ಭದ್ರಾವತಿ: ತರಹೇವಾರಿ ವಿದ್ಯುತ್ ದೀಪಗಳ ಸೆಟ್, ಆಕಾಶ ಬುಟ್ಟಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಈ ಬಾರಿಯ ದೀಪಾವಳಿ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿ ಗಮನ ಸೆಳೆಯುತ್ತಿವೆ.
‘ಬಟ್ಟೆ ಕ್ಲಿಪ್, ಕಿವಿಯೋಲೆ, ನಕ್ಷತ್ರಾಕಾರದ ಚಿತ್ತಾರ, ಗುಂಡುಗಳ ಆಕಾರದಲ್ಲಿ ಕೆಲವು ದೀಪದ ಸರಗಳಿದ್ದರೆ, ತೂಗು ಹಾಕುವ ಗುಚ್ಛದ ದೀಪಗಳು, ಹಣತೆ ರೂಪದಲ್ಲಿ ಬೆಳಕು ಸೂಸುವ ದೀಪದ ಕಂಬಗಳು, ಸಾಲುಗಳು ಗಮನ ಸೆಳೆಯುತ್ತಿವೆ.
ಇವುಗಳ ಮಾರಾಟವೂ ಭರ್ಜರಿಯಾಗಿ ಸಾಗಿದೆ ಎನ್ನುತ್ತಾರೆ ಇಲ್ಲಿನ ಮಾರಾಟಗಾರ ಗಿರೀಶ್.
‘ಮಣ್ಣಿನ ಹಣತೆಗಳು ಹಂತಹಂತವಾಗಿ ದೂರವಾಗುತ್ತ ಸಾಗಿದ್ದು, ಅತ್ಯಾಕರ್ಷಕ ವಿದ್ಯುತ್ ದೀಪಗಳ ಮೂಲಕವೇ ದೀಪಗಳ ಹಬ್ಬಕ್ಕೆ ಅಲಂಕಾರ ಮಾಡಲಾಗುತ್ತಿದೆ. ಸಾಂಪ್ರದಾಯಿಕ ಹಬ್ಬದಾಚರಣೆ ದೂರವಾಗಿ ಎಲ್ಲವೂ ಆಧುನಿಕತೆಯ ಸೋಗಿನಡಿ ಸಿಲುಕಿಕೊಂಡಿದೆ’ ಎಂದು ನಗರದ ಹಿರಿಯರಾದ ನಾಗರಾಜ್ ಅಭಿಪ್ರಾಯಪಡುತ್ತಾರೆ.
‘ಅಂಗಡಿಗಳು ಹಾಗೂ ವಿಶೇಷವಾಗಿ ದೊಡ್ಡ ಕಟ್ಟಡಗಳಿಗೆ ವಿದ್ಯುತ್ ಸಿರೀಸ್ ಸೆಟ್ ಹಾಕಿಸಿಕೊಳ್ಳಲು ಬಾಡಿಗೆ ನೀಡುತ್ತಿದ್ದ ವಿದ್ಯುತ್ ದೀಪಾಲಂಕಾರ ಅಂಗಡಿಗಳಿಗೆ ಹೋಗುತ್ತಿದ್ದ ನಾವು ಈಗಿನ ಬೆಲೆಗೆ ಸ್ವತಃ ಸೆಟ್ ಖರೀದಿಸಿ ಶಾಶ್ವತವಾಗಿ ಇಟ್ಟುಕೊಳ್ಳುವುದೇ ಉತ್ತಮ ಎನ್ನುವಷ್ಟರ ಮಟ್ಟಿಗೆ ಸೋವಿಯಾಗಿ ವಿದ್ಯುತ್ ದೀಪಗಳ ಸೆಟ್ ಸಿಗುತ್ತಿರುವುದು ಹಬ್ಬದ ಸಂಭ್ರಮ ಹೆಚ್ಚಿಸಿದೆ’ ಎನ್ನುತ್ತಾರೆ ಅಂಗಡಿಯೊಂದರ ಮಾಲೀಕ
ಸುಧೀರ್.
