ADVERTISEMENT

ಶಿವಮೊಗ್ಗ | ದಿವ್ಯಾ ಹಾಗರಗಿಗೆ ಆಶ್ರಯ ನೀಡಿದ್ದ ಬಿಜೆಪಿ ಮುಖಂಡ

ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಹಕ್ರೆ ಆರೋಪ

​ಪ್ರಜಾವಾಣಿ ವಾರ್ತೆ
Published 10 ಮೇ 2022, 4:28 IST
Last Updated 10 ಮೇ 2022, 4:28 IST
ಮಲ್ಲಿಕಾರ್ಜುನ ಹಕ್ರೆ
ಮಲ್ಲಿಕಾರ್ಜುನ ಹಕ್ರೆ   

ಸಾಗರ: ಪಿಎಸ್‌ಐ ನೇಮಕಾತಿ ಪ್ರಕರಣದ ಆರೋಪಿ ದಿವ್ಯಾ ಹಾಗರಗಿ ಅವರು ಮಹಾರಾಷ್ಟ್ರದಲ್ಲಿ ಬಂಧನಕ್ಕೆ ಒಳಗಾಗುವ ಮುನ್ನ ಒಂದು ದಿನ ಸಾಗರಕ್ಕೆ ಬಂದಿದ್ದರು. ಬಿಜೆಪಿಯ ಇಲ್ಲಿನ ಪ್ರಮುಖ ಮುಖಂಡರೊಬ್ಬರು ಅವರಿಗೆ ಆಶ್ರಯ ನೀಡಿದ್ದರು ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿದ್ದಾರೆ.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಾಗರದಲ್ಲಿ ಒಂದು ದಿನ ತಂಗಿದ್ದ ದಿವ್ಯಾ ಹಾಗರಗಿ ನಂತರ ತೀರ್ಥಹಳ್ಳಿಗೆ ತೆರಳಿದರು ಎನ್ನುವ ಮಾಹಿತಿ ಇದೆ. ಹೀಗಾಗಿ ಸಿಐಡಿ ಪೊಲೀಸರು ಹಗರಣಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ಜಿಲ್ಲೆ ಒಳಗೊಂಡಂತೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಹಗರಣದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಮಗನ ಕೈವಾಡವಿರುವುದಾಗಿ ತಿಳಿದುಬಂದಿದೆ. ಈಗಿನ ಸರ್ಕಾರದಲ್ಲಿ ಯಾವ ಮಾಜಿ ಮುಖ್ಯಮಂತ್ರಿಯ ಮಕ್ಕಳ ಮಾತು ನಡೆಯುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇದನ್ನು ಗಮನಿಸಿದರೆ ಹಗರಣದ ಪ್ರಮುಖ ಕಿಂಗ್‌ಪಿನ್‌ಗಳು ಶಿವಮೊಗ್ಗ ಜಿಲ್ಲೆಯಲ್ಲಿಯೇ ಇರುವ ಅನುಮಾನಗಳಿದ್ದು, ಸಿಐಡಿ ಪೊಲೀಸರು ತಮ್ಮ ತನಿಖೆಯ ಜಾಡನ್ನು ಶಿವಮೊಗ್ಗಕ್ಕೂ ವಿಸ್ತರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವವರು ಹಣ ಪೂರೈಕೆ ಮಾಡಿರುವ ಏಜೆಂಟರು ಮಾತ್ರ. ಈ ಹಗರಣದಲ್ಲಿ ₹ 500 ಕೋಟಿ ವಹಿವಾಟು ನಡೆದಿರುವ ಬಗ್ಗೆ ಅನುಮಾನಗಳಿದ್ದು, ಹಣ ಯಾರಿಗೆ ತಲುಪಿದೆ ಎಂಬುದನ್ನು ತನಿಖೆ ನಡೆಸುತ್ತಿರುವವರು ಪತ್ತೆಹಚ್ಚಬೇಕು. ಏಜೆಂಟರಾಗಿ ಕೆಲಸ ಮಾಡಿರುವವರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರೂ ಪಕ್ಷಗಳಲ್ಲಿದ್ದಾರೆ’ ಎಂದು ದೂರಿದರು. ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಶೋಕ್ ಬರದವಳ್ಳಿ, ನಾಗರಾಜ್ ಮಜ್ಜಿಗೆರೆ, ಷಣ್ಮುಖ ಸೂರನಗದ್ದೆ ಇದ್ದರು.

ಹಾಗರಗಿ ಬಂದದ್ದು ಗೊತ್ತಿಲ್ಲ: ಸ್ಪಷ್ಟನೆ
ಸಾಗರ:
‘ಪಿಎಸ್‌ಐ ನೇಮಕಾತಿ ಪ್ರಕರಣದ ಆರೋಪಿ ದಿವ್ಯಾ ಹಾಗರಗಿ ಅವರು ಸಾಗರಕ್ಕೆ ಬಂದಿದ್ದರು ಎಂಬ ವಿಷಯ ನನಗೆ ಗೊತ್ತಿಲ್ಲ’ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಹಕ್ರೆ ಅವರು ರಾಜಕೀಯ ಉದ್ದೇಶಕ್ಕಾಗಿ ದಿವ್ಯಾ ಹಾಗರಗಿ ಸಾಗರಕ್ಕೆ ಬಂದಿದ್ದು, ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದರು ಎಂದು ಹೇಳಿರಬಹುದು. ದಿವ್ಯಾ ಹಾಗರಗಿ ಅಂತಹವರಿಗೆ ಯಾರೂ ಬೆಂಬಲ ನೀಡಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.