ADVERTISEMENT

ಶಿವಮೊಗ್ಗ ದಸರಾ ಮಹೋತ್ಸವ ಆರಂಭ

ಕವಿ ಬಿ.ಆರ್.ಲಕ್ಷ್ಮಣರಾವ್ ಉದ್ಘಾಟಿಸವರು, ₨ 1.40 ಕೋಟಿ ವೆಚ್ಚದಲ್ಲಿ ಹತ್ತು ಹಲವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 13:02 IST
Last Updated 27 ಸೆಪ್ಟೆಂಬರ್ 2019, 13:02 IST

ಶಿವಮೊಗ್ಗ: ನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೆ.29ರಿಂದ ಅ.8ರವರೆಗೆ ‘ಶಿವಮೊಗ್ಗ ದಸರಾ–2019’ ನೆರವೇರಲಿದೆ.

ಸೆ.29ರ ಬೆಳಿಗ್ಗೆ 11ಕ್ಕೆ ಕೋಟೆ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕವಿ ಬಿ.ಆರ್.ಲಕ್ಷ್ಮಣರಾವ್ ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ. ಆ ಸಮಯದಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗುವುದು ಎಂದು ಮೇಯರ್ ಲತಾ ಗಣೇಶ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ, ಆರ್.ಪ್ರಸನ್ನಕುಮಾರ್, ಕೆ.ಬಿ.ಪ್ರಸನ್ನಕುಮಾರ್, ಸಿ.ಎಂ.ಇಬ್ರಾಹಿಂ, ಆಯನೂರು ಮಂಜುನಾಥ್, ಎಸ್.ಎಲ್.ಬೋಜೇಗೌಡ, ಎಸ್.ರುದ್ರೇಗೌಡ ಭಾಗವಹಿಸುವರು. ಅಂದು ರಾತ್ರಿ ಸ್ಥಳೀಯ ಕಲಾವಿದರು ಸಂಗೀತ ವೈಭವ ಕಾರ್ಯಕ್ರಮ ನಡೆಸಿಕೊಡುವರು ಎಂದು ವಿವರ ನೀಡಿದರು.

ADVERTISEMENT

ಉಪ ಮೇಯರ್ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಶಿವಮೊಗ್ಗ ದಸರಾಕ್ಕೆ ಹಲವು ವಿಶೇಷತೆಗಳಿವೆ. ಮೈಸೂರು ಹೊರತುಪಡಿಸಿದರೆ ಶಿವಮೊಗ್ಗದಲ್ಲಿ ಅತಿ ವಿಜೃಂಭಣೆಯಿಂದ ದಸರಾ ಆಚರಿಸಲಾಗುವುದು. ಮಹಿಳಾ ದಸರಾ, ಚಲನಚಿತ್ರೋತ್ಸವ, ಸಾಂಸ್ಕೃತಿಕ ದಸರಾ-, ರಂಗ ದಸರಾ, ಯುವ ದಸರಾ, ಯಕ್ಷ ದಸರಾ, ಪರಿಸರ ದಸರಾ, ರೈತ ದಸರಾ, ಕಲಾ ದಸರಾ, ಯೋಗ ದಸರಾ, ಆಹಾರ ದಸರಾ ಆಚರಿಸಲಾಗುವುದು ಎಂದರು.

ಅ.8 ರಂದು ಮದ್ಯಾಹ್ನ 2.30ಕ್ಕೆ ಶಿವಪ್ಪನಾಯಕ ಅರಮನೆ ಆವರಣದಿಂದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆ ನಡೆಯಲಿದೆ. ಹಳೆ ಜೈಲು ಮೈದಾನದಲ್ಲಿ ಸಂಜೆ 6.15 ಕ್ಕೆ ತಹಶೀಲ್ದಾರ್ ಬಿ.ಎನ್.ಗಿರೀಶ್ ಅಂಬುಛೇದನ ಮಾಡಲಿದ್ದಾರೆ.

ದಸರಾ ಉತ್ಸವದ ಯಶಸ್ಸಿಗೆ 14 ಸಮಿತಿ ರಚಿಸಲಾಗಿದೆ. ₨ 1.40 ಕೋಟಿ ವೆಚ್ಚದಲ್ಲಿ ದಸರಾ ಉತ್ಸವ ಆಯೋಜಿಸಲಾಗಿದೆ.

