ADVERTISEMENT

ತೀರ್ಥಹಳ್ಳಿ | ನಕ್ಸಲರ ಚಟುವಟಿಕೆ ಕಾಲದಲ್ಲಿ ಕಂಡ ಅಭಿವೃದ್ಧಿ ಮಾಯ: ಜನರ ಬೇಸರ

ಪಶ್ಚಿಮಘಟ್ಟದ ತಪ್ಪಲಿನಲ್ಲಿ ಅಭಿವೃದ್ಧಿ ಮರೀಚಿಕೆ

ಶಿವಾನಂದ ಕರ್ಕಿ
Published 23 ಜುಲೈ 2020, 7:58 IST
Last Updated 23 ಜುಲೈ 2020, 7:58 IST
ತೀರ್ಥಹಳ್ಳಿ ತಾಲ್ಲೂಕಿನ ಇಳಿಮನೆ ಗ್ರಾಮದ ಹಳ್ಳಕ್ಕೆ ನಿರ್ಮಿಸಿದ ಕಿರು ಸೇತುವೆ ಕಾಮಗಾರಿ ಅಪೂರ್ಣಗೊಂಡಿದೆ
ತೀರ್ಥಹಳ್ಳಿ ತಾಲ್ಲೂಕಿನ ಇಳಿಮನೆ ಗ್ರಾಮದ ಹಳ್ಳಕ್ಕೆ ನಿರ್ಮಿಸಿದ ಕಿರು ಸೇತುವೆ ಕಾಮಗಾರಿ ಅಪೂರ್ಣಗೊಂಡಿದೆ   

ತೀರ್ಥಹಳ್ಳಿ: ನಕ್ಸಲರ ಹೆಜ್ಜೆ ಸಪ್ಪಳ ಕೇಳಿಸುತ್ತಿದ್ದ ಸಂದರ್ಭದಲ್ಲಿ ಪಶ್ಚಿಮಘಟ್ಟ ತಪ್ಪಲಿನ ಹಳ್ಳಿಗಳ ಅಭಿವೃದ್ಧಿಗೆ ತೆಗೆದುಕೊಂಡ ಕಾಳಜಿ ನಕ್ಸಲರು ಕಾಲ್ಕಿತ್ತ ನಂತರ ಕಾಣುತ್ತಿಲ್ಲ ಎನ್ನುವುದು ಈ ಭಾಗದ ಜನರ ಆರೋಪ.

ಎರಡು ದಶಕಗಳ ಹಿಂದೆ ನಕ್ಸಲ್ ಚಟುವಟಿಕೆ ಹೆಚ್ಚಿದೆ ಎಂಬ ಕಾರಣಕ್ಕೆ ಪಶ್ಚಿಮಘಟ್ಟ ಪ್ರದೇಶದ ತಪ್ಪಲಿನ ಗ್ರಾಮಗಳ ಅಭಿವೃದ್ಧಿಗೆ ಒತ್ತುನೀಡಲಾಗಿತ್ತು. ನಕ್ಸಲ್ ಬಾಧಿತ ಪ್ರದೇಶಾಭಿವೃದ್ಧಿ, ದೂರ ಮತ್ತು ಅತಿ ಹಿಂದುಳಿದ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗಿತ್ತು. ಆದರೆ ಈಗ ಅವುಗಳನ್ನು ಕೈಬಿಡಲಾಗಿದೆ.

ನಕ್ಸಲರ ಕಾಟ ಹೆಚ್ಚಾದ ಕಾರಣ 2006-07ರಲ್ಲಿ ಆಗುಂಬೆ ಉಪ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಲಾಯಿತು. ಆಗುಂಬೆ, ಬಿದರಗೋಡು ನಾಲೂರು, ಹೊನ್ನೇತಾಳು, ಮೇಗರವಳ್ಳಿ, ಕುಡುಮಲ್ಲಿಗೆ, ಬೆಜ್ಜವಳ್ಳಿ ವ್ಯಾಪ್ತಿಯ 34 ಮಜರೆ ಹಳ್ಳಿಗಳನ್ನು ನಕ್ಸಲ್ ಚಟುವಟಿಕೆಯಿಂದ ಪೀಡಿತವಾಗಿವೆ ಎಂದು ಸರ್ಕಾರ ಗುರುತಿಸಿತು.

