ADVERTISEMENT

ಶಿವಮೊಗ್ಗ ಹಿಂಸಾಚಾರ: 24 ಪ್ರಕರಣ ದಾಖಲು, 60 ಮಂದಿ ಬಂಧನ

ರಾಗಿಗುಡ್ಡ; ನಿಷೇಧಾಜ್ಞೆ ಜಾರಿ, ಅಡಗಿದ ಸದ್ದು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2023, 14:46 IST
Last Updated 2 ಅಕ್ಟೋಬರ್ 2023, 14:46 IST
ಶಿವಮೊಗ್ಗದಲ್ಲಿ ಶಾಂತಿ–ಸುವ್ಯವಸ್ಥೆಗಾಗಿ ಸೋಮವಾರ ಸರ್ವಧರ್ಮದ ಧರ್ಮಗುರುಗಳು ಮಹಾತ್ಮ ಗಾಂಧೀಜಿ ಪ್ರತಿಮೆಗೆ ಹಾರ ಹಾಕಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಬಸವಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ ಮಾತನಾಡಿದರು
ಶಿವಮೊಗ್ಗದಲ್ಲಿ ಶಾಂತಿ–ಸುವ್ಯವಸ್ಥೆಗಾಗಿ ಸೋಮವಾರ ಸರ್ವಧರ್ಮದ ಧರ್ಮಗುರುಗಳು ಮಹಾತ್ಮ ಗಾಂಧೀಜಿ ಪ್ರತಿಮೆಗೆ ಹಾರ ಹಾಕಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಬಸವಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ ಮಾತನಾಡಿದರು   

ಶಿವಮೊಗ್ಗ: ರಾಗಿಗುಡ್ಡ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದ ಗಲಭೆಗೆ ಸಂಬಂಧಿಸಿದಂತೆ 24 ಪ್ರಕರಣಗಳನ್ನು ದಾಖಲಿ‌ಸಿದ್ದು, 60 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ತಿಳಿಸಿದ್ದಾರೆ.

ಗಲಭೆಯಲ್ಲಿ ಒಂದು ಕಾರು, ಮೂರು ಆಟೊ, ಎರಡು ದ್ವಿಚಕ್ರ ವಾಹನ ಜಖಂಗೊಂಡಿವೆ. ಕಲ್ಲು ತೂರಾಟದಿಂದ ಏಳು ಮನೆಗಳ ಕಿಟಕಿಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಗಿಗುಡ್ಡದಲ್ಲಿ ನೀರವ ಮೌನ: ಮನೆಗಳಿಗೆ ಕಲ್ಲು ತೂರಾಟ, ಪೊಲೀಸರೊಂದಿಗೆ ಘರ್ಷಣೆಯಿಂದಾಗಿ ಭಾನುವಾರ ರಾತ್ರಿ ಇಡೀ ರಾಜ್ಯದ ಗಮನಸೆಳೆದಿದ್ದ ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ಸೋಮವಾರ ನೀರವ ಮೌನ ಆವರಿಸಿತ್ತು. ಜಿಲ್ಲಾಡಳಿತ 144ನೇ ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಇಡೀ ದಿನ ಅಲ್ಲಿ ಜನರ ಸದ್ದು ಅಡಗಿತ್ತು. ಪೊಲೀಸರ ಓಡಾಟ, ಗಣ್ಯರ ಭೇಟಿಯ ಗದ್ದಲ ಮಾತ್ರ ಅಲ್ಲಿ ಮನೆಮಾಡಿತ್ತು.

ADVERTISEMENT

ರಾಗಿಗುಡ್ಡದ ದೇವಸ್ಥಾನ, ಕೆಲವು ಮನೆಗಳ ಬಳಿ ಹಾಕಲಾಗಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿನ ದೃಶ್ಯಗಳನ್ನು ಪರಿಶೀಲಿಸಿ ಗಲಾಟೆ ನಡೆಸಿದವರನ್ನು ವಶಕ್ಕೆ ಪಡೆಯುವಲ್ಲಿ, ಬಂಧಿಸುವಲ್ಲಿ ಪೊಲೀಸರು ನಿರತರಾಗಿದ್ದರು. ಆರ್‌ಎಎಫ್ ತುಕಡಿ ಮೊಕ್ಕಾಂ ಹೂಡಿದ್ದು, ಮೀಸಲು ಪಡೆ ಪೊಲೀಸರೊಂದಿಗೆ ಸೇರಿ ಆ ಪ್ರದೇಶದ ಗಸ್ತಿನ ಜೊತೆಗೆ ಬಂದು ಹೋಗುವವರ ಮೇಲೆ ನಿಗಾ ಇಟ್ಟಿತ್ತು. ರಾತ್ರಿಯೇ ಪೂರ್ವವಲಯ ಐಜಿಪಿ ತ್ಯಾಗರಾಜನ್ ಹಾಗೂ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ರಾಗಿಗುಡ್ಡಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು.