ವಿವಿಧ ದಸರಾ ಉತ್ಸವಗಳ ವಿವರ:

ಮಹಿಳಾ ದಸರಾ:

ಸೆ.30ರ ಸಂಜೆ 4.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಮಹಿಳಾ ದಸರಾವನ್ನು ಕಿರುತೆರೆ ನಟಿ ಸುಪ್ರಿಯಾ ರಾವ್ ಉದ್ಘಾಟಿಸುವರು.

ರಂಗ ದಸರಾ:

ರಂಗ ದಸರಾ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ 7ಕ್ಕೆ ನಾಟಕ ಪ್ರದರ್ಶನವಿರುತ್ತದೆ. ಅ.2ರಂದು ಜಲಗಾರ, 3ಕ್ಕೆ ಸಂಕ್ರಾಂತಿ, 4ಕ್ಕೆ ಹೂವು, 5ರಂದು ತಮಸೋಮ, 6ಕ್ಕೆ ಅದ್ರೇಶಿ ಪರ್ದೇಶಿಯಾದ, 7ರಂದು ಸಂದೇಹ ಸಾಮ್ರಾಜ್ಯ ಪ್ರದರ್ಶನಗೊಳ್ಳಲಿವೆ. ಯುವ ದಸರಾ ಕಾರ್ಯಕ್ರಮ 29ರಿಂದ ಅ.5ರವರೆಗೆ ನಡೆಯಲಿದೆ. ಅ.6ರ ಬೆಳಿಗ್ಗೆ 10ಕ್ಕೆ 10ನೇ ತರಗತಿ ಒಳಗಿನ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಏಕಪಾತ್ರಾಭಿನಯ ಹಾಗೂ ರಂಗಗೀತೆ ಸ್ಪರ್ಧೆ ನಡೆಸುವರು.

ಯುವ ದಸರಾ:

ಸೆ.29ರಿಂದ ಅ.5ರವರೆಗೆ ಪ್ರತಿ ದಿನ ಸಂಜೆ 4 ಕ್ಕೆ ಅಂಬೇಡ್ಕರ್ ಭವನದಲ್ಲಿ ಯುವ ದಸರಾ ಕಾರ್ಯಕ್ರಮಗಳು ನಡೆಯಲಿವೆ. ನೃತ್ಯ ಸ್ಪರ್ಧೆಗೆ ಆಡಿಷನ್ ಕಾರ್ಯಕ್ರಮ ನಡೆಯಲಿದೆ. 29ರ ಸಂಜೆ 4ಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಉದ್ಘಾಟಿಸುವರು. ಸೆ.30ರ ಸಂಜೆ 6ಕ್ಕೆ ಸಿಟಿ ಸೆಂಟರ್ ಮಾಲ್‌ನಲ್ಲಿ ಟ್ಯಾಲೆಂಟ್ ಹಂಟ್ ನಡೆಯಲಿದೆ.

ಅ.2ರ ಬೆಳಿಗ್ಗೆ 11ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ಸ್ಲೋ ಬೈಕ್ ಪಂದ್ಯಾವಳಿ, ಹಗ್ಗ ಜಗ್ಗಾಟ ಇರುತ್ತದೆ. ಅ.2 ಮತ್ತು 3ರ ಮಧ್ಯಾಹ್ನ ನೆಹರೂ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಕಬ್ಬಡ್ಡಿ ನಡೆಯಲಿದೆ. ಭಾರತ ತಂಡದ ಕಬ್ಬಡ್ಡಿ ವ್ಯವಸ್ಥಾಪಕ ಶ್ರೀಕಾಂತ್ ಉದ್ಘಾಟಿಸುವರು. ಅ.4ರ ಸಂಜೆ 5ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ಲೇಸರ್‌ ಶೋ ಮತ್ತು ನೃತ್ಯ ಸ್ಪರ್ಧೆ ನಡೆಯಲಿದೆ. ಚಿತ್ರ ನಿರ್ದೇಶಕ ಎ.ಪಿ.ಅರ್ಜುನ್‌, ನಟ ಪ್ರಭು ಮುಂಡ್ಕೂರ್ ಉದ್ಘಾಟಿಸುವರು. ಅ.5ರ ಸಂಜೆ 5ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ಸಂಚಿತ್ ಹೆಗಡೆ ಮತ್ತು ತಂಡ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಸಿಕೊಡಲಿದೆ. ನಟ ವಿಜಯ ರಾಘವೇಂದ್ರ ಉದ್ಘಾಟಿಸುವರು. ಅ.3ರ ಸಂಜೆ 6ಕ್ಕೆ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ.

