ADVERTISEMENT

ಆನವಟ್ಟಿ | ಹದಗೆಟ್ಟ ರಸ್ತೆ: ದುರಸ್ತಿಗೆ ಮುಂದಾದ ಗ್ರಾಮಸ್ಥರು

ರವಿ ಆರ್.ತಿಮ್ಮಾಪುರ
Published 6 ಜೂನ್ 2024, 6:33 IST
Last Updated 6 ಜೂನ್ 2024, 6:33 IST
ಆನವಟ್ಟಿ ಸಮೀಪದ ವಿಠಲಾಪುರ ಗ್ರಾಮದ ರಸ್ತೆಯನ್ನು ಗ್ರಾಮಸ್ಥರೇ ಅಭಿವೃದ್ಧಿ ಪಡಿಸುತ್ತಿರುವುದು
ಆನವಟ್ಟಿ ಸಮೀಪದ ವಿಠಲಾಪುರ ಗ್ರಾಮದ ರಸ್ತೆಯನ್ನು ಗ್ರಾಮಸ್ಥರೇ ಅಭಿವೃದ್ಧಿ ಪಡಿಸುತ್ತಿರುವುದು   

ಆನವಟ್ಟಿ: ಸಚಿವರಿಗೆ, ಶಾಸಕರು, ಸಂಸದರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಹದಗೆಟ್ಟ ರಸ್ತೆ ದುರಸ್ತಿಯಾಗದ ಕಾರಣ ಸಮೀಪದ ವಿಠಲಾಪುರದ ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದಾರೆ.

ಗ್ರಾಮದಿಂದ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ, ಪದವಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು, ಉದ್ಯೋಗಕ್ಕೆ ಹೋಗುವವರು ಮತ್ತು ತೋಟ, ಗದ್ದೆಗೆ ಹೋಗುವ ಕೃಷಿಕರು ಇದೆ ರಸ್ತೆಯಲ್ಲಿ ಸಾಗಬೇಕು. ಒಂದೂವರೆ ಕಿ.ಮೀ ರಸ್ತೆ ಹಾಳಾಗಿ ಹಲವು ವರ್ಷಗಳೇ ಕಳೆದಿವೆ.

ಗ್ರಾಮದ ಒಳಗೆ ಬಸ್‍ ವ್ಯವಸ್ಥೆ ಇಲ್ಲ. ಸ್ವಂತ ವಾಹನವಿದ್ದರೂ ಮಳೆಗಾಲದಲ್ಲಿ ಹೊರಗೆ ಹೋಗಲು ಸಾಧ್ಯವಿಲ್ಲ. ನಡೆದುಕೊಂಡು ಹೋಗುವುದು ಅನಿವಾರ್ಯ. ಅದೂ ಕೆಸರಿನ ಮಜ್ಜನದೊಂದಿಗೆ. ಇದರಿಂದ ಗ್ರಾಮಸ್ಥರು ತಾವೇ ದುರಸ್ತಿ ಕೈಗೊಂಡಿದ್ದಾರೆ. 

ADVERTISEMENT

₹ 2 ಲಕ್ಷ ದೇಣಿಗೆ ಸಂಗ್ರಹಿಸಿ ಟ್ರ್ಯಾಕ್ಟರ್, ಜೆಸಿಬಿ ತರಿಸಿ ರಸ್ತೆಗೆ ಮಣ್ಣು ಹಾಕಿ ಅಭಿವೃದ್ಧಿ ಪಡಿಸಿದ್ದಾರೆ.

‘ಜಡೆ ಮುಖ್ಯ ರಸ್ತೆಯಿಂದ ವಿಠಲಾಪುರ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ. ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರು ಮಳೆಗಾಲದಲ್ಲಿ ಬರಲು ಹರಸಹಾಸ ಪಡಬೇಕು. ಒಮ್ಮೆ ಕಾರು ತಂದು ರಸ್ತೆಯಲ್ಲಿ ಸಿಲುಕಿ, ವಾರದ ನಂತರ ತೆಗೆದುಕೊಂಡು ಹೋಗಿದ್ದಾರೆ. ಮೂಗೂರು ಏತ ನೀರಾವರಿಗಾಗಿ ರಸ್ತೆಯಲ್ಲೇ ಪೈಪ್‍ಲೈನ್‍ಗಾಗಿ ಕಾಲುವೆ ತೋಡಿ ಚೆನ್ನಾಗಿದ್ದ ರಸ್ತೆಯನ್ನು ಹಾಳು ಮಾಡಿದ್ದಾರೆ. ಅಂದಿನ ಶಾಸಕರಿಗೆ ಮನವಿ ಸಲ್ಲಿಸಿದರೆ ಭರವಸೆ ಕೊಟ್ಟರೇ ಹೊರತು ಕಾಮಗಾರಿ ಕೈಗೊಳ್ಳಲಿಲ್ಲ’ ಎಂದು ಶಿವಾನಂದ ಗೌಡ ದೂರಿದರು.

‘ಮಳೆಗಾಲ ಪ್ರಾರಂಭವಾಗುತ್ತಲೇ ನಮಗೆ ಆಂತಕ ಶುರುವಾಗುತ್ತದೆ. ಮಳೆ ಬಿದ್ದ ತಕ್ಷಣ ರಸ್ತೆ ಕೆಸರುಗದ್ದೆಯಂತೆ ಆಗುತ್ತದೆ. ರಸ್ತೆಯಲ್ಲಿ ಶಾಲಾ ಮಕ್ಕಳು, ರೈತರು,  ಓಡಾಡುವುದೇ ಕಷ್ಟ‘ ಎಂದು ಅವರು ಮಾತು ಸೇರಿಸಿದರು.

‘ಮಳೆಗಾಲ ಪ್ರಾರಂಭವಾಗಿದ್ದರಿಂದ ನಡೆದುಕೊಂಡು ಹೋಗಲು ಸಾಧ್ಯವಾಗುವಂತೆ ತಾತ್ಕಾಲಿಕವಾಗಿ ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡುತ್ತಿದ್ದೇವೆ. ಲೋಕಸಭಾ ಚುನಾವಣೆ ಮುನ್ನ ಸಚಿವರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡಿದ್ದರು. ಶೀಘ್ರ ರಸ್ತೆ ದುರಸ್ತಿ ಕೈಗೊಳ್ಳಬೇಕು’ ಎಂದು ಗ್ರಾಮದ ಶರತ್‍ ಎಂ. ಗೌಡರ್ ಒತ್ತಾಯಿಸಿದರು.

ಆನವಟ್ಟಿ ಸಮೀಪದ ವಿಠಲಾಪುರ ಗ್ರಾಮದ ರಸ್ತೆಯನ್ನು ಗ್ರಾಮಸ್ಥರೇ ನಿರ್ಮಾಣ ಮಾಡಿಕೊಳ್ಳುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.