ಬೆಳಿಗ್ಗೆ ಕೆಲ ಹೊತ್ತು ಅಂಗಡಿ ತೆಗೆದು ದಿನಸಿ, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಜನರು ಮನೆಗಳ ಬಿಟ್ಟು ಹೊರಗೆ ಬರಲಿಲ್ಲ.

ನಿಷೇಧಾಜ್ಞೆ ಶಿವಮೊಗ್ಗ ನಗರಕ್ಕೂ ವಿಸ್ತರಿಸಿದ್ದರಿಂದ ಮಾರುಕಟ್ಟೆ ಸ್ತಬ್ಧವಾಗಿತ್ತು. ಅಂಗಡಿಗಳು ಬಾಗಿಲು ಹಾಕಿದ್ದವು. ಗಾಂಧಿ ಜಯಂತಿ ಪ್ರಯುಕ್ತ ಮದ್ಯ–ಮಾಂಸ ಮಾರಾಟಕ್ಕೂ ನಿಷೇಧ ಇದ್ದ ಕಾರಣ ಬಹಳಷ್ಟು ಹೋಟೆಲ್‌, ವೈನ್‌ಶಾಪ್‌ಗಳು ಬಾಗಿಲು ಹಾಕಿದ್ದವು. ಚೇಂಬರ್ ಆಫ್ ಕಾರ್ಮಸ್‌ನ ಮನವಿ ಮೇರೆಗೆ ಸಂಜೆ ಕೆಲವು ಕಡೆ ಅಂಗಡಿಗಳು ಬಾಗಿಲು ತೆರೆಯಲು ಪೊಲೀಸರು ಅವಕಾಶ ಮಾಡಿಕೊಟ್ಟರು.

ಶಾಸಕ ಚನ್ನಬಸಪ್ಪ ಭೇಟಿ: ರಾಗಿಗುಡ್ಡದಲ್ಲಿ ಕಲ್ಲು ತೂರಾಟ ನಡೆದ ಹಿಂದೂ–ಮುಸ್ಲಿಮರಿಬ್ಬರ ಮನೆಗಳಿಗೂ ಭೇಟಿ ನೀಡಿದ ಶಾಸಕ ಎಸ್.ಎನ್. ಚನ್ನಬಸಪ್ಪ, ನೊಂದವರ ಅಳಲು ಆಲಿಸಿದರು. ನಿವಾಸಿಗಳಿಗೆ ಧೈರ್ಯ ತುಂಬಿದರು.

‘ನಾವು ಭಯದಲ್ಲಿ ಬದುಕುತ್ತಿದ್ದೇವೆ. ಕಲ್ಲು ತೂರಾಟ ನಡೆಸಿ ಮನೆಯೊಳಗಿನ ಎಲ್ಲ ವಸ್ತುಗಳನ್ನು ಜಖಂಗೊಳಿಸಲಾಗಿದೆ. ಪೊಲೀಸರು ಬರುವುದು ತಡವಾಗಿದ್ದರೆ ನಮಗೆ ಜೀವಕ್ಕೆ ತೊಂದರೆ ಅಗುತ್ತಿತ್ತು’ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

ನಂತರ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಗಾಯಾಳುಗಳ ಭೇಟಿ ಮಾಡಿದ ಚನ್ನಬಸಪ್ಪ ಅವರ ಆರೋಗ್ಯ ವಿಚಾರಿಸಿದರು.

ನಿಷೇಧಾಜ್ಞೆಯ ಕಾರಣ ಶಿವಮೊಗ್ಗದ ರಾಗಿಗುಡ್ಡ ಪ್ರದೇಶದ ರಸ್ತೆ ಜನರು ವಾಹನ ಸಂಚಾರವಿಲ್ಲದೇ ಬಿಕೊ ಅನ್ನುತ್ತಿತ್ತು ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್

ಔರಂಗಜೇಬ್‌ ಟಿಪ್ಪು ಕಟೌಟ್‌ ಪ್ರಚೋದಿಸಿದವೇ?

