ಶಿವಮೊಗ್ಗ: ಹೂಡಿಕೆಗೆ ಮ್ಯೂಚುವಲ್ ಫಂಡ್ಸ್ ಲಾಭದಾಯಕ ಹಾಗೂ ಸುರಕ್ಷಿತ ಆಯ್ಕೆ. ಇಲ್ಲಿ ಕನಿಷ್ಠ ₹100 ರಿಂದಲೂ ಹೂಡಿಕೆ ಆರಂಭಿಸಬಹುದು. ಯಾವಾಗ ಬೇಕಾದರೂ ನಮ್ಮ ಹೂಡಿಕೆ ಹಿಂಪಡೆಯುವ ಅವಕಾಶ ಇದೆ. ಎಲ್ಲ ಹೂಡಿಕೆಯಲ್ಲೂ ರಿಸ್ಕ್ ಇದ್ದದ್ದೇ. ಆದರೆ ಎಲ್ಲಿ ಹಣ ಹೂಡಿದರೆ ಹೆಚ್ಚು ಲಾಭ ತೆಗೆಯಬಹುದು ಎಂಬ ಜಾಣ್ಮೆಯ ಲೆಕ್ಕಾಚಾರ ಬಹುಮುಖ್ಯ...
ಇದು ಉತ್ತಮ ಭವಿಷ್ಯಕ್ಕಾಗಿ ತಮ್ಮ ಸಂಪಾದನೆಯ ಒಂದು ಭಾಗ ಹೂಡಿಕೆ ಮಾಡಲು ಆಲೋಚಿಸುವವರಿಗೆ ಶಿವಮೊಗ್ಗದ ಲೆಕ್ಕಪರಿಶೋಧಕ ಮಹೇಂದ್ರ ಹಾಗೂ ದಾವಣಗೆರೆಯ ಹೂಡಿಕೆ ತಜ್ಞ ರಮೇಶ್ ಹೆಗಡೆ ನೀಡಿದ ಸಲಹೆ.
ಗ್ರಾಹಕರಲ್ಲಿ ಹೂಡಿಕೆ ಕುರಿತ ಗೊಂದಲಗಳಿಗೆ ಪರಿಹಾರ ನೀಡಿ, ಜಾಗೃತಿ ಮೂಡಿಸಲು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ಭಾರತೀಯ ಮ್ಯೂಚುವಲ್ ಫಂಡ್ಸ್ ಅಸೋಸಿಯೇಷನ್ (ಎಎಂಎಫ್‌ಐ) ಸಹಯೋಗದಲ್ಲಿ ಗುರುವಾರ ಇಲ್ಲಿನ ಬಸವನಗುಡಿಯ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ‘ಹೂಡಿಕೆದಾರರ ಜಾಗೃತಿ ವಿಚಾರಸಂಕಿರಣ’ ಆಯೋಜಿಸಿತ್ತು. ಶಿವಮೊಗ್ಗ ನಗರ, ಜಿಲ್ಲೆಯ ವಿವಿಧೆಡೆ ಹಾಗೂ ದೂರದ ಬೆಂಗಳೂರಿನಿಂದಲೂ ಬಂದಿದ್ದ ಹೂಡಿಕೆ ಆಸಕ್ತರು ಈ ಮಾಹಿತಿಪೂರ್ಣ ಕಾರ್ಯಕ್ರಮದ ಲಾಭ ಪಡೆದರು.
ಮೊದಲಿಗೆ ಮಾತನಾಡಿದ ಹೂಡಿಕೆ ತಜ್ಞ ರಮೇಶ ಹೆಗಡೆ, ‘ಎಲ್ಲರಿಗೂ ಕೋಟ್ಯಧೀಶರಾಗಬೇಕು ಎಂಬ ಆಸೆ ಇರುತ್ತದೆ. ಆದರೆ ಶಿಸ್ತುಬದ್ಧ ಆರ್ಥಿಕತೆ, ಅರ್ಹತೆ ಮತ್ತು ಗುರಿಮುಟ್ಟಲು ಪ್ರಯತ್ನ ಮಾಡಲ್ಲ. ಹೀಗಾಗಿ ಆ ಗುರಿ ತಲುಪುವುದಿಲ್ಲ’ ಎಂದರು.
