ADVERTISEMENT

ರಸ್ತೆ ನಿರ್ಮಾಣ, ಮಲೆನಾಡು ಅಭಿವೃದ್ಧಿಗೆ ಸೋಪಾನ: ನಿತಿನ್ ಗಡ್ಕರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 16:31 IST
Last Updated 22 ಫೆಬ್ರುವರಿ 2024, 16:31 IST
ಶಿವಮೊಗ್ಗದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ಶಿವಮೊಗ್ಗದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ   

ಶಿವಮೊಗ್ಗ: ಹೊಸ ರಸ್ತೆಗಳ ನಿರ್ಮಾಣ, ಹೆದ್ದಾರಿಗಳ ವಿಸ್ತರಣೆಯಿಂದಾಗಿ ಶಿವಮೊಗ್ಗದಲ್ಲಿ ವ್ಯಾಪಾರ, ಕೈಗಾರಿಕೆ, ಶಿಕ್ಷಣ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿ ಆಗಲಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಭವಿಷ್ಯ ನುಡಿದರು.

ಶಿವಮೊಗ್ಗ ಸೇರಿದಂತೆ ಏಳು ಜಿಲ್ಲೆಗಳ (ಬಳ್ಳಾರಿ, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ) ವ್ಯಾಪ್ತಿಯಲ್ಲಿ ₹ 6,168.41 ಕೋಟಿ ಅಂದಾಜು ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಅಮೆರಿಕ ಶ್ರೀಮಂತವಾಗಿರಲು ಅಲ್ಲಿನ ರಸ್ತೆಗಳು ಚೆನ್ನಾಗಿರುವುದೇ ಕಾರಣ ಎಂದು ಅಲ್ಲಿನ ಅಧ್ಯಕ್ಷ ಜಾನ್‌ ಎಫ್.ಕೆನಡಿ ಹೇಳಿದ್ದರು. ಅದೇ ಮಾತು ದೇಶದ ಸಂಪರ್ಕ ಜಾಲದಲ್ಲಿ ಕ್ರಾಂತಿ ಮಾಡಲು ನನಗೆ ಸ್ಫೂರ್ತಿ ಆಗಿದೆ ಎಂದು ಹೇಳಿದ ಗಡ್ಕರಿ, ಕರ್ನಾಟಕ ಪ್ರಗತಿಶೀಲ, ಸಮೃದ್ದ ರಾಜ್ಯವಾಗಿದೆ. ರಾಜ್ಯದ ವಿಕಾಸದ ವೇಗ ಹೆಚ್ಚಿದಷ್ಟು ದೇಶದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ. ಭಾರತ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದ್ದು ಆತ್ಮ ನಿರ್ಭರ ಭಾರತ ನಮ್ಮೆಲ್ಲರ ಗುರಿಯಾಗಬೇಕು ಎಂದರು.

ADVERTISEMENT

ಸಂಸದ ಬಿ.ವೈ.ರಾಘವೇಂದ್ರ ಜಿಲ್ಲೆಗೆ ಅವಶ್ಯಕ ಕೆಲಸಗಳ ಕುರಿತು ನಿರಂತರವಾಗಿ ನನ್ನ ಸಂಪರ್ಕದಲ್ಲಿದ್ದಾರೆ. 3 ಕಡೆ ಹೈಮಾಸ್ಟ್ ದೀಪಗಳನ್ನು ಕೇಳಿದ್ದು, ಶಿವಮೊಗ್ಗದ ಬೊಮ್ಮನಕಟ್ಟೆ ಹಾಗೂ ಅರಸಾಳು ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗುವುದು ಎಂದರು.

ಕೇಂದ್ರದ ರಸ್ತೆ ನಿಧಿಯಡಿ ₹2000 ಕೋಟಿ ವೆಚ್ಚದ ಕಾಮಗಾರಿ ಕರ್ನಾಟಕಕ್ಕೆ ಮಂಜೂರು ಮಾಡಲಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹೆದ್ದಾರಿ ಜಾಲವನ್ನು ಜೋಡಿಸುವ ಮೂಲಕ ಒಟ್ಟಾರೆ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುವುದರ ಜತೆಗೆ ಅಭಿವೃದ್ಧಿಗೆ ಪೂರಕ ವಾತಾವರಣ ರೂಪಿಸಲಾಗುವುದು ಎಂದು ನಿತಿನ್ ಗಡ್ಕರಿ ಆಶಯ ವ್ಯಕ್ತಪಡಿಸಿದರು.  

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ,  ಕಳೆದ 10 ವರ್ಷಗಳಲ್ಲಿ ನಿತಿನ್ ಗಡ್ಕರಿಯವರು ವಿಶೇಷ ಪ್ರಯತ್ನ ಮಾಡಿ ರಸ್ತೆಗಳನ್ನು ಅಭಿವೃದ್ದಿಪಡಿಸಿದ್ದಾರೆ. ರಾಜ್ಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು 5 ಬಾರಿ ಸಚಿವರನ್ನು ಭೇಟಿ ಮಾಡಿದ್ದು 12 ವರ್ಷದಿಂದ ನನೆಗುದಿಗೆ ಬಿದ್ದಿದ್ದ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ ಎಂದು ತಿಳಿಸಿದರು.

ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಹಾಜರಿದ್ದರು.
 

