ಶಿವಮೊಗ್ಗ: ಇಲ್ಲಿನ ರಾಗಿಗುಡ್ಡ ಹಾಗೂ ಶಾಂತಿನಗರ ಪ್ರದೇಶಗಳಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಭಾನುವಾರ ರಾತ್ರಿ ನಡೆದ ಹಿಂಸಾಚಾರದಿಂದ ತತ್ತರಿಸಿದ್ದ ಶಿವಮೊಗ್ಗ ನಗರ ಸೋಮವಾರ ಸಹಜ ಸ್ಥಿತಿಗೆ ಮರಳಿತು.
ಜಿಲ್ಲಾಡಳಿತ ರಾತ್ರಿ ರಾಗಿಗುಡ್ಡ, ಶಾಂತಿನಗರ ಭಾಗದಲ್ಲಿ ಹಾಕಲಾಗಿದ್ದ ಸೆಕ್ಷನ್ 144 ಅಡಿ ನಿಷೇಧಾಜ್ಞೆಯನ್ನು ಮುಂಜಾನೆ ವೇಳೆಗೆ ಇಡೀ ನಗರಕ್ಕೆ ವಿಸ್ತರಿಸಿತು. ಹೀಗಾಗಿ ಸೋಮವಾರ ಶಿವಮೊಗ್ಗದಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಅಂಗಡಿ–ಮುಂಗಟ್ಟು ಹೋಟೆಲ್‌ಗಳನ್ನು ಪೊಲೀಸರು ಮುಚ್ಚಿಸಿದರು.
ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಹಿಂದೂ ಹಾಗೂ ಮುಸ್ಲಿಂ ಸಮುದಾಯದ 60 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕಲ್ಲು ತೂರಾಟದಲ್ಲಿ 12 ಮಂದಿ ಗಾಯಗೊಂಡಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳನ್ನು ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ಮುಖಂಡ ಎಚ್.ಎಂ.ಯೋಗೀಶ್ ಭೇಟಿ ಮಾಡಿ ಅರೋಗ್ಯ ವಿಚಾರಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ನಡೆದ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದರು.
ಕಟೌಟ್, ಬ್ಯಾನರ್ ತೆರವು: ’ಈದ್ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡ ಸೇರಿದಂತೆ ನಗರದ ವಿವಿಧೆಡೆ ಹಾಕಲಾಗಿದ್ದ ಔರಂಗಜೇಬ್ ಹಾಗೂ ಟಿಪ್ಪು ಸುಲ್ತಾನ್ ಕಟೌಟ್ ಹಾಗೂ ತಲ್ವಾರ್‌ನ ಪ್ರತಿಕೃತಿಗಳೇ ಕಾರಣ. ಪೊಲೀಸರು ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದೇಕೆ‘ ಎಂದು ಬಿಜೆಪಿ ಮುಖಂಡರು ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನಿಸಿದ್ದರು. ಹೀಗಾಗಿ ಸಂಜೆ ಮಹಾನಗರ ಪಾಲಿಕೆಯಿಂದ ಕಟೌಟ್‌ಗಳ ತೆರವು ಕಾರ್ಯ ನಡೆಯಿತು. ಪೊಲೀಸ್ ಭದ್ರತೆಯಲ್ಲಿ ಪಾಲಿಕೆ ಪೌರ ಕಾರ್ಮಿಕರು ಕಟೌಟ್‌ಗಳನ್ನು ತೆರವುಗೊಳಿಸಿದರು.
ಸರ್ವಧರ್ಮ ಗುರುಗಳ ಪ್ರಾರ್ಥನೆ..
ಶಿವಮೊಗ್ಗದಲ್ಲಿ ಶಾಂತಿಸೌಹಾರ್ದತೆಗಾಗಿ ಪ್ರಾರ್ಥಿಸಿ ಗಾಂಧಿ ಪಾರ್ಕ್‌ನಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಸೋಮವಾರ ಸಂಜೆ ಸರ್ವಧರ್ಮ ಗುರುಗಳ ನೇತೃತ್ವದಲ್ಲಿ ಹೂ ಅರ್ಪಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ವಿನಯ್‌ಗುರೂಜಿ ಬಸವಮರುಳಸಿದ್ಧ ಸ್ವಾಮೀಜಿ ಮುಸ್ಲಿಂ ಮೌಲ್ವಿ ಅಬ್ದುಲ್ ಲತೀಫ್ ಸಾದಿ ಹಾಗೂ ಕ್ರೈಸ್ತ ಪಾದ್ರಿ ಕ್ರಿಫರ್ಡ್ ರೋಶನ್ ಪಿಂಟೋ ನೇತೃತ್ವದಲ್ಲಿ ನಡೆದ ಪ್ರಾರ್ಥನೆ ಕಾರ್ಯಕ್ರಮದಲ್ಲಿ ವಕೀಲ ಕೆ.ಪಿ.ಶ್ರೀಪಾಲ ಕಿರಣ್‌ಕುಮಾರ್ ಲಿಯಾಖತ್ ಪಾಲ್ಗೊಂಡಿದ್ದರು.
ಹಬ್ಬ ಉತ್ಸವಗಳಲ್ಲಿ ಹೂವಿನ ತೋರಣ ಕಟ್ಟಿ ಸ್ವಾಗತಿಸುವುದು ನೋಡಿದ್ದೇವೆ. ಆದರೆ ರಸ್ತೆಗಳಲ್ಲಿ ತಲವಾರಿನ ಪ್ರತಿಕೃತಿಗಳ ತೂಗುಹಾಕಿ ಹಬ್ಬಕ್ಕೆ ಸ್ವಾಗತಿಸಲು ಯಾವ ಧರ್ಮವೂ ಹೇಳುವುದಿಲ್ಲ.–ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.