ADVERTISEMENT

ಬಂಜಾರ ಸಂಘದಲ್ಲಿ ಭ್ರಷ್ಟಾಚಾರ ನಡೆದಿಲ್ಲ: ನಾನ್ಯಾ ನಾಯ್ಕ

-

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 13:36 IST
Last Updated 29 ಅಕ್ಟೋಬರ್ 2024, 13:36 IST

ಶಿವಮೊಗ್ಗ: ಜಿಲ್ಲಾ ಬಂಜಾರ ಸಂಘದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿದೆ ಎಂದು ಸಂಘದ ನಿರ್ದೇಶಕ ನಾನ್ಯಾ ನಾಯ್ಕ್ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಬಂಜಾರ ಸಂಘಕ್ಕೆ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿರುವುದು ಸಮಾಜಕ್ಕೆ ಹೊಸ ವಿಷಯವಾಗಿ ಉಳಿದಿಲ್ಲ. ಸಂಘವು ಅಸ್ತಿತ್ವಕ್ಕೆ ಬಂದ ದಿನದಿಂದಲೂ ಈ ರೀತಿಯ ಚಟುವಟಿಕೆ ನಡೆಯುತ್ತಲೇ ಬಂದಿದೆ ಎಂದರು.

ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ಮಂಡೇನಕೊಪ್ಪ ನಾನ್ಯಾನಾಯ್ಕ್, ಶಾಂತವೀರ ನಾಯ್ಕ್, ಕುಮಾರನಾಯ್ಕ್, ಭೋಜ್ಯಾನಾಯ್ಕ್, ಆರ್.ಸಿ. ನಾಯ್ಕ್ ಅವಧಿಯಲ್ಲೂ ಕೂಡ ಆಡಳಿತಾಧಿಕಾರಿ ನೇಮಿಸುವಂತೆ ಸರ್ಕಾರಕ್ಕೆ ಮೂಕರ್ಜಿ ಬರೆಯುವಂತಹ ಪ್ರಕ್ರಿಯೆ ನಡೆಯುತ್ತಲೇ ಬಂದಿದೆ ಎಂದು ಟೀಕಿಸಿದರು.

ADVERTISEMENT

2021ರ ಜುಲೈನಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಚುನಾವಣೆ ಘೋಷಣೆಯಾಗಿ ಸಮಾಜದ ಎಲ್ಲಾ ಪ್ರಮುಖರು ಸೇರಿ ಸರ್ವಾನುಮತದಿಂದ ಶಾಸಕರಾಗಿದ್ದ ಕೆ.ಬಿ. ಅಶೋಕ್ ನಾಯ್ಕ್ ಅವರನ್ನು ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದರು. ಸಂಘದ ನಿರ್ದೇಶಕರು ಹಾಗೂ ಸಮಾಜದ ಹಿರಿಯ ಸಲಹೆಯಂತೆ ಪಾಳು ಬಿದ್ದಿದ್ದ ಸಂಘದ ಜಾಗದಲ್ಲಿ ಶುಭ ಕಾರ್ಯ ಹಮ್ಮಿಕೊಳ್ಳಲು ಸಮುದಾಯಯ ಭವನ, ನಿರುದ್ಯೋಗಿ ಯುವಕ, ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ, ಹೆಣ್ಣುಮಕ್ಕಳಿಗೆ ಕಸೂತಿ ತರಬೇತಿ ಕೇಂದ್ರ ನಿರ್ಮಾಣವಾಗಿದೆ ಎಂದರು.

ಸಂಘದ ಅಜೀವ ಸದಸ್ಯರಾಗಿದ್ದ ಶಶಿಕುಮಾರ್, ರೇಣುನಾಯ್ಕ್, ಗೇಮ್ಯಾನಾಯ್ಕ್ ಸಂಘದ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ. ಸಂಘದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿರುವ ಬಗ್ಗೆ ಅವರು ದಾಖಲೆ ನೀಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಸಂಘದ ನಿರ್ದೇಶಕ ಭೋಜ್ಯಾನಾಯ್ಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಾಗೇಶ್ ನಾಯ್ಕ್, ಕುಮಾರ್ ನಾಯ್ಕ್, ಹೀರಾ ನಾಯ್ಕ್, ನಾಗರಾಜ್ ನಾಯ್ಕ್, ವಾಸುದೇವ ನಾಯ್ಕ್, ಕುಮಾರನಾಯ್ಕ್, ಶೋಭ್ಯಾನಾಯ್ಕ್, ಬಸವರಾಜ್ ನಾಯ್ಕ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.