ಸೊರಬ: ಕೆಲವು ದಿನಗಳಿಂದ ನಮ್ಮೊಂದಿಗೆ ಮುನಿಸಿಕೊಂಡಿದ್ದ ನಮೋ ವೇದಿಕೆ ಮುಖಂಡರು ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಮತ್ತೊಮ್ಮೆ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳಲಿದೆ ಎಂಬ ವಿಶ್ವಾಸ ಮೂಡಿಸಿದೆ ಎಂದು ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಹೇಳಿದರು.
ಸೋಮವಾರ ಪಟ್ಟಣದ ಆದಿದೈವ ರಂಗನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಮ್ಮ ಅಪಾರ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಸಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಆ ಪಕ್ಷದ ನಾಯಕರಲ್ಲಿ ಹೊಂದಾಣಿಕೆಯೇ ಇಲ್ಲದೇ ಮುಖ್ಯಮಂತ್ರಿ ಗಾದಿಗಾಗಿ ಆಂತರಿಕ ಕಚ್ಚಾಟ ಆರಂಭವಾಗಿದೆ. ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇಲ್ಲದೇ ಗ್ಯಾರಂಟಿ ಕಾರ್ಡ್ ಮುಂದಿಟ್ಟಿದೆ. ಬಿಜೆಪಿ ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಿದ್ದರೆ ಕಾಂಗ್ರೆಸ್ ಕೇವಲ ಪ್ರಚಾರದಲ್ಲಿ ಮುಳುಗಿದೆ. ಚುನಾವಣೆಯಲ್ಲಿ ಅಭ್ಯರ್ಥಿ ಯಾರು ಎನ್ನುವುದು ಮುಖ್ಯವಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಮ್ಮ ಗೆಲುವಿಗೆ ದಾರಿ ಮಾಡಿ ಕೊಡಲಿವೆ’ ಎಂದು ತಿಳಿಸಿದರು.
‘ಕಳೆದ 5 ವರ್ಷಗಳ ಅವಧಿಯಲ್ಲಿ ಜಿಲ್ಲೆಯ 7 ಕ್ಷೇತ್ರಗಳ ಅಭಿವೃದ್ಧಿಗೂ ಸಂಸದ ಬಿ.ವೈ. ರಾಘವೇಂದ್ರ ಕೈಜೋಡಿಸಿದ್ದು, 7 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಬಹಮತದೊಂದಿಗೆ ಅಧಿಕಾರ ಸ್ಥಾಪಿಸಲಿದ್ದೇವೆ’ ಎಂದರು.
‘ಚುನಾವಣೆ ಸಂದರ್ಭದಲ್ಲಿ ನಾಯಕರು ಪಕ್ಷ ಬದಲಾವಣೆ ಸಾಮಾನ್ಯವಾಗಿದೆ. ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರಿಗೆ ಫಲಿತಾಂಶವೇ ಪಕ್ಷ ಬದಲಾವಣೆಗೆ ಉತ್ತರ ನೀಡಲಿದೆ’ ಎಂದರು.
‘ಸೊರಬದಲ್ಲಿ ಪಕ್ಷದ ಮುಖಂಡರಲ್ಲಿ ತಲೆದೋರಿದ್ದ ಅಸಮಾಧಾನ ಬಗೆ ಹರಿದಿದ್ದು, ಎಲ್ಲ ಕಾರ್ಯಕರ್ತರು ಸೇರಿ ನಾಮಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ಭಾಗವಹಿಸಿದ್ದು ಹರ್ಷ ತಂದಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಜನಪರವಾದ ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ಮತ್ತೆ ಡಬಲ್ ಎಂಜಿನ್ ಸರ್ಕಾರ ಅಸ್ತಿತ್ವಕ್ಕೆ ತರಲು ರಾಜ್ಯದ ಜನರು ಉತ್ಸುಕರಾಗಿದ್ದಾರೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
‘ಕ್ಷೇತ್ರದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಸಮಗ್ರ ಅಭಿವೃದ್ಧಿ ಮಾಡಿದ್ದು ಮತ್ತೊಮ್ಮೆ ಆಮೂಲಾಗ್ರ ಬದಲಾವಣೆಗೆ ಮತದಾರರು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಪತ್ನಿ ವಿದ್ಯುಲ್ಲತಾ, ಪುತ್ರ ಅರ್ಜುನ್, ಪುತ್ರಿ ಲಾವಣ್ಯ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ತಾಲ್ಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಡಾ.ರಾಜನಂದಿನಿ ಕಾಗೋಡು, ಮುಖಂಡರಾದ ಶಿವಕುಮಾರ್ ಕಡಸೂರು, ದೇವೇಂದ್ರಪ್ಪ ಚನ್ನಾಪುರ, ಎಂ.ಡಿ. ಉಮೇಶ್, ಮಲ್ಲಿಕಾರ್ಜುನ ವೃತ್ತಿಕೊಪ್ಪ, ನಾಗರಾಜಗೌಡ ಚಿಕ್ಕಾವಲಿ ಇದ್ದರು.
..........
ಮಂತ್ರಾಲಯ ಶ್ರೀಗಳ ಪ್ರಸಾದ ನೀಡಿದ ರಾಘವೇಂದ್ರ
ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಏ. 16ರಂದು ಶಿಕಾರಿಪುರ ತಾಲ್ಲೂಕಿನ ಉಡುಗಣಿ ಗ್ರಾಮದ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ್ದು, ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವರ ಪ್ರಸಾದ, ಹಣ್ಣುಕಾಯಿ, ಶಾಲು ಮತ್ತು ಹೂವಿನ ಹಾರವನ್ನು ಸಂಸದ ರಾಘವೇಂದ್ರ ಅವರ ಮೂಲಕ ಕಳುಹಿಸಿದ್ದರು. ಸೋಮವಾರ ಕುಮಾರ್ ಬಂಗಾರಪ್ಪ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ರಾಘವೇಂದ್ರ ಅವರು ಅದನ್ನು ಕುಮಾರ್ ಬಂಗಾರಪ್ಪ ಅವರಿಗೆ ನೀಡಿದರು. ಇದರಿಂದ ಪುಳಕಗೊಂಡ ಕುಮಾರ್ ಬಂಗಾರಪ್ಪ ಜನರತ್ತ ಕೈಬೀಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.