ಶಿವಮೊಗ್ಗ: ’ಗುರೂಜಿಯೋ, ಸಲಿಂಗಕಾಮಿಯೋ ಎಂದು ಕೆಲವರು ವಿನಯ್ ಗುರೂಜಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ವಿರುದ್ಧ ಈಗಾಗಲೇ ಕಾನೂನು ಹೋರಾಟ ಕೈಗೆತ್ತಿಕೊಂಡಿದ್ದೇವೆ‘ ಎಂದು ಶಿವಮೊಗ್ಗದ ವಿನಯ್ ಗುರೂಜಿ ಭಕ್ತ ಬಳಗದ ಮುಖ್ಯಸ್ಥ ರಾಘವೇಂದ್ರ ಹೆಬ್ಬಾರ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೀವು (ವಿರೋಧಿಗಳು) ಗುರೂಜಿ ಎಂದಾದರೂ ತಿಳಿದುಕೊಳ್ಳಿ, ಸಲಿಂಗಕಾಮಿ ಎಂದಾದರೂ ಭಾವಿಸಿ. ನೀವು ಯಾವ ರೀತಿ ಭಾವಿಸುವಿರೋ ಅದು ನಮಗೆ ಅವಶ್ಯಕತೆ ಇಲ್ಲ. ಆದರೆ, ಅಪಪ್ರಚಾರದ ಮುಖಾಂತರ ಭಕ್ತರ ಭಾವನೆಗೆ ಧಕ್ಕೆ ತರುತ್ತಿರುವುದೇಕೆ?‘ ಎಂದು ಪ್ರಶ್ನಿಸಿದರು.
ಕಾಣದ ಶಕ್ತಿಗಳು ನಿರಂತರವಾಗಿ ಷಡ್ಯಂತ್ರ ಮಾಡಿ ವಿನಯ್ ಗುರೂಜಿ ಅವರ ಆತ್ಮಸ್ಥೈರ್ಯ ಕುಗ್ಗಿಸಿ ಸಾಮಾಜಿಕ ಸೇವೆ ಮಾಡದಂತೆ ಕೈಕಟ್ಟಿ ಹಾಕುವ ಸಂಚು ರೂಪಿಸಿವೆ ಎಂದು ಆರೋಪಿಸಿದರು.
’ವಿನಯ್ ಗುರೂಜಿ ಇಲ್ಲವೇ ಗೌರಿಗದ್ದೆ ಆಶ್ರಮದ ವಿರುದ್ಧ ನಿಮ್ಮಲ್ಲಿ ಏನಾದರೂ ದಾಖಲೆ ಇದ್ದರೆ ನ್ಯಾಯಾಲಯದಲ್ಲಿ ಕೇಸು ಹಾಕಿ. ದಾಖಲೆ ನ್ಯಾಯಾಲಯಕ್ಕೆ ಕೊಡಿ. ಆದರೆ ಮನಬಂದಂತೆ ವರ್ತಸಿ ನಮ್ಮ ಭಕ್ತಿ–ಭಾವನೆಗೆ ಧಕ್ಕೆ ತರಬೇಡಿ. ಇಂತಹ ಕೆಲಸ ಇಲ್ಲಿಗೆ ನಿಲ್ಲಬೇಕು. ಇದೇ ಧೋರಣೆ ಮುಂದುವರೆದಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು‘ ಎಂದು ಎಚ್ಚರಿಸಿದರು.
ಮೊದಲಿನಿಂದಲೂ ಸಣ್ಣ ಸಣ್ಣ ವಿಚಾರಗಳನ್ನು ಗೌರಿ ಗದ್ದೆ ಆಶ್ರಮಕ್ಕೆ ಇಲ್ಲವೇ ವಿನಯ್ ಗುರೂಜಿಗೆ ಜೋಡಣೆ ಮಾಡಿ ಅವರನ್ನು ಅಪರಾಧಿ ಎಂಬಂತೆ ಬಿಂಬಿಸುತ್ತಿದ್ದಾರೆ. ಇದು ಅವರ ಲಕ್ಷಾಂತರ ಭಕ್ತರ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ತಪ್ಪು ಅಭಿಪ್ರಾಯ ಮೂಡಿಸುವ ಷಡ್ಯಂತ್ರಕ್ಕೆ ಕೂಡಲೇ ಇತಿಶ್ರೀ ಹಾಡಲು ಗೃಹ ಸಚಿವರು ತನಿಖೆ ನಡೆಸಿ ಷಡ್ಯಂತ್ರ ನಡೆಸುತ್ತಿರುವವರನ್ನು ಮಟ್ಟಹಾಕಬೇಕು ಎಂದು ಆಗ್ರಹಿಸಿದರು.
’ಗುರೂಜಿ ವಿರುದ್ಧ ಬೆಂಗಳೂರಿನ ಟಿವಿ ವಾಹಿನಿಯೊಂದು ಬ್ಲ್ಯಾಕ್‌ಮೇಲ್ ಮಾಡುತ್ತಿದೆ. ₹ 40 ಲಕ್ಷಕ್ಕೆ ಬೇಡಿಕೆ ಸಲ್ಲಿಸಿದೆ‘ ಎಂಬ ಗಂಭೀರ ಆರೋಪ ಮಾಡಿದ ಹೆಬ್ಬಾರ್,’ಅವರಲ್ಲಿ ದಾಖಲೆ ಇದ್ದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದು‘ ಎಂದರು.
’ಸಂಬಂಧಿಸಿದ ವಾಹಿನಿಯ ವಿರುದ್ಧವೂ ಹಿಂದೆಯೇ ದೂರು ನೀಡಿದ್ದು, ಆರು ಮಂದಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದರು. ಅವರು ಈಗ ಮತ್ತೆ ಗುರೂಜಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಈಗ ಆರೋಪ ಮಾಡುತ್ತಿರುವ ವಿನೋದ್ ಈ ಹಿಂದೆ ವಿನಯ್ ಗುರೂಜಿ ಅವರ ಕ್ಷಮೆ ಕೇಳಿದ್ದರು‘ ಎಂದರು.
’ನಾನೇ ಗುರು ಎಂದು ಇಲ್ಲಿಯವರೆಗೂ ವಿನಯ್ ಗುರೂಜಿ ಹೇಳಿಲ್ಲ. ನಾವೇ (ಭಕ್ತರು) ಅವರನ್ನು ಗುರು ಆಗಿ ಸ್ವೀಕರಿಸಿದ್ದೇವೆ. ಅವರಿಗೆ ಈ ಎಲ್ಲ ಷಡ್ಯಂತ್ರಗಳ ಬಗ್ಗೆ ಆಸಕ್ತಿ ಇಲ್ಲ. ಹೀಗಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಭಕ್ತರಾದ ನಮಗೆ ನೋವಾಗಿರುವುದರಿಂದ ಪ್ರತಿಭಟನೆಗೆ ಮುಂದಾಗಿದ್ದೇವೆ‘ ಎಂದು ಪ್ರಶ್ನೆಯೊಂದಕ್ಕೆ ರಾಘವೇಂದ್ರ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶಂಕರ್, ಚಂದನ್ ಮತ್ತಿತರರು ಇದ್ದರು.
*
ಗುರೂಜಿ ಜೊತೆ ನಾವಿದ್ದೇವೆ ಎಂಬುದನ್ನು ನಿವೇದಿಸಲು, ಲಕ್ಷಾಂತರ ಭಕ್ತರಲ್ಲಿ ಆತ್ಮಸ್ಥೈರ್ಯ ತುಂಬಲು. ಭಕ್ತ ವೃಂದದ ನೇತೃತ್ವದಲ್ಲಿ ನವೆಂಬರ್ 14ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ.
-ರಾಘವೇಂದ್ರ ಹೆಬ್ಬಾರ್, ವಿನಯ್ ಗುರೂಜಿ ಭಕ್ತ ವೃಂದದ ಮುಖಂಡರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.