ಕೋಣಂದೂರು: ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತಿಲ್ಲ. ಇದರಿಂದಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭವೂ ಸಿಗುತ್ತಿಲ್ಲ...
ಇದು ಹೋಬಳಿಯ ಪಡಿತರ ಚೀಟಿ ವಂಚಿತ ಕುಟುಂಬಗಳ ಅಳಲು.
ಸರ್ಕಾರ ಘೋಷಿಸಿರುವ 5 ಗ್ಯಾರಂಟಿಗಳನ್ನು ಪಡೆಯಲು ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಚೀಟಿ ಅತ್ಯವಶ್ಯಕ. ಆದರೆ ಬಹುಪಾಲು ಕುಟುಂಬಗಳು ಪಡಿತರ ಚೀಟಿಗಳಿಂದ ವಂಚಿತವಾಗಿವೆ. ಅಂತಹ ಕುಟುಂಬಗಳಿಗೆ ‘ಗ್ಯಾರಂಟಿ’ ಲಾಭವೂ ಮರೀಚಿಕೆಯಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಫೆ. 10ರಂದು ತಾಲ್ಲೂಕು ಆಡಳಿತ ಗ್ಯಾರಂಟಿ ಸಮಾವೇಶ ಆಯೋಜಿಸಿದೆ. ಅನ್ನ ಭಾಗ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಯುವ ನಿಧಿ ಸೇರಿ ಸರ್ಕಾರದ ಗ್ಯಾರಂಟಿಗಳಿಗೆ ಇದುವರೆಗೂ ಅರ್ಜಿ ಸಲ್ಲಿಸದೇ ಇರುವ, ಅರ್ಜಿ ಸಲ್ಲಿಸಿ ತಾಂತ್ರಿಕ ದೋಷದಿಂದ ಗ್ಯಾರಂಟಿ ಲಾಭದಿಂದ ವಂಚಿತರಾದವರ ಸಮಸ್ಯೆಯನ್ನು ಇತ್ಯರ್ಥ ಪಡಿಸುವ ಉದ್ದೇಶವನ್ನು ಸಮಾವೇಶ ಹೊಂದಿದೆ. ಆದರೆ, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ನೀಡಿಲ್ಲ. ಇದರಿಂದ ಸಮಾವೇಶ ಅಪೂರ್ಣವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಗ್ಯಾರಂಟಿ ಸಮಾವೇಶದಲ್ಲಿ ಅರ್ಹರಿಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹಾಗೂ ಹೆಸರು ಸೇರಿಸಲು ಗರಿಷ್ಠ ಅವಕಾಶ ಕಲ್ಪಿಸಬೇಕು. ಗ್ರಾಮಾಂತರ ಭಾಗದಲ್ಲಿ ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಅಂತಹ ಸ್ಥಳಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಅರ್ಹ ಕುಟುಂಬಗಳಿಗೆ ಪಡಿತರ ಚೀಟಿ ಸಿಕ್ಕ ನಂತರ ಕಳೆದ ತಿಂಗಳುಗಳ ಅನ್ನಭಾಗ್ಯ ಅಕ್ಕಿ, ಗೃಹ ಲಕ್ಷ್ಮಿ, ಗೃಹ ಜ್ಯೋತಿ ಸೌಲಭ್ಯವನ್ನು ತಲುಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದೂ ನಾಗರಿಕರ ಮನವಿಯಾಗಿದೆ.
ತ್ವರಿತವಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಬೇಕು. ಗ್ರಾಮಾಂತರ ಪ್ರದೇಶಗಳ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಿಳಿವಳಿಕೆ ನೀಡಿ ಅರ್ಹರು ಇದರ ಲಾಭ ಪಡೆಯುವಂತೆ ಕ್ರಮ ಕೈಗೊಳ್ಳಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.