ಶಿವಮೊಗ್ಗದಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಸದರಾದ ಬಿ.ವೈ.ರಾಘವೇಂದ್ರ ಕೆ.ದೇವೇಂದ್ರಪ್ಪ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ ಸನ್ಮಾನಿಸಿದರು
ಸಿಗಂದೂರು ಸೇತುವೆ ನಿರ್ಮಾಣದ ವೇಳೆ ಶರಾವತಿ ಹಿನ್ನೀರು ಪ್ರದೇಶದಲ್ಲಿ ಗ್ರಾಮ ಪಂಚಾಯ್ತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಆಗಿ ಘೋಷಿಸಿದ ಶ್ರೇಯ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಸಲ್ಲುತ್ತದೆ.
-ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ

ಅಭಿವೃದ್ಧಿಯ ವೇಗಕ್ಕೆ ಮೋದಿಯ ಮಂತ್ರ!

’ಸ್ವಾತಂತ್ರ್ಯ ಬಂದಾಗಿನಿಂದ 2013ರವರೆಗೆ ದೇಶದಲ್ಲಿ 90 ಸಾವಿರ ಕಿ.ಮೀನಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದ್ದರೆ ಬಿಜೆಪಿ ಅಧಿಕಾರಕ್ಕೆ ಬಂದ ಕಳೆದ 9 ವರ್ಷಗಳಲ್ಲಿ 54858 ಕಿ.ಮೀ ಹೆದ್ದಾರಿ ಅಭಿವೃದ್ದಿ ಆಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರದ ಪರಿ‘ ಎಂದು ಸಂಸದ ಬಿ.ವೈ.ರಾಘವೇಂದ್ರ ಬಣ್ಣಿಸಿದರು.

ಸಮಾರಂಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ಪ್ರತಿ ದಿನ 371 ಕಿ.ಮೀ ರಸ್ತೆ ಅಭಿವೃದ್ದಿ ಆಗುತ್ತಿದೆ. ರಸ್ತೆ ಅಭಿವೃದ್ದಿಯಲ್ಲಿ ಭಾರತ ವಿಶ್ವದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ ಎಂದರು. ಸಿಗಂದೂರು ಕೇಬಲ್ ಸೇತುವೆ ರಾಷ್ಟ್ರೀಯ ಹೆದ್ದಾರಿ ಉನ್ನತೀಕರಣ ರಿಂಗ್ ರಸ್ತೆ ಸಚಿವ ನಿತಿನ್ ಗಡ್ಕರಿ ನೆರವು ನೀಡಿದ್ದಾರೆ. ಕೊಡಚಾದ್ರಿಯ ಕೇಬಲ್ ಕಾರ್ ಯೋಜನೆಗೆ ₹380 ಕೋಟಿ ನೀಡಿದ್ದು ಟೆಂಡರ್ ಹಂತದಲ್ಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ₹2250 ಕೋಟಿ ಮೊತ್ತದ ಕಾಮಗಾರಿ ಮಂಜೂರಾತಿ ಪ್ರಕ್ರಿಯೆಯಲ್ಲಿವೆ ಎಂದರು. ಜಿಲ್ಲೆಯಲ್ಲಿ 280 ಬಿಎಸ್‍ಎನ್‍ಎಲ್ ಟವರ್ ಗೆ ಮಂಜೂರಾತಿ ದೊರೆತಿದೆ. 2008 ರಿಂದ ಇಲ್ಲಿಯವರೆಗೆ ಶಿವಮೊಗ್ಗ ಜಿಲ್ಲೆ ರಸ್ತೆ ಮಾತ್ರವಲ್ಲ ಮೆಡಿಕಲ್ ಕಾಲೇಜು ಕೃಷಿ ತೋಟಗಾರಿಕೆ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಕೇಂದ್ರೀಯ ವಿದ್ಯಾಲಯ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ಸಮಗ್ರ ಅಭಿವೃದ್ದಿ ಕಂಡಿದೆ ಎಂದರು.

ಕರ್ನಾಟಕ ಹಸಿರು ಇಂಧನದ ಹಬ್: ಗಡ್ಕರಿ

ಇಥೆನಾಲ್‌ನಿಂದ ವಿಮಾನಗಳಿಗೆ ಇಂಧನ ತಯಾರಿಸಿದ್ದು ಸ್ಪೈಸ್‌ಜೆಟ್ ವಿಮಾನ ಡೆಹರಾಡೂನ್‌ನಿಂದ ದೆಹಲಿಗೆ ಪ್ರಾಯೋಗಿಕವಾಗಿ ಹಾರಾಟ ನಡೆಸಿದೆ. ಇದು ಹಸಿರು ಇಂಧನ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದು ಕಬ್ಬಿನ ಸೋಗೆ ಮಾತ್ರವಲ್ಲ ಭತ್ತದ ಹೊಟ್ಟಿನಿಂದಲೂ ಇಥೆನಾಲ್ ತಯಾರಿಸಬಹುದಾಗಿದೆ. ಇದು ಮುಂದಿನ ದಿನಗಳಲ್ಲಿ ರೈತಾಪಿ ವರ್ಗದ ಬಲವರ್ಧನೆಗೆ ನೆರವಾಗಲಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದರು. ಇಥೆನಾಲ್ ಮಿಥೆನಾಲ್ ಬಯೊಡೀಸೆಲ್ ಬಯೊಎನರ್ಜಿ ಗ್ರೀನ್ ಹೈಡ್ರೋಜನ್ ದೇಶದ ಭವಿಷ್ಯದ ಇಂಧನಗಳಾಗಿವೆ. ಶೀಘ್ರ ಇಂಡಿಯನ್ ಆಯಿಲ್ ಸಂಸ್ಥೆಯ ಮೂಲಕ ದೇಶಾದ್ಯಂತ 400 ಇಥೆನಾಲ್ ಪಂಪ್‌ಗಳನ್ನು ಆರಂಭಿಸಲಾಗುವುದು. ಕರ್ನಾಟಕ ಬಯೋ ಇಂಧನ ಉತ್ಪಾದನೆಯ ಹಬ್ ಆಗಿ ರೂಪುಗೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.