ದೈನಂದಿನ ಬದುಕಿನಲ್ಲಿ ಹೂಡಿಕೆಯ ಮಹತ್ವ. ತೀರಾ ಅಪಾಯಕ್ಕೆ ಅವಕಾಶವಿಲ್ಲದೇ ಹೂಡಿಕೆಯ ಆಯ್ಕೆಗಳು. ಅದರ ಪ್ರಯೋಜನಗಳ ಬಗ್ಗೆ ಅರ್ಥಪೂರ್ಣ ಮಾಹಿತಿ ಹಂಚಿಕೊಂಡರು. ಲಾಭದಾಯಕ ಹೂಡಿಕೆ ಯಾವುದು? ಮ್ಯೂಚುವಲ್ ಫಂಡ್ ಅಂದರೆ ಏನು? ಅದರಲ್ಲಿನ ಆಯ್ಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
‘ದೇಶದಲ್ಲಿ ಶೇ 27 ಜನರಿಗೆ ಮಾತ್ರ ಆರ್ಥಿಕ ಶಿಕ್ಷಣದ ಜ್ಞಾನ ಇದೆ. ಹೂಡಿಕೆಯಲ್ಲಿ ಚಿನ್ನ ಹಾಗೂ ರಿಯಲ್ ಎಸ್ಟೇಟ್ ತಲಾ ಶೇ 15ರಷ್ಟು ಪಾಲು ಹೊಂದಿದ್ದರೆ, ಈಕ್ವಿಟಿ ಕ್ಷೇತ್ರದಲ್ಲಿನ ಹೂಡಿಕೆ ಶೇ 4ರಷ್ಟಿದೆ. 14 ಕೋಟಿ ಜನ ಮಾತ್ರ ಡಿಮ್ಯಾಟ್ ಖಾತೆ ಹೊಂದಿದ್ದಾರೆ. ಆದರೆ ಈಚಿನ ದಿನಗಳಲ್ಲಿ ಜನರಲ್ಲಿ ಈ ಕುರಿತು ಆಸಕ್ತಿ–ಜಾಗೃತಿ ಹೆಚ್ಚುತ್ತಿದೆ. ದೇಶದಲ್ಲಿ 45 ಕಂಪನಿಗಳು ಇದರ ನಿರ್ವಹಣೆ ಮಾಡುತ್ತಿದ್ದಾರೆ’ ಎಂದರು.
‘ಇಂದು ಜಗತ್ತಿನಲ್ಲಿ ದುಡ್ಡಿಲ್ಲದೇ ಯಾವ ಕೆಲಸವೂ ನಡೆಯದು. ಹೀಗಾಗಿ ಹಣವನ್ನು ಜಾಗೃತವಾಗಿ ಬಳಸಬೇಕು. ಖರ್ಚು ಮಾಡುವುದು ಸುಲಭ. ಆದರೆ ಗಳಿಕೆ ಹಾಗೂ ಹೂಡಿಕೆ ಬಹಳ ಮುಖ್ಯ. ವಾರನ್ ಬಫೆಟ್ ಹೇಳುವಂತೆ, ಬರೀ ಒಂದೇ ಆದಾಯದ ಮೇಲೆ ಅವಲಂಬನೆ ಆಗಬೇಡಿ. ಖರ್ಚು ಮಾಡಿ ನಂತರ ಅದರಲ್ಲಿ ಉಳಿದದ್ದನ್ನು ಉಳಿತಾಯ ಮಾಡುವ ಬದಲು ಸಂಪತ್ತಿನ ಒಂದು ಪಾಲನ್ನು ಕಡ್ಡಾಯವಾಗಿ ಉಳಿಸಿ’ ಎಂದು ಹೆಗಡೆ ಕಿವಿಮಾತು ಹೇಳಿದರು.
ಎಲ್ಲೆಲ್ಲಿ ಹೂಡಿಕೆ?
ಲೆಕ್ಕಪರಿಶೋಧಕ ಮಹೇಂದ್ರ, ‘ಇವತ್ತು ಇರುವ ಹಣಕ್ಕೆ ನಾಳೆ ಬೆಲೆ ಇರುವುದಿಲ್ಲ, ನಾಳೆ ಇರುವ ಹಣಕ್ಕೆ ನಾಡಿದ್ದು ಬೆಲೆ ಇರಲ್ಲ. ದುಡ್ಡಿನ ಬೆಲೆ ಕಡಿಮೆಯಾಗುತ್ತದೆ. ಹೀಗಾಗಿ ಹೂಡಿಕೆ ಮಾಡಲು ಸೂಕ್ತ ಯೋಜನೆ ಇರಬೇಕಿದೆ. ಕೆಲಸ ಹೋದರೂ ಜೀವನ ಸಾಗಬೇಕು. ಆ ರೀತಿ ಯೋಜನೆ ಇರಬೇಕು’ ಎಂದರು.
