ಶಿವಮೊಗ್ಗ: ಜಮೀನಿನ ಪಹಣಿಗೆ (ಆರ್‌ಟಿಸಿ) ಆಧಾರ್ ಜೋಡಣೆ ಮಾಡುವ ಕಾರ್ಯಕ್ಕೆ ರೈತಾಪಿ ವರ್ಗ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಪಹಣಿ–ಆಧಾರ್ ಜೋಡಣೆ ಕಾರ್ಯದಲ್ಲಿ ಶೇ 53ರಷ್ಟು ಮಾತ್ರ ಪ್ರಗತಿಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 8,06,955 ಮಂದಿ ಜಮೀನಿನ ಪಹಣಿ ಹೊಂದಿದ್ದಾರೆ. ಅವರಲ್ಲಿ ಇಲ್ಲಿಯವರೆಗೆ 4,27,097 ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಇನ್ನೂ 3,79,858 ಪಹಣಿಗಳಿಗೆ ಆಧಾರ್ ಲಿಂಕ್ ಮಾಡಬೇಕಿದೆ. ಗ್ರಾಮ ಲೆಕ್ಕಿಗರು ಮನೆಮನೆಗೆ ತೆರಳಿ ಪಹಣಿಗೆ ಆಧಾರ್ ಜೋಡಣೆ ಕಾರ್ಯ ಮಾಡುತ್ತಿದ್ದಾರೆ.
ಪಹಣಿಗೆ ಆಧಾರ್ ಲಿಂಕ್ ವಿಚಾರದಲ್ಲಿ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ಪ್ರಗತಿ ಆಗಿದೆ. ಶೇ 39ರಷ್ಟು ರೈತರು ಮಾತ್ರ ಜೋಡಣೆ ಮಾಡಿಸಿದ್ದಾರೆ. ಶಿವಮೊಗ್ಗ ತಾಲ್ಲೂಕಿನಲ್ಲಿ ಶೇ 66ರಷ್ಟು ಆಧಾರ್ ಲಿಂಕ್ ಮಾಡಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಶೇ 61ರಷ್ಟು ಆಗಿದೆ. ಹೊಸನಗರ ತಾಲ್ಲೂಕಿನಲ್ಲಿ ಶೇ 56ರಷ್ಟು ಆಗಿದೆ.
ಜಮೀನಿನ ಮಾರಾಟ, ಕೊಳ್ಳುವಿಕೆಗೆ ನೋಂದಣಿ ಸಮಯದಲ್ಲಿನ ಅಕ್ರಮ, ಬೆಳೆ ನಷ್ಟ ಪರಿಹಾರ, ವಿಮಾ ಮೊತ್ತ, ಸಾಲ ನೀಡಿಕೆ, ಸಾಲ ಮನ್ನಾ ಸೌಲಭ್ಯ, ಸರ್ಕಾರದ ಸವಲತ್ತುಗಳನ್ನು ಪಡೆಯಲು ಆಧಾರ್–ಪಹಣಿ ಲಿಂಕ್ ಮಾಡುವುದರಿಂದ ಸುಲಭವಾಗಲಿದೆ. ಒಬ್ಬರ ಹೆಸರಿನಲ್ಲಿರುವ ಜಮೀನಿನ ದಾಖಲೆಯನ್ನು ಮತ್ತೊಬ್ಬರು ಬಳಸುವುದಕ್ಕೆ ಕಡಿವಾಣ ಹಾಕುವುದಕ್ಕಾಗಿಯೇ ಪಹಣಿಗೆ ಆಧಾರ್ ನಂಬರ್ ಲಿಂಕ್ ಮಾಡುವ ಕಾರ್ಯವನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ.
ಆರ್‌ಟಿಸಿ–ಆಧಾರ್ ಜೋಡಣೆ ಕೆಲಸ ಮುಗಿಸಿದರೆ ಅಕ್ರಮಕ್ಕೆ ಆಸ್ಪದ ಇರುವುದಿಲ್ಲ. ಬೆಳೆ ಪರಿಹಾರ ನೀಡುವಲ್ಲಿ ಗೊಂದಲವೂ ಇರುವುದಿಲ್ಲ. ಮ್ಯುಟೇಷನ್ ಸೇರಿ ಎಲ್ಲಾ ಸರ್ಕಾರಿ ಸೇವೆಗಳನ್ನೂ ಸುಲಭವಾಗಿ ರೈತರ ಮನೆ ಬಾಗಿಲಿಗೆ ತಲುಪಿಸಬಹುದು. ಸರ್ಕಾರದ ಸೌಲಭ್ಯಗಳನ್ನು ರೈತರು ನೇರವಾಗಿ ಪಡೆದುಕೊಳ್ಳಬಹುದು ಎಂಬ ಆಶಯವೂ ಇದರ ಹಿಂದೆ ಇದೆ.
ರೈತರಲ್ಲಿ ಸಾಕಷ್ಟು ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಆದರೂ ಲಿಂಕ್ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ ಹೇಳುತ್ತಾರೆ.
ರೈತರ ಆಧಾರ್ ಕಾರ್ಡ್‌ಗೆ ಜೋಡಣೆಯಾದ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. ಅದನ್ನು ಗ್ರಾಮ ಲೆಕ್ಕಿಗರಿಗೆ ಹೇಳಬೇಕು. ನಂತರ ಜೋಡಣೆ ಕಾರ್ಯವನ್ನು ಗ್ರಾಮ ಲೆಕ್ಕಿಗರು ಮುಂದುವರಿಸುತ್ತಾರೆ ಎಂದು ಅವರು ಪ್ರಕ್ರಿಯೆಯನ್ನು ವಿವರಿಸುತ್ತಾರೆ.
ಪಹಣಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ. ಸರ್ಕಾರದ ವಿವಿಧ ಯೋಜನೆಯಡಿ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ಅನುಕೂಲವಾಗಲಿದೆ. ಹೀಗಾಗಿ ಸ್ವಯಂ ಪ್ರೇರಿತರಾಗಿ ಆಧಾರ್ ಲಿಂಕ್ ಮಾಡಿಸಲು ಮುಂದಾಗಬೇಕು ಎಂದು ಅವರು ಮನವಿ ಮಾಡುತ್ತಾರೆ.
ರಾಜ್ಯ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಪಡೆದುಕೊಳ್ಳಲು ರೈತರು ತಮ್ಮ ಜಮೀನುಗಳ ಪಹಣಿಗೆ ಆಧಾರ್ ಲಿಂಕ್ ಮಾಡಲು ಮುಂದಾಗಬೇಕಿದೆ. ಇದರಿಂದಾಗಿ ಸಾಕಷ್ಟು ಅನುಕೂಲವಾಗುತ್ತದೆ.–ಸಿದ್ಧಲಿಂಗರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.