‘ವಿವಿಧ ರೂಪಗಳಲ್ಲಿ ಸಿಗುತ್ತಿರುವ ವಿದ್ಯುತ್ ದೀಪಗಳು ಹಾಗೂ ಅವುಗಳನ್ನು ಕಂಟ್ರೋಲರ್ ಮೂಲಕ ಬೇಕಾದ ರೀತಿಯಲ್ಲಿ ದಿಕ್ಕು ಬದಲಿಸುವ ನಿಯಂತ್ರಣ ವ್ಯವಸ್ಥೆ ಇರುವುದು ಸಹಜವಾಗಿ ಅವುಗಳ ಬೇಡಿಕೆ ಹೆಚ್ಚು ಮಾಡಿದೆ. ಅಂತೆಯೇ ಈ ಹಿಂದಿನ ಹಬ್ಬಗಳಿಗಿಂತ ಈ ಬಾರಿಯ ದೀಪಾವಳಿಗೆ ವಿದ್ಯುತ್ ದೀಪಗಳಿಗಾಗಿ ಬೇಡಿಕೆ ಹೆಚ್ಚಿದೆ’ ಎನ್ನುತ್ತಾರೆ ಎಲೆಕ್ಟ್ರಿಕಲ್ ವಸ್ತುಗಳ ಮಾರಾಟಗಾರ
ಗುರುನಾಥ್.
‘ಈಗ ಬರುತ್ತಿರುವ ಸಿರೀಸ್ ಸೆಟ್ ಉಪಯೋಗಿಸಿ ಎಸೆಯುದಕ್ಕೆ ಬದಲಾಗಿ ಅದು ಹಾಳಾದರೆ ಅದನ್ನು ಬಟ್ಟೆ ಕ್ಲೀಪ್ ಆಗಿ, ಇಲ್ಲವೇ ಕಿವಿಗೆ ಹಾಕಿಕೊಳ್ಳೂವ ರಿಂಗ್ ಆಗಿ ಸಹ ಉಪಯೋಗಿಸಲು ಅವಕಾಶವಿದೆ. ಜತೆಗೆ ಕೈಯಲ್ಲಿ ಹಿಡಿದು ನೃತ್ಯ ಮಾಡಲು ಹಿಂದೆಲ್ಲ ಹಣತೆಯ ಮೊರೆ ಹೋಗಬೇಕಿತ್ತು. ಈಗ ಬಂದಿರುವ ಸಣ್ಣ ಬ್ಯಾಟರಿ ದೀಪಗಳು ಶಾಶ್ವತವಾಗಿ ಉಳಿಯುವುದರಿಂದ ಅದಕ್ಕೂ ಸಹ ಬೇಡಿಕೆ ಹೆಚ್ಚಿದೆ’ ಎಂದು ಅವರು ಹೇಳುತ್ತಾರೆ.
‘ವಿದ್ಯುತ್ ದೀಪದ ತರಹೇವಾರಿ ಸರಗಳು ಅಗ್ಗವಾಗುತ್ತಿರುವ ಪರಿಣಾಮ ಹಣತೆ, ಅದರಲ್ಲಿನ ವೈವಿಧ್ಯ ಕೇವಲ ಸಾಂಕೇತಿಕತೆಗೆ ಮಾತ್ರ ಉಳಿದಿದ್ದು ಎಲ್ಲವೂ ವಿದ್ಯುತ್ ದೀಪಾಲಂಕಾರ, ಆಕಾಶಬುಟ್ಟಿ ಕಡೆಗೆ ಮಾರು ಹೋಗುವ ಪರಿಸ್ಥಿತಿ ನಿರ್ಮಾಣವಾಗಿ’ ಎಂದು ಧರ್ಮಪ್ರಸಾದ್ ಅಭಿಪ್ರಾಯಪಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.