ADVERTISEMENT

ಶಿವಮೊಗ್ಗ: ಸೆಸ್ ಸಂಗ್ರಹ ಕುಸಿತ; 40 ನೌಕರರ ವಜಾ

ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿ ನಂತರ ತಗ್ಗಿದ ವ್ಯಾಪಾರ– ವಹಿವಾಟು

ಗಣೇಶ್ ತಮ್ಮಡಿಹಳ್ಳಿ
Published 5 ನವೆಂಬರ್ 2020, 3:50 IST
Last Updated 5 ನವೆಂಬರ್ 2020, 3:50 IST
ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ
ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ   

ಶಿವಮೊಗ್ಗ: ಕರ್ನಾಟಕ ಕೃಷಿ ಉತ್ಪನ್ನ ಮಾರಾಟ ಕಾಯ್ದೆ ತಿದ್ದುಪಡಿ ನಂತರ ಎಪಿಎಂಸಿಒಳಗಿನ ವ್ಯಾಪಾರ–ವಹಿವಾಟು ಕುಸಿದಿದೆ. ಸಾಕಷ್ಟು ಆದಾಯವೂ ಖೋತಾ ಆಗಿದೆ. ಆರ್ಥಿಕ ಹೊರೆ ತಗ್ಗಿಸಲು ಶಿವಮೊಗ್ಗ ಎಪಿಎಂಸಿ40 ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ವಜಾಮಾಡಿದೆ.

ಶಿವಮೊಗ್ಗ ಎಪಿಎಂಸಿ ಆದಾಯ, ಬೇಡಿಕೆಗೆ ಅನುಗುಣವಾಗಿ ಹೊರಗುತ್ತಿಗೆ ಆಧಾರದಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ 84 ಹೊರಗುತ್ತಿಗೆ ನೌಕರರನ್ನು ಕೆಲಸಕ್ಕೆ ನೇಮಿಸಿಕೊಂಡಿತ್ತು. ಕಂಪ್ಯೂಟರ್‌ ಆಪರೇಟರ್‌, ಭದ್ರತೆ, ಸ್ವಚ್ಛತಾ ಕಾರ್ಯ, ಶುಲ್ಕ ಸಂಗ್ರಹಣೆ ಕೆಲಸ ನಿರ್ವಹಿಸುತ್ತಿರುವ ಈ ನೌಕರರ ವೇತನಕ್ಕೆ ಸರ್ಕಾರ ಪ್ರತ್ಯೇಕ ಅನುದಾನ ನೀಡುವುದಿಲ್ಲ. ಮಾರುಕಟ್ಟೆ ಶುಲ್ಕ ಮತ್ತು ಬಳಕೆದಾರರ ಶುಲ್ಕದ ರೂಪದಲ್ಲಿ ಎಪಿಎಂಸಿಗಳಿಗೆ ಬರುತ್ತಿದ್ದ ಆದಾಯದಲ್ಲೇ ವೇತನ ಪಾವತಿಸುತ್ತಾ ಬರಲಾಗಿದೆ.

ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ಕಾಯ್ದೆಗೆ ತಿದ್ದುಪಡಿ ತರುವುದಕ್ಕೂಮೊದಲುಎಪಿಎಂಸಿ ಆಡಳಿತ ಮಂಡಳಿಗೆ 
ಮಾರುಕಟ್ಟೆ ಪ್ರಾಂಗಣದೊಳಗೆ ಮತ್ತು ಹೊರಗೆ ನಡೆಯುವ ಕೃಷಿ ಉತ್ಪನ್ನಗಳ ಸಗಟು ವಹಿವಾಟಿಗೆ ಮಾರುಕಟ್ಟೆ ಶುಲ್ಕ ಹಾಗೂ ಬಳಕೆದಾರರ ಶುಲ್ಕ (ಸೆಸ್‌)ಸಂಗ್ರಹಿಸಲು ಅವಕಾಶವಿತ್ತು.