‘ದೇಶದಲ್ಲಿ ಸಾಮಾನ್ಯವಾಗಿ ಹಣವನ್ನು ಬ್ಯಾಂಕ್‌ಗಳ ಉಳಿತಾಯ ಖಾತೆ, ಚಿನ್ನ, ಷೇರು, ಬಾಂಡ್, ವಿಮೆ, ಆಸ್ತಿ ಖರೀದಿಗೆ ವಿನಿಯೋಗಿಸಲಾಗುತ್ತಿದೆ. ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಹೆಚ್ಚು ಹಣ ಇಡುವುದೂ ಲಾಭದಾಯಕವಲ್ಲ. ಬಡ್ಡಿಯೂ ಕಡಿಮೆ. ಆಸ್ತಿ ಖರೀದಿಗೆ ದೊಡ್ಡ ಮಟ್ಟದ ಹೂಡಿಕೆ ಬೇಕು ಹಾಗೂ ಅದರಲ್ಲಿ ರಿಸ್ಕ್ ಜಾಸ್ತಿ. ವಿಮೆ ಎಂಬುದು ಹೂಡಿಕೆ ಅಲ್ಲ. ಅದು ಆಪತ್ಕಾಲಕ್ಕಾಗಿ ಮಾಡಿಕೊಂಡ ಒಪ್ಪಂದ. ಹೀಗಾಗಿ ಮ್ಯುಚುವಲ್ ಫಂಡ್ ಹೂಡಿಕೆಗೆ ಸುರಕ್ಷಿತ ಹಾಗೂ ಲಾಭದಾಯಕ’ ಎಂದು ತಿಳಿಸಿದರು.
‘ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾರುವವರಲ್ಲಿ ಶೇ 75 ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ. ಸಣ್ಣ ಪ್ರಮಾಣದ ಷೇರು ಹುಡುಕುವುದು ಇದಕ್ಕೆ ಕಾರಣ. ಹೀಗಾಗಿ ನಷ್ಟದ ಅಪಾಯವೂ ಹೆಚ್ಚಿರುತ್ತದೆ. ಸಾಮಾಜಿಕ ಜಾಲತಾಣ ನೋಡಿ ಹೂಡಿಕೆ ಮಾಡಿ ಹಣ ಕಳೆದುಕೊಳ್ಳಬೇಡಿ. ತಜ್ಞರ ಸಲಹೆ ಪಡೆದು ಮುಂದುವರಿಯಿರಿ’ ಎಂದು ಕಿವಿಮಾತು ಹೇಳಿದರು.
‘ಷೇರುಗಳಲ್ಲಿ ಹೂಡಿಕೆ ಮಾಡಬೇಕಾದರೆ ಕಂಪನಿ ಬಗ್ಗೆ, ಮಾರುಕಟ್ಟೆ ಬಗ್ಗೆ ಆಳವಾದ ಜ್ಞಾನ ಬೇಕು. ಆದರೆ ಎಲ್ಲರಿಗೂ ಈ ಮಾಹಿತಿ ಇರುವುದಿಲ್ಲ. ಅಂತಹವರಿಗೆ ಮ್ಯೂಚುವಲ್ ಫಂಡ್ ಲಾಭದಾಯಕ ಹಾಗೂ ಉತ್ತಮ ಆಯ್ಕೆ. ಇಲ್ಲಿ ಕನಿಷ್ಠ ₹ 100ರಿಂದಲೂ ಹೂಡಿಕೆ ಆರಂಭಿಸಬಹುದು. ಯಾವಾಗ ಬೇಕಾದರೂ ನಿಮ್ಮ ಹೂಡಿಕೆ ಹಿಂಪಡೆಯುವ ಅವಕಾಶ ಇದೆ. ತೆರಿಗೆ ವಿನಾಯಿತಿಯೂ ಸಿಗಲಿದೆ. ಸೆಬಿ ನಿಯಂತ್ರಣವೂ ಇದ್ದು, ಗ್ರಾಹಕರಿಗೆ ಸುರಕ್ಷತೆಯ ಭರವಸೆ ಇದೆ’ ಎಂದು ವಿವರಿಸಿದರು.
