ನಾಗರಾಜ್ ಹುಲಿಮನೆ
ಶಿವಮೊಗ್ಗ: ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಟಿ ಹಾಗೂ ಗ್ರಾಮದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕೆಂಬ ಉದ್ದೇಶದಿಂದ ಸರ್ಕಾರವು ನಗರ ಸೇರಿ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರದಿದೆ. ಆದರೆ, ಕೆಲವುನೀವು ಶುದ್ಧೀಕರಣ ಘಟಕಗಳು ನಿರ್ವಹಣೆ ಕೊರತೆಯಿಂದ ಸಾರ್ವಜನಿಕ ಬಳಕೆಗೇ ಬಾರದೆ ಬಾಗಿಲು ಮುಚ್ಚಿವೆ.
ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಪ್ರತಿಯೊಂದು ನೀರಿನ ಘಟಕಕ್ಕೂ ಲಕ್ಷಾಂತರ ರೂಪಾಯಿ ವ್ಯಯಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಡಿಎಲ್), ಶಾಸಕರ ಅನುದಾನ ಹಾಗೂ ಸಹಕಾರ ಸಂಘಗಳ ನೆರವಿನಿಂದ ಶುದ್ಧ ನೀರಿನ ಘಟಕ ನಿರ್ಮಿಸಲಾಗಿದೆ. ಆದರೆ ಕೆಲವು ಘಟಕಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ.
ಬಹುತೇಕ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ. ಕೆಲವು ಭಾಗದಲ್ಲಿ ನಿರ್ವಹಣೆಯನ್ನು ಏಜೆನ್ಸಿಗಳಿಗೆ ವಹಿಸಲಾಗಿದೆ. ಆದರೆ ಕೆಲವು ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಸ್ಥಳೀಯರ ದೂರು.
ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಹಾಗೂ ರಿಪೇರಿಗೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಲೋಖಂಡೆ ಸ್ನೇಹಲ್ ಸುಧಾಕರ್, ಜಿಲ್ಲಾ ಪಂಚಾಯಿತಿ ಸಿಇಒ
‘ಮುಂಗಾರು ಆರಂಭವಾಗಿದ್ದು, ಶೀತ, ಜ್ವರ, ಅತಿಸಾರದಂತಹ ಆರೋಗ್ಯ ಸಮಸ್ಯೆಗಳು ಬಾಧಿಸುವ ಸಂಭವ ಹೆಚ್ಚು. ಸಂಬಂಧಿಸಿದ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕಗಳ ಸಮಪರ್ಕ ನಿರ್ವಹಣೆಗೆ ಗಮನಹರಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಿರ್ಥಹಳ್ಳಿ : ಎಲ್ಲ ಕಾಯಿನ್ ಸ್ವೀಕರಿಸುವುದಿಲ್ಲ!
ಕರ್ನಾಟಕದ ಅತಿ ಹೆಚ್ಚು ಮಳೆ ಸುರಿಯುವ ಮಲೆನಾಡಿನಲ್ಲೂ ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಿದೆ. ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ನಿರ್ಮಿಸಿದ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಕೆಆರ್‌ಡಿಎಲ್‌ನಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ.
ಸಹಕಾರ ಸಂಘ ಆಟೋ ಕಾರು ಚಾಲಕರ ಸಂಘಗಳು ನಿರ್ವಹಣೆ ಮಾಡುತ್ತಿರುವ ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಪಟ್ಟಣ ಪಂಚಾಯಿತಿ ನಿರ್ಮಿಸಿದ ಮುಖ್ಯ ಬಸ್ ನಿಲ್ದಾಣದ ಘಟಕ ಮುಚ್ಚಿದ್ದು ರಿಪೇರಿ ಹಂತದಲ್ಲಿದೆ. ಆಗುಂಬೆ ವೃತ್ತದ ಘಟಕ ಸಾರ್ವಜನಿಕರಿಗೆ ಲಭ್ಯವಿದೆ. ಆಧುನೀಕರಣಗೊಳ್ಳದ ಘಟಕಗಳಿಂದಾಗಿ ಸಾರ್ವಜನಿಕರು ವಿವಿಧ ಬಗೆಯ ಸಮಸ್ಯೆ ಎದುರಿಸುತ್ತಿದ್ದಾರೆ.
