ADVERTISEMENT

ಚನ್ನಗಿರಿ: ಹಾಳು ಕೊಂಪೆಯಾಗಿರುವ ಸ್ತ್ರೀಶಕ್ತಿ ಭವನ

ಚನ್ನಗಿರಿಯ ಸಂತೆ ಮೈದಾನದ ಬಳಿ ಪಾಳು ಬಿದ್ದಿದೆ ಕಟ್ಟಡ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 5:48 IST
Last Updated 26 ನವೆಂಬರ್ 2024, 5:48 IST
<div class="paragraphs"><p><strong>ಚನ್ನಗಿರಿ ಪಟ್ಟಣದ ಸಂತೇ ಮೈದಾನದಲ್ಲಿ 2011-12 ನೇ ಸಾಲಿನಲ್ಲಿ ನಿರ್ಮಿಸಿರುವ ಸ್ತ್ರೀ ಶಕ್ತಿ ಭವನ ಹಾಳು ಬಿದ್ದಿರುವುದು.</strong></p></div>

ಚನ್ನಗಿರಿ ಪಟ್ಟಣದ ಸಂತೇ ಮೈದಾನದಲ್ಲಿ 2011-12 ನೇ ಸಾಲಿನಲ್ಲಿ ನಿರ್ಮಿಸಿರುವ ಸ್ತ್ರೀ ಶಕ್ತಿ ಭವನ ಹಾಳು ಬಿದ್ದಿರುವುದು.

   

ಚನ್ನಗಿರಿ: ಪಟ್ಟಣದ ಸಂತೆ ಮೈದಾನದ ಬಳಿ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೇರಿದ ಸ್ತ್ರೀಶಕ್ತಿ ಭವನವು ನಿರ್ವಹಣೆ ಕೊರತೆಯಿಂದಾಗಿ ಹಾಳು ಕೊಂಪೆಯಂತಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಹಲವಾರು ಸ್ತ್ರೀಶಕ್ತಿ ಸಂಘಗಳ ಸದಸ್ಯೆಯರು ಒಂದೆಡೆ ಸೇರಿ ಕಾರ್ಯಕ್ರಮ ನಡೆಸಲು ಸುಸಜ್ಜಿತ ಭವನ ನಿರ್ಮಿಸುವಂತೆ 2010ರಲ್ಲಿ ಅಂದಿನ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಸ್ತ್ರೀಶಕ್ತಿ ಭವನ ನಿರ್ಮಾಣ ಮಾಡಲು ₹ 23 ಲಕ್ಷ ಅನುದಾನ ನೀಡಲಾಗಿತ್ತು. 2011-12ನೇ ಸಾಲಿನಲ್ಲಿ ಅಂದಿನ ಸಂಸದರು ₹ 3 ಲಕ್ಷ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಲು ನೆರವಾಗಿದ್ದು. ಒಟ್ಟಾರೆ ₹ 26 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಭವನ ಲೋಕಾರ್ಪಣೆಯಾಗಿತ್ತು.

ADVERTISEMENT

ಆರಂಭದ ಎರಡು–ಮೂರು ವರ್ಷಗಳಲ್ಲಿ ಈ ಭವನದಲ್ಲಿ ಕಾರ್ಯಕ್ರಮಗಳು ನಡೆದವು. ಇದೇ ಕಟ್ಟಡದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯೂ ಕಾರ್ಯ ನಿರ್ವಹಿಸುತ್ತಿತ್ತು. ಮೂರು ವರ್ಷಗಳ ಹಿಂದೆ ಕಚೇರಿಯನ್ನು ಪಟ್ಟಣದ ಅರಣ್ಯ ಇಲಾಖೆ ಎದುರಿನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿತ್ತು. ಕಚೇರಿಯು ಸ್ಥಳಾಂತರಗೊಂಡ ದಿನದಿಂದ ಸ್ತ್ರೀಶಕ್ತಿ ಭವನದಲ್ಲಿ ಯಾವುದೇ ಕಾರ್ಯಕ್ರಮ ನಡೆದಿಲ್ಲ. ಕಟ್ಟಡವು ಕ್ರಮೇಣ ಹಾಳು ಬೀಳಲು ಶುರುವಾಯಿತು. ಇದೀಗ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಲಕ್ಷಾಂತರ ರೂಪಾಯಿ ಅನುದಾನದಲ್ಲಿ ನಿರ್ಮಿಸಿದ್ದ ಭವನ ಪ್ರಯೋಜನಕ್ಕೆ ಬಾರದಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

‘ಸ್ತ್ರೀಶಕ್ತಿ ಭವನವು ಪಟ್ಟಣದಿಂದ 1.5 ಕಿ.ಮೀ. ದೂರದಲ್ಲಿದೆ. ಭವನದಲ್ಲಿ ಕಾರ್ಯಕ್ರಮಗಳನ್ನು ನಡೆಸಿದರೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು ಇಷ್ಟು ದೂರಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಅಲ್ಲದೆ, ಈ ಕಟ್ಟಡವು ಕೊಳಚೆ ಪ್ರದೇಶದಲ್ಲಿದೆ. ಕಟ್ಟಡದ ಸುತ್ತಮುತ್ತ ಹಂದಿಗಳ ಹಿಂಡು ಹಾಗೂ ದುರ್ವಾಸನೆಯಿದ್ದು, ಮಹಿಳೆಯರು ಬರಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೇಳಿದರು.

ಸ್ಥಳಾವಕಾಶದ ಕೊರತೆ: ಸಿಡಿಪಿಒ

ಪಟ್ಟಣದಿಂದ ದೂರದಲ್ಲಿರುವ ಸ್ತ್ರೀಶಕ್ತಿ ಭವನಕ್ಕೆ ಬರಲು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಸಿಡಿಪಿಒ ಆರ್.ನಿರ್ಮಲ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಖ್ಯೆ 400ಕ್ಕಿಂತ ಹೆಚ್ಚಿದ್ದು, ಕಟ್ಟಡದಲ್ಲಿ ಕಾರ್ಯಕ್ರಮ ನಡೆಸಲು ಜಾಗದ ಕೊರತೆಯಾಗುತ್ತಿದೆ. ಹೀಗಾಗಿ ಬೇರೆ ಕಡೆ ಕಾರ್ಯಕ್ರಮ ಹಾಗೂ ಸಭೆಗಳನ್ನು ನಡೆಸಲಾಗುತ್ತಿದೆ. ಭವನವು ನಮ್ಮ ಇಲಾಖೆಗೆ ಸೇರಿರುವುದರಿಂದ ಸ್ವಚ್ಛತೆಯ ಬಗ್ಗೆ ಗಮನಹರಿಸುತ್ತೇನೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.