ADVERTISEMENT

ತಾಲ್ಲೂಕಿನ ಬಿದರಗೋಡು, ಬಾಳೇಹಳ್ಳಿ, ಕುಂದಾ, ಹೊನ್ನೇತಾಳು, ತಲ್ಲೂರು, ಶುಂಠಿಹಕ್ಕಲು, ಹೊಸೂರು, ಶಿವಳ್ಳಿ, ದಾಸನಕೊಡಿಗೆ, ಕೊಳಿಗೆ, ಬಗ್ಗೊಡಿಗೆ, ಬಿಳುಮನೆ, ದಬ್ಬಣಗದ್ದೆ, ಮಹಿಷಿ, ಹೆಗ್ಗಾರು, ಕುಣಿಕುಂದೂರು, ಹಾರೇಕೊಪ್ಪ, ಯಡುವಿನಕೊಪ್ಪ, ಬೆಕ್ಸೆ ಕೆಂಜಿಗುಡ್ಡೆ, ಬಾಳಗಾರು ಸೇರಿ ಹಲವು ಗ್ರಾಮಗಳನ್ನು ನಕ್ಸಲ್‌ ಪೀಡಿತ ಪ್ರದೇಶವೆಂದು ಗುರುತಿಸಿತ್ತು. ನಂತರ 2012ರಲ್ಲಿ ನಕ್ಸಲ್ ಮುಕ್ತ ಎಂದು ಸರ್ಕಾರ ಘೋಷಿಸಿದೆ. ಈ ಗ್ರಾಮಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ₹ 100 ಕೋಟಿಗೂ ಹೆಚ್ಚಿನ ಕ್ರಿಯಾಯೋಜನೆ ರೂಪಿಸಿತ್ತು. ಆದರೆ, ಅಭಿವೃದ್ಧಿ ನಿರೀಕ್ಷೆಯಂತೆ ಅಗಿಲ್ಲ ಎಂಬ ಕೊರಗು ಗ್ರಾಮಸ್ಥರದ್ದು.

ಆರಂಭಿಕ ಹಂತದಲ್ಲಿ ಅಭಿವೃದ್ಧಿಗೆ ಸರ್ಕಾರ 7 ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಪ್ರತಿ ಪಂಚಾಯಿತಿಗೆ ₹ 20 ಲಕ್ಷ ಅನುದಾನ ಮಂಜೂರು ಮಾಡಿ, ನಂತರ ಬೇಡಿಕೆ ಆಧರಿಸಿ ಸೀಮಿತ ಹಣ ಬಿಡುಗಡೆ ಮಾಡಿತು. ಪಾರಂಪರಿಕ ಬುಡಕಟ್ಟು ಅರಣ್ಯ ಕಾಯ್ದೆ ಅಡಿಯಲ್ಲಿ ಮಲ್ಲಂದೂರು ಗ್ರಾಮದ 72 ಕುಟುಂಬಗಳಿಗೆ ಸರ್ಕಾರ ವಿವೇಶನ ಹಕ್ಕುಪತ್ರ ನೀಡಿತಷ್ಟೆ, ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡಲಿಲ್ಲ. ಆಗುಂಬೆ ಭಾಗದ ಅನೇಕ ಹಳ್ಳಿಗಳಿಗೆ ಇನ್ನೂ ಕುಡಿಯುವ ನೀರು, ರಸ್ತೆ ಸೌಲಭ್ಯ ಸಿಕ್ಕಿಲ್ಲ. ಕೆಲ ಹಳ್ಳಿಯ ಮನೆಗಳಿಗೆ ವಿದ್ಯುತ್ ಸಂಪರ್ಕ ದೊರೆತಿಲ್ಲ ಎಂದುಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್ ಇಳಿಮನೆ ದೂರುತ್ತಾರೆ.

ಮೇಗರವಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಇಳಿಮನೆ ಗ್ರಾಮದ ದಟ್ಟ ಅರಣ್ಯ ಪ್ರದೇಶದಲ್ಲಿ ನಕ್ಸಲರ ಅಡಗುದಾಣ ಇದೆ ಎಂಬ ಕಾರಣಕ್ಕೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಗ್ರಾಮದ ಜನರು ಅಭಿವೃದ್ಧಿಗೆ ಆಗ್ರಹಿಸಿ 2014ರಲ್ಲಿ ಪೊಲೀಸರನ್ನು ಗ್ರಾಮದ ಒಳಕ್ಕೆ ಬಿಡದೇ ಪ್ರತಿಭಟಿಸಿದ್ದರು. ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂಬ ಭರವಸೆ ನೀಡಿದ ಆಡಳಿತ ಹಣ ಬಿಡುಗಡೆ ಮಾಡಲಿಲ್ಲ.

ಇದೇ ಗ್ರಾಮದ ಹಳ್ಳಕ್ಕೆ 2015-16ರಲ್ಲಿ ₹ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಿರು ಸೇತುವೆ ಕಾಮಗಾರಿ ಅಪೂರ್ಣವಾಗಿದ್ದು, ಬಳಕೆಗೆ ಇಲ್ಲದಂತಾಗಿದೆ. 5 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದ್ದು, ಗ್ರಾಮದಲ್ಲಿನ 60 ಮನೆಗಳ ಸದಸ್ಯರಿಗೆ ತೊಂದರೆಯಾಗಿದೆ. ಶಾಸಕ ಆರಗ ಜ್ಞಾನೇಂದ್ರ ಅವರು ಇಲ್ಲಿನ ರಸ್ತೆ ಅಭಿವೃದ್ಧಿಗೆ ₹ 1 ಕೋಟಿ ಅನುದಾನ ನೀಡಿರುವುದು ಸಮಾಧಾನ ತಂದಿದೆ ಎನ್ನುತ್ತಾರೆ ದಾಸನಕೊಡಿಗೆಯ ಉಮೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.