ADVERTISEMENT

ಶಿವಮೊಗ್ಗ | ತುಂಗಾ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ: ಡಿ.ಸಿ

ಎಲ್ಲರ ಸಹಕಾರದಿಂದ ಮಲೆನಾಡಿನ ಜೀವನದಿಯ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:15 IST
Last Updated 11 ಜುಲೈ 2024, 15:15 IST
ಶಿವಮೊಗ್ಗದಲ್ಲಿ ತುಂಗಾ ನದಿ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು. ನಟ ಅನಿರುದ್ಧ ಜತಕರ ಚಿತ್ರದಲ್ಲಿದ್ದಾರೆ
ಶಿವಮೊಗ್ಗದಲ್ಲಿ ತುಂಗಾ ನದಿ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು. ನಟ ಅನಿರುದ್ಧ ಜತಕರ ಚಿತ್ರದಲ್ಲಿದ್ದಾರೆ   

ಶಿವಮೊಗ್ಗ: ಜಿಲ್ಲೆಯ ಜನರ ಜೀವನಾಡಿ ತುಂಗಾ ನದಿ ಮಲಿನವಾಗುವುದನ್ನು ನಿಯಂತ್ರಿಸುವಲ್ಲಿ ಸರ್ಕಾರ, ಸರ್ಕಾರೇತರ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮನವಿ ಮಾಡಿದರು.

ತುಂಗಾನದಿಗೆ ನಿತ್ಯ ತ್ಯಾಜ್ಯ, ಚರಂಡಿ ನೀರು ಸೇರಿ ಮಲಿನವಾಗುತ್ತಿರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ನಟ ಅನಿರುದ್ಧ ಜತಕರ ಅವರು  ಮುಖ್ಯಮಂತ್ರಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಮಾಲೋಚನಾ ಸಭೆ ನಡೆಸಿದರು.

ನದಿ ನೀರು ಕಲುಷಿತಗೊಳ್ಳುವುದನ್ನು ನಿಯಂತ್ರಿಸಿ, ಜನಸಾಮಾನ್ಯರು ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಬೇಕು. ಪ್ರಸ್ತುತ ಸಂದರ್ಭದಲ್ಲಿ ಮಾನವ ಬಳಕೆ ಹಾಗೂ ಕೈಗಾರಿಕೆಗಳ ಬಳಕೆಯಿಂದ ನೀರು ಮಲಿನಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನದಿಗೆ ಮಲಿನ ನೀರು ಸೇರುವ ಸ್ಥಳಗಳನ್ನು ಗುರುತಿಸಿ, ಅದನ್ನು ಸಂಸ್ಕರಿಸಿ, ಬಳಕೆಗೆ ಯೋಗ್ಯವಾಗುವಂತೆ ಮಾಡಿ, ನದಿಗೆ ಪುನರ್ ಸೇರ್ಪಡೆಗೊಳಿಸುವಂತಾಗಬೇಕು ಎಂದರು.

ADVERTISEMENT

ಒಳಚರಂಡಿ ಮಂಡಳಿ ವತಿಯಿಂದ ಈಗಾಗಲೇ ಅನೇಕ ಸ್ಥಳಗಳನ್ನು ಗುರುತಿಸಿ, ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಬೇಸಿಗೆಯಿಂದ ಈ ಘಟಕಗಳು ಕಾರ್ಯಾರಂಭಗೊಳ್ಳಲಿವೆ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿಯೂ ಕೂಡ ಕಾಲಕಾಲಕ್ಕೆ ನೀರಿನ ಗುಣಮಟ್ಟ ಪರೀಕ್ಷಿಸಿ ವರದಿ ಸಲ್ಲಿಸುತ್ತಿದೆ. ಅದರಂತೆ ನದಿಯ ಪರಿಶುದ್ಧತೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಇನ್ನಷ್ಟು ಪೂರಕ ವರದಿಗಳನ್ನು ನೀಡಿದಲ್ಲಿ ಅದನ್ನು ಆದ್ಯತೆಯ ಮೇಲೆ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ ಎಂದರು.

ತುಂಗಾ ನದಿಗೆ ಶಿವಮೊಗ್ಗ ನಗರ ಮಾತ್ರವಲ್ಲದೇ ತೀರ್ಥಹಳ್ಳಿ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ತ್ಯಾಜ್ಯವೂ ಸೇರಿಕೊಳ್ಳುತ್ತಿದೆ. ಅದರ ನಿಯಂತ್ರಣಕ್ಕಾಗಿ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಕಾರ ಪಡೆಯುವುದಾಗಿ ತಿಳಿಸಿದ ಅವರು, ಇದರ ವ್ಯವಸ್ಥಿತ ನಿರ್ವಹಣೆಗಾಗಿ ಜಿಲ್ಲಾ ಮಟ್ಟದಲ್ಲಿ ಅರ್ಹ ಅಧಿಕಾರಿ ನೇಮಿಸಲಾಗುವುದು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ನದಿಯ ಶುದ್ಧತೆಗಾಗಿ ಕೈಗೊಂಡ ಕ್ರಮಗಳ ಕುರಿತು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಚರ್ಚಿಸಿ, ಮುಂದಿನ 2 ವರ್ಷಗಳಲ್ಲಿ ನದಿಯನ್ನು ಸಂಪೂರ್ಣ ಶುದ್ಧವಾಗಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.

