ಶಿವಮೊಗ್ಗ: ನಗರದಲ್ಲಿ ಗುರುವಾರ ಆರಂಭವಾದ ಬಿಸಿಸಿಐ 15 ವರ್ಷದೊಳಗಿನ ಅಂತರರಾಜ್ಯ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯಾವಳಿಯಲ್ಲಿ ತಮಿಳುನಾಡು, ಹೈದರಾಬಾದ್ ಹಾಗೂ ಹರಿಯಾಣ ತಂಡಗಳು ಜಯಗಳಿಸಿದವು.
ಹೈದರಾಬಾದ್‌ಗೆ ಅರ್ಹ ಗೆಲುವು:
ನವುಲೆಯ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಮತ್ತೊಂದು ಪಂದ್ಯಾವಳಿಯಲ್ಲಿ ಬಿಹಾರ ವಿರುದ್ಧ ಹೈದರಾಬಾದ್ ತಂಡ ಗೆಲುವು ಸಾಧಿಸಿತು.
ಬಿಹಾರ ತಂಡ 88 ರನ್ ಗಳಿಸಿ ಆಲ್ ಔಟ್ ಆದರೆ ಗುರಿ ಬೆನ್ನತ್ತಿದ ಹೈದರಾಬಾದ್ ತಂಡ 34.3 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿತು. ಹೈದರಾಬಾದ್ ತಂಡದ ಪರವಾಗಿ ವೆಮುಲಾ ಜೆನಿಕ್ಷಾ 34 ರನ್ ಗಳಿಸಿ ಔಟ್ ಆದರು.
ಕೆಎಸ್‌ಸಿಎ ಎರಡನೇ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯಾವಳಿಯಲ್ಲಿ ಹರಿಯಾಣ ತಂಡ ಕೇರಳ ವಿರುದ್ಧ ಗೆಲುವು ಸಾಧಿಸಿತು.
ಹರಿಯಾಣ ತಂಡ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೇರಳ ತಂಡ 99 ರನ್‌ಗಳಿಗೆ ಆಲ್ ಔಟ್ ಆಯಿತು.
‘ಎ’ ಗುಂಪಿನ ಪಂದ್ಯಾವಳಿಯಲ್ಲಿ ಹರಿಯಾಣ, ಕೇರಳ, ತಮಿಳುನಾಡು, ಬಿಹಾರ, ಹೈದರಾಬಾದ್, ನಾಗಾಲ್ಯಾಂಡ್ ತಂಡಗಳು ಪಾಲ್ಗೊಂಡಿವೆ. ನ.29 ರವರೆಗೆ ನಡೆಯುವ ಪಂದ್ಯಾವಳಿಗಳಿಗೆ ಗುರುವಾರ ಬೆಳಿಗ್ಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಚಾಲನೆ ನೀಡಿದರು.
ನಾಗಾಲ್ಯಾಂಡ್ 12 ರನ್‌ಗಳಿಗೆ ಆಲ್ ಔಟ್
ಇಲ್ಲಿನ ಜೆಎನ್ಎನ್‌ಸಿ ಕಾಲೇಜು ಮೈದಾನದಲ್ಲಿ ನಡೆದ ತಮಿಳುನಾಡು-ನಾಗಾಲ್ಯಾಂಡ್ ನಡುವಿನ ಪಂದ್ಯದಲ್ಲಿ ನಾಗಾಲ್ಯಾಂಡ್ ತಂಡ ಹೀನಾಯ ಸೋಲು ಅನುಭವಿಸಿತು. 6 ವಿಕೆಟ್ ಕಿತ್ತ ತಮಿಳುನಾಡಿನ ಬೌಲರ್ ಸೋನಿಕಾ ದಾಳಿಗೆ ತತ್ತರಿಸಿದ ನಾಗಾಲ್ಯಾಂಡ್ ತಂಡ 11.3 ಓವರ್‌ಗಳಲ್ಲಿ 12 ರನ್ ಗಳಿಸಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಸೋನಿಕಾ 5.3 ಓವರ್ ಗಳಲ್ಲಿ 6 ರನ್ ನೀಡಿದರು. ಮತ್ತೊಂದು ತುದಿಯಲ್ಲಿ ಸೋನಿಕಾಗೆ ಉತ್ತಮ ಬೆಂಬಲ ನೀಡಿದ ಜೋಸ್ನಾ ಏಂಜೆಲ್ ಶ್ರಿಯಾ 5 ಓವರ್‌ಗಳಲ್ಲಿ 6 ರನ್ ನೀಡಿ 3 ವಿಕೆಟ್ ಪಡೆದರು. ನಾಗಾಲ್ಯಾಂಡ್ ತಂಡ ಗಳಿಸಿದ್ದ 12 ರನ್‌ಗಳಲ್ಲಿ 10 ಇತರೆ ರನ್ ರೂಪದಲ್ಲಿ ಬಂದವು. ಎಂಟು ಮಂದಿ ಬ್ಯಾಟರ್‌ಗಳು ಶೂನ್ಯಕ್ಕೆ ಔಟಾದರು. ಸುಲಭ ಗುರಿಯನ್ನು ಬೆನ್ನತ್ತಿದ ತಮಿಳುನಾಡು ತಂಡ ಮೊದಲ ಓವರ್‌ನಲ್ಲೇ ಗೆಲುವಿಗೆ ಅಗತ್ಯವಿದ್ದ 13 ರನ್ ಗಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.