ಮೊದಲಿನಿಂದಲೂ ಹೂಡಿಕೆ ಮೇಲೆ ಆಸಕ್ತಿ ಇದೆ. ಈ ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದಕ್ಕೆ ದೇಶದ ಬೇರೆ ಬೇರೆ ಹೂಡಿಕೆ ವಲಯಗಳಿಗೆ ಹೋಲಿಸಿದರೆ ಮ್ಯೂಚುವಲ್ ಫಂಡ್ಸ್ ಹೆಚ್ಚು ಲಾಭದಾಯಕ ಹಾಗೂ ಸುರಕ್ಷಿತ ಎಂಬುದು ಮನದಟ್ಟಾಯಿತು.–ಡಿ.ಮಂಜುನಾಥ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ಎಂಸಿಎ ಓದಿದ್ದೇನೆ. ಹೀಗಾಗಿ ನನಗೆ ಮೊದಲಿನಿಂದಲೂ ಹೂಡಿಕೆಯ ಬಗ್ಗೆ ಹೆಚ್ಚು ಆಸಕ್ತಿ. ಬೇರೆ ಬೇರೆ ವಲಯದಲ್ಲಿ ಹೂಡಿಕೆ ಕೂಡ ಮಾಡಿದ್ದೇನೆ. ಈ ಕಾರ್ಯಾಗಾರದಿಂದ ಮ್ಯುಚುವಲ್ ಫಂಡ್ಸ್‌ನಲ್ಲಿ ಹೂಡಿಕೆ ಬಗ್ಗೆ ಇನ್ನಷ್ಟು ಸ್ಪಷ್ಟತೆ ದೊರೆಯಿತು.–ಬಿ.ಎಂ.ಸವಿತಾ, ಕೃಷಿ ನಗರದ ನಿವಾಸಿ ಶಿವಮೊಗ್ಗ
ಮ್ಯೂಚುವಲ್ ಫಂಡ್ಸ್‌ಗಳ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ. ಇಂದು ಅದರ ಚಿತ್ರಣ ಸಿಕ್ಕಿತು. ಮಾಹಿತಿ ಕೊರತೆಯಿಂದ ನಮ್ಮಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಕಡಿಮೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು.– ಕೋಟೆ ಮಂಜುನಾಥ್, ಶಿವಮೊಗ್ಗ
ನಮ್ಮಲ್ಲಿ ಬಹಳಷ್ಟು ಜನರಿಗೆ ಷೇರು ಮ್ಯೂಚುವಲ್ ಫಂಡ್ಸ್‌ಗಳಲ್ಲಿ ಹೂಡಿಕೆ ಮಾಡುವ ಆಸಕ್ತಿ ಇದ್ದರೂ ಅದರಲ್ಲಿನ ನಷ್ಟದ ಭೀತಿಯ ಕಾರಣಕ್ಕೆ ಹಿಂಜರಿಯುತ್ತೇವೆ. ಈ ಕಾರ್ಯಾಗಾರ ಹಿಂಜರಿಕೆ ದೂರ ಮಾಡಿತು. ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿನಿಂದ ಬಂದಿದ್ದೇನೆ.–ವಿ.ಶಾಂತಾ, ಬೆಂಗಳೂರು
‘ಪ್ರಜಾವಾಣಿ’ ‘ಡೆಕ್ಕನ್‌ಹೆರಾಲ್ಡ್ ಬಳಗದಿಂದ ಅತ್ಯುತ್ತಮ ಕಾರ್ಯಾಗಾರ ಆಯೋಜನೆ ಮಾಡಲಾಗಿದೆ. ಐದು ದಶಕಗಳಿಂದ ಪತ್ರಿಕೆ ಓದುತ್ತಿದ್ದೇನೆ. ಖಂಡಿತಾ ಇದೊಂದು ಅರ್ಥಪೂರ್ಣ ಕಾರ್ಯಕ್ರಮ.– ಸಂಚಾರಿ ನಾಗೇಶ್, ಶಿವಮೊಗ್ಗ
ಹೂಡಿಕೆ ಹೇಗೆ?