ನಟ ಅನಿರುದ್ಧ ಜತಕರ ಮಾತನಾಡಿ, ತುಂಗಾ ಆರತಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸೇರಿದಂತೆ ಎಲ್ಲರ ಸಹಕಾರ ಬಯಸುವೆ. ಈ ಕಾರ್ಯಕ್ರಮದಿಂದ ನದಿಯ ಬಗ್ಗೆ ಎಲ್ಲರಲ್ಲೂ ಪೂಜ್ಯ ಭಾವನೆ ಬೆಳೆಯಲಿದೆ. ತುಂಗೆಯ ತಟ ಪ್ರವಾಸಿಗರ ತಾಣವಾಗಿ ಪರಿವರ್ತನೆಗೊಳ್ಳಲಿದೆ. ಉದ್ಯಮಗಳ ಸ್ಥಾಪನೆಗೆ ಉತ್ತೇಜನ ದೊರೆಯಲಿದೆ. ನದಿಯ ಆಯಕಟ್ಟಿನ ಸ್ಥಳಗಳಲ್ಲಿ ಜಲಸಾಹಸ ಕ್ರೀಡೆಗೆ ಅವಕಾಶ ಒದಗಿಬರಲಿದೆ ಎಂದರು.

ಕೊಳಚೆ ನೀರು ನದಿ ಸೇರುವುದನ್ನು ನಿಯಂತ್ರಿಸುವುದು, ಕಾರ್ಖಾನೆಗಳ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ ಸ್ಥಾಪನೆ, ನದಿಪಾತ್ರದಲ್ಲಿ ತುಂಬಿರುವ ಕಳೆ ಕಿತ್ತು ನೀರನ್ನು ಶುದ್ಧಗೊಳಿಸುವ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ನಿಯಮ ಮೀರಿ ತುಂಗೆಯನ್ನು ಕಲುಷಿತಗೊಳಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಗಳ ಕೈಗೊಳ್ಳಬೇಕು. ಹೊಲಗದ್ದೆಗಳಲ್ಲಿ ರಸಗೊಬ್ಬರ, ಕೀಟನಾಶಕಗಳ ಬಳಕೆ ತಪ್ಪಿಸಬೇಕು. ಬಟ್ಟೆ, ಜಾನುವಾರು, ವಾಹನಗಳು ತೊಳೆಯುವುದನ್ನು ನಿಲ್ಲಿಸಬೇಕು ಎಂದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ಆರ್.ಸುಜಾತಾ, ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕಲುಷಿತ ನೀರು ನದಿ ಸೇರುವುದನ್ನು ನಿಯಂತ್ರಿಸಲು ಸ್ಥಳೀಯವಾಗಿ ಸಾಧ್ಯವಾಗಬಹುದಾದ ತಂತ್ರಜ್ಞಾನ ಹಾಗೂ ಪರ್ಯಾಯ ಕ್ರಮಗಳನ್ನು ಬಳಸುವುದು ಸೂಕ್ತ

-ರಾಜೇಶ್ ಅಮ್ಮಿನಭಾವಿ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ

ತುಂಗಾ ನದಿಯ ನಿರಂತರ ಉಸ್ತುವಾರಿ ನಿರ್ವಹಣೆಗಾಗಿ ಸರ್ಕಾರದ ಮಟ್ಟದಲ್ಲಿ ಸಮಿತಿ ರಚಿಸಲು ಪ್ರಸ್ತಾವ ಸಲ್ಲಿಸಲಾಗುವುದು. ಮಹಾನಗರ ಪಾಲಿಕೆ ವ್ಯಾಪ್ತಿ ನದಿ ಪಾತ್ರದ ಪಂಚಾಯಿತಿಗಳ ಹಂತದಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು

-ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ

ತುಂಗೆಯನ್ನು ಎಲ್ಲರೂ ಒಪ್ಪುವ ಹಾಗೂ ಅಪ್ಪಿಕೊಳ್ಳುವ ಕಾರ್ಯಕ್ಕೆ ಗಂಗಾ ಆರತಿಯ ರೀತಿ ತುಂಗಾ ಆರತಿ ಕಾರ್ಯಕ್ರಮ ನವೆಂಬರ್ 1ರಿಂದ ಆರಂಭಿಸಲಾಗುವುದು. ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ

-ಅನಿರುದ್ಧ ಜತಕರ್ ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.