಭೂ ಗುರುತಿಸಿದ್ದಾರೆ. ಸರ್ವೆ, ಕಂದಾಯ, ಅರಣ್ಯ ಇಲಾಖೆ, ಕರ್ನಾಟಕವಿದ್ಯುತ್ ನಿಗಮದ ಕರ್ತವ್ಯಲೋಪ ಎದ್ದು ತೋರುತ್ತಿದೆ ಎಂಬ ದೂರು ಕೇಳಿಬರುತ್ತಿದೆ.
***
ನಾನು ಕೂಡ ಶರಾವತಿ ಮುಳುಗಡೆ ಸಂತ್ರಸ್ತ ಕುಟುಂಬಕ್ಕೆ ಸೇರಿದವನಾಗಿರುವುದರಿಂದ ಅವರ ಸಂಕಷ್ಟದ ಅರಿವು ಇದೆ. ಸಮಸ್ಯೆಗೆ ಖಂಡಿತ ಪರಿಹಾರ ದೊರಕುತ್ತದೆ.
–ಎಚ್. ಹಾಲಪ್ಪ ಹರತಾಳು, ಶಾಸಕ, ಸಾಗರ
***
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ 2017ರಲ್ಲಿ ಡಿನೋಟಿಫಿಕೇಷನ್ ಆದೇಶ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಅನುಮತಿ ಪಡೆಯಲು ರಾಜ್ಯ ಸರ್ಕಾರ ಮನಸ್ಸು ಮಾಡಿದ್ದರೆ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ.
–ಗೋಪಾಲಕೃಷ್ಣ ಬೇಳೂರು, ಮಾಜಿ ಶಾಸಕ, ಸಾಗರ
***
ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಮದನ್ ಗೋಪಾಲ್ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಇಲ್ಲದಿದ್ದರೆ ಸಂತ್ರಸ್ತರ ಶಾಪ ಸರ್ಕಾರಕ್ಕೆ ತಟ್ಟದೇ ಇರದು.
–ತೀ.ನ. ಶ್ರೀನಿವಾಸ್, ಮಲೆನಾಡು ಭೂರಹಿತ ರೈತರ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ
***
ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಭೂಮಿ ಮಂಜೂರು ಮಾಡುವ ಅವಕಾಶ ಇದ್ದರೂ ಮಾಡುತ್ತಿಲ್ಲ. ಇದಕ್ಕೆ ಸಂತ್ರಸ್ತ ಕುಟುಂಬಗಳು ಪ್ರತಿಭಟನೆ ಮೂಲಕವೇ ಉತ್ತರಿಸಬೇಕು.
–ಮುಡುಬ ರಾಘವೇಂದ್ರ, ತೀರ್ಥಹಳ್ಳಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
***
ಮಾಣಿ ಡ್ಯಾಂನಿಂದ ನಮ್ಮೂರು ಮಾಸ್ತಿಕಟ್ಟೆಯ ತೋಟ ಮುಳುಗಡೆ ಆಯ್ತು. ಸರ್ಕಾರ ಪುನರ್ವಸತಿ ರೂಪದಲ್ಲಿ ಕೊಟ್ಟ ಶಿವಮೊಗ್ಗದ ಬಳಿಯ ಜಾಗದಲ್ಲಿ ಯಾರೋ ಇದ್ದರು. ಅವರಿಂದ ಭೂಮಿ ಬಿಡಿಸಿಕೊಳ್ಳಲು ಕೋರ್ಟ್‍ನಲ್ಲಿ ಹೋರಾಟ ನಡೆಯುತ್ತಿದೆ.
–ಚಿದಂಬರ ಜೋಯ್ಸ್, ಸಂತ್ರಸ್ತರು, ಮಾಸ್ತಿಕಟ್ಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.