ಸಾಂಸ್ಕೃತಿಕ ದಸರಾ-ಯಕ್ಷ ದಸರಾ:

ಅ.3ರ ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ಯಕ್ಷ ದಸರಾ ಕಾರ್ಯಕ್ರಮವನ್ನು ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಕೆರೆಮನೆ ಶಿವಾನಂದ ಹೆಗಡೆ ಉದ್ಘಾಟಿಸುವರು. ಬಿಲ್ವಿದ್ಯಾ ಪ್ರದರ್ಶನ, ರಾಮಾಶ್ವಮೇಧ ಪೌರಾಣಿಕ ಯಕ್ಷಗಾನ, ಜಾಂಬವತಿ ಕಲ್ಯಾಣ ಪ್ರದರ್ಶನವಿರುತ್ತದೆ.

ಪರಿಸರ ದಸರಾ:

ಅ.4ರಂದು ಬೆಳಿಗ್ಗೆ 7ಕ್ಕೆ ಪರಿಸರ ದಸರಾ ಅಂಗವಾಗಿ ಪಾಲಿಕೆ ಆವರಣದಿಂದ ಸೈಕಲ್ ಜಾಥ ಆಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಉದ್ಘಾಟಿಸುವರು. ಬೆಳಿಗ್ಗೆ 10ಕ್ಕೆ ಶಿವಪ್ಪನಾಯಕ ವೃತ್ತದಿಂದ ಆರಂಭವಾಗುವ ಪರಿಸರ ಜಾಥಾಕ್ಕೆ ಬಸವಮರುಳಸಿದ್ದ ಸ್ವಾಮೀಜಿ ಚಾಲನೆ ನೀಡುವರು.

ರೈತ ದಸರಾ:

ಅ.4ರಂದು ಬೆಳಿಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ನಡೆಯುವ ರೈತ ದಸರಾ ಕಾರ್ಯಕ್ರಮವನ್ನು ಉದ್ಯಮಿ ನಿವೇದನ್ ನೆಂಪೆ ಉದ್ಘಾಟಿಸುವರು.

ಕಲಾ ದಸರಾ:

ಅ.5ರ ಬೆಳಿಗ್ಗೆ 11ಕ್ಕೆ ಅರಮನೆ ಆವರಣದಲ್ಲಿ ಕಲಾ ದಸರಾ ಛಾಯಾಚಿತ್ರ ಮತ್ತುಚಿತ್ರಕಲಾ ಪ್ರದರ್ಶನ ಆಯೋಜಿಸಿದೆ. ಡಿಸಿ ಕೆ.ಬಿ.ಶಿವಕುಮಾರ್, ಎಸ್ಪಿ ಶಾಂತರಾಜ್ ಉದ್ಘಾಟನೆ ನೆರವೇರಿಸುವರು. ಸಂಜೆ 6ಕ್ಕೆ ಅರಮನೆ ಆವರಣದಲ್ಲಿ ಕಲಾ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಗಮಕ ಗಂಧರ್ವ ಹೊಸಹಳ್ಳಿ ಆರ್.ಕೇಶವಮೂರ್ತಿ ಉದ್ಘಾಟಿಸುವರು. ಅ.5 ಮತ್ತು 6ರಂದು ವಿವಿಧ ಕಾರ್ಯಕ್ರಮ ನಡೆಯಲಿದೆ.