ಈದ್ ಮಿಲಾದ್ ದಿನ ನಗರದ ವಿವಿಧೆಡೆ ತಲೆ ಎತ್ತಿದ್ದ ಮೊಗಲ್ ದೊರೆ ಔರಂಗಜೇಬ್ ಟಿಪ್ಪು ಸುಲ್ತಾನ್ ಹೈದರಾಲಿಯ ಆಳೆತ್ತರದ ಕಟೌಟ್‌ ಹಾಗೂ ಕೆಲವು ಕಡೆ ಪ್ರದರ್ಶನಗೊಂಡ ತಲವಾರು ಮಾದರಿ ರಾಗಿಗುಡ್ಡದಲ್ಲಿ ಗಲಭೆಯ ಪ್ರಚೋದನೆಗೆ ಕಾರಣವಾಯಿತೇ? ಎಂಬ ಚರ್ಚೆ ನಗರದಲ್ಲಿ ಮುನ್ನೆಲೆಗೆ ಬಂದಿದೆ.

ವಿಗ್ರಹಾರಾಧನೆ ವ್ಯಕ್ತಿಪೂಜೆ ಒಪ್ಪದ ಮೊಹಮ್ಮದ್ ಪೈಗಂಬರ್ ಅವರ ಆಶಯಕ್ಕೆ ವಿರುದ್ಧವಾಗಿ ಈ ಬಾರಿ ಅವರ ಜನ್ಮದಿನ ಬಹಳಷ್ಟು ಕಟೌಟ್‌ ತಲೆ ಎತ್ತಿದ್ದವು. ಈ ಹಿಂದಿನ ಈದ್ ಮಿಲಾ‌ದ್ ಮೆರವಣಿಗೆ ವೇಳೆ ಟಿಪ್ಪು ಸುಲ್ತಾನ್ ಕಟೌಟ್ ಇಲ್ಲವೇ ಭಾವಚಿತ್ರ ಕಾಣಸಿಗುತ್ತಿತ್ತು. ಅಮೀರ್ ಅಹಮದ್ ವೃತ್ತ ಸೇರಿದಂತೆ ನಗರದ ಹಲವೆಡೆ ಗುಂಬಜ್‌ಗಳ ಪ್ರತಿಕೃತಿ ಹಾಗೂ ಧಾರ್ಮಿಕ ಚಿಹ್ನೆ ಬರಹ ಅನಾವರಣಗೊಳ್ಳುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಔರಂಗಜೇಬ್ ಕಟೌಟ್ ಹಾಕಲಾಗಿತ್ತು. ಇದು ಪ್ರಚೋದನೆ ಬೀಜ ನೆಟ್ಟಿದೆ. ರಾಗಿಗುಡ್ಡದಲ್ಲೂ ಟಿಪ್ಪು ಕಟೌಟ್ ವಿಚಾರವೇ ಗಲಭೆಗೆ ಮುನ್ನುಡಿಯಾಯಿತು ಎಂದು ಪೊಲೀಸ್ ಮೂಲಗಳು ಹೇಳುತ್ತವೆ.

ನಗರಾಡಳಿತ ಇಲ್ಲವೇ ಪೊಲೀಸ್ ಇಲಾಖೆ ಈ ಕಟೌಟ್‌ಗಳಿಗೆ ಅವಕಾಶ ನೀಡದೇ ಇದ್ದಲ್ಲಿ ಶಿವಮೊಗ್ಗದಲ್ಲಿ ಹೀಗೆ ಮತ್ತೊಮ್ಮೆ ಕೋಮು ಸೌಹಾರ್ದ ಕದಡಿದ ಕಪ್ಪು ಚುಕ್ಕೆ ಮೂಡುತ್ತಿರಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

’ಅನುಮತಿ ಇಲ್ಲದೇ ಬ್ಯಾನರ್ ಕಟೌಟ್ ಬಂಟಿಂಗ್‌ಗಳ ಅಳವಡಿಕೆಗೆ ನಿಷೇಧ ಇದೆ. ಅದು ಹಿಂದೂ ಮುಸ್ಲಿಂ ಹಬ್ಬಗಳ ಸಂದರ್ಭದಲ್ಲೇ ಶಿವಮೊಗ್ಗದ ನೆಮ್ಮದಿಗೆ ಭಂಗ ತರುವ ಸಂಗತಿಗಳು ಕಟೌಟ್ ಬ್ಯಾನರ್‌ಗಳ ರೂಪದಲ್ಲಿ ಪುನರಾವರ್ತನೆ ಆಗುತ್ತಿವೆ. ಆದರೂ ಮತ್ತೆ ಮತ್ತೆ ಅನುಮತಿ ಹೇಗೆ ಸಿಗುತ್ತಿದೆ’ ಎಂದು ವಿನೋಬ ನಗರದ ನಿವಾಸಿ ನಿವೃತ್ತ ಶಿಕ್ಷಕ ವೈ.ಎಸ್. ರಾಮಚಂದ್ರಪ್ಪ ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.