ADVERTISEMENT

ಗೆಲುವಿಗಾಗಿ ನಡೆಯುತ್ತಿದೆ ತೀವ್ರ ಪೈಪೋಟಿ

ಕುತೂಹಲ ಮೂಡಿಸಿದ ಡಿಸಿಸಿ ಬ್ಯಾಂಕ್‌ ಚುನಾವಣೆ, ಆಡಳಿತ ಚುಕ್ಕಾಣಿ ಹಿಡಿಯಲು ಭಾರಿ ಕಸರತ್ತು

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:37 IST
Last Updated 19 ಜೂನ್ 2024, 14:37 IST

ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ ಆಡಳಿತ ಮಂಡಳಿಗೆ ಚುನಾವಣೆ ನಡೆಯುತ್ತಿದ್ದು, ಗೆಲುವಿಗಾಗಿ ಹಲವರು ಕಸರತ್ತು ನಡೆಸುತ್ತಿದ್ದಾರೆ.

ಚುನಾವಣೆಯ ಅಖಾಡಕ್ಕೆ ಘಟಾನುಘಟಿಗಳೇ ಈ ಬಾರಿ ಇಳಿದಿದ್ದಾರೆ. ಗೆಲುವಿಗಾಗಿ ಸರ್ವ ಪ್ರಯತ್ನ ನಡೆಸುತ್ತಿದ್ದಾರೆ. ಎದುರಾಳಿಯನ್ನು ಹೇಗೆ ಮಣಿಸಬೇಕು ಎಂಬುದರ ಕುರಿತಂತೆ ತೆರೆಮರೆಯಲ್ಲಿ ಲೆಕ್ಕಾಚಾರ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಚುನಾವಣೆಯ ಕಾವು ಪಡೆದುಕೊಳ್ಳುತ್ತಿದೆ. 

ಜೂನ್‌ 28ರಂದು ಡಿಸಿಸಿ ಬ್ಯಾಂಕಿನ 13 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು 621 ಮತದಾರರು ಇದ್ದಾರೆ. ಅವರನ್ನು ಓಲೈಸಲು ಸ್ಪರ್ಧಾಳುಗಳು ಹಲವು ರೀತಿಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. 

ADVERTISEMENT

ಹಾಲಿ ಪದಾಧಿಕಾರಿಗಳು ಮತ್ತೊಮ್ಮೆ ಅಖಾಡಕ್ಕೆ ಇಳಿದಿದ್ದಾರೆ. ಇನ್ನೂ ಕೆಲವರು ಹೊಸದಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳಬೇಕು ಎಂದು ಹಳಬರು ಭಾರಿ ಪ್ರಯತ್ನ ಮಾಡುತ್ತಿದ್ದಾರೆ. 

ಬ್ಯಾಂಕಿನ ಹಾಲಿ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ, ಉಪಾಧ್ಯಕ್ಷ ಎಚ್‌.ಎಲ್‌. ಷಡಾಕ್ಷರಿ, ಹಿರಿಯ ನಿರ್ದೇಶಕ ಬಸವಾನಿ ವಿಜಯದೇವ್‌, ಅಗಡಿ ಅಶೋಕ, ಕೆ.ಪಿ. ದುಗ್ಗಪ್ಪಗೌಡ, ಜೆ.ಪಿ. ಯೋಗೀಶ್‌, ಎಸ್‌.ಪಿ. ದಿನೇಶ್‌, ಬಿ.ಡಿ. ಭೂಕಾಂತ್‌, ಜಿ.ಎನ್‌. ಸುಧೀರ್‌ ಮತ್ತೊಮ್ಮೆ ಸ್ಪರ್ಧೆ ಮಾಡಿದ್ದಾರೆ. 

ಕಾಂಗ್ರೆಸ್‌ ಮುಖಂಡ ಎಂ. ಶ್ರೀಕಾಂತ್‌ ಅವರು ಮೊದಲ ಬಾರಿ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಯ ದಿನೇಶ್‌, ಬುಳ್ಳಾಪುರ, ಜೆಡಿಎಸ್‌ನ ಯೋಗೇಶ್‌, ಶಿಮುಲ್‌ನ ಹಾಲಿ ನಿರ್ದೇಶಕ ಆನಂದ ಅವರೂ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. 

ಸಹಕಾರಿ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ ಅವರ ಹಿಡಿತದಲ್ಲಿ ಡಿಸಿಸಿ ಬ್ಯಾಂಕ್‌ ಇದೆ. ಇದರ ನಡುವೆ ಬಿಜೆಪಿಯೂ ಈ ಬಾರಿ ಆಡಳಿತ ಚುಕ್ಕಾಣಿ ಹಿಡಿಯಲು ಶತಪ್ರಯತ್ನ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ. 

ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ನ ಹಲವು ರಾಜಕಾರಣಿಗಳು ಅಖಾಡಕ್ಕೆ ಇಳಿದಿರುವುದರಿಂದ ಚುನಾವಣಾ ಕಣ ರಂಗೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.