ಭದ್ರಾವತಿ: ನಗರದಲ್ಲಿ ಸಾರ್ವಜನಿಕರ ಬಳಕೆಯ ಉದ್ದೇಶಕ್ಕೆ 6 ಕಡೆ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ ಕೆಲವು ನಿರ್ವಹಣೆಯ ಕೊರತೆ ಎದುರಿಸುತ್ತಿವೆ. ಆ ಘಟಕಗಳ ಸುತ್ತಮುತ್ತ ಸ್ವಚ್ಛತೆಯೇ ಮಾಯವಾಗಿದೆ.
ಸಂತೆ ಮೈದಾನ, ಜೈ ಭೀಮ್ ನಗರ, ಬಸವೇಶ್ವರ ವೃತ್ತ, ಮುಖ್ಯ ಬಸ್ ನಿಲ್ದಾಣ, ಜಯಶ್ರೀ ವೃತ್ತ ಮತ್ತು ನಗರಸಭೆ ಕಚೇರಿಯ ಬಳಿ ಘಟಕಗಳನ್ನು ಸ್ಥಾಪಿಸಲಾಗಿದೆ.
ಈ ಪೈಕಿ ನಗರದ ಕೇಂದ್ರ ಭಾಗವಾದ ಬಸವೇಶ್ವರ ವೃತ್ತದ ಬಳಿಯ ನೀರಿನ ಘಟಕದ ಪಕ್ಕದಲ್ಲೇ ಚರಂಡಿ ಹರಿಯುತ್ತಿದೆ. ಘಟಕದ ಸಮೀಪಕ್ಕೆ ಹೋದರೆ ದುರ್ನಾತ ಮೂಗಿಗೆ ಬಡಿಯುತ್ತದೆ. ಮೂಗು ಮುಚ್ಚಿಕೊಂಡೇ ನೀರು ಹಿಡಿಯುವ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ನಿವಾಸಿ ಹನುಮಂತಿ ಬೇಸರ ವ್ಯಕ್ತಪಡಿಸಿದರು.
ನಗರಸಭೆ ಕಚೇರಿಯ ಪಕ್ಕದಲ್ಲಿ ಇರುವ ಶುದ್ಧ ನೀರು ಪೂರೈಕೆಯ ಘಟಕದಿಂದ ನಿರಂತರವಾಗಿ ನೀರು ಸೋರಿಕೆಯಾಗುತ್ತಿದೆ. ಸಾರ್ವಜನಿಕರ ಬಳಕೆಗೆ ಲಭ್ಯವಾಗಬೇಕಾದ ಕುಡಿಯುವ ನೀರು ದಿನವಿಡೀ ಪೋಲಾಗುತ್ತಿದೆ. ಇಲ್ಲಿನ ಉಪಕರಣಗಳೂ ತುಕ್ಕು ಹಿಡಿದಿದ್ದು, ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಇದರ ಪಕ್ಕದಲ್ಲಿಯೇ ಬಸ್ ನಿಲ್ದಾಣ, ಆಟೋ ನಿಲ್ದಾಣ ಹಾಗೂ ತಾಲ್ಲೂಕು ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವ ರಸ್ತೆ ಇದೆ. ವಿದ್ಯಾರ್ಥಿಗಳು ಸಂಚರಿಸುವ ಮುಖ್ಯ ಸ್ಥಳವಾಗಿದ್ದು, ತಿಂಡಿ ತಿನಿಸುಗಳ ಮಳಿಗೆಗಳೂ ಈ ಜಾಗದಲ್ಲಿವೆ.
‘ದಿನವೂ ನೂರಾರು ಜನ ಓಡಾಡುವ ಈ ಪ್ರದೇಶದಲ್ಲಿ ಸ್ವಚ್ಛತೆಯ ಕೊರತೆಯಿದ್ದು, ಘಟಕದ ನೀರು ಕುಡಿದರೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ’ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
‘ನಗರಸಭೆ ಕಚೇರಿಯ ಪಕ್ಕದಲ್ಲಿಯೇ ಇರುವ ಈ ಘಟಕವನ್ನಾದರೂ ಸರಿಯಾಗಿ ನಿರ್ವಹಣೆ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
ಕುಡಿಯುವ ನೀರಿನ ಘಟಕವೇನೋ ಇದೆ. ಆದರೆ ನೀರು ಕುಡಿಯುವುದಕ್ಕಾಗಿ ಲೋಟದ ವ್ಯವಸ್ಥೆ ಮಾಡಿಲ್ಲ. ನೀರಿನ ಘಟಕದಲ್ಲಿ ಸ್ವಚ್ಛತೆ ಇಲ್ಲ–ರಾಕೇಶ್ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಲಕ್ಷಗಟ್ಟಲೆ ಹಣ ವ್ಯಯಿಸಿ ಸರ್ಕಾರ ಸಾರ್ವಜನಿಕರಿಗೆಂದು ಶುದ್ಧ ನೀರಿನ ಘಟಕ ಸ್ಥಾಪಿಸಿದೆ. ನಾಮಕಾವಸ್ಥೆ ಘಟಕಗಳನ್ನು ತೆರೆದರೆ ಸಾಲದು. ಸಂಬಂಧಪಟ್ಟವರು ಸರಿಯಾಗಿ ನಿರ್ವಹಣೆ ಮಾಡಬೇಕು. ಆಗ ಅದರ ಮೂಲ ಆಶಯ ಸಾಕಾರಗೊಳ್ಳಲಿದೆ–ಲಿಂಗವ್ವ ತರಕಾರಿ ವ್ಯಾಪಾರಿ
ಘಟಕದ ನಿರ್ವಹಣೆಗೆಂದೇ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 6 ತಿಂಗಳಿಗೆ ಒಮ್ಮೆ ಫಿಲ್ಟರ್ ಬದಲಾಯಿಸಲಾಗುತ್ತದೆ. ಪ್ರತಿದಿನ ಘಟಕಗಳಲ್ಲಿ ನೀರು ಭರ್ತಿ ಮಾಡಲಾಗುತ್ತದೆ. ಸಮಸ್ಯೆಗಳು ದೂರುಗಳು ಇದ್ದರಲ್ಲಿ ತಕ್ಷಣವೇ ಸರಿಪಡಿಸಲಾಗುವುದು–ಸತೀಶ್ ಹಿರಿಯ ಎಂಜಿನಿಯರ್ ನೀರು ಸರಬರಾಜು ವಿಭಾಗ ನಗರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.