ಸಾಗರ: ಗೋ ಸಂಪತ್ತನ್ನು ಕಾಪಾಡಿಕೊಳ್ಳವುದು ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಸಮೀಪದ ಭೀಮನಕೋಣೆ ಗ್ರಾಮದಲ್ಲಿ ಬುಧವಾರ ನಡೆದ ಶ್ರೀಲಕ್ಷ್ಮೀ ನಾರಾಯಣ ದೇವಸ್ಥಾನದ ಜೀರ್ಣಾಷ್ಠಕಬಂಧ ಪೂರ್ವಕ ಪುನಃ ಪ್ರತಿಷ್ಠಾಪನೆ ಹಾಗೂ ನವಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಗೋ ಸಂಪತ್ತನ್ನು ಕಾಯುವ ಕಾರ್ಯದಿಂದ ಹಲವರು ಬ್ರಹ್ಮಜ್ಞಾನಿಗಳಾದ ಕತೆ ನಮ್ಮ ಪುರಾಣದಲ್ಲಿ ಉಲ್ಲೇಖವಾಗಿದೆ. ಭೀಮನಕೋಣೆ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಗೋ ಸಂಪತ್ತು ವಿಪುಲವಾಗಿದ್ದು ಈ ಭಾಗದ ಜನರು ಅದನ್ನು ಕಾಯುವಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದಾರೆ ಎಂದರು.
‘ಜಗತ್ತಿನ ಆದಿ ದಂಪತಿಯಾದ ಲಕ್ಷ್ಮೀನಾರಾಯಣರು ದಾಂಪತ್ಯ ಜೀವನದ ಆದರ್ಶ ಸ್ವರೂಪದಂತೆ ನಮ್ಮೆದುರು ಇದ್ದಾರೆ. ನಾರಾಯಣ ಸುರಕ್ಷೆಯ ಪ್ರತೀಕವಾದರೆ ಲಕ್ಷ್ಮೀ ಸಂಪತ್ತಿನ ಪ್ರತೀಕ. ಹಾಗಾಗಿ ಲಕ್ಷ್ಮೀನಾರಾಯಣ ದೇವಾಲಯದ ಅಷ್ಟಬಂಧದಂತಹ ಶುಭ ಕಾರ್ಯಗಳು ಜನರ ಶ್ರೇಯಸ್ಸಿನ ಭಾಗ್ಯ’ ಎಂದು ಹೇಳಿದರು.
ಸಂಸದ ಬಿ.ವೈ. ರಾಘವೇಂದ್ರ, ‘ಮಠ ಮತ್ತು ಸಂತ ಪರಂಪರೆ ಇರುವ ಪ್ರದೇಶ ಯಾವತ್ತೂ ಸಂಸ್ಕಾರಯುತ ವಾತಾವರಣದಿಂದ ಕೂಡಿರುತ್ತದೆ. ಗೋ ಸಂರಕ್ಷಣೆ ಎಂಬುದು ಮಹತ್ವದ ಕಾರ್ಯವಾಗಿದ್ದು, ಸರ್ಕಾರ ಈ ಬಗ್ಗೆ ಆಸಕ್ತಿ ವಹಿಸಲು ರಾಘವೇಶ್ವರ
ಶ್ರೀಗಳ ಪ್ರೇರಣೆ ಕಾರಣವಾಗಿದೆ’ ಎಂದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ‘ವಿಷ್ಣುಗುಪ್ತ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ರಾಘವೇಶ್ವರ ಶ್ರೀಗಳು ದೇಶಕ್ಕೆ ಆಸ್ತಿಯಾಗುವಂತಹ ಸಂಸ್ಕಾರಯುತ ಯುವಪಡೆಯನ್ನು ಸಮಾಜಕ್ಕೆ ನೀಡಲು ಮುಂದಾಗಿದ್ದಾರೆ’ ಎಂದು ಹೇಳಿದರು.
ಶಾಸಕ ಎಚ್.ಹಾಲಪ್ಪ ಹರತಾಳು, ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ, ಸಿಗಂದೂರು ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್, ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್, ದೇವಸ್ಥಾನ ಸಮಿತಿಯ ಆರ್.ಗುರುಪ್ರಸಾದ್ ಐಸಿರಿ, ಬಿ.ಎನ್.ಶ್ರೀಧರ್, ಸುಬ್ರಮಣ್ಯ, ರಾಧಾಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.