ADVERTISEMENT

ಕಾಯ್ದೆ ತಿದ್ದುಪಡಿ ನಂತರ ಆಡಳಿತ ಮಂಡಳಿಗೆ ಮಾರುಕಟ್ಟೆ ಪ್ರಾಂಗಣದ ಹೊರಗೆ ನಡೆಯುವ ವಹಿವಾಟಿಗೆ ಸೆಸ್‌ ಸಂಗ್ರಹಿಸಲು ಅವಕಾಶಇಲ್ಲವಾಗಿದೆ. ಸೆಸ್‌ ಸಂಗ್ರಹಣೆ ಮಾರುಕಟ್ಟೆ ಪ್ರಾಂಗಣದೊಳಗಿನ ವಹಿವಾಟಿಗೆ ಸೀಮಿತವಾಗಿರುವ ಕಾರಣ ಆದಾಯ ಕಡಿಮೆಯಾಗಿದೆ.

ಕಾಯ್ದೆ ಜಾರಿಗೂ ಮುನ್ನ ಶಿವಮೊಗ್ಗ ಎಂಪಿಎಂಸಿಯಲ್ಲಿ ಒಂದು ತಿಂಗಳಿಗೆ ₹ 4.5 ಕೋಟಿಯಷ್ಟು ಸೆಸ್ ಸಂಗ್ರಹವಾಗುತ್ತಿತ್ತು. ಕಾಯ್ದೆ ಜಾರಿನಂತರ ಸೆಸ್‌ ಸಂಗ್ರಹ₹ 35 ಲಕ್ಷಕ್ಕೆ ಕುಸಿದಿದೆ ಎಂದು ಎಪಿಎಂಸಿ ಅಧ್ಯಕ್ಷ ದುಗ್ಗಪ್ಪ ಗೌಡ
ಹೇಳಿದರು.

ಎಪಿಎಂಸಿ ಆದಾಯವನ್ನು ಸರಿದೂಗಿಸಲು 40 ಹೊರಗುತ್ತಿಗೆ ನೌಕರರಿಗೆ ಕೊಕ್‌ ನೀಡಲಾಗಿದೆ. ಉಳಿದ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ಪರ್ಯಾಯ ಮಾರ್ಗ: ಎಪಿಎಂಸಿ ಕೆಲಸವನ್ನೇ ನಂಬಿಕೊಂಡು ಬದುಕುತ್ತಿದ್ದ ಹೊರಗುತ್ತಿಗೆ ನೌಕರರು ಜೀವನಕ್ಕಾಗಿ ಪರ್ಯಾಯ ಕೆಲಸದ ಮೊರೆಹೋಗಿದ್ದಾರೆ. ಕೆಲವು ನೌಕರರು ದಿನಗೂಲಿ ಕೆಲಸ ಮಾಡುತ್ತಿದ್ದಾರೆ.ಇನ್ನು ಕೆಲವರು ಗಾರ್ಮೆಂಟ್ಸ್, ದಿನಸಿ ಅಂಗಡಿಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.

ಕೃಷಿ ಮಾರುಕಟ್ಟೆ ಮುಚ್ಚುವ ಭೀತಿ

ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಮಾರುಕಟ್ಟೆಯೊಳಗೆ ನಡೆಯುತ್ತಿದ್ದ ವ್ಯಾಪಾರ- ವಹಿವಾಟಿಗೆ ಸಾಕಷ್ಟು ಹೊಡೆತ ಬಿದ್ದಿದೆ.

ಇದರಿಂದಾಗಿ ಮಾರುಕಟ್ಟೆಗಳು ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಭದ್ರಾವತಿ, ಸಾಗರ, ಸೊರಬ, ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ವ್ಯಾಪಾರ– ವಹಿವಾಟು ಪ್ರಮಾಣ ತೀರಾ ತಗ್ಗಿದ್ದು, ಮುಚ್ಚುವ ಹಂತದಲ್ಲಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಎಲ್ಲ ಮಾರುಕಟ್ಟೆಗಳಿಗೂ ಬೀಗ ಬೀಳುವುದಂತೂ ಖಚಿತ ಎನ್ನುತ್ತಾರೆ ಎಪಿಎಂಸಿ ಅಧ್ಯಕ್ಷದುಗ್ಗಪ್ಪ ಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.