ಮ್ಯೂಚುವಲ್ ಫಂಡ್‌ನಲ್ಲಿ ಈಕ್ವಿಟಿ ಡೆಪ್ತ್ ಹೈಬ್ರಿಡ್ ಎಂಬ ಮೂರು ವಿಧದ ಆಯ್ಕೆಗಳಿವೆ. ಸಣ್ಣ ಉಳಿತಾಯ ಮಾಡುವವರಿಗೆ ಎಸ್‌ಐಪಿ ಅಂತಹ ಯೋಜನೆಗಳು ಉತ್ತಮ ಆಯ್ಕೆ. ಬ್ಯಾಂಕ್ ಏಜೆನ್ಸಿ ಇಲ್ಲವೇ ಮೊಬೈಲ್ ಆ್ಯಪ್‌ಗಳ ಮೂಲಕ ಗ್ರಾಹಕರು ಹೂಡಿಕೆ ಮಾಡಬಹುದು. ಇಲ್ಲಿಯೂ ರೆಗ್ಯುಲರ್ ಹಾಗೂ ನೇರ ಹೂಡಿಕೆಯ ಆಯ್ಕೆಗಳಿವೆ. ಒಮ್ಮೆ ಹಣ ಹೂಡಿ ತಿಂಗಳ ಲೆಕ್ಕದಲ್ಲಿ ಹಣ ಪಡೆಯಬಯಸುವವರಿಗೆ ಡಿವಿಡೆಂಡ್ ಆಯ್ಕೆ ಇದ್ದರೆ ಹೆಚ್ಚು ಲಾಭ ಬಯಸುವವರಿಗೆ ಗ್ರೋಥ್ ಆಯ್ಕೆ ಉತ್ತಮ’ ಎಂದು ಲೆಕ್ಕಪರಿಶೋಧಕ ಮಹೇಂದ್ರ ಹೇಳಿದರು. ಪ್ಲಾನ್ ಮಾಡಿ ಹೂಡಿಕೆ ಮಾಡಬೇಕು. ಆದಾಯ ಹೆಚ್ಚಿಸುವತ್ತ ಗಮನ ಹರಿಸಬೇಕು. ಹೂಡಿಕೆಯಲ್ಲಿ ರಿಸ್ಕ್ ಮತ್ತು ಲಾಭ ಕೂಡ ಇದೆ. ಹಣಕಾಸಿನ ಶಿಸ್ತು ಕಾಪಾಡಬೇಕು. ಗೋಲ್ಡ್ ಸ್ಟಾಕ್ಸ್ ಬಾಂಡ್ ಮತ್ತು ವಿಮೆ ಹಾಗೂ ಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ಹೂಡಿಕೆ ಮಾಡಬಹುದು. ಆದರೆ ಮ್ಯೂಚಲ್ ಫಂಡ್ ನಲ್ಲಿ ಸಾಕಷ್ಟು ಲಾಭಗಳು ಇವೆ.ಇಲ್ಲಿ ಎಲ್ಲವೂ ಪಾರದರ್ಶಕವಾಗಿ ಇರಲಿದೆ ಎಂದರು.
ಹೂಡಿಕೆ ವೇಳೆ ಗಮನಿಸಿ..
* ವಾರ್ಷಿಕ ಲಾಭದ ಸರಾಸರಿ ಹಣದುಬ್ಬರದ ಪ್ರಮಾಣಕ್ಕಿಂತ ಹೆಚ್ಚಿರಬೇಕು
* ಸಣ್ಣ ಮೊತ್ತದಿಂದ ಹೂಡಿಕೆ ಆರಂಭಿಸಿ
* ನಿಮ್ಮ ಒಟ್ಟು ಆದಾಯ ಹಾಗೂ ಉಳಿಕೆ ಲೆಕ್ಕಚಾರ ಸರಿ ಇರಲಿ
* ಮ್ಯೂಚುವಲ್ ಫಂಡ್ಸ್‌ನಲ್ಲಿ ಯೋಜನಾಬದ್ಧ ಹೂಡಿಕೆ ಯೋಜನೆ (ಎಸ್‌ಐಪಿ) ಹೆಚ್ಚು ಉಪಯುಕ್ತ
* ಯೋಜನಾಬದ್ಧವಾಗಿ ಹಣ ಹಿಂಪಡೆಯಲು (ಎಸ್‌ಡಬ್ಲ್ಯುಪಿ) ಮುಂದಾಗಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.