ಶಿವಮೊಗ್ಗ: ಕೋಟೆ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಕವಿ ಬಿ.ಆರ್.ಲಕ್ಷ್ಮಣರಾವ್ ನಾಡಹಬ್ಬ ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ದೇವಸ್ಥಾನದ ಮುಂಭಾಗ ಪ್ರವೇಶ ದ್ವಾರ ನಿರ್ಮಿಸಲಾಗಿದೆ. ಒಳಭಾಗದಲ್ಲಿ ವೇದಿಕೆ ನಿರ್ಮಿಸಲಾಗಿದೆ. ಇದೇ ವೇದಿಕೆ ಒಕ್ಕದಲ್ಲೇ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.
ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ, ಆರ್.ಪ್ರಸನ್ನಕುಮಾರ್, ಕೆ.ಬಿ.ಪ್ರಸನ್ನಕುಮಾರ್, ಸಿ.ಎಂ.ಇಬ್ರಾಹಿಂ, ಆಯನೂರು ಮಂಜುನಾಥ್, ಎಸ್.ಎಲ್.ಭೋಜೇಗೌಡ, ಎಸ್.ರುದ್ರೇಗೌಡ ಭಾಗವಹಿಸುವರು. ಅಂದು ರಾತ್ರಿ ಸ್ಥಳೀಯ ಕಲಾವಿದರು ಸಂಗೀತ ವೈಭವ ಕಾರ್ಯಕ್ರಮ ನಡೆಸಿಕೊಡುವರು.
29ರಂದು ಸಂಜೆ 5ಕ್ಕೆಬೇಡ್ಕರ್ ಭವನದಲ್ಲಿಯುವ ದಸರಾ ಕಾರ್ಯಕ್ರಮ ನಡೆಯಲಿದೆ. ಸಂಜೆ 4ಕ್ಕೆ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಗಾಗಿ ಆಡಿಷನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಮೇಯರ್ ನಾಗರಾಜ್ ಕಂಕಾರಿ ಭಾಗವಹಿಸುವರು. ಪಾಲಿಕೆ ಸದಸ್ಯ ಇ.ವಿಶ್ವಾಸ್ ಉಪಸ್ಥಿತರಿರುವರು.
ದಸರಾ ಮಹೋತ್ಸವಕ್ಕೆ ಇಡೀ ಶಿವಮೊಗ್ಗ ಸಿಂಗಾರಗೊಂಡಿದೆ. ಬನ್ನಿ ಮುಡಿಯುವ ಕಾರ್ಯಕ್ರಮ, ಅಂಬುಛೇದನ ನಡೆಯುವ ಹಳೇಕಾರಾಗೃಹ ಮೈದಾನದಲ್ಲಿ ಸಕಲ ಸಿದ್ಧತೆಗಳು ಆರಂಭವಾಗಿವೆ.
ಬಿ.ಆರ್.ಲಕ್ಷ್ಮಣರಾವ್‌ಗೆ ಸ್ವಾಗತ: ನಾಡಹಬ್ಬ ದಸರಾ ಉದ್ಘಾಟನೆಗೆ ಆಗಮಿಸಿದ ಕವಿ ಲಕ್ಷ್ಮಣರಾವ್ ಅವರನ್ನು ಶನಿವಾರ ಮೇಯರ್ ಲತಾ ಗಣೇಶ್, ಉಪ ಮೇಯರ್ ಎಸ್.ಎನ್.ಚನ್ನಬಸಪ್ಪ ಅವರ ತಂಡ ಹೊಳೆನಿಲ್ದಾಣದ ಬಳಿ ಹೂಗುಚ್ಛ ನೀಡಿ ಸ್ವಾಗತಿಸಿತು. ನಂತರ ಶಿವಪ್ಪ ನಾಯಕ ಅರಮನೆ ಆವರಣದಲ್ಲಿ ಅವರೊಂದಿಗೆ ಸ್ನೇಹ ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಹಾಮಾರಿಯಮ್ಮ ದೇವಸ್ಥಾನ
ವಿನೋಬ ನಗರದ ಮೇದಾರ ಕೇರಿಯ ಮಹಾಮಾರಿಯಮ್ಮ ದೇವಸ್ಥಾನ ಸೇವಾ ಸಮಿತಿ ಸೆ.29ರಿಂದ ಅ.8ರವರೆಗೆ ಮೂರನೇ ವರ್ಷದ ನವರಾತ್ರಿ ವೈಭವ ಕಾರ್ಯಕ್ರಮ ಆಯೋಜಿಸಿದೆ.
