ಶಿವಮೊಗ್ಗ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಂಗಳವಾರ ವಿದ್ಯಾರ್ಥಿನಿಯರಿಬ್ಬರು ಕಾಲೇಜು ಮಹಡಿಯಿಂದ ಬಿದ್ದಿದ್ದಾರೆ. ಅವರಲ್ಲಿ ಒಬ್ಬರು ಸಾವಿಗೀಡಾಗಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಲ್ಲಿನ ಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನಲ್ಲಿ (ಬಿಜಿಎಸ್) ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಜಿ.ಓ.ಮೇಘಶ್ರೀ (17) ಕಾಲೇಜಿನ ಮೂರನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದ್ದಾಳೆ.
ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಜನ್ನಾಪುರದ ಜಿ.ಓಂಕಾರಯ್ಯ ಪುತ್ರಿ ಮೇಘಶ್ರೀ ಕಾಲೇಜಿನ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಓದುತ್ತಿದ್ದಳು. ಕಾಲೇಜಿನಲ್ಲಿ ಮಂಗಳವಾರ ಕಿರು ಪರೀಕ್ಷೆ ಬರೆದಿದ್ದ ಮೇಘಶ್ರೀ ಶೌಚಾಲಯಕ್ಕೆ ತೆರಳುವುದಾಗಿ ಹೇಳಿ ಪರೀಕ್ಷಾ ಕೊಠಡಿಯಿಂದ ಹೊರಬಂದಿದ್ದಳು ಎನ್ನಲಾಗಿದೆ.
'ಮಗಳ ಸಾವು ಅನುಮಾನಾಸ್ಪದವಾಗಿದೆ. ಕಾಲೇಜಿಗೆ ಹೆಸರು ಬರಲು ಹೆಚ್ಚಿನ ಅಂಕಗಳಿಸುವಂತೆ ಶಿಕ್ಷಕರು, ಹಾಸ್ಟೆಲ್ ಸಿಬ್ಬಂದಿ ಒತ್ತಡ ಹೇರಿ, ಮಾನಸಿಕವಾಗಿ ಹಿಂಸೆ ನೀಡಿದ್ದರಿಂದ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ತನಿಖೆ ನಡೆಸಿ' ಎಂದು ಮೇಘಶ್ರೀ ಪೋಷಕರು ಇಲ್ಲಿನ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿದ್ಯಾರ್ಥಿನಿ ಸಾವಿಗೆ ನ್ಯಾಯಕೊಡಿ ಎಂದು ಆಗ್ರಹಿಸಿ ಪೋಷಕರ ಜೊತೆ ನೂರಾರು ಮಂದಿ ಸೇರಿ ಆದಿಚುಂಚನಗಿರಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.
ಮತ್ತೊಂದು ಘಟನೆಯಲ್ಲಿ ಇಲ್ಲಿನ ಪ್ರೇರಣಾ ಶಿಕ್ಷಣ ಸಂಸ್ಥೆಯ (ಪೆಸಿಟ್) ಪದವಿ ಕಾಲೇಜಿನ ಮೊದಲ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಕಾಲೇಜಿನ ಎರಡನೇ ಮಹಡಿಯಿಂದ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕೆಯನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
'ಯುವತಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಅಜ್ಜಂಪುರದ ಶಿಕ್ಷಕರೊಬ್ಬರ ಪುತ್ರಿ. ಪೆಸಿಟ್ ಕಾಲೇಜಿನ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಓದುತ್ತಿದ್ದರು. ಘಟನೆಗೆ ಕಾರಣ ತಿಳಿದುಬಂದಿಲ್ಲ. ಬೆಳಿಗ್ಗೆ ಮೊದಲ ತರಗತಿಗೆ ಹಾಜರಾಗಿದ್ದರು. ಮಧ್ಯೆ ಐದು ನಿಮಿಷದ ಬಿಡುವಿನಲ್ಲಿ ಘಟನೆ ನಡೆದಿದೆ. ಪೋಷಕರಿಗೆ ಮಾಹಿತಿ ನೀಡಿದ್ದೇವೆ' ಎಂದು ತುಂಗಾ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಮೇಘಶ್ರೀ ಸಾವಿನ ಬಗ್ಗೆ ಈಗಲೇ ಏನನ್ನೂ ಹೇಳಲು ಆಗೊಲ್ಲ. ದೂರು ದಾಖಲಿಸಿಕೊಂಡಿದ್ದೇವೆ. ಮೇಲ್ನೋಟಕ್ಕೆ ಕೊಠಡಿಯಿಂದ ಆಕೆ ಹೋಗುವುದು, ಬೀಳುವುದು ಸಿ.ಸಿ ಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಅದಕ್ಕೆ ಕಾರಣ ಏನು ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಮತ್ತೊಂದು ಪ್ರಕರಣದಲ್ಲಿ ಬಿಎಸ್ಸಿ ವಿದ್ಯಾರ್ಥಿನಿಯ ಪೋಷಕರು ಬಂದು ದೂರು ಕೊಟ್ಟ ನಂತರ ತನಿಖೆ ನಡೆಸಲಿದ್ದೇವೆ’ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ’ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.