ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಶನಿವಾರವೂ ಮುಂದುವರೆದಿದೆ. ತುಂಗಾ, ಭದ್ರಾ, ಲಿಂಗನಮಕ್ಕಿ, ಮಾಣಿ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ಒಳಹರಿವು ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ ಹೊಸನಗರ ತಾಲ್ಲೂಕಿನ ಚಕ್ರಾ ಜಲಾಶಯದ ವ್ಯಾಪ್ತಿಯಲ್ಲಿ ಅತಿಹೆಚ್ಚು 32.5 ಸೆಂ.ಮೀ ಮಳೆ ದಾಖಲಾಗಿದೆ.
ವಾರಾಹಿ ಯೋಜನೆಯ ಜಲಾನಯನ ವ್ಯಾಪ್ತಿಯಾಗಿರುವ ಮಾಸ್ತಿಕಟ್ಟೆಯಲ್ಲಿ 20.5 ಸೆಂ.ಮೀ, ಯಡೂರು 20 ಸೆಂ.ಮೀ, ಮಾಣಿಯಲ್ಲಿ 18.5 ಸೆಂ.ಮೀ, ಹುಲಿಕಲ್‌ನಲ್ಲಿ 18.6 ಸೆಂ.ಮೀ, ಸಾವೇಹಕ್ಲು ಭಾಗದಲ್ಲಿ 13.9 ಸೆಂ.ಮೀ ಮಳೆಯಾಗಿದೆ.
ಒಳಹರಿವು ಹೆಚ್ಚಳ
ಶರಾವತಿ ಜಲಾನಯನ ಪ್ರದೇಶವಾದ ಹೊಸನಗರ, ಸಾಗರ ತಾಲ್ಲೂಕುಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯಕ್ಕೆ 74,514 ಕ್ಯುಸೆಕ್ ನೀರು ಹರಿದುಬರುತ್ತಿದೆ.
ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ 24 ಗಂಟೆಗಳಲ್ಲಿ ನಾಲ್ಕು ಅಡಿಯಷ್ಡು ನೀರಿನ ಮಟ್ಟ ಏರಿಕೆಯಾಗಿದೆ. ಜಲಾಶಯಕ್ಕೆ ದಾಖಲೆ ಪ್ರಮಾಣದ 49,801 ಕ್ಯುಸೆಕ್ ಒಳಹರಿವು ಇದೆ. ಭದ್ರಾ ಜಲಾಶಯದಲ್ಲಿ ಶನಿವಾರ ಬೆಳಿಗ್ಗೆ 6 ಗಂಟೆಗೆ ನೀರಿನ ಮಟ್ಟ 178 ಅಡಿ ಇದೆ. 186 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯ ಭರ್ತಿ ಆಗಲು ಇನ್ನು 8 ಅಡಿ ಬಾಕಿ ಇದೆ.
ಗಾಜನೂರಿನ ತುಂಗಾ ಜಲಾಶಯಕ್ಕೂ ಭಾರೀ ಪ್ರಮಾಣದಲ್ಲಿ ನೀರು ಹರಿವು ಬರುತ್ತಿದೆ. ಜಲಾಶಯ ಭರ್ತಿ ಆಗಿರುವುದರಿಂದ ನದಿಗೆ 70,444 ಕ್ಯುಸೆಕ್ ನೀರು ಬಿಡಲಾಗುತ್ತಿದೆ.
ಹೊಸನಗರ ತಾಲ್ಲೂಕಿನ ಮಾಣಿ ಜಲಾಶಯಕ್ಕೆ 10,799 ಕ್ಯುಸೆಕ್ ಒಳಹರಿವು ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.