ವೀರೇಶ್ವರ ಪುಣ್ಯಾಶ್ರಮದ ಕಲ್ಲಜ್ಜಯ್ಯ ಅವರ ಉಪಸ್ಥಿತಿಯಲ್ಲಿ ನವರಾತ್ರಿ ವೈಭವ ನಡೆಯಲಿದೆ. ಸೆ.29 ರಂದು ಬೆಳಿಗ್ಗೆ 9ಕ್ಕೆ ದುರ್ಗಾ ಹೋಮದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಪ್ರತಿದಿನ ಸಂಜೆ 5.30ರಿಂದ ವಿದ್ವಾನ್ ಬೇಗೂರು ನಾಗರಾಜ್ ಅವರಿಂದ ದೇವಿ ಪುರಾಣ ಕಾರ್ಯಕ್ರಮವಿರುತ್ತದೆ. ನಂತರ ಪ್ರತಿದಿನ ಹೋಮಗಳು, ಪೂರ್ಣಾಹುತಿ, ದೇವಿ ಪುರಾಣ, ಅನ್ನಸಂತರ್ಪಣೆ ನಡೆಯುತ್ತದೆ. ರಾತ್ರಿ 9ರಿಂದ 11ರವರೆಗೆ ಗರ್ಭಾನೃತ್ಯ ಕಾರ್ಯಕ್ರಮ ಇರುತ್ತದೆ ಇದು ಕೋಲಾಟದ ರೀತಿಯ ಜಾನಪದ ನೃತ್ಯ. ಹರಕೆ ಹೊತ್ತವರು ಇದನ್ನು ತೀರಿಸುತ್ತಾರೆ ಎಂದುಎಂದು ಪುರೋಹಿತ ಗಿರೀಶ್ ಜೆ.ಭಟ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅ.6 ರಂದು ಸಂಜೆ 5.30ಕ್ಕೆ ಧಾರ್ಮಿಕ ಸಮಾರಂಭ ನಡೆಯಲಿದೆ. ವೀರೇಶ್ವರ ಪುಣ್ಯಾಶ್ರಮದ ಕಲ್ಲಜ್ಜಯ್ಯ, ಮೂಲೆಗದ್ದೆಯ ಚನ್ನಬಸವ ಸ್ವಾಮೀಜಿ, ಚಿವ ಕೆ.ಎಸ್.ಈಶ್ವರಪ್ಪ, ಉಪಮೇಯರ್ ಎಸ್.ಎನ್.ಚನ್ನಬಸಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್.ಬಿ.ಸಂಗಮೇಶ್ವರ ಗವಾಯಿಗಳು ಭಾಗವಹಿಸುವರು. ನಂತರ ಭಜನೆ, ಭಕ್ತಿ ಸಂಗೀತ, ದಾಸವಾಣಿ ಕಾರ್ಯಕ್ರಮ ನಡೆಯಲಿದೆ ಎಂದರು.
ಅ.8ರಂದು ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ 3ಕ್ಕೆ ದೇವಿಯ ರಾಜಬೀದಿ ಉತ್ಸವ ಆಯೋಜಿಸಲಾಗಿದೆ ಎಂದು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ತಂಗದೊರೈ, ಗಂಗಾಧರ, ರಮೇಶ, ಸುರೇಶ್, ಶಬರೀಶ, ಪುರುಷೋತ್ತಮ, ಯಶವಂತ್, ಹರೀಶ, ಶಂಕರ, ಉಮೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.