₹5 ಮುಖಬೆಲೆಯ ಎಲ್ಲ ಸ್ವರೂಪದ ನಾಣ್ಯಗಳನ್ನೂ ಯಂತ್ರ ಸ್ವೀಕರಿಸುತ್ತಿಲ್ಲ. ಹೆಸರಿಗೆ ಮಾತ್ರ ಶುದ್ಧ ನೀರಿನ ಘಟಕವಾಗಿದ್ದರೂ ಶುದ್ಧತೆ ಇಲ್ಲ. ಹಲವು ಘಟಕಗಳನ್ನು ಪಂಚಾಯಿತಿ ಸದಸ್ಯರು ತಮಗೆ ಅನುಕೂಲವಾಗುವಂತೆ ಮನೆಯ ಬಳಿ ನಿರ್ಮಿಸಿದ್ದಾರೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ಇದೆ ಎಂದು ಯುವ ಮುಖಂಡ ಭರತ್ ಹೂಗಾರ್ ದೂರುತ್ತಾರೆ.
ಘಟಕದ ಸುತ್ತಮುತ್ತಲು ಗಿಡಗಂಟಿಗಳು ಬೆಳೆದಿದ್ದು ಕಾಲಕಾಲಕ್ಕೆ ಸ್ವಚ್ಚತೆ ನಡೆಯುತ್ತಿಲ್ಲ. ನೀರಿನಿಂದ ಬರುವ ಅನೇಕ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ನಡೆಯುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ನೀರಿನ ಬಳಕೆಯ ಕುರಿತಂತೆ ಅರಿವು ಇಲ್ಲದೇ ಇರುವುದರಿಂದ ಘಟಕದ ಬಳಕೆ ತೀರಾ ಕಡಿಮೆ ಪ್ರಮಾಣದಲ್ಲಿ ಇದೆ. ಇದರಿಂದ ಘಟಕವು ಹಾಳಾಗುವಂತಾಗಿದೆ ಎಂದು ಆರೋಪಿಸಿದ್ದಾರೆ.
ಪಟ್ಟಣದಲ್ಲಿ 24/7 ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಸಾರ್ವಜನಿಕರಿಗಾಗಿ 5 ಘಟಕಗಳನ್ನು ಸ್ಥಾಪಿಸಲಾಗಿದೆ. ಚಾಲ್ತಿಯಲ್ಲಿ ಇಲ್ಲದ ಘಟಕಗಳ ಬಗ್ಗೆ ಕೆಆರ್‌ಡಿಎಲ್‌ಗೆ ದೂರು ಸಲ್ಲಿಸಲಾಗಿದೆ.ಸುಶೀಲ ಶೆಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ
ಸಾಗರ: ನಿರ್ವಹಣೆ ಇಲ್ಲದೆ ಸೊರಗಿರುವ ನೀರು ಪೂರೈಕೆ ಘಟಕಗಳು
ಸರ್ಕಾರದ ಯೋಜನೆಯೊಂದು ನಿರ್ವಹಣೆಯ ಕೊರತೆಯಿಂದ ಹೇಗೆ ವಿಫಲವಾಗಬಲ್ಲದು ಎಂಬುದಕ್ಕೆ ಸಾಗರ ತಾಲ್ಲೂಕಿನ ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳೆ ಸಾಕ್ಷಿಯಾಗಿವೆ. ಸಾಗರ ತಾಲ್ಲೂಕಿನಲ್ಲಿ ಒಟ್ಟು 22 ಶುದ್ಧ ಕುಡಿಯುವ ನೀರಿನ ಘಟಕಗಳಿವೆ.
ಗ್ರಾಮೀಣ ಜನರಿಗೆ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು ಕೊಡುವ ಸದುದ್ದೇಶದಿಂದ ಆರಂಭವಾದ ಈ ಘಟಕಗಳ ಸ್ಥಿತಿ ಚಿಂತಾಜನಕವಾಗಿದೆ. ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಲ್ಯಾಂಡ್ ಆರ್ಮಿ ಮತ್ತು ಕೆಲವೆಡೆ ಸ್ಥಳೀಯ ಸಹಕಾರ ಸಂಘಗಳಿಗೆ ಈ ಘಟಕಗಳ ನಿರ್ವಹಣೆಯ ಜವಾಬ್ದಾರಿ ನೀಡಲಾಗಿತ್ತು. ಆದರೆ ನಿರ್ವಹಣೆ ಕುರಿತ ನಿರಾಸಕ್ತಿಯ ಕಾರಣಕ್ಕೆ ಬಹುತೇಕ ಘಟಕಗಳು ನಿಷ್ಕ್ರಿಯಗೊಂಡಿವೆ.
