ಸಾಗರ: ಶಿವಮೊಗ್ಗ ಜಿಲ್ಲೆಯ 90 ಹಳ್ಳಿಗಳಲ್ಲಿ ದೇವರಕಾನು ಸಂರಕ್ಷಣಾ ಯೋಜನೆ ಜಾರಿಗೊಳಿಸಲು ಜೀವವೈವಿಧ್ಯ ಮಂಡಳಿ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಇಲ್ಲಿನ ವೃಕ್ಷಲಕ್ಷ ಅಂದೋಲನದ ವತಿಯಿಂದ ಶುಕ್ರವಾರ ಬೆಂಗಳೂರಿನಲ್ಲಿ ಮಂಡಳಿ ಸದಸ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಪಶ್ಚಿಮಘಟ್ಟದ ಜಿಲ್ಲೆಗಳಲ್ಲಿನ ರಾಮಪತ್ರೆ ಜಡ್ಡಿಗಳು ಎಂದು ಕರೆಯಲ್ಪಡುವ ವಿಶೇಷ ಅರಣ್ಯ ಪ್ರದೇಶದ ವಿನಾಶದ ಅಂಚಿಗೆ ಬಂದಿವೆ. ಈ ಬಗ್ಗೆ ಆಯಾ ಪ್ರದೇಶದ ಅರಣ್ಯ ಕಚೇರಿಗಳಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದೆ. ಈ ಅರಣ್ಯ ಪ್ರದೇಶದ ಸಂರಕ್ಷಣೆಗಾಗಿ ಈ ಸ್ಥಳಗಳನ್ನು ಪಾರಂಪರಿಕ ಜೀವವೈವಿಧ್ಯ ತಾಣವೆಂದು ಘೋಷಿಸಬೇಕು ಎಂದು ಮಂಡಳಿ ಸದಸ್ಯರು ಒತ್ತಾಯಿಸಿದರು.
ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಯನ್ನು 10 ಲಕ್ಷ ಹೆಕ್ಟೇರ್‌ನಿಂದ 3.30 ಲಕ್ಷ ಹೆಕ್ಟೇರ್‌ಗೆ ಸರ್ಕಾರ ಇಳಿಸಿದೆ. ಈ ವ್ಯಾಪ್ತಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಕಡಿತ ಮಾಡಬಾರದು. ಮಲೆನಾಡಿನ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಅರಣ್ಯ ಕ್ಷೇತ್ರಗಳಲ್ಲಿ ಜೀವವೈವಿಧ್ಯ ಕಾಪಾಡಲು ಮಲೆನಾಡು ಸುಸ್ಥಿರ ಅಭಿವೃದ್ಧಿಯ ಕಾರ್ಯಸೂಚಿಯನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ದೇವರಕಾನು ಸಂರಕ್ಷಣಾ ಯೋಜನೆ ಜಾರಿಗೊಳಿಸಲು ₹ 5 ಕೋಟಿ ಅನುದಾನ ಒದಗಿಸಬೇಕು. ಸ್ಥಳೀಯ ಅರಣ್ಯ ಅಧಿಕಾರಿಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜೀವವೈವಿಧ್ಯ ಕಾಯ್ದೆ ಜಾರಿಗೆ ಮುಂದಾಗಬೇಕು. ಕೋಲಾರದ ಅಂತರಗಂಗೆ ಬೆಟ್ಟಕ್ಕೆ ಪಾರಂಪರಿಕ ಜೀವಜಲ ತಾಣ ಎಂಬ ಮಾನ್ಯತೆ ನೀಡಬೇಕು. ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ಯುರೇನಿಯಂ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಪ್ರಮುಖರಾದ ಅನಂತ ಹೆಗಡೆ ಅಶೀಸರ, ಕೇಶವ ಕೊರ್ಸೆ, ಕವಲಕೋಡು ವೆಂಕಟೇಶ್, ಶ್ರೀಪಾದ ಬಿಚ್ಚುಗತ್ತಿ, ಗಣಪತಿ ಕೆ.ಬಿಸಲಕೊಪ್ಪ, ನರಸಿಂಹ ಸಾತೊಡ್ಡಿ, ಕೆ.ಎಸ್.ಭಟ್ಟ, ತಿಮ್ಮಣ್ಣ ತೊಂಡೆಕೆರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.