ಕವಿ ಕಾವ್ಯ ಸಂಗಮ:

ಅ.5ರ ಸಂಜೆ 5ಕ್ಕೆ ಅಂಬೇಡ್ಕರ್ ಭವನದಲ್ಲಿ ಸಾಂಸ್ಕೃತಿಕ ದಸರಾ ಕವಿ ಕಾವ್ಯ ಸಂಗಮ ನಡೆಯಲಿದೆ. ಹಿರಿಯ ಕವಿ ವಿಜಯಕಾಂತ್ ಪಾಟೀಲ್ ಉದ್ಘಾಟಿಸುವರು.

ಮಕ್ಕಳ ದಸರಾ:

ಅ.7ರಂದು ಬೆಳಿಗ್ಗೆ 8ಕ್ಕೆ ಶಿವಪ್ಪನಾಯಕ ವೃತ್ತದಲ್ಲಿ ಮಕ್ಕಳ ದಸರಾ ಉದ್ಘಾಟನೆ ಮತ್ತು ಬೃಹತ್ ಮೆರವಣಿಗೆ ನಡೆಯಲಿದೆ. ಕೆ.ಎಂ.ಅನ್ವಿತಾ ಮತ್ತು ಸಮಿತ್ ಕುಮಾರ್ ಉದ್ಘಾಟಿಸುವರು. ಬೆಳಿಗ್ಗೆ 10ಕ್ಕೆ ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಅ.5 ಮತ್ತು 6ರಂದು ಬೆಳಿಗ್ಗೆ 9ಕ್ಕೆ ಗೋಪಾಲಗೌಡ ಬಡಾವಣೆಯ ಕ್ರೀಡಾ ಸಂಕೀರ್ಣದಲ್ಲಿ 17 ವರ್ಷದೊಳಗಿನ ಮಕ್ಕಳಿಗೆ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆ ನಡೆಯಲಿದೆ. ಅ.6 ಮತ್ತು 7ರಂದು ಬೆಳಿಗ್ಗೆ 10ಕ್ಕೆ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಜ್ಯೂನಿಯರ್ ಟೇಕ್ವಾಂಡೊ ಪಂದ್ಯ ನಡೆಯಲಿದೆ. ಅ.6ರ ಬೆಳಿಗ್ಗೆ 10ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ವಾಲಿಬಾಲ್ ಪಂದ್ಯಗಳು ನಡೆಯಲಿದೆ.

ಯೋಗ ದಸರಾ:

ಅ.6ರಂದು ಬೆಳಿಗ್ಗೆ 6ಕ್ಕೆ ಕುವೆಂಪು ರಂಗಮಂದಿರಲ್ಲಿ ಯೋಗ ದಸರಾ ನಡೆಯಲಿದೆ. ಬೆಳಿಗ್ಗೆ 7ರಿಂದ ಯೋಗ ನಡಿಗೆ, ಬೆಳಿಗ್ಗೆ 9.30ರಿಂದ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ 5.30ಕ್ಕೆ ಯೋಗ ವೈಭವ ‘ಔಷಧ ಸಾಕು ಆರೋಗ್ಯ ಬೇಕು’ ಕಾರ್ಯಕ್ರಮ ಆಯೋಜಿಸಲಾಗಿದೆ.

ದೃಶ್ಯ ಕಾವ್ಯ ನಾಟ್ಯ ಸಂಭ್ರಮ:

ಅ.6ರ ಸಂಜೆ 5.30ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ದೃಶ್ಯ ಕಾವ್ಯ ನಾಟ್ಯ ಸಂಭ್ರಮ ನಡೆಯಲಿದೆ. ನಟಿ ಸುಧಾರಾಣಿ ಉದ್ಘಾಟಿಸುವರು.

ಅ.7 ರಂದು ಸಂಜೆ 5.30ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ಜಾನಪದ ವೈಭವ ನಡೆಯಲಿದೆ. ನಟಿ ಪ್ರೇಮಾ ಉದ್ಘಾಟಿಸುವರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ, ಸುವರ್ಣ ಶಂಕರ್, ಸುನಿತಾ ಅಣ್ಣಪ್ಪ, ರೇಖಾ ರಂಗನಾಥ್, ಪ್ರಭಾರ ಆಯುಕ್ತ ಟಿ.ವಿ.ಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.