ಗ್ರಾಮ ಪಂಚಾಯಿತಿಗಳು ಕೂಡ ಈ ಘಟಕಗಳ ಸದ್ಭಳಕೆಯತ್ತ ಆಸಕ್ತಿ ತೋರದೆ ಇರುವುದರಿಂದ ಯೋಜನೆ ನನೆಗುದಿಗೆ ಬಿದ್ದಿದ್ದು ಸರ್ಕಾರ ತೊಡಗಿಸಿರುವ ಹಣ ವ್ಯರ್ಥವಾಗಿದೆ. ಗ್ರಾಮಗಳಲ್ಲಿನ ನೀರು ಪೂರೈಕೆಯ ಘಟಕಗಳು ಪುರಾತನ ಕಾಲದ ಅವಶೇಷಗಳಂತೆ ಗೋಚರಿಸುತ್ತಿವೆ. ನೀರಿನ ಮೂಲಗಳನ್ನು ಹುಡುಕದೆ ಸರಿಯಾದ ಸ್ಥಳವನ್ನು ನಿಗದಿ ಮಾಡದೆ ಘಟಕ ಆರಂಭಿಸಿದ್ದು ಯೋಜನೆಯ ವೈಫಲ್ಯಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುವ ಅಭಿಪ್ರಾಯವಿದೆ. ಘಟಕಗಳಿಗೆ ಅಗತ್ಯ ಭದ್ರತೆ ಇಲ್ಲದ ಕಾರಣ ಮೋಟಾರು ಪಂಪ್ ಸೇರಿದಂತೆ ಹಲವು ವಸ್ತುಗಳು ಕಳ್ಳತನವಾದ ಉದಾಹರಣೆಗಳೂ ಇವೆ.
ಲಾಭ ನಷ್ಟದ ಲೆಕ್ಕಾಚಾರ ಇಲ್ಲದೆ ನೀರಿನ ಘಟಕಗಳನ್ನು ನಿರ್ವಹಿಸುವ ಯೋಜನೆ ರೂಪಿಸಿದ್ದರೆ ಅದು ಯಶಸ್ವಿಯಾಗುತ್ತಿತ್ತು. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಯೋಜನೆ ವಿಫಲವಾಗಿದೆ.ಮಲ್ಲಿಕಾರ್ಜುನ ಹಕ್ರೆ, ಸಾಗರ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ
ಸೊರಬ : ಶುದ್ಧ ಕುಡಿಯುವ ನೀರಿನ ಘಕಟಗಳು ನಿರುಪಯುಕ್ತ
ತಾಲ್ಲೂಕಿನಲ್ಲಿ ವರದಾ ಹಾಗೂ ದಂಡಾವತಿ ನದಿಗಳು ಹರಿದರೂ ಪುರಸಭೆ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಸಾಧ್ಯವಾಗಿಲ್ಲ. ಇದನ್ನು ಮನಗಂಡ ಪುರಸಭೆ ಆಡಳಿತ ಕೊಳವೆ ಬಾವಿಗೆ ಸಂಪರ್ಕ ಕಲ್ಪಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆ. ಆದರೆ ಅವುಗಳು ಜನರ ಉಪಯೋಗಕ್ಕೆ ಮಾತ್ರ ಲಭ್ಯವಾಗಿಲ್ಲ.
ಬಸ್ ನಿಲ್ದಾಣದ ಸಮೀಪ ಹಾಗೂ ಹೊಸಪೇಟೆ ಬಡಾವಣೆಯ ಜಯಂತಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುದ್ಧ ಎರಡು ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆರಂಭದಲ್ಲಿ ಮಾತ್ರ ಜನರ ದಾಹ ನೀಗಿಸಿದ ಈ ಘಟಕಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿರುಪಯುಕ್ತಗೊಂಡಿವೆ.
ಬೇಸಿಗೆಯಲ್ಲಿ ಪುರಸಭೆಯ ಹಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆ ಇದೆ. ಪ್ರತಿ ವರ್ಷ ಪುರಸಭೆ ಆಡಳಿತ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತದೆ. ಹೀಗಿದ್ದೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ಉದ್ದೇಶದಿಂದ ಸ್ಥಾಪಿಸಿದ ಘಟಕಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಜನರಿಗೆ ಶುದ್ಧ ಕುಡಿಯುವ ನೀರು ಮರುಭೂಮಿಯಲ್ಲಿ ಸಿಗುವ ನೀರಿನಷ್ಟೇ ಮರೀಚಿಕೆಯಾಗಿದೆ.
ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದುರಸ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಿಸುವ ಜೊತೆಗೆ ಕುಡಿಯುವ ನೀರಿಗೆ ಶಾಶ್ವತ ಯೋಜನೆ ರೂಪಿಸಿ ತಮ್ಮ ಜವಾಬ್ದಾರಿ ಮೆರೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೊಸನಗರ : ಹಳ್ಳಹಿಡಿದ ಶುದ್ಧ ಕುಡಿಯುವ ನೀರಿನ ಘಟಕ
ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಹಳ್ಳ ಹಿಡಿದಿವೆ. ಬಸ್ ನಿಲ್ದಾಣ ದೇವಸ್ಥಾನ ಸಮೀಪ ಸ್ಥಾಪಿಸಿದ ಘಟಕಗಳು ನಿರ್ವಹಣೆ ಕೊರತೆಯಿಂದ ದುಃಸ್ಥಿತಿ ತಲುಪಿವೆ. ಘಟಕ ಸ್ಥಾಪನೆಗೆ ವೆಚ್ಚ ಮಾಡಿದ ಲಕ್ಷಾಂತರ ರೂಪಾಯಿ ವ್ಯರ್ಥವಾಗಿದೆ.
ತಾಲ್ಲೂಕಿನ ಕಾರಗಡಿ ಮಾಸ್ತಿಕಟ್ಟೆ ನಿಟ್ಟೂರು ಜಯನಗರ ರಿಪ್ಪನ್‌ಪೇಟೆಯಲ್ಲಿರುವ ಘಟಕಗಳ ಪೈಕಿ ಜಯನಗರದಲ್ಲಿರುವ ಘಟಕ ಮಾತ್ರ ಸುಸ್ಥಿತಿಯಲ್ಲಿದೆ. ಘಟಕ ಆರಂಭವಾದ ಹೊಸದರಲ್ಲಿ ಜನರಲ್ಲಿ ಇವುಗಳ ಬಗ್ಗೆ ಆಸಕ್ತಿಯಿತ್ತು. ಕಾಯಿನ್ ಹಾಕಿದರೆ ನೀರು ಬರುತ್ತದೆ ಎಂಬ ಸೋಜಿಗ ಇತ್ತು. ಒಂದು ರೂಪಾಯಿ ನಾಣ್ಯಕ್ಕೆ ಲೀಟರ್ ನೀರು ಸಿಗುತ್ತದೆ. ನಂತರದ ದಿನಗಳಲ್ಲಿ ಆಸಕ್ತಿ ಕಡಿಮೆಯಾಯಿತು. ಕಾಯಿನ್ ಕೂಡ ಅಲಭ್ಯವಾಗಿ ಜನರು ನೀರು ಹಿಡಿಯುವುದು ಕಡಿಮೆಯಾಯಿತು.
ಮಲೆನಾಡಲ್ಲಿ ಕೊಡಗಟ್ಟಲೆ ನೀರು ಬಳಸುವ ಪರಿಪಾಟದ ಜನರಿಗೆ ದುಡ್ಡು ಕೊಟ್ಟು ಲೀಟರ್ ಲೆಕ್ಕದಲ್ಲಿ ನೀರು ಪಡೆಯುವುದು ಹಿಡಿಸಿದಂತೆ ತೋರಲಿಲ್ಲ. ಶುದ್ಧ ಕುಡಿಯುವ ನೀರು ಘಟಕಗಳ ದುರಸ್ತಿ ಮತ್ತು ನಿರ್ಹಹಣೆಯನ್ನು ಖಾಸಗಿ ಸಂಸ್ಥೆಗೆ ಕೊಡಲಾಗಿದ್ದು ಅವು ಇತ್ತ ತಲೆಹಾಕಿಲ್ಲ. ಗ್ರಾಮ ಪಂಚಾಯಿತಿಗಳು ಘಟಕಕ್ಕೆ ನೀರಿನ ನಲ್ಲಿ ಸಂಪರ್ಕ ಮಾಡಿವೆ. ನಿರ್ವಹಣೆ ಹೊಣೆಹೊತ್ತ ಸಂಸ್ಥೆಗಳು ದುರಸ್ತಿ ಮಾಡಬೇಕು ಎಂದು ರಾಮಚಂದ್ರಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹನಿಯ ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ.
ಪೂರಕ ಮಾಹಿತಿ : ನಿರಂಜನ.ವಿ, ಎಂ.ರಾಘವೇಂದ್ರ, ರಾಘವೇಂದ್ರ ಟಿ., ರವಿ ನಾಗರಕೊಡಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.