ಮಲೆನಾಡಿನಲ್ಲಿ ದೀಪಾವಳಿ ಕಾಲವೆಂದರೆ ಹಸಿರ ಸಂಭ್ರಮ. ಇದೊಂದು ಪ್ರಾಕೃತಿಕ ಹಬ್ಬ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಮಳೆ ಮತ್ತು ಮಣ್ಣಿನ ಹಬ್ಬ ವ್ಯವಸಾಯದ ಆರಂಭದಲ್ಲಿ ಬಂದರೆ, ದೀಪಾವಳಿಯು ಬೆಳೆಯ ಸಮೃದ್ಧಿಯ ಕಾಲದಲ್ಲಿ ಬರುತ್ತದೆ.
ದೀಪಾವಳಿ ಬೆಳಕಿನ ಹಬ್ಬವೂ ಹೌದು. ಪ್ರತಿ ಮನೆಯ ಮುಂದೆಯು ಬೆಳಕಿನ ಹಣತೆಯನ್ನು ನೋಡುವುದೆ ಒಂದು ಸಡಗರ. ಬಿತ್ತಿದ ಫಸಲು ಸಮೃದ್ಧವಾಗಿ ಫಲಕಟ್ಟುವ ಸುಗ್ಗಿಯ ತಯಾರಿಯ ಹಬ್ಬವು ಹೌದು. ಮಿಣೆ ದೇವರ ಪೂಜೆಯಲ್ಲಿ ನೆಗಿಲು ಕುಂಟೆ, ಕೂರಿಗೆ, ಕೊರಡು, ಮೇಣಿ, ಮೆಡಗತ್ತಿ, ಕೊಕ್ಕೆಬಿಲ್ಲು ಸ್ವಚ್ಛಗೊಳಿಸುವುದು, ಕೃಷಿ ಹತಾರಗಳನ್ನು ತೊಳೆದು ಮಿಣೆ ದೇವರ ಪೂಜೆ ಎಂದು ಆಚರಿಸಲಾಗುತ್ತದೆ. ಗದ್ದೆ ಪೂಜೆ, ತುಳಸಿ ಪೂಜೆ, ದೇವಸ್ಥಾನಗಳಿಗೆ ದೀಪ ಹಚ್ಚುವ ಆಚರಣೆ ನಡೆಯುತ್ತವೆ.
‘ನಾವು ಆಧುನಿಕ ಕಾಲಘಟ್ಟದ ಉನ್ನತ ನಾಗರಿಕತೆಯ ಕಾಲದವರಾದರೂ ಆಚರಣೆಗಳು ಇಂದಿಗೂ ಉಳಿದುಬಂದಿವೆ. ದೀಪಾವಳಿಯ ಮೊದಲ ದಿನ ನೀರು ತುಂಬುವುದು, ಮೀಯುವ ಹಂಡೆ-ಹರವಿಗಳಿಗೆ ಜೋಡಿ ಕೆಮ್ಮಣ್ಣು ಸಾರಣಿ ನಡೆಯವುದು. ಬಲಿಪಾಡ್ಯದ ಎರಡನೇ ದಿನ ‘ಕದುರು’ ಹಾಕುವರು. ಊರಿನವರಿಗೆ ಇದು ‘ಪಾಡ್ಯ’ದ ದಿನ. ಅಂದು ಹೊಲಗದ್ದೆಗಳ ಪೈರನ್ನು ಹೊಸದಾಗಿ ಮನೆಗೆ ತಂದು ಪೂಜೆ ಮಾಡಿ ಊರಿನ ದೇವರಿಗೆಲ್ಲಾ ತೆಗೆದುಕೊಂಡು ಹೋಗಿ ಅರ್ಪಿಸುತ್ತಾರೆ. ಇದನ್ನೆ ‘ಕದುರು ಹಾಕುವುದು’ ಎನ್ನುತ್ತಾರೆ.
ಕಾರ್ತಿಕದ ಸಂಜೆ 6 ಗಂಟೆ ಹೊತ್ತಿಗೆ ಕತ್ತಲು ಕವಿಯುವುದು. 6ರಿಂದ 7ರವರೆಗೆ ಹೊಲಗದ್ದೆಗಳ ಅಂಚುಗಳಲ್ಲಿ ಕೋಲು ದೀಪಗಳು ಬೆಳಗುತ್ತವೆ. ಚಾವಡಿಯಲ್ಲಿ ಹಣತೆಗಳು ಸಾಲುಗಟ್ಟುತ್ತವೆ. ಮನೆಯ ತುಳಸಿ ಕಟ್ಟೆಯಲ್ಲಿ ಗೂಡುದೀಪ ಹಚ್ಚುತ್ತಾರೆ. ಊರಿನ ಯುವಕರು ದೇವಸ್ಥಾನದಲ್ಲೋ, ಜಟ್ಟಿಗನ ಬನದಲ್ಲೋ ತುಳಸಿಕಟ್ಟೆಯ ಮುಂದೆಯೋ ಬಂದು ಸೇರುತ್ತಾರೆ. ಉಪವಾಸ ಇದ್ದವರು ಫಲಹಾರ ಸೇವಿಸುತ್ತಾರೆ. ಕಾಣಿಕೆ ಕಟ್ಟುವುದು, ‘ಹೊಸ ಕದರು’ ತರುವುದು ಅದರಿಂದ ಹೊಸ ಅಕ್ಕಿಯಲ್ಲಿ ಪಾಯಸ ಮಾಡುತ್ತಾರೆ. ದೀಪ ದೀಪೋಳಿಗೆ ಎಂದು ಉಯ್ಲು ಕೇಳುವುದು. ‘ದಿಮಿಸಾಲ್ಹೊಡಿರಣ್ಣ ದಿಮಿಸಾಲ್ಹೊಡಿರಣ್ಣ ದಿಮಿಸಾಲ್ಹೊಡಿರಣ್ಣ ಒಂದೊಂದೇ ದನಿಗೆ ಎತ್ತಿದ ಸಲ್ಲಿಗೆ ಕಿತ್ತಿದು ಬರಲೊ ಈ ಊರ ದೇವರಿಗೆ ಎನೇನಾ ಉಡಗರೋ ಈ ಊರ ಜಟ್ಟಿಗಪ್ಪಗೆ ಎನೇನಾ ಉಡಗರೋ’ ಎಂದು ಹಾಡು ಹಾಡಿ ನಲಿಯುತ್ತಾರೆ.
ಈ ಹಬ್ಬಕ್ಕೆ ಪುರಾಣದ ಕಥೆಯೂ ಸೇರಿಕೊಂಡಿದೆ. ಸಮೃದ್ಧಿಗೆ ಹೆಸರಾದ ಬಲಿಚಕ್ರವರ್ತಿ ಮೂರ್ತಿಗೆ ಮೂರು ಹೆಜ್ಜೆ ಭೂಮಿ ನೀಡುವುದು ಮಹತ್ವದಲ್ಲವೆಂದು ಭಾವಿಸಿದ. ಆದರೆ, ವಾಮನನು ತ್ರಿವಿಕ್ರಮನಾಗಿ ಒಂದು ಹೆಜ್ಜೆಗೆ ಭೂಮಿಯನ್ನೆಲ್ಲ ಅಳೆದು ತೆಗೆದುಕೊಂಡ. ಇನ್ನೊಂದು ಹೆಜ್ಜೆಗೆ ಆಕಾಶವನ್ನೆಲ್ಲ ಅಳೆದುಬಿಟ್ಟ. ವಾಮನನ ಮೂರನೆಯ ಹೆಜ್ಜೆಗೆ ಜಾಗವಿಲ್ಲ ಎಂದಾಗ ಬಲಿ ಬೇರೆ ಕಾಣದೆ ತನ್ನ ಮಸ್ತಕವನ್ನೇ ತೋರಿಸಿದ. ಬಲಿಯ ದಾನದ ಬುದ್ಧಿಗೆ ಮೆಚ್ಚಿದ ವಿಷ್ಣು ಪಾತಾಳಕ್ಕೆ ಹೋಗುವ ಮುನ್ನ ವರ ಕೇಳು ಎಂದನಂತೆ, ಬಲಿ ವರ್ಷಕೊಮ್ಮೆಯಾದರೂ ನನ್ನ ಸಮೃದ್ಧ ರಾಜ್ಯವನ್ನು ನೋಡಿಕೊಂಡು ಹೋಗುವಂತೆ ವರ ಕರುಣಿಸು ಎಂದು ಬೇಡಿದ ಕಥೆ ಈ ದೀಪಾವಳಿ ಹಬ್ಬಕ್ಕಿದೆ. ಹಾಗಾಗಿ ಪ್ರತಿ ದೀಪಾವಳಿಯಂದು ಬಲಿಚಕ್ರವರ್ತಿ ತನ್ನ ಸಮೃದ್ಧ ಭೂಮಿಯನ್ನು ನೋಡಲು ಬರುತ್ತಾನೆಂಬುದು ಜನಪದರ ನಂಬಿಕೆ. ಆತ ನೋಡಲೆಂದೇ ಅನೇಕ ಸಂಭ್ರಮದ ಆಚರಣೆಗಳನ್ನು ಆಚರಿಸುವುದುಂಟು. ಸಾಲು ಹಬ್ಬಗಳು ಕಳೆದರೂ ಮನೆಯನ್ನು ಬೆಳಗುವಂತೆ ಬಳಸದೇ ಇಟ್ಟ ಪಾತ್ರೆ-ಪಗಡೆಗಳನ್ನು ಬೆಳಗುವುದು, ದನಕರುಗಳಿಗೆ ಸ್ನಾನ ಮಾಡಿಸುವುದು. ಮಕ್ಕಳಿಗೆ ಎಣ್ಣೆ ಮಜ್ಜನವು ನಡೆಯುವುದು. ಹೆಣ್ಣು ಮಕ್ಕಳನ್ನು, ಅಳಿಯಂದಿರನ್ನು ಈ ಹಬ್ಬಕ್ಕೆ ಕರೆಯುವುದು ವಾಡಿಕೆ.
ಮಲೆನಾಡಿನ ಒಕ್ಕಲಿಗರು, ಕುರುಬರು, ದೀವರು, ಲಿಂಗಾಯಿತರು, ಲಂಬಾಣಿಗರು, ತೆಲುಗರು, ಕೊಂಕಣಿಯವರು ಹಲವು ಕುಲದವರೂ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ಲಂಬಾಣಿ ಕುಲದ ಹೆಣ್ಣು ಮಕ್ಕಳು ಸಿಂಗರಗೊಂಡು, ಗುಂಪಿನಲ್ಲಿ ಸಾಗಿ ಕಾಡುಗಳಲ್ಲಿ ಹೂವು ತರುವುದ ನೋಡುವುದೆ ಚಂದ. ಮಲೆನಾಡಿನ ಜನರಿಗೆ ದೊಡ್ಡ ಹಬ್ಬ. ಈ ಹಬ್ಬವನ್ನು ಐದು ದಿನಗಳ ಕಾಲ ಆಚರಿಸುತ್ತಾರೆ. ಪಾಡ್ಯದಿಂದ ವರ್ಷ ತೊಡಕಿನವರಗೆ ಐದು ದಿನಗಳ ಕಾಲ ದೀಪವನ್ನು ತೆಗೆದುಕೊಂಡು ಸುತ್ತಮುತ್ತಲ ಮನೆಯ ದೀಪವನ್ನು ತಮ್ಮ ಮನೆಯ ದೀಪದಿಂದ ಹಚ್ಚುತ್ತಾರೆ.
ಮಲೆನಾಡಿನ ದೀಪಾವಳಿಯ ಮೊದಲ ದಿನ ‘ಬೂರೆ ಕಳವು’ ಆಚರಣೆ ನಡೆಯುತ್ತದೆ. ಅಂದರೆ ಆ ಒಂದು ದಿನ ಕಳ್ಳತನ ಮಾಡಲು ಅನುಮತಿ ಉಂಟು. ಅಂದು ಕದ್ದವರಿಗೆ ಶಿಕ್ಷೆ ಇಲ್ಲ. ಆದರೆ ಸಿಕ್ಕಿ ಬೀಳಬಾರದು. ಒಂದು ಪಕ್ಷ ಸಿಕ್ಕಿ ಬಿದ್ದರೆ ಅಪಶಕುನದ ಸೂಚನೆ ಎಂಬ ನಂಬಿಕೆ ಇದೆ. ಮನೆಯ ಹಿತ್ತಲಲ್ಲಿ ತರಕಾರಿ, ಹಣ್ಣು, ಹೂವುಗಳು, ಮೀಯುವ ಹಂಡೆಗಳು ಕಳುವಾಗುತ್ತವೆ. ಮಕ್ಕಳು ತೋಟದಲ್ಲಿ ಎಳೆನೀರು ಕದಿಯುವುದು ಇತ್ಯಾದಿ.
ಮಲೆನಾಡಿನಗರ ಅಂಟಿಗೆ-ಪಂಟಿಗೆ ದೀಪಾವಳಿ ಹಬ್ಬದ ಇನ್ನೊಂದು ವಿಶೇಷ. ಇದನ್ನು ಕಲೆಯ ಭಾಗವಾಗಿ ಗುರುತಿಸಲಾಗಿದೆ. ಇದು ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯವರೆಗೆ ಪ್ರಚಲಿತವಿರುವ ಕಲೆಯೂ ಆಗಿದೆ. ಅವಂಟಿಗ್ಯೊ-ಪವಂಟಿಗ್ಯೊ, ಆಡೀಪೀಡಿ, ಅಂಟಿ ಸುಂಟಿ, ಅವಟಿಗೊ-ಪವಟಿಗೊ, ಔಂಟಗ್ಯೋ-ಸುಂಟಿಗ್ಯೋ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಮುಖ್ಯವಾಗಿ ದೀವರು, ಲಿಂಗಾಯಿತರು, ಬಂಟರು, ಒಕ್ಕಲಿಗರು ಹಾಗೂ ಹಸಲರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಅಂಟಿಸುವುದು ದೀಪಾವಳಿಯ ಹಬ್ಬದ ವಿಶೇಷ. ನಾಲ್ಕು ದಿವಸ ಅಂಟಿಗೆ-ಪಂಟಿಗೆಯವರು ಮನೆಮನೆಗೆ ತೆರಳಿ ದೀಪ ಕೊಡುವರು. ದೀಪ ಹಚ್ಚುವುದು ಮತ್ತು ಊರೂರಿಗೆ ಹೊತ್ತೊಯ್ಯುವ ಈ ಸಂಪ್ರದಾಯ ಪ್ರಧಾನವಾಗಿ ಬೆಳಕು ನೀಡುವ ಕ್ರಿಯೆಗೆ ಸಂಬಂಧವಿದೆ. ದಾರಿ ಸಾಗಲು ದೀಪದ ಯಾತ್ರಗೆ ಸಂಬಂಧಿಸಿದ ಪದಗಳು, ಇತರ ಕಥನ ಪದಗಳನ್ನು ಹಾಡುತ್ತಾರೆ. ಬಾಗಿಲು ತೆಗೆಯುವ ಹಾಡು, ದೀಪ ಹಚ್ಚುವ ಹಾಡು, ಎಣ್ಣೆ ಎರೆಯುವ ಹಾಡು, ಭಾವನೆಂಟರ ಹಾಡು, ದೀಪ ಆರಿಸುವ ಪದ, ಜಟ್ಟಿಗರು ದೀಪ ಕೂರಿಸುವ ಮೂಲಕ ಮುಗಿಯುವುದು.
ದನಕರುಗಳ ಹಬ್ದ: ರೈತನ ಮಿತ್ರ ದನಕರುಗಳಿಗೆ ಸಿಂಗಾರದ ಸಿರಿತನ. ಸಂಕ್ರಾಂತಿಯಲ್ಲಿ ಕಿಚ್ಚು ಹಾಯಿಸಿದರೆ ಮತ್ತೆ ದನಕರುಗಳಿಗೆ ಈ ಬಗೆಯ ಸಡಗರ ಬರುವುದು ದೀಪಾವಳಿಯ ಗೋಪೂಜೆಯಲ್ಲಿ. ಊರವರು ಬೆಳಗ್ಗೆ ಮನೆಯಲ್ಲಿರುವ ಅಷ್ಟೂ ದನಗಳನ್ನು ನದಿ, ಹಳ್ಳಗಳಲ್ಲಿ ಒಣ ಹುಲ್ಲು, ಹೀರೆಕಾಯಿಯ ಚಗರೆ ಬಳಸಿ ತೊಳೆಯುವುದನ್ನು ನೋಡುವುದೇ ಒಂದು ವಿಶೇಷ. ವಾರದ ಮುಂಚೆಯೇ ಲಾಳದ ಸಾಬರು ದನಗಳ ಕೊಂಬು ಸವರುವುದು, ಲಾಳ ಕಟ್ಟುವುದು ನಡೆಯುತ್ತದೆ. ತೊಳೆದ ದನಗಳ ಕೊಂಬುಗಳಿಗೆ ಚಾಕುವಿನಿಂದ ಸಿಬಿರು ತೆಗೆಯುವರು. ರೈತರು ಒಬ್ಬರಿಗಿಂತ ಒಬ್ಬರು ಹಟಕ್ಕೆ ಬಿದ್ದವರಂತೆ ಪ್ರತಿಷ್ಟೆಯಿಂದ ಅವುಗಳಿಗೆ ಹೊಲಿಸಿದ ಹೊಸ ಬಟ್ಟೆಯಿಂದ ಸಿಂಗರಿಸುವುದು, ಕಿಚ್ಚು ಹಾಯಿಸುವುದನ್ನು ನೋಡುವುದೇ ವಿಶೇಷ. ಮಲೆನಾಡಿನ ಕೆಲವು ಹಳ್ಳಿಗಳಲ್ಲಿ ಉಗಲುಕಾಯಿ ಹಾರ, ಕಕ್ಕೆ ಹೂವಿನ ಹಾರವನ್ನು ಜಾನುವಾರುಗಳಿಗೆ ಸಿಂಗರಿಸುವುರು. ಎತ್ತಿನಗಾಡಿ ತೊಳೆದು ಸಿಂಗರಿಸುವುದು ನಡೆಯುತ್ತದೆ. ಉಳ್ಳವರು, ವ್ಯಾಪಾರಸ್ಥರು ಲಕ್ಷ್ಮಿಪೂಜೆ ಮಾಡುವರು.
ಮನೆಮನೆಗಳ ಮುಂದೆ ರಂಗೋಲಿ ಬಿಡಿಸುವುದು ಈ ಹಬ್ಬದ ವಿಶೇಷ. ಅಣ್ಣೆ ಹೂವು, ಫಲಕಟ್ಟಿದ ರಾಗಿತೆನೆ, ಜೋಳ, ಭತ್ತ, ಕಡ್ಡಿಯಾಕಾರದ ಉತ್ರಾಣಿ ಹೂವು, ಅವರೇ ಹೂವು, ತೊಗರಿ ಹೂವು, ಕುಂಬಳ ಹೂವುಗಳನ್ನು ಬೆನಕನ ಮಾಡಿ, ಅದರಲ್ಲಿ ನೆಟ್ಟು ಸಿಂಗರಿಸಿ ಬಣ್ಣಬಣ್ಣದ ರಂಗೋಲಿ ಬಿಡಿಸಿ ಸಂಭ್ರಮಿಸುತ್ತಾರೆ. ಇದು ಕಾರ್ತಿಕ ಮಾಸ ಕಳೆಯುವವರೆಗೆ ನಡೆಯುತ್ತದೆ.
ತೀರ್ಥಹಳ್ಳಿ ಭಾಗದಲ್ಲಿ ಗೌರಿ ಗಣೇಶ ಹಬ್ಬದಲ್ಲಿ ಅಳಿಯನಿಗೆ, ಮಗಳಿಗೆ ವಿಶೇಷ ಉಡುಗೆ, ಬಂಗಾರ ಕೊಡಿಸುವುದು ನಡೆಯುತ್ತದೆ. ಅಳಿಯನು ಅತ್ತೆ-ಮಾವ, ಭಾವ, ಮೈದುನ, ನಾದಿನಿಯರಿಗೆ ಉಡುಗೊರೆ ಕೊಡುವುದು ಇದೆ. ತೌರಿಗೆ ಬರುವ ಹೆಣ್ಣುಮಕ್ಕಳ, ಅಳಿಯಂದಿರ, ಮಕ್ಕಳು-ಮೊಮ್ಮಕ್ಕಳ ಖುಷಿ, ಭಾವದ ಎಳೆಗಳ ನರ್ತನವೇ ನಡೆಯುವುದು.
ಮಲೆನಾಡು ಕಾಡು ಪ್ರದೇಶ. ಈ ಕಾಡಿನಲ್ಲಿ ದೀಪದ ಹಬ್ಬ ಇರುವುದೇ ವಿಶೇಷ. ನೀರು ತುಂಬುವ ದೀಪ ಹಚ್ಚುವ ಮಲೆನಾಡಿಗರು ವಾಂಟೆ ಕಡ್ಡಿ, ಪುಂಡಿ ಕಡ್ಡಿ ಇಲ್ಲದಿರಿ ಬಿದರ ದಬ್ಬೆ, ಅಡಿಕೆ ದಬ್ಬೆ ಹಿಡಿದು ಗದ್ದೆಗಳಿ ಹೋಗಿ ದೀಪಾವಳಿ ಅಮವಾಸ್ಯೆ ದಿವಸ ದೀಪ ಹಚ್ಚಿ ಬರುವುದು ಸಂಜೆ 6ರಿಂದ 7 ಗಂಟೆಗೆ ಒಳಗೆ ಮುಗಿಯುವುದು. ಗದ್ದೆಯಲ್ಲಿ, ದೇವರ ಬನದಲ್ಲಿ, ದೇವಸ್ಥಾನ, ತೋಟಗಳಲ್ಲಿ ದೀಪ ಹಚ್ಚುವುದು ವಿಶೇಷ. ಇಂಗಾರದ ಹೂವು, ಮುಂಡಗದ ಹೂವು, ಹುಲಿ ಎಲೆ, ಪಚ್ಚೆ ತೆನೆ, ವಾಟೆ ಎಲೆ, ಕಕ್ಕೆ ಎಲೆ, ಚೆಂಡೂವುಗಳನ್ನು ಸುತ್ತಿ ಗದ್ದೆಗಳನ್ನು ಸಿಂಗರಿಸುತ್ತಾರೆ. ವಿಶೇಷ ಅಡುಗೆಗಳು ಈ ಹಬ್ಬದ ವಿಶೇಷ. ಹುಗ್ಗಿ ಬಾನ, ಮೊಸರು ಬಾನ, ಕಿಚಡಿ, ಗಾರಿಗೆ, ಕಡುಬು, ಹಲ್ವ, ಪಾಯಸ, ಚೀನಿ ಕಾಯಿಯಿಂದ (ಸಿಹಿಕುಂಬಳ) ಕಡುಬು ಮತ್ತು ಪಾಯಸ ಮಾಡುವುರು. ಸಸ್ಯಾಹಾರಿ ಅಡುಗೆಗಳು, ಹಣ್ಣಿನ ಅಡುಗೆಗಳು, ಸಿಹಿಕಡುಬು, ಸಾದಾ ಕಡುಬು, ಬಟ್ಟಲು ಕಡುಬು, ಕಾಯಿ ಕಡುಬು, ಹೊರಲು ಕಡುಬು, ಉದರಿಗೆ ಹಿಟ್ಟು ಸವಿಯಲು ಆನಂದವಾಗುವುದು. ದೀಪಾವಳಿಗೆ ಮುನ್ನ ಭೂಮಿ ಹುಣ್ಣಿಮೆ ಮಾಡುವ ಜನರು ಬಲಿಪಾಡ್ಯಮಿಯಂದು ಮಲೆನಾಡಿನಲ್ಲಿ ಗೋವುಗಳ ಕೊರಳಿಗೆ ಬಾಳೆಹಣ್ಣು, ಅಕ್ಕಿಹಿಟ್ಟಿನಿಂದ ತಯಾರಾದ ರೊಟ್ಟಿಯನ್ನು ಕಟ್ಟುವುದು ವಿಶೇಷ. ಮಲೆನಾಡಿನಲ್ಲಿ ಹಸಿರು ತುಂಬಿದ ಗದ್ದೆಗಳಲ್ಲಿ ಕೊಳ್ಳಿ ಹಿಡಿದು ದೀಪ ಹಚ್ಚಿ ಬರುವ ಜನರ ಈ ಆಚರಣೆಗಳು ಅಗ್ನಿ ಮತ್ತು ಮಳೆಯ ಈ ಆಚರಣೆಗಳು ಸಂಶೋಧಕರ ಅಧ್ಯಯನ ವಸ್ತುವಾಗುವುದು. ಕಾಡು ಗೂಡುಗಳಲ್ಲಿ ದೀಪಗಳ ಸಂದೋಹ, ದೊಂದಿ ಹಿಡವ ಜನರ ಸಂಸ್ಕೃತಿಯ ಬೆಳಕಿನ ಬೆಳಕೇ ವಿಶೇಷ.
ಲೇಖಕರು: ಅಧ